ನಿಮಗೆ 370ನೇ ವಿಧಿ ಮುಖ್ಯವಾಗಿದ್ದರೆ, ಅದನ್ಯಾಕೆ ಖಾಯಂಗೊಳಿಸಲಿಲ್ಲ?: ವಿಪಕ್ಷಗಳಿಗೆ ಪ್ರಧಾನಿ ಕುಟುಕು

ಹಿಂದಿನ ಸರ್ಕಾರಗಳು ಕಾಶ್ಮೀರದ ಸಮಸ್ಯೆಗೆ ಪರಿಹಾರ ಹುಡುಕಲು ಮಾಡಿದ ಪ್ರಯತ್ನ ಫಲ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ರೀತಿಯ ಪ್ರಯತ್ನ ಅಗತ್ಯವಿತ್ತು ಎಂದು ಪ್ರಧಾನಿ ಮೋದಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ಧಾರೆ.

Vijayasarthy SN | news18
Updated:August 15, 2019, 5:52 PM IST
ನಿಮಗೆ 370ನೇ ವಿಧಿ ಮುಖ್ಯವಾಗಿದ್ದರೆ, ಅದನ್ಯಾಕೆ ಖಾಯಂಗೊಳಿಸಲಿಲ್ಲ?: ವಿಪಕ್ಷಗಳಿಗೆ ಪ್ರಧಾನಿ ಕುಟುಕು
ನರೇಂದ್ರ ಮೋದಿ
  • News18
  • Last Updated: August 15, 2019, 5:52 PM IST
  • Share this:
ನವದೆಹಲಿ(ಆ. 15): ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದನ್ನು ಆಕ್ಷೇಪಿಸುತ್ತಿರುವ ವಿಪಕ್ಷಗಳಿಗೆ ತಿರುಗೇಟು ನೀಡಲು ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ವೇದಿಕೆ ಬಳಸಿಕೊಂಡರು. ಕೆಂಪುಕೋಟೆಯಲ್ಲಿ ಇಂದು ತಮ್ಮ ಆರನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ಮೋದಿ, 370ನೇ ವಿಧಿ ರದ್ಧತಿಯ ವಿರೋಧಿಗಳ ಮೇಲೆ ಹರಿಹಾಯ್ದರು. ಅದರಲ್ಲೂ ಕಾಂಗ್ರೆಸ್ ಪಕ್ಷವನ್ನು ಅವರು ನೇರವಾಗಿ ತರಾಟೆಗೆ ತೆಗೆದುಕೊಂಡರು.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವುದು ಅಷ್ಟು ಮುಖ್ಯವಾಗಿದ್ದರೆ ಕಾಂಗ್ರೆಸ್ ಪಕ್ಷವು ತನ್ನ ಆಡಳಿತದ ಅವಧಿಯಲ್ಲಿ ಈ ಸ್ಥಾನಮಾನವನ್ನು ಯಾಕೆ ಖಾಯಂಗೊಳಿಸಲಿಲ್ಲ ಎಂದು ಮೋದಿ ನೇರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: PM Narendra Modi Speech: ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪ್ರತಿಯೊಬ್ಬರಿಗೂ ನನ್ನ ಸಲಾಂ; ಕೆಂಪುಕೋಟೆಯಲ್ಲಿ ಮೋದಿ ಭಾಷಣ

“35ಎ ಮತ್ತು 370ನೇ ವಿಧಿಗಳನ್ನ ರದ್ದುಗೊಳಿಸಿದ್ದನ್ನ ಕೆಲ ರಾಜಕಾರಣಿಗಳು ವಿರೋಧಿಸುತ್ತಲೇ ಬಂದರು. ಇವರಿಗೆ ಇದು ಅಷ್ಟು ಮುಖ್ಯವಾಗಿದ್ದರೆ ಕಳೆದ 70 ವರ್ಷದಲ್ಲಿ ಯಾಕೆ ಅದನ್ನು ಖಾಯಂಗೊಳಿಸಲಿಲ್ಲ?” ಎಂದು ಕಾಂಗ್ರೆಸ್ ಪಕ್ಷವನ್ನು ಮೋದಿ ಟೀಕಿಸಿದರು.

ತಮ್ಮ ಸರ್ಕಾರವು ಸಮಸ್ಯೆಗಳನ್ನ ಪೋಷಿಸುವುದೂ ಇಲ್ಲ, ಅವುಗಳು ಜೀವಂತವಿರಲೂ ಬಿಡುವುದಿಲ್ಲ. ಕಾಶ್ಮೀರದಲ್ಲಿ ತೆಗೆದುಕೊಂಡ ದಿಟ್ಟ ನಿರ್ಧಾರಗಳಿಂದಾಗಿ ಒಂದು ದೇಶ ಒಂದು ಸಂವಿಧಾನ ಚಾಲನೆಗೆ ಬಂದಂತಾಗಿದೆ. ಹಿಂದಿನ ಸರ್ಕಾರಗಳು ಕಾಶ್ಮೀರ ಸಮಸ್ಯೆಯ ಪರಿಹಾರಕ್ಕೆ ಮಾಡಿದ ಪ್ರಯತ್ನಗಳು ಫಲ ಕೊಡಲಿಲ್ಲ. ಹೊಸ ವಿಧಾನದಲ್ಲಿ ಸಮಸ್ಯೆಗೆ ಪರಿಹಾರ ಹುಡುಕುವುದು ಅಗತ್ಯವಾಗಿತ್ತು ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ರಮಗಳನ್ನು ಸಮರ್ಥಿಸಿಕೊಂಡರು.

ಇದನ್ನೂ ಓದಿ: ಸೇನೆ ಸುಧಾರಣೆಗೆ ಮುಖ್ಯ ಸೇನಾ ಸಿಬ್ಬಂದಿ ಹುದ್ದೆ ಸೃಷ್ಟಿ; 73ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ಮೋದಿ ಘೋಷಣೆ

ಸಂವಿಧಾನದ 35ಎ ಮತ್ತು 370ನೇ ವಿಧಿಗಳು ಜಮ್ಮು ಮತ್ತು ಕಾಶ್ಮೀರ ಪ್ರಾಂತ್ಯಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದವು. ರಕ್ಷಣೆ, ವಿದೇಶಾಂಗ ವ್ಯವಹಾರ ಇತ್ಯಾದಿ ಕೆಲವೇ ವಿಚಾರಗಳನ್ನ ಹೊರತುಪಡಿಸಿ ಉಳಿದಂತೆ ಕಾಶ್ಮೀರದ ಮೇಲೆ ಕೇಂದ್ರದ ಅಂಕೆ ಇರಲಿಲ್ಲ. ಕಾಶ್ಮೀರಕ್ಕೇ ಪ್ರತ್ಯೇಕ ಸಂವಿಧಾನವಿತ್ತು. 10 ದಿನಗಳ ಹಿಂದೆ ಮೋದಿ ಸರ್ಕಾರವು ಸಂವಿಧಾನದಲ್ಲಿ ತಿದ್ದುಪಡಿ ತಂದು ಕಾಶ್ಮೀರದ ವಿಶೇಷಾಧಿಕಾರವನ್ನು ತೆಗೆದುಹಾಕಿತು. ಸರ್ಕಾರದ ಈ ಕ್ರಮ ಅಸಾಂವಿಧಾನಿಕ ಎಂದು ಹಲವು ವಿಪಕ್ಷಗಳು ಆರೋಪಿಸುತ್ತಿವೆ. ಕಾಶ್ಮೀರೀ ರಾಜಕಾರಣಿಗಳೂ ಕೂಡ ಬಲವಾಗಿ ವಿರೋಧಿಸುತ್ತಿದ್ದಾರೆ.
Loading...

ಸಣ್ಣ ಕುಟುಂಬವು ದೇಶಪ್ರೇಮದ ಸಂಕೇತ?

ಇದೇ ವೇಳೆ, ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನಸಂಖ್ಯಾ ಸ್ಫೋಟದ ವಿಚಾರದ ಬಗ್ಗೆಯೂ ಮಾತನಾಡಿದರು. ದೇಶದ ಭವಿಷ್ಯದ ದೃಷ್ಟಿಯಿಂದ ಜನರು ಕುಟುಂಬ ಯೋಜನೆ ಸೂತ್ರ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಸಣ್ಣ ಕುಟುಂಬವಿದ್ದರೆ ನಿಮ್ಮ ಮಕ್ಕಳ ಆಶೋತ್ತರಗಳನ್ನ ಈಡೇರಿಸುವುದು ಸುಲಭ. ರೋಗ ರುಜಿನಗಳನ್ನ ದೂರವಿಡಬಹುದು. ಹೆಚ್ಚೆಚ್ಚು ಸಂಪನ್ಮೂಲಗಳನ್ನ ಹೊಂದಬಹುದು ಎಂದು ಮೋದಿ ತಿಳಿಹೇಳಿದರು.

ಇದನ್ನೂ ಓದಿ: ಅಪಾಯದ ಅಂಚಿನಲ್ಲಿ ಒಕ್ಕೂಟ ವ್ಯವಸ್ಥೆ - ಸ್ವಂತ ಧ್ವಜ, ಸಂವಿಧಾನ ಮತ್ತು ಸ್ವಾತಂತ್ರ್ಯ ಕೇಂದ್ರದೆದುರು ಬೇಡಿಕೆ ಮುಂದಿಟ್ಟ ನಾಗಾಲ್ಯಾಂಡ್!

ಭಾರತದ ಅಭಿವೃದ್ಧಿಗೆ ತೊಡಕಾಗಿರುವ ಸಮಸ್ಯೆಗಳಲ್ಲಿ ಜನಸಂಖ್ಯೆ ಪ್ರಮುಖವಾದುದು ಎಂದು ಹಲವು ಪರಿಗಣಿಸಿದ್ದಾರೆ. ಆರೋಗ್ಯ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆ ಒದಗಿಸುವ ವಿಚಾರದಲ್ಲಿ ಬೃಹತ್ ಜನಸಂಖ್ಯೆಯೇ ಪ್ರಮುಖ ಅಡ್ಡಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೇ ಅಭಿಪ್ರಾಯಪಟ್ಟಿದೆ.

ಸದ್ಯಕ್ಕೆ 134 ಕೋಟಿ ಜನಸಂಖ್ಯೆ ಹೊಂದಿರುವ ಭಾರತ 2024ರಲ್ಲಿ ಚೀನಾವನ್ನೂ ಮೀರಿ ನಂಬರ್ ಒನ್ ಜನಸಂಖ್ಯಾ ರಾಷ್ಟ್ರವಾಗಲಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ. ಹೆಚ್ಚು ಜನಸಂಖ್ಯಾ ವೃದ್ಧಿ ಇರುವ ದೇಶದ 146 ಜಿಲ್ಲೆಗಳನ್ನು ಗುರುತಿಸಿ ಕುಟುಂಬ ಕಲ್ಯಾಣ ಯೋಜನೆ ಬಗ್ಗೆ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಮಿಷನ್ ಪರಿವಾರ್ ವಿಕಾಸ್ ಮೊದಲಾದ ಯೋಜನೆಗಳೂ ಕೂಡ ಜನಸಂಖ್ಯಾ ನಿಯಂತ್ರಣದ ದೃಷ್ಟಿಯಿಂದ ಜಾರಿಯಲ್ಲಿವೆ. ಆದರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಜನಸಂಖ್ಯಾ ನಿಯಂತ್ರಣ ಸಾಧ್ಯವಾಗಿಲ್ಲ. ಅತ್ತ ಚೀನಾದಲ್ಲಿ ಒಂದು ಕುಟುಂಬ ಒಂದು ಮಗು ಎಂಬ ಸೂತ್ರವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಜನಸಂಖ್ಯೆಯನ್ನು ಗಣನೀಯ ಮಟ್ಟದಲ್ಲಿ ತಗ್ಗಿಸಲಾಗಿದೆ. ಚೀನಾದಂತೆ ಭಾರತ ಕಮ್ಯೂನಿಸ್ಟ್ ರಾಷ್ಟ್ರವಲ್ಲದ ಕಾರಣ ಕಟ್ಟುನಿಟ್ಟಾಗಿ ಜನಸಂಖ್ಯಾ ನಿಯಂತ್ರಣ ಯೋಜನೆಯನ್ನು ಜಾರಿಗೆ ತರಲು ಸಾಧ್ಯವಾಗುವುದಿಲ್ಲ. ಜನರಲ್ಲಿ ಸಣ್ಣ ಕುಟುಂಬದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ವರ್ಷಗಳಿಂದ ನಡೆಯುತ್ತಿದೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...