ಕೆಲ ಹಿಂಸಾಚಾರ, ಇವಿಎಂ ದೋಷಗಳೊಂದಿಗೆ 2ನೇ ಹಂತದ ಚುನಾವಣೆ ಮುಕ್ತಾಯ; ಶೇ. 66ರಷ್ಟು ಮತದಾನ

11 ರಾಜ್ಯ, 1 ಕೇಂದ್ರಾಡಳಿತ ಪ್ರದೇಶದ 95 ಲೋಕಸಭಾ ಕ್ಷೇತ್ರಗಳು, 35 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನವಾಗಿದೆ. ತಮಿಳುನಾಡಿನ 18 ವಿಧಾನಸಭಾ ಕ್ಷೇತ್ರಗಳಿಗೂ ಉಪಚುನಾವಣೆಯಾಗಿದೆ.

Vijayasarthy SN | news18
Updated:April 19, 2019, 10:56 AM IST
ಕೆಲ ಹಿಂಸಾಚಾರ, ಇವಿಎಂ ದೋಷಗಳೊಂದಿಗೆ 2ನೇ ಹಂತದ ಚುನಾವಣೆ ಮುಕ್ತಾಯ; ಶೇ. 66ರಷ್ಟು ಮತದಾನ
ಕಾಶ್ಮೀರದ ಮತದಾರರು
  • News18
  • Last Updated: April 19, 2019, 10:56 AM IST
  • Share this:
ನವದೆಹಲಿ(ಏ. 18): ಏಳು ಹಂತಗಳ ಲೋಕಸಭೆ ಚುನಾವಣೆಯಲ್ಲಿ ಇವತ್ತು ಎರಡನೇ ಹಂತದ ಮತದಾನ ಮುಕ್ತಾಯವಾಗಿದೆ. ಕೆಲ ಹಿಂಸಾಚಾರಗಳನ್ನ ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. 11 ರಾಜ್ಯ ಹಾಗೂ 1 ಕೇಂದ್ರಾಡಳಿತ ಪ್ರದೇಶದ ಒಟ್ಟು 95 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆಯಾಗಿದೆ. ಹಾಗೆಯೇ ಒಡಿಶಾದ 35 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆದಿದೆ. ಹಾಗೂ ತಮಿಳುನಾಡಿನ 18 ಕ್ಷೇತ್ರಗಳಿಗೆ ಉಪಚುನಾವಣೆ ಕೂಡ ಇದೇ ವೇಳೆ ಆಗಿದೆ. ಒಟ್ಟಾರೆ ಈ 2ನೇ ಹಂತದಲ್ಲಿ ಶೇ. 66ರಷ್ಟು ಮತದಾನವಾಗಿರುವುದು ತಿಳಿದುಬಂದಿದೆ. ಹಿರಿಯ ಉಪ ಚುನಾವಣಾ ಆಯುಕ್ತ ಉಮೇಶ್ ಸಿನ್ಹಾ ಅವರೂ ಮತದಾನದ ಪ್ರಮಾಣವನ್ನು ಖಚಿತಪಡಿಸಿದ್ದಾರೆ.

ಚುನಾವಣೆ ಘೋಷಣೆಯಾದಾಗ ಎರಡನೇ ಹಂತದಲ್ಲಿ 97 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಗಲು ನಿಗದಿಯಾಗಿತ್ತು. ಆದರೆ, ತ್ರಿಪುರಾದ ಒಂದು ಕ್ಷೇತ್ರ ಹಾಗೂ ತಮಿಳುನಾಡಿನ ವೇಲೂರು ಕ್ಷೇತ್ರಗಳನ್ನು ಬೇರೆ ಬೇರೆ ಕಾರಣಗಳಿಂದ ಮುಂದೂಡಲಾಯಿತು. ಇನ್ನುಳಿದ 95 ಕ್ಷೇತ್ರಗಳಿಗೆ ಇವತ್ತು ಮತದಾನವಾಯಿತು.

ಇದನ್ನೂ ಓದಿ: ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯ; 14 ಕ್ಷೇತ್ರಗಳಲ್ಲಿ ಶೇಕಡ 67ರಷ್ಟು ಮತದಾನ!

ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಅಸ್ಸಾಮ್, ಬಿಹಾರ, ಒಡಿಶಾ, ಛತ್ತೀಸ್​ಗಡ, ಪಶ್ಚಿಮ ಬಂಗಾಳ, ಜಮ್ಮು-ಕಾಶ್ಮೀರ, ಮಣಿಪುರ ಮತ್ತು ಪುದುಚೇರಿಯಲ್ಲಿ ಇವತ್ತು ಚುನಾವಣೆಗಳು ನಡೆದಿವೆ.

ನಕ್ಸಲ್ ಪೀಡಿತ ಛತ್ತೀಸ್​ಗಡದ ರಾಜನಂದಗಾಂವ್ ಜಿಲ್ಲೆಯಲ್ಲಿ ಮಾವೋವಾದಿ ಉಗ್ರರು ಐಇಡಿ ಬಾಂಬ್ ಸ್ಫೋಟಿಸಿದ್ದರಿಂದ ಒಬ್ಬ ಯೋಧನಿಗೆ ಗಾಯವಾಗಿದೆ. ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿಗರು ಹಾಗೂ ವಿಪಕ್ಷಗಳ ಕಾರ್ಯಕರ್ತರ ನಡುವೆ ಕೆಲ ಸ್ಥಳಗಳಲ್ಲಿ ಮಾರಾಮಾರಿ ಘಟನೆಯಾಗಿರುವುದು ವರದಿಯಾಗಿದೆ. ಆದರೆ, ಯಾವುದೇ ಪ್ರಾಣಹಾನಿಯಾಗಿಲ್ಲ. ಕರ್ನಾಟಕದ ಮಂಡ್ಯದಲ್ಲಿ ಸುಮಲತಾ ಮತ್ತು ನಿಖಿಲ್ ಬೆಂಬಲಿಗರ ನಡುವೆ ಒಂದಷ್ಟು ಮಾರಾಮಾರಿ ನಡೆದಿದೆ. ಇನ್ನುಳಿದಂತೆ ಬೇರೆ ಕಡೆ ಹಿಂಸಾಚಾರ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿಲ್ಲ. ಭಯೋತ್ಪಾದಕರ ಭಯದಲ್ಲಿರುವ ಜಮ್ಮು-ಕಾಶ್ಮೀರದಲ್ಲಿ ಮತದಾನದ ದಿನ ಯಾವುದೇ ಅವಘಡ ಸಂಭವಿಸಲಿಲ್ಲ. ಉಧಮ್​ಪುರ, ಶ್ರೀನಗರದಲ್ಲಿ ಜನರು ವೋಟ್ ಹಾಕಲು ಹೆಚ್ಚು ಉತ್ಸಾಹ ತೋರದೇ ಹೋದರೂ ಒಟ್ಟಾರೆಯಾಗಿ ಕಣಿವೆ ರಾಜ್ಯದಲ್ಲಿ ಚುನಾವಣೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ಎನ್​ಡಿಎ ಅಲ್ಲ, ಯುಪಿಎ ಅಲ್ಲ; ಈ ಬಾರಿ ಹೊಸ ಮೈತ್ರಿಕೂಟ ಅಸ್ತಿತ್ವಕ್ಕೆ: ಮಮತಾ ಬ್ಯಾನರ್ಜಿ ಭವಿಷ್ಯ

ಇನ್ನುಳಿದಂತೆ, ಅನೇಕ ಕಡೆ ಇವಿಎಂ ಮತಯಂತ್ರದಲ್ಲಿ ದೋಷ ಕಂಡು ಹಲವು ಹೊತ್ತು ಮತದಾನ ಸ್ಥಗಿತಗೊಂಡ ಉದಾಹರಣೆಗಳಿವೆ. ತಮಿಳುನಾಡಿನ ಕಡಲೂರಿನಲ್ಲಿ ಶಶಿಕಲಾ ಅವರ ಪಕ್ಷದ ಅಭ್ಯರ್ಥಿಯ ಹೆಸರಿನ ಮುಂದೆ ಬಟನ್ ಹೊಂದಿಲ್ಲದ ಇವಿಎಂ ಮೆಷೀನ್ ಪತ್ತೆಯಾಗಿ ಒಂದಷ್ಟು ಗೊಂದಲ ಸೃಷ್ಟಿಯಾಗಿತ್ತು.ಏಪ್ರಿಲ್ 11ರಂದು 91 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ. 69-70ರಷ್ಟು ಮತದಾನವಾಗಿತ್ತು. ಅಂದೂ ಕೂಡ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಇದರೊಂದಿಗೆ ಎರಡು ಹಂತಗಳ ಚುನಾವಣೆಯಲ್ಲಿ ಒಟ್ಟು 186 ಲೋಕಸಭಾ ಕ್ಷೇತ್ರಗಳಿಗೆ ಮತದಾನವಾಂತಾಗಿದೆ. ಏಪ್ರಿಲ್ 23, 29, ಮೇ 6, 12 ಮತ್ತು 19ರಂದು ಇನ್ನುಳಿದ ಹಂತಗಳಲ್ಲಿ ಮತದಾನವಾಗಲಿದೆ. ಏಪ್ರಿಲ್ 23, ಮಂಗಳವಾರದಂದು ಕರ್ನಾಟಕದ ಇನ್ನುಳಿದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮೇ 19ರಂದು ರಾಜ್ಯದ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯಾಗಲಿದೆ. ಚುನಾವಣೆಯಾದ ಎಲ್ಲಾ ಲೋಕಸಭಾ ಕ್ಷೇತ್ರಗಳು, ವಿಧಾನಸಭಾ ಕ್ಷೇತ್ರಗಳು ಹಾಗೂ ಉಪಚುನಾವಣೆಗಳ ಫಲಿತಾಂಶ ಮೇ 23ರಂದು ಪ್ರಕಟವಾಗಲಿದೆ.
First published: April 18, 2019, 9:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading