• Home
  • »
  • News
  • »
  • national-international
  • »
  • ICICI Bank: 'ಪಾಕೆಟ್ಸ್' ಡಿಜಿಟಲ್ ವ್ಯಾಲೆಟ್‍ಗೆ ಯುಪಿಐ ಐಡಿ ಸೌಲಭ್ಯ ಸಂಪರ್ಕಿಸಿದ ಮೊದಲ ಬ್ಯಾಂಕ್ ಐಸಿಐಸಿಐ!

ICICI Bank: 'ಪಾಕೆಟ್ಸ್' ಡಿಜಿಟಲ್ ವ್ಯಾಲೆಟ್‍ಗೆ ಯುಪಿಐ ಐಡಿ ಸೌಲಭ್ಯ ಸಂಪರ್ಕಿಸಿದ ಮೊದಲ ಬ್ಯಾಂಕ್ ಐಸಿಐಸಿಐ!

ಐಸಿಐಸಿಐ ಬ್ಯಾಂಕ್

ಐಸಿಐಸಿಐ ಬ್ಯಾಂಕ್

ಗ್ರಾಹಕರು ಹಣ ಸ್ವೀಕರಿಸುವ ವ್ಯಕ್ತಿಯ ಯುಪಿಐ ಐಡಿ ಅಥವಾ ಉಳಿತಾಯ ಖಾತೆ ವಿವರಗಳನ್ನು ನಮೂದಿಸುವ ಮೂಲಕ ಸುಲಲಿತವಾಗಿ ತಮ್ಮ ಪಾಕೆಟ್ಸ್‍ನಿಂದ ಯಾವುದೇ ಉಳಿತಾಯ ಖಾತೆಗೆ ಅಥವಾ ಇತರ ಪಾಕೆಟ್ಸ್ ವ್ಯಾಲೆಟ್‍ಗಳಿಗೆ ಹಣವನ್ನು ವರ್ಗಾಯಿಸಬಹುದಾಗಿದೆ.   

  • Share this:

ಮುಂಬೈ: ಐಸಿಐಸಿಐ ಬ್ಯಾಂಕ್ ಇಂದು, ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್‍ಫೇಸ್) ಐಡಿಯನ್ನು ತನ್ನ ಡಿಜಿಟಲ್ ವ್ಯಾಲೆಟ್ 'ಪಾಕೆಟ್ಸ್' ಜತೆ ಸಂಪರ್ಕಿಸುವ ವಿಶಿಷ್ಟ ಸೌಲಭ್ಯದ ಆರಂಭವನ್ನು ಘೋಷಿಸಿದೆ. ಹೊಸ ವ್ಯವಸ್ಥೆಯ ಜಾರಿಯಿಂದಾಗಿ ಹಾಲಿ ಇರುವ ಬ್ಯಾಂಕ್ ಉಳಿತಾಯ ಖಾತೆಗೆ ಐಡಿಯನ್ನು ಸಂಪರ್ಕಿಸುವ ಅಗತ್ಯತೆಯ ಪದ್ಧತಿಯಿಂದ ವಿಮುಖವಾಗಬಹುದಾಗಿದೆ. ಐಸಿಐಸಿಐ ಬ್ಯಾಂಕಿನ ಗ್ರಾಹಕರಲ್ಲದವರೂ ಸೇರಿದಂತೆ ಎಲ್ಲ ಹೊಸ ಬಳಕೆದಾರರು, ಇದೀಗ ತಕ್ಷಣವೇ ಪಾಕೆಟ್ಸ್ ಜತೆ ಸ್ವಯಂಚಾಲಿತವಾಗಿ ಸಂಪರ್ಕಿಸುವ ಯುಪಿಐ ಐಡಿಯನ್ನು ಪಡೆಯಬಹುದಾಗಿದೆ. ಇದರ ಜತೆಗೆ ಈಗಾಗಲೇ ಯುಪಿಐ ಐಡಿ ಹೊಂದಿರುವ ಗ್ರಾಹಕರು, ಪಾಕೆಟ್ಸ್ ಆ್ಯಪ್‍ಗೆ ಲಾಗ್ ಆನ್ ಆಗುವಾಗ ಹೊಸ ಐಡಿ ಪಡೆಯಲಿದ್ದಾರೆ. ಈ ವಿಶಿಷ್ಟ ಉಪಕ್ರಮದಿಂದಾಗಿ ಬಳಕೆದಾರರು ತಮ್ಮ ದೈನಂದಿನ ಸಣ್ಣಮೌಲ್ಯದ ವಹಿವಾಟುಗಳನ್ನು ಸುರಕ್ಷಿತ ಹಾಗೂ ಸುಭದ್ರವಾಗಿ ಯುಪಿಐ ಬಳಸಿಕೊಂಡು ತಮ್ಮ ಪಾಕೆಟ್ ವ್ಯಾಲೆಟ್‍ನಿಂದಲೇ ನೇರವಾಗಿ ನಿರ್ವಹಿಸಬಹುದಾಗಿದೆ.


ಇದು ಗ್ರಾಹಕರು ತಮ್ಮ ಉಳಿತಾಯ ಖಾತೆಗಳಿಂದ ಪ್ರತಿದಿನ ನಡೆಸುವ ಅಸಂಖ್ಯಾತ ವಹಿವಾಟುಗಳನ್ನು ಮುಖ್ಯವಾಹಿನಿಗೆ ವರ್ಗಾಯಿಸಲು ಸಾಧ್ಯವಾಗಲಿದ್ದು, ಇದರ ಪರಿಣಾಮವಾಗಿ ಗ್ರಾಹಕರ ಉಳಿತಾಯ ಖಾತೆ ಸ್ಟೇಟ್‍ಮೆಂಟ್‍ನಲ್ಲಿ ಗೊಂದಲಕಾರಿ ಹಲವು ನಮೂದಿಸುವಿಕೆಯನ್ನು ತಪ್ಪಿಸಬಹುದಾಗಿದೆ. ಇಷ್ಟು ಮಾತ್ರವಲ್ಲದೇ, ಇದು ಯುಪಿಐನ ಅನುಕೂಲಕರ ಬಳಕೆಯನ್ನು ಬ್ಯಾಂಕ್ ಉಳಿತಾಯ ಖಾತೆ ಹೊಂದಿರದ ಕಾಲೇಜು ವಿದ್ಯಾರ್ಥಿಗಳಂಥ ಯುವ ವಯಸ್ಕರಿಗೆ ವಿಸ್ತರಿಸಲಿದೆ.


ಇಡೀ ಬ್ಯಾಂಕಿಂಗ್ ಉದ್ಯಮದಲ್ಲೇ ಗ್ರಾಹಕರು ತಮ್ಮ ಉಳಿತಾಯ ಖಾತೆಯ ಬದಲಾಗಿ ವ್ಯಾಲೆಟ್ ಬ್ಯಾಲೆನ್ಸ್‍ನಿಂದಲೇ ಯುಪಿಐ ವಹಿವಾಟುಗಳನ್ನು ನಡೆಸಲು ಅನುವು ಮಾಡಿಕೊಟ್ಟ ಮೊಟ್ಟಮೊದಲ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಐಸಿಐಸಿಐ ಬ್ಯಾಂಕ್ ಪಾತ್ರವಾಗಿದೆ. ತನ್ನ ಪಾಕೆಟ್ಸ್ ಡಿಜಿಟಲ್ ವ್ಯಾಲೆಟ್ ಅನ್ನು ಯುಪಿಐ ನೆಟ್‍ವರ್ಕ್ ಜತೆ ಸಂಪರ್ಕಿಸುವ ಸಲುವಾಗಿ ಬ್ಯಾಂಕ್, ಎನ್‍ಪಿಸಿಐ ಜತೆ ಸಹಭಾಗಿತ್ವ ಹೊಂದಿದ್ದು, ಇದು ಗ್ರಾಹಕರು ತಮ್ಮ ಡಿಜಿಟಲ್ ವ್ಯಾರೆಟ್ ಜತೆಗೆ ಯುಪಿಐ ಐಡಿಗಳನ್ನು ಸಂಪರ್ಕಿಸುವ ವಿನೂತನ ಉಪಕ್ರಮಕ್ಕೆ ಅನುವು ಮಾಡಿಕೊಟ್ಟಿದೆ. ಇದರೊಂದಿಗೆ ಪಾಕೆಟ್ಸ್ ಬಳಸುವ ಗ್ರಾಹಕರು, ತಮ್ಮ ಬ್ಯಾಂಕ್ ಉಳಿತಾಯ ಖಾತೆಯನ್ನು ಬಳಸದೇ ನೇರವಾಗಿ ಪಾಕೆಟ್ಸ್ ವ್ಯಾಲೆಟ್‍ಗೆ ಹಣ ಸ್ವೀಕರಿಸಲು ಮತ್ತು ಪಾಕೆಟ್ಸ್ ವ್ಯಾಲೆಟ್‍ನಿಂದ ನೇರವಾಗಿ ಹಣವನ್ನು ಪಾವತಿಸಲು ಅನುವಾಗಲಿದೆ.


ಪಾಕೆಟ್ಸ್ ಡಿಜಿಟಲ್ ವ್ಯಾಲೆಟ್ ಬಳಕೆದಾರರು, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ (ಪಿ2ಪು) ಪಾವತಿ ಮಾಡಲು ಅಂದರೆ ಯಾವುದೇ ವ್ಯಕ್ತಿಯ ಬ್ಯಾಂಕ್ ಖಾತೆಗೆ ಹಣವನ್ನು ಕಳುಹಿಸಲು ಅಥವಾ ತಮ್ಮ ಸಂಪರ್ಕದಲ್ಲಿರುವವರಿಗೆ ಪಾವತಿಸಲು ಯುಪಿಐ ಐಡಿ ಬಳಸಬಹುದಾಗಿದೆ. ಇದರ ಜತೆಗೆ ಗ್ರಾಹಕರು ವ್ಯಕ್ತಿಗಳಿಂದ ವ್ಯಾಪಾರಿಗಳಿಗೆ (ಪಿ2ಎಂ) ಪಾವತಿಗೆ ಅಂದರೆ ಆನ್‍ಲೈನ್ ವ್ಯಾಪಾರಿ ತಾಣಗಳಲ್ಲಿ ಪಾವತಿಸಲು ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಾವತಿಸಲು ಅವಕಾಶವಾಗಲಿದೆ. ಇದರ ಜತೆಗೆ, ಬಳಕೆದಾರರು ಈ ವ್ಯಾಲೆಟ್ ಬಳಸಿಕೊಂಡು ಮಾಡುವ ಪ್ರತಿಯೊಂದು ವಹಿವಾಟಿಗೂ ಅಚ್ಚರಿಯ ಬಹುಮಾನಗಳನ್ನು ಪಡೆಯಲಿದ್ದಾರೆ.


ಐಸಿಐಸಿಐ ಬ್ಯಾಂಕಿನ ಡಿಜಿಟಲ್ ವಾಹಿನಿ ಮತ್ತು ಪಾಲುದಾರಿಕೆ ವಿಭಾಗದ ಮುಖ್ಯಸ್ಥ ಬಿಜಿತ್ ಭಾಸ್ಕರ್ ಈ ಬಗ್ಗೆ ವಿವರ ನೀಡಿ, "ಐಸಿಐಸಿಐ ಬ್ಯಾಂಕ್‍ನಲ್ಲಿ ನಾವು ಗ್ರಾಹಕರಿಗೆ ಸರಳ, ತ್ವರಿತ ಮತ್ತು ಅನುಕೂಲಕವೆನಿಸಿದ ವ್ಯವಹಾರಕ್ಕೆ ಪೂರಕವಾದ ತಾಂತ್ರಿಕ ಅನುಶೋಧನೆಗಳತ್ತ ಗಮನ ಹರಿಸುತ್ತೇವೆ. ಐದು ವರ್ಷಗಳ ಹಿಂದೆ, ನಾವು ಪಾಕೆಟ್ಸ್ ಉಪಕ್ರಮಕ್ಕೆ ಚಾಲನೆ ನೀಡುವ ಮೂಲಕ, ತಕ್ಷಣವೇ ಗ್ರಾಹಕರು ತಮ್ಮ ಮೊಬೈಲ್ ಫೋನ್ ಬಳಸಿಕೊಂಡು ಡಿಜಿಟಲ್ ವ್ಯಾಲೆಟ್ ಆರಂಭಿಸಲು ಮತ್ತು ತಕ್ಷಣವೇ ವಹಿವಾಟು ಆರಂಭಿಸಲು ಗ್ರಾಹಕರನ್ನು ಸಶಕ್ತಗೊಳಿಸಿದ್ದೆವು. ನಮ್ಮ ಸಂಶೋಧನೆಗಳಿಂದ ತಿಳಿದುಬಂದಂತೆ, ಗ್ರಾಹಕರು ತಮ್ಮ ಯುಪಿಐ ಐಡಿಯನ್ನು ತಮ್ಮ ಡಿಜಿಟಲ್ ವ್ಯಾಲೆಟ್ ಜತೆಗೆ ಸಂಪರ್ಕಿಸಲು ಉತ್ಸುಕರಾಗಿದ್ದಾರೆ. ಈ ಮೂಲಕ ಸಣ್ಣ ಪ್ರಮಾಣದ ವಹಿವಾಟುಗಳಿಗೆ ತಮ್ಮ ವ್ಯಾಲೆಟ್‍ನಲ್ಲಿರುವ ಬ್ಯಾಲೆನ್ಸನ್ನು ನೇರವಾಗಿ ಬಳಸಿಕೊಳ್ಳಲು ಮತ್ತು ದೊಡ್ಡ ಪ್ರಮಾಣದ ವಹಿವಾಟುಗಳಿಗೆ ಮಾತ್ರವೇ ಬ್ಯಾಂಕ್ ಖಾತೆಯನ್ನು ಬಳಸುವುದನ್ನು ಎದುರು ನೋಡುತ್ತಿದ್ದಾರೆ. ಈ ಒಳನೋಟಕ್ಕೆ ಅನುಸಾರವಾಗಿ, ನಾವು ಎನ್‍ಪಿಸಿಐ ಜತೆಗೆ ನಿಕಟವಾಗಿ ಕಾರ್ಯ ನಿರ್ವಹಿಸುವ ಮೂಲಕ ಡಿಜಿಟಲ್ ಬ್ಯಾಂಕಿಂಗ್‍ನಲ್ಲಿ ಈ ವಿಶಿಷ್ಟ ಹಾಗೂ ವಿನೂತನ ಪರಿಹಾರವನ್ನು ಪರಿಚಯಿಸಿದ್ದೇವೆ. ಈ ಸೌಲಭ್ಯವು ಗ್ರಾಹಕರಿಗೆ ತಮ್ಮ ಪಾಕೆಟ್ಸ್ ವ್ಯಾಲೆಟ್ ಬಳಸಿಕೊಂಡು ಸುಭದ್ರ ಹಾಗೂ ಸುರಕ್ಷಿತವಾಗಿ ಯುಪಿಐ ಪಾವತಿಗಳನ್ನು ಮಾಡುವ ಪ್ರಯೋಜನ ಮತ್ತು ಅನುಕೂಲತೆಯನ್ನು ಕಲ್ಪಿಸಲಿದೆ" ಎಂದು ಬಣ್ಣಿಸಿದರು.


ಎನ್‍ಪಿಸಿಐ ಸಿಓಓ ಶ್ರೀಮತಿ ಪ್ರವೀಣ ರಾಯ್ ಈ ಬಗ್ಗೆ ಪ್ರತಿಕ್ರಿಯಿಸಿ, "ಡಿಜಿಟಲ್ ವ್ಯಾಲೆಟ್‍ಗೆ ಯುಪಿಐ ಐಡಿ ಸೃಷ್ಟಿಸುವ ಮತ್ತು ಸಂಪರ್ಕಿಸುವ ಸಲುವಾಗಿ ಐಸಿಐಸಿಐ ಬ್ಯಾಂಕ್ ಜತೆ ಸಹಭಾಗಿತ್ವ ಹೊಂದಲು ನಮಗೆ ಅತೀವ ಸಂತಸವಾಗುತ್ತಿದೆ. ಈ ಉಪಕ್ರಮವು ಯುಪಿಐ ಲಭ್ಯತೆಯನ್ನು ಮತ್ತಷ್ಟು ಪ್ರಜಾಸತ್ತಾತ್ಮಕಗೊಳಿಸಲಿದ್ದು, ಗ್ರಾಹಕರಿಗೆ ತಮ್ಮ ಡಿಜಿಟಲ್ ವ್ಯಾಲೆಟ್ ಮೂಲಕವೇ ನೇರವಾಗಿ ಪಾವತಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯಿಂದ ಪಾವತಿಸುವ ಜತೆಗೆ ಅದನ್ನು ನೇರವಾಗಿ ಪಾವತಿಸಲು ಅನುಕೂಲ ಮಾಡಿಕೊಡುವ ಮೂಲಕ ಈ ಸೌಲಭ್ಯವನ್ನು ಸಾರ್ವತ್ರಿಕಗೊಳಿಸಲು ನೆರವಾಗಲಿದೆ. ಯುಪಿಐ ಎನ್ನುವುದು ಎಲ್ಲ ಬಗೆಯ ಪಾವತಿಗಳಿಗೆ ಅಂದರೆ ಪಿ2ಎಂ ಹಾಗೂ ಪಿ2ಪಿ ಪಾವತಿಗಳಿಗೆ ಒಂದು ನಿಲುಗಡೆಯ ಪರಿಹಾರವಾಗಿದ್ದು, ಈ ಸೌಲಭ್ಯವು ಭಾರತದಲ್ಲಿ ಡಿಜಿಟಲ್ ಪರಿಸರದ ಬೆಳವಣಿಗೆಗೆ ಒತ್ತು ನೀಡಲಿದೆ. ಎನ್‍ಪಿಸಿಐನಲ್ಲಿ ನಾವು ತಂತ್ರಜ್ಞಾನವನ್ನು ಅನುಶೋಧನೆ ಜತೆ ಸಮನ್ವಯಗೊಳಿಸುವ ಮೂಲಕ ಗ್ರಾಹಕ ಅನುಭವವನ್ನು ಹೆಚ್ಚಿಸುವ ವ್ಯವಸ್ಥೆಯನ್ನು ಸೃಷ್ಟಿಸಲು ನಿರಂತರವಾಗಿ ಶ್ರಮಿಸುತ್ತಿದ್ದೇವೆ. ಈ ವಿನೂತನ ಸೌಲಭ್ಯವು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.


ಈ ಸೌಲಭ್ಯದ ಬಳಕೆಯನ್ನು ಆರಂಭಿಸಲು, ಹೊಸ ಗ್ರಾಹಕರು ಪಾಕೆಟ್ಸ್ ಆ್ಯಪ್ ಡೌನ್‍ಲೋಡ್ ಮಾಡಿಕೊಂಡು ಡೌನ್‍ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಯಶಸ್ವಿಯಾಗಿ ಪಾಕೆಟ್ಸ್‍ಗೆ ಲಾಗ್ ಇನ್ ಆದ ಬಳಿಕ, ಬಳಕೆದಾರರ ನೋಂದಾಯಿತ ಮೊಬೈಲ್ ಸಂಖ್ಯೆಯ ಆಧಾರದಲ್ಲಿ ಪಾಕೆಟ್ಸ್ ವಿಪಿಎ ಸ್ವಯಂಚಾಲಿತವಾಗಿ ಸೃಷ್ಟಿಯಾಗುತ್ತದೆ. ಉದಾಹರಣೆಗೆ 9999xxxxxx@pockets ಇದರಲ್ಲಿ 9999xxxxxx ಎನ್ನುವುದು ನೋಂದಾಯಿತ ಮೊಬೈಲ್ ಸಂಖ್ಯೆಯಾಗಿರುತ್ತದೆ. ಇಲ್ಲಿ ಯುಪಿಐ ಐಡಿ ಸೃಷ್ಟಿಸಲು ಬ್ಯಾಂಕ್ ಖಾತೆಯ ವಿವರಗಳ ಅಗತ್ಯ ಇರುವುದಿಲ್ಲ. ಇದರ ಜತೆಗೆ ಸ್ವಯಂಚಾಲಿತವಾಗಿ ಸೃಷ್ಟಿಯಾಗುವ ಯುಪಿಐ ಐಡಿಯನ್ನು ಪರಿಷ್ಕರಿಸಿ ತಮ್ಮ ಅಯ್ಕೆಯ ಐಡಿಯನ್ನು ಸೃಷ್ಟಿಸಿಕೊಳ್ಳಲು ಅವಕಾಶವಿರುತ್ತದೆ. ಇದಕ್ಕಾಗಿ ಆ್ಯಪ್ ಒಳಗೆಯೇ ಇರುವ ಭೀಮ್ ಯುಪಿಐ ಅಡಿಯಲ್ಲಿ 'ಮೋಡಿಫೈ' ಸೌಲಭ್ಯವನ್ನು ಬಳಸಿಕೊಳ್ಳಬಹುದು.ಹಾಲಿ ಬಳಕೆದಾರರು, ತಮ್ಮ ಪಾಕೆಟ್ಸ್ ಆ್ಯಪ್ ಅನ್ನು ಇತ್ತೀಚಿನ ಅವತರಣಿಕೆಗಳಿಗೆ ಅಪ್‍ಡೇಟ್ ಮಾಡಿಕೊಂಡು ಈ ಸೌಲಭ್ಯ ಪಡೆಯಬಹುದು.


ಇದನ್ನು ಓದಿ: Sputnik V: ಜೂನ್ 2ನೇ ವಾರದಿಂದ ಸ್ಪುಟ್ನಿಕ್ ವಿ ಲಸಿಕೆ ಅಪೋಲೊ ಆಸ್ಪತ್ರೆಯಲ್ಲಿ ಲಭ್ಯ!


ಯುಪಿಐ ಸಂಪರ್ಕಿತ ಪಾಕೆಟ್ಸ್  ಪ್ರಯೋಜನಗಳೇನು?


• ಸ್ಕ್ಯಾನ್ ಮತ್ತು ಪಾವತಿ: ಬಳಕೆದಾರರು ವ್ಯಾಪಾರಿ ಮಳಿಗೆಗಳು ಅಥವಾ ಇತರ ಕಡೆಗಳಲ್ಲಿ ಲಭ್ಯವಿರುವ ಕ್ಯೂಆರ್ ಕೋಡ್‍ಗಳನ್ನು ಸ್ಕ್ಯಾನ್ ಮಾಡಿಕೊಂಡು ತಮ್ಮ ಪಾವತಿಗಳನ್ನು ಪಾಕೆಟ್ಸ್ ಆ್ಯಪ್‍ನಲ್ಲಿ ಭೀಮ್ ಯುಪಿಐ ಬಳಸಿಕೊಂಡು ಮಾಡಬಹುದಾಗಿದೆ.• ಪಾವತಿ ಹಾಗೂ ಪಾವತಿ ಸ್ವೀಕರಿಸಲು: ಗ್ರಾಹಕರು ತಮ್ಮ ಯುಪಿಐ ಐಡಿಗಳನ್ನು ಬಳಸಿಕೊಂಡು ಮತ್ತೊಬ್ಬ ಬಳಕೆದಾರ ಅಥವಾ ಆ್ಯಪ್‍ನಿಂದ ಬಂದ ಕಲೆಕ್ಟ್ ರಿಕ್ವೆಸ್ಟ್​ಗೆ  ಪಾವತಿ ಮಾಡಬಹುದಾಗಿದೆ. ಅಂತೆಯೇ ಮೌಲಿಕ ಮೊತ್ತ ಹಗೂ ಕಳುಹಿಸುವವರ ಯುಪಿಐ ಐಡಿ ನಮೂದಿಸುವ ಮೂಲಕ ಕಲೆಕ್ಟ್ ರಿಕ್ವೆಸ್ಟ್ ಸೃಷ್ಟಿಸಿಕೊಂಡು ಹಣ ಸ್ವೀಕರಿಸಲು Pಕೂಡಾ ಅವಕಾಶ ಇರುತ್ತದೆ.


• ಸಂಪರ್ಕಕ್ಕೆ ಪಾವತಿ: ಈ ವಿಶೇಷತೆಯೊಂದಿಗೆ ಬಳಕೆದಾರರು ಸುಲಲಿತವಾಗಿ ತಮ್ಮ ಫೋನ್ ಬುಕ್‍ನಲ್ಲಿರುವ ಸಂಪರ್ಕಗಳಿಗೆ ಪಾವತಿ ಮಾಡಲು ಅವಕಾಶವಿದೆ.


• ವ್ಯಾಪಾರಿ ತಾಣಗಳಲ್ಲಿ ಯುಪಿಐ ಪಾವತಿಗೆ: ಗ್ರಾಹಕರು ಯಾವುದೇ ವ್ಯಾಪಾರಿ ತಾಣಗಳಲ್ಲಿ 'ಪೇಮೆಂಟ್ ಥ್ರೂ ಯುಪಿಐ' ಸೌಲಭ್ಯವನ್ನು ಆಯ್ಕೆ ಮಾಡಿಕೊಂಡು ತಮ್ಮ ಪಾಕೆಟ್ಸ್ ಯುಪಿಐ ಐಡಿ ನಮೂದಿಸುವ ಮೂಲಕ ಆನ್‍ಲೈನ್ ಮೂಲಕ ಹಣವನ್ನು ಪಾವತಿಸಬಹುದು. ಗ್ರಾಹಕರು ತಮ್ಮ ಐಡಿಯನ್ನು ನಮೂದಿಸಿದ ಬಳಿಕ ಕಲೆಕ್ಟ್ ರಿಕ್ವೆಸ್ಟ್ ಸೃಷ್ಟಿಯಾಗಲಿದ್ದು, ಇದನ್ನು ಪಾಕೆಟ್ಸ್ ಆ್ಯಪ್‍ನಲ್ಲಿ ಸ್ವೀಕರಿಸುವ ಮೂಲಕ ಪಾವತಿಯ ಪ್ರಕ್ರಿಯೆ ಪೂರ್ಣಗೊಳಿಸಬಹುದು.


• ಹಣ ವರ್ಗಾವಣೆ: ಗ್ರಾಹಕರು ಹಣ ಸ್ವೀಕರಿಸುವ ವ್ಯಕ್ತಿಯ ಯುಪಿಐ ಐಡಿ ಅಥವಾ ಉಳಿತಾಯ ಖಾತೆ ವಿವರಗಳನ್ನು ನಮೂದಿಸುವ ಮೂಲಕ ಸುಲಲಿತವಾಗಿ ತಮ್ಮ ಪಾಕೆಟ್ಸ್‍ನಿಂದ ಯಾವುದೇ ಉಳಿತಾಯ ಖಾತೆಗೆ ಅಥವಾ ಇತರ ಪಾಕೆಟ್ಸ್ ವ್ಯಾಲೆಟ್‍ಗಳಿಗೆ ಹಣವನ್ನು ವರ್ಗಾಯಿಸಬಹುದಾಗಿದೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು