ಹಿಮ್ಮತ್‌ನಗರ: ಮೀನುಗಾರಿಕಾ ಚಟುವಟಿಕೆಯಲ್ಲಿ ತೊಡಗಿದ್ದ ಗುಂಪೊಂದು ಐಎಎಸ್ ಅಧಿಕಾರಿ ಒಬ್ಬರನ್ನು ಒತ್ತೆಯಾಳಾಗಿರಿಸಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗುಜರಾತ್‌ನ ಸಬರ್‌ಕಾಂತ್ ಜಿಲ್ಲೆಯ ಧರೋಯ್ ಅಣೆಕಟ್ಟಿನ ಬಳಿ ಈ ಘಟನೆ ನಡೆದಿದ್ದು, ಈ ಸ್ಥಳಕ್ಕೆ ಬಂದಿದ್ದಾಗ ಗುಜರಾತ್‌ನ ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ ಅವರನ್ನು ಒತ್ತೆಯಾಳಾಗಿ ಇರಿಸಿ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆಗೊಳಗಾದ ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ ಅವರು ಮೀನುಗಾರಿಕಾ ಯೋಜನೆಗಳಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪದ ಮೇಲೆ ಅಕ್ರಮಗಳನ್ನು ಪತ್ತೆ ಹಚ್ಚಲು ಸ್ಥಳಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಸದ್ಯ ನಿತಿನ್ ಸಂಗ್ವಾನ್ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳೋದೇನು?
ಈ ಸಂಬಂಧ ಮಾಹಿತಿ ನೀಡಿರುವ ಸಬರ್‌ಕಾಂತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶಾಲ್ ವಘೇಲಾ ಅವರು, ಮೀನುಗಾರಿಕಾ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ನಿತಿನ್ ಸಾಂಗ್ವಾನ್ ಅವರು ಸೋಮವಾರ ಧರೋಯ್ ಅಣೆಕಟ್ಟಿನ ಬಳಿ ನಡೆಯುತ್ತಿದೆ ಎನ್ನಲಾದ ಅಕ್ರಮದ ಸ್ಥಳಕ್ಕೆ ಭೇಟಿ ನೀಡಿದಾಗ ಅವರ ಜೊತೆ ಅಧೀನ ಸಿಬ್ಬಂದಿ ಇದ್ದರು. ಈ ವೇಳೆ ಅವರ ಮೇಲೆ ನಡೆದ ದಾಳಿಯಿಂದ ಗಾಯಗೊಂಡಿದ್ದರು. ಆದರೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Priyank Kharge: ಸರ್ಕಾರದ ವಿರುದ್ಧ ಕಿಕ್ಬ್ಯಾಕ್ ಬಾಂಬ್! ಕಾಕಂಬಿ ರಫ್ತಿನಲ್ಲಿ ಭಾರೀ ಅಕ್ರಮ ಆರೋಪ; ಸ್ಫೋಟಕ ಆಡಿಯೋ ಬಿಡುಗಡೆ
ಸರ್ಕಾರದಿಂದಲೂ ಯೋಜನೆಗೆ ಪ್ರೋತ್ಸಾಹ ಧನ
ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ ಮತ್ತು ಸಿಬ್ಬಂದಿ ತಂಡ ಸಾಬರಮತಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಧರೋಯ್ ಡ್ಯಾಂನ ಸಮೀಪ ಇರುವ ಅಂಬಾವಾಡ ಗ್ರಾಮಕ್ಕೆ ಮೀನುಗಾರಿಕಾ ಯೋಜನೆಯ ಪರಿಶೀಲನೆಗಾಗಿ ತೆರಳಿದ್ದರು. ಇದರಲ್ಲಿ ರಾಜ್ಯ ಸರ್ಕಾರವು ಸ್ಥಳೀಯ ಗುತ್ತಿಗೆದಾರರಿಗೆ ಅಣೆಕಟ್ಟಿನ ನೀರಿನಲ್ಲಿ ‘ಕೇಜ್ ಕಲ್ಚರ್ ಮೀನುಗಾರಿಕಾ’ ಪ್ರಾರಂಭಿಸಲು ಪ್ರೋತ್ಸಾಹಧನವನ್ನೂ ನೀಡುತ್ತಿದೆ.
ಗುತ್ತಿಗೆದಾರನಿಂದಲೇ ಹಲ್ಲೆ
ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ಹಾಗೂ ಮೀನುಗಾರಿಕಾ ಯೋಜನೆಯ ಗುತ್ತಿಗೆದಾರ ಬಾಬು ಪರ್ಮಾರ್ ಎಂಬಾತ ಅಧಿಕಾರಿ ನಿತಿನ್ ಸಾಂಗ್ವಾನ್ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ ಎಂದು ತಿಳಿದು ಬಂದಿದೆ. ಅಲ್ಲದೇ ವಾಗ್ವಾದ ಮಿತಿ ಮೀರಿದಾಗ ಆತನೇ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಐಎಎಸ್ ಅಧಿಕಾರಿ ನಿತಿನ್ ಸಾಂಗ್ವಾನ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರು ತಂಡ ರಚಿಸಿ ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದಾರೆ. ಆರೋಪಿಗಳು ಎಲ್ಲೇ ಇದ್ದರೂ ಅವರನ್ನು ಬಂಧಿಸುತ್ತೇವೆ. ಆರೋಪಿಗಳ ಪತ್ತೆಗೆ ನಮ್ಮ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ