Ida Hurricane- ಅಮೆರಿಕದಲ್ಲಿ ಇಡಾ ಚಂಡಮಾರುತ ಅಬ್ಬರ; ನ್ಯೂಯಾರ್ಕ್​ನಲ್ಲಿ 41 ಸಾವು

ಇಡಾ ಚಂಡಮಾರುತದಿಂದ (Ida Hurricane) ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದ್ದು 41 ಮಂದಿ ಸಾವನ್ನಪ್ಪಿದ್ದಾರೆನ್ನಲಾಗಿದೆ. ಲೂಸಿಯಾನ, ನ್ಯೂಯಾರ್ಕ್, ನ್ಯೂಜೆರ್ಸಿ, ಪೆನ್ಸಿಲ್ವೇನಿಯಾ ಮೊದಲಾದ ರಾಜ್ಯಗಳು ಚಂಡಮಾರುತದಿಂದ ತತ್ತರಿಸಿವೆ.

ನ್ಯೂಯಾರ್ಕ್​ನಲ್ಲಿ ಚಂಡಮಾರುತದ ಒಂದು ದೃಶ್ಯ

ನ್ಯೂಯಾರ್ಕ್​ನಲ್ಲಿ ಚಂಡಮಾರುತದ ಒಂದು ದೃಶ್ಯ

 • News18
 • Last Updated :
 • Share this:
  ನ್ಯೂಯಾರ್ಕ್, ಸೆ. 03: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ (New York City) ಅಪ್ಪಳಿಸಿದ ಇಡಾ ಚಂಡಮಾರುತದಿಂದ (Ida Hurricane) ಜನಜೀವನ ಸ್ಥಗಿತಗೊಂಡಿದೆ. ಭಾರೀ ಮಳೆಯಿಂದಾಗಿ ಪ್ರವಾಹಗಳು ಉಕ್ಕೇರಿದ ಪರಿಣಾಮ 41 ಮಂದಿ ಸಾವನ್ನಪ್ಪಿರುವ ಮಾಹಿತಿ ಬಂದಿದೆ. ನ್ಯೂಯಾರ್ಕ್​ಗೆ ಚಂಡಮಾರುತ ಅಪ್ಪಳಿಸುವ ಮೊದಲು ಲೂಸಿಯಾನ ರಾಜ್ಯದಲ್ಲೂ ಅದು ಆರ್ಭಟಿಸಿದೆ. ಅಲ್ಲಿ ಸಾವಿರಾರು ಕಟ್ಟಡಗಳು ಹಾನಿಯಾಗಿವೆ. ನೂರಾರು ಮರಗಳು ಧರೆಗುರುಳಿವೆ. ವಿದ್ಯುತ್ ಸರಬರಾಜು ಸ್ಥಗಿತಗೊಂಡು ಬಹುತೇಕ ಪ್ರದೇಶಗಳು ಕತ್ತಲಲ್ಲಿ ಇರುವಂತಾಗಿದೆ. ನ್ಯೂ ಜೆರ್ಸಿ (New Jersey) ರಾಜ್ಯದಲ್ಲಿ 23ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ (US President Joe Biden) ಅವರು ಈ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ಧೈರ್ಯ ತುಂಬುವ ಸಂದೇಶ ನೀಡಿದ್ಧಾರೆ.

  ಇಡಾ ಚಂಡಮಾರುತದಿಂದ ನ್ಯೂಯಾರ್ಕ್ ಸೇರಿದಂತೆ ಹಲವು ನಗರಗಳಿಗೆ ಭಾರೀ ಹಾನಿಯಾಗಿದೆ. ನ್ಯೂಯಾರ್ಕ್ ನಗರದ ಬಹುತೇಕ ರಸ್ತೆಗಳು ನದಿಗಳಂತಾಗಿವೆ. ಇಷ್ಟು ಭಾರೀ ಮಳೆಯನ್ನ ನಾನು ನೋಡಿಯೇ ಇಲ್ಲ ಎಂದು ಅಲ್ಲಿನ ಅನೇಕ ನಿವಾಸಿಗಳು ಉದ್ಘರಿಸಿದ್ದಾರೆ. ಒಂದು ರೀತಿಯಲ್ಲಿ ಕಾಡಿನಲ್ಲಿ ಇದ್ದ ರೀತಿ ಅನುಭವ ಆಗುತ್ತಿದೆ. ಈ ವರ್ಷ ಪ್ರತಿಯೊಂದೂ ವಿಚಿತ್ರವಾಗಿದೆ ಎಂದು ನ್ಯೂಯಾರ್ಕ್ ನಗರದ ಹೋಟೆಲ್ ಮಾಲೀಕ ಮೆಟೋಡಿಜಾ ಮಿಹಾಜಲೋವ್ ಅವರು ಹೇಳುತ್ತಾರೆ. ನಗರದ ಮನ್​ಹಟನ್ ಪ್ರದೇಶದಲ್ಲಿರುವ ಹೋಟೆಲ್​ಗೆ ಮಳೆ ನೀರು ನುಗ್ಗು ಅವಾಂತರ ಸೃಷ್ಟಿಸಿದೆ. ನ್ಯೂಯಾರ್ಕ್​ನ ಒಂದು ಪ್ರದೇಶದಲ್ಲಿ ಒಂದು ಗಂಟೆಯಲ್ಲಿ 80 ಮಿಮೀ ಮಳೆಯಾಗಿ ದಾಖಲೆ ಬರೆದಿದೆ.

  ಇಡಾ ಚಂಡಮಾರುತ ಅಪ್ಪಳಿಸಿ ಹೋದ ಬಳಿಕ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಲೂಸಿಯಾನ, ನ್ಯೂಜೆರ್ಸಿ, ನ್ಯೂಯಾರ್ಕ್ ಮೊದಲಾದ ರಾಜ್ಯಗಳು ತತ್ತರಿಸಿವೆ. ಮಳೆಯಿಂದಾಗಿ ಬಹಳಷ್ಟು ಕಡೆ ಪ್ರವಾಹಗಳು ಉದ್ಭವಿಸಿವೆ. ನ್ಯೂಯಾರ್ಕ್ ಮತ್ತು ನ್ಯೂ ಜೆರ್ಸಿ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಎಮರ್ಜೆನ್ಸಿ ಘೋಷಿಸಿ ಮುನ್ನೆಚ್ಚರಿಕೆ ಹಾಗೂ ತುರ್ತು ಪರಿಹಾರ ಕ್ರಮಗಳನ್ನ ಕೈಗೊಂಡವು. ಅಲ್ಲಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡ ಪರಿಣಾಮ ಪೆನ್​ಸಿಲ್ವೇನಿಯಾ ರಾಜ್ಯದ 98 ಸಾವಿರ ಮನೆಗಳು, ನ್ಯೂ ಜೆರ್ಸಿಯ 60 ಸಾವಿರ ಮನೆಗಳು, ನ್ಯೂ ಯಾರ್ಕ್ ರಾಜ್ಯದ 40 ಸಾವಿರ ಮನೆಗಳಲ್ಲಿ ಹಲವು ಗಂಟೆಗಳ ಕಾಲ ವಿದ್ಯುತ್ ಸಂಪರ್ಕವೇ ಕಟ್ ಆಗಿತ್ತು. ನ್ಯೂಯಾರ್ಕ್ ನಗರದಲ್ಲಿ ನಡೆಯುತ್ತಿದ್ದ ಯು ಎಸ್ ಓಪನ್ ಟೆನಿಸ್ ಟೂರ್ನಿಯ ಸ್ಥಳಕ್ಕೂ ಮಳೆ ಅನಾಹುತ ಸೃಷ್ಟಿಸಿದ ಕಾರಣ, ಆಟಗಳನ್ನ ತಾತ್ಕಾಲಿಕವಾಗಿ ನಿಲ್ಲಿಸಲಾಯಿತು.

  ಇದನ್ನೂ ಓದಿ: Times World University Rankings: ಸತತ ಮೂರನೇ ವರ್ಷ ಭಾರತದ ಅತ್ಯುನ್ನತ ವಿವಿ ಎಂಬ ಕೀರ್ತಿಗೆ ಪಾತ್ರವಾದ ಐಐಎಸ್‌ಸಿ ಬೆಂಗಳೂರು

  ನ್ಯೂ ಯಾರ್ಕ್ ನಗರದಲ್ಲಿ ರಸ್ತೆಗಳಲ್ಲಿ ನೀರು ನಿಂತು ನದಿಯಂತಹ ದೃಶ್ಯ ಇತ್ತು. “ನೀರು ಎಷ್ಟು ಆಳ ಇದೆ ಎಂದು ಗೊತ್ತೇ ಆಗುವುದಿಲ್ಲ. ಇದು ತುಂಬಾ ಅಪಾಯಕಾರಿ” ಎಂದು ನ್ಯೂ ಯಾರ್ಕ್​ನ ಹವಾಮಾನ ಸಂಸ್ಥೆ ನ್ಯಾಷನಲ್ ವೆದರ್ ಸರ್ವಿಸ್ ಟ್ವೀಟ್ ಮಾಡಿತ್ತು. ಈ ಒಂದು ಟ್ವೀಟ್ ನ್ಯೂ ಯಾರ್ಕ್​ನಲ್ಲಿ ಪ್ರವಾಹ ಪರಿಸ್ಥಿತಿ ಎಷ್ಟು ತೀವ್ರವಾಗಿದೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ.

  ಸೈಕ್ಲೋನ್​ಗೂ ಹುರಿಕೇನ್​ಗೂ ಏನಿದೆ ವ್ಯತ್ಯಾಸ?

  ನಾವು ವಿವಿಧ ಚಂಡಮಾರುತಗಳಿಗೆ ಇಂಗ್ಲೀಷ್​ನಲ್ಲಿ ಸೈಕ್ಲೋನ್, ಹುರಿಕೇನ್, ಟೈಫೂನ್ ಎಂದು ಕರೆಯಲಾಗುವುದನ್ನು ನೋಡಿದ್ಧೇವೆ. ಆದರೆ, ಈ ಮೂರೂ ಕೂಡ ಚಂಡಮಾರುತಗಳೇ. ತೀವ್ರತೆಯಲ್ಲೂ ಯಾವುದೇ ವ್ಯತ್ಯಾಸವಿಲ್ಲ. ಉತ್ತರ ಅಟ್ಲಾಂಟಿಕ್, ಈಶಾನ್ಯ ಪೆಸಿಫಿಕ್ ಸಾಗರ ಪ್ರದೇಶದಿಂದ ಉದ್ಭವಿಸುವ ಚಂಡಮಾರುತಗಳಿಗೆ ಹುರಿಕೇನ್ ಎಂದು ಬಣ್ಣಿಸುತ್ತಾರೆ.  ಆಗ್ನೇಯ ಪೆಸಿಫಿಕ್ ಮಹಾಸಾಗರ ಪ್ರದೇಶದಲ್ಲಿ ಸೃಷ್ಟಿಯಾಗುವ ಚಂಡಮಾರುತಕ್ಕೆ ಟೈಫೂನ್ ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಹಿಂದೂ ಮಹಾಸಾಗರ, ದಕ್ಷಿಣ ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಬರುವ ಚಂಡಮಾರುತಗಳಿಗೆ ಸೈಕ್ಲೋನ್ ಎಂದು ಹೆಸರಿಸುತ್ತಾರೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: