ನವ ದೆಹಲಿ (ಜುಲೈ 29); ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ನಿರ್ಮಿತ 5 ರಫೇಲ್ ಫೈಟರ್ ಜೆಟ್ ವಿಮಾನಗಳು ಇಂದು ಮಧ್ಯಾಹ್ನ 2 ಗಂಟೆಗೆ ಹರಿಯಾಣ ರಾಜ್ಯದ ಅಂಬಾಲಾ ವಾಯುಪಡೆ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿವೆ. ಹೀಗಾಗಿ ಅಂಬಾಲಾ ಜಿಲ್ಲಾಡಳಿತವು ವಾಯುಪಡೆ ನಿಲ್ದಾಣಕ್ಕೆ ಹೋಗುವ ರಸ್ತೆಗಳನ್ನು ಸಂಜೆ 5 ಗಂಟೆಯವರೆಗೆ ನಿಷೇಧಿಸಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಸೆಕ್ಷನ್ 144 ಜಾರಿ ಮಾಡಿದೆ ಎಂದು ವರದಿಯಾಗಿದೆ.
ಫೈಟರ್ ಜೆಟ್ಗಳು ಬಂದಿಳಿಯುವ ಕಾರಣದಿಂದಾಗಿ ಭದ್ರತೆಯನ್ನು ಬಿಗಿಗೊಳಿಸುವ ನಿಟ್ಟಿನಲ್ಲಿ ಅಂಬಾಲಾ ಜಿಲ್ಲಾಡಳಿತ ವಾಯುನೆಲೆಯ ಸುತ್ತಲಿನ 3 ಕಿಮೀ ಜಾಗದಲ್ಲಿ ಡ್ರೋನ್ ಹಾರಿಸುವುದನ್ನು ನಿರ್ಬಂಧಿಸಿದೆ. ವಾಯುನೆಲೆಗೆ ಹತ್ತಿರವಿರುವ ನಾಲ್ಕು ಹಳ್ಳಿಗಳಲ್ಲಿ ಸೆಕ್ಷನ್ 144 ಅನ್ನು ವಿಧಿಸಲಾಗಿದೆ. ಇದರ ಜೊತೆಗೆ ಜೆಟ್ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲಿ ಜನ ಮನೆಯ ಛಾವಣಿ ಮೇಲೆ ಸೇರಿ ಛಾಯಾಗ್ರಹಣ ಮಾಡುವುದಕ್ಕೂ ತಡೆ ವಿಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಫೇಲ್ ಜೆಟ್ ಲ್ಯಾಂಡಿಂಗ್ ಕುರಿತಾದ ಇತ್ತೀಚಿನ ಮಾಹಿತಿಗಳು:
ಫ್ರಾನ್ಸ್ನಿಂದ ಹೊರಟ ಜೆಟ್ ವಿಮಾನಗಳನ್ನು ನಿನ್ನೆ ಯುಎಇ ವಾಯು ನೆಲೆಯಲ್ಲಿ ಇಳಿಸಲಾಗಿತ್ತು. ಇದೀಗ 11 ಗಂಟೆ ಸುಮಾರಿಗೆ ಈ ವಿಮಾನಗಳು ಅಲ್ಲಿಂದ ಭಾರತದ ಕಡೆಗೆ ಪ್ರಯಾಣ ಬೆಳೆಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣ ರಾಜ್ಯದ ಅಂಬಾಲಾ ವಾಯುನೆಲೆಗೆ ಆಗಮಿಸುವ ಜೆಟ್ ವಿಮಾನಗಳನ್ನು ಐಎಎಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ಕೆಎಸ್ ಭದೌರಿಯಾ ಅಂಬಾಲಾ ವಾಯುನೆಲೆಗೆ ತೆರಳಿ ಸ್ವಾಗತಿಸಲಿದ್ದಾರೆ.
ಸೋಮವಾರ ಫ್ರಾನ್ಸ್ನಿಂದ ಹೊರಟಿದ್ದ ರಫೇಲ್ ಜೆಟ್ಗಳು ಸುಮಾರು 7,000 ಕಿ.ಮೀ ದೂರವನ್ನು ಒಂದೇ ದಿನದಲ್ಲಿ ಕ್ರಮಿಸಿ ನಿನ್ನೆ ಯುಎಇ ಗೆ ಆಗಮಿಸಿತ್ತು. ಈ ಜೆಟ್ ವಿಮಾನದಲ್ಲಿ ಮೂರು ಸಿಂಗಲ್-ಸೀಟರ್ ಮತ್ತು ಎರಡು ಅವಳಿ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಐಎಎಫ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಐದು ರಫೇಲ್ಗಳನ್ನು ಒಳಗೊಂಡ ಮೊಲದ ಸ್ಕ್ವಾಡ್ರನ್ ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ನಿಲ್ಲಲಿದೆ. ಆದರೆ, ನಂತರ ಆಗಮಿಸಲಿರುವ ಮತ್ತಷ್ಟು ವಿಮಾನಗಳಿಗಾಗಿ ಅಂಬಾಲಾ ವಾಯುನೆಲೆಯಲ್ಲಿ 17ನೇ ಸ್ಕ್ವಾಡ್ರನ್ ಅನ್ನು ಪುನರ್ ನಿರ್ಮಿಸಲಾಗಿದೆ. 2019ರಲ್ಲಿ ಆಗಿನ ಏರ್ ಚೀಫ್ ಮಾರ್ಷಲ್ ಬಿ.ಎಸ್. ಧನೋವಾ ಈ ಪುನರ್ ನಿರ್ಮಾಣ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ಹರಿಯಾಣ ಗೃಹ ಸಚಿವ ಅನಿಲ್ ವಿಜ್, “ಜೆಟ್ಗಳು ಆಗಮಿಸುವ ಹಿನ್ನೆಲೆಯಲ್ಲಿ ಅಂಬಾಲಾ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಅಲ್ಲದೆ, ಜೆಟ್ ಅನ್ನು ವೀಕ್ಷಿಸಲು ಅಂಬಾಲಾ ಜನರು ಬಹಳ ಉತ್ಸಾಹಭರಿತರಾಗಿದ್ದಾರೆ. ಕೊರೋನಾ ಸಾಂಕ್ರಾಮಿಕ ರೋಗ ದೇಶಕ್ಕೆ ವ್ಯಾಪಿಸದಿದ್ದರೆ, ಸಾವಿರಾರು ಜನರು ಫೈಟರ್ ಜೆಟ್ಗಳನ್ನು ಸ್ವಾಗತಿಸಲು ಬೀದಿಗಿಳಿದು ಬರುತ್ತಿದ್ದರು” ಎಂದಿದ್ದಾರೆ.
ಬಿಜೆಪಿಯ ಅಂಬಾಲಾ ಶಾಸಕ ಅಸೀಮ್ ಗೋಯಲ್ ಅವರು ಬುಧವಾರ ಸಂಜೆ 7-7: 30 ರ ನಡುವೆ ರಫೇಲ್ ಜೆಟ್ಗಳನ್ನು ಸ್ವಾಗತಿಸಲು ಸ್ಥಳೀಯ ಜನ ತಮ್ಮ ಮನೆಗಳಲ್ಲಿ ಮೇಣದಬತ್ತಿಗಳನ್ನು ಹಚ್ಚುವಂತೆ ಒತ್ತಾಯಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಭಾರತೀಯ ವಾಯುಪಡೆ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಭಾರತ ಸರ್ಕಾರ 59,000 ಕೋಟಿ ರೂ.ಗಳ ಒಪ್ಪಂದದಡಿಯಲ್ಲಿ 36 ರಫೇಲ್ ಜೆಟ್ಗಳಿಗಾಗಿ ಫ್ರಾನ್ಸ್ನೊಂದಿಗೆ ಅಂತರ್-ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿಹಾಕಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ