ಗೋಡ್ಸೆಗಿಂತ ಮೊದಲು ಹುಟ್ಟಿದ್ದರೆ ಗಾಂಧಿಯನ್ನು ನಾನೇ ಕೊಲ್ಲುತ್ತಿದ್ದೆ; ಪೂಜಾ ಶಕುನ್ ಪಾಂಡೆ

news18
Updated:August 26, 2018, 3:27 PM IST
ಗೋಡ್ಸೆಗಿಂತ ಮೊದಲು ಹುಟ್ಟಿದ್ದರೆ ಗಾಂಧಿಯನ್ನು ನಾನೇ ಕೊಲ್ಲುತ್ತಿದ್ದೆ; ಪೂಜಾ ಶಕುನ್ ಪಾಂಡೆ
news18
Updated: August 26, 2018, 3:27 PM IST
ನ್ಯೂಸ್ 18 ಕನ್ನಡ

ಅಲಿಘಡ (ಆ.26): "ನಾಥುರಾಮ್ ಗೋಡ್ಸೆಗಿಂತ ಮೊದಲು ನಾನು ಹುಟ್ಟಿದ್ದರೆ, ನನ್ನ ಕೈಯಾರೆ ಮಹಾತ್ಮ ಗಾಂಧಿಯನ್ನು ಕೊಲ್ಲುತ್ತಿದ್ದೆ." ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾ (ಎಬಿಎಚ್​ಎಂ)ದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ದೇಶದ ಮೊದಲ ಹಿಂದೂ ನ್ಯಾಯಾಲಯದ ಸ್ವಯಂಘೋಷಿತ ನ್ಯಾಯಾಧೀಶೆ ಡಾ.ಪೂಜಾ ಶಕುನ್ ಪಾಂಡೆ ಉತ್ತರಪ್ರದೇಶದ ಅಲಿಘಡನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಷ್ಟೇ ಅಲ್ಲದೇ, ಸ್ವತಂತ್ರ ಭಾರತದಲ್ಲಿ ಯಾರೇ ಮಹಾತ್ಮ ಎಂದು ಹೇಳಿಕೊಂಡು ಓಡಾಡಿದರು ಅವರನ್ನು ಗುಂಡಿಟ್ಟು ಕೊಲ್ಲುವಂತೆ ತನ್ನ ಅನುಯಾಯಿಗಳಿಗೆ ಪ್ರಚೋದಾನಾತ್ಮಕ ಸಲಹೆ ನೀಡಿದ್ದಾರೆ.

"ಗಾಂಧೀಯ ದೇಶ ವಿಭಜನೆಯಿಂದಾಗಿ ದೇಶದ ಲಕ್ಷಾಂತರ ಮಂದಿ ಹಿಂದೂಗಳು ಬಲಿಯಾಗಬೇಕಾಯಿತು. ಒಂದು ವೇಳೆ ಗೋಡ್ಸೆಗಿಂತ ಮೊದಲು ನಾನು ಹುಟ್ಟಿದ್ದರೇ ನನ್ನ ಕೈಯಾರೆ ಗಾಂಧಿಯನ್ನು ಕೊಲ್ಲುತ್ತಿದ್ದೇ. ದೇಶದ ವಿಭಜನೆಗೆ ಮತ್ತು ಲಕ್ಷಾಂತರ ಹಿಂದೂಗಳ ಸಾವಿಗೆ ಗಾಂಧಿಯೇ ಕಾರಣ. ಈ ದೇಶದ ವಿಭಜನೆ ಬಗ್ಗೆ ಮತ್ತೆ ಯಾರಾದರೂ ಮಾತನಾಡಿದರೆ ಅವರನ್ನು ನಾನೇ ಕೊಲೆ ಮಾಡುತ್ತೇನೆ," ಎಂದು ಘೋಷಿಸಿದ್ದಾರೆ.

ಗಣಿತಶಾಸ್ತ್ರದ ಪ್ರಾಧ್ಯಾಪಕಿಯಾಗಿರುವ ಡಾ.ಪಾಂಡೆ, "ಮಹಾತ್ಮ ಗಾಂಧಿ ಈ ದೇಶದ ಪಿತಾಮಹಾನಲ್ಲ. ಆ ಬಿರುದನ್ನು ಯಾರು ನೀಡಿದರೋ ನನಗೆ ಗೊತ್ತಿಲ್ಲ. ತಂದೆ ಯಾವುದೇ ಕಾರಣಕ್ಕೂ ತನ್ನ ಇಬ್ಬರು ಮಕ್ಕಳನ್ನು ದೂರ ಮಾಡುವುದಿಲ್ಲ. ಹಿಂದೂಗಳ ಸಾವಿಗೆ ಕಾರಣನಾದ ವ್ಯಕ್ತಿಯಿಂದ ಆ ಬಿರುದನ್ನು ಹಿಂಪಡೆಯಬೇಕು," ಎಂದು ಆಗ್ರಹಿಸಿದರು.

ನಾಥುರಾಮ್ ಗೋಡ್ಸೆಯನ್ನು ಮಹಾನ್ ದೇಶಭಕ್ತ ಎಂದು ಕರೆದಿರುವ ಮಹಾಸಭಾದ ಫೈಯರ್ ಬ್ರಾಂಡ್ ಡಾ.ಪಾಂಡೆ, "ಇತಿಹಾಸ ತಿರುಚಿ, ಇಂದಿನ ಪೀಳಿಗೆಗೆ ಗಾಂಧಿಯನ್ನು ಮಹಾನ್​ ವ್ಯಕ್ತಿಯನ್ನಾಗಿ, ಗೋಡ್ಸೆಯನ್ನು ದೇಶದ್ರೋಹಿ ಎಂದು ಬಿಂಬಿಸಲಾಗಿದೆ. ಬಿಜೆಪಿ ಸರ್ಕಾರ ಈ ಕೂಡಲೇ ಇತಿಹಾಸವನ್ನು ಬದಲಿಸಬೇಕು ಮತ್ತು ಗಾಂಧಿವಾದ ತತ್ವಶಾಸ್ತ್ರವನ್ನು ನಿಷೇಧಿಸಬೇಕು," ಎಂದು ಆಗ್ರಹಿಸಿದ್ದಾರೆ.

ಡಾ.ಪೂಜಾ ಶಕುನ್ ಪಾಂಡೆ ಹಿಂದೂ ಮಹಾಸಭಾದ ಮೊದಲ ಹಿಂದೂ ನ್ಯಾಯಾಲಯವನ್ನು ಸ್ಥಾಪಿಸಿ, ತಾವೇ ಅದರ ನ್ಯಾಯಾಧೀಶೆ ಎಂದು ಸ್ವಯಂಕೃತವಾಗಿ ಘೋಷಿಸಿಕೊಂಡವರು.
First published:August 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ