ನವದೆಹಲಿ: ವಿನಾಯಕ ದಾಮೋದರ್ ಸಾವರ್ಕರ್ (VD Savarkar) ಅವರ ಬಗ್ಗೆ ಇತ್ತೀಚೆಗೆ ರಾಹುಲ್ ಗಾಂಧಿ (Rahul Gandhi) ಮಾಡಿದ ಹೇಳಿಕೆಯಿಂದ ಉಂಟಾಗಿರುವ ವಿವಾದ ನಿಲ್ಲುವಂತೆ ಕಾಣುತ್ತಿಲ್ಲ. ರಾಹುಲ್ ಸಂಸತ್‌ನಿಂದ ಅನರ್ಹತೆಗೊಂಡ ಬಳಿಕ, ಮಾಧ್ಯಮದೊಂದಿಗೆ ಮಾತನಾಡುವ ವೇಳೆ, ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ, ನಾನು ಗಾಂಧಿ ಎಂದು ಹೇಳಿದ್ದರು. ಕಾಂಗ್ರೆಸ್ ನಾಯಕನ ಈ ಹೇಳಿಕೆಗೆ ಹಲವರಿಂದ ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಇದೀಗ ಸ್ವತಃ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ (Ranjit Savarkar) ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿಗೆ ಎಚ್ಚರಿಕೆ ನೀಡಿದ್ದಾರೆ. ವೀರ್ ಸಾವರ್ಕರ್ ಕುರಿತ ತಮ್ಮ ಹೇಳಿಕೆಗೆ ರಾಹುಲ್ ಕ್ಷಮೆಯಾಚಿಸದಿದ್ದರೆ, ಅವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗುವುದು ಹೇಳಿದ್ದಾರೆ.
ಮೋದಿ ಸರ್ನೇಮ್ ಹೇಳಿಕೆ ವಿವಾದದಲ್ಲಿ ರಾಹುಲ್ ಗಾಂಧಿ 2 ವರ್ಷಗಳ ಶಿಕ್ಷೆಗೆ ಒಳಗಾಗಿದ್ದಾರೆ. ಇದರ ಬೆನ್ನಲ್ಲೇ ಸಂಸತ್ ಸದಸ್ಯತ್ವ ಕೂಡ ರದ್ದಾಗಿತ್ತು. ಈ ವೇಳೆ " ನೀವು ಬ್ರಿಟನ್‌ನಲ್ಲಿ ನೀಡಿದ ಹೇಳಿಕೆ ಹಾಗೂ ಮೋದಿ ಉಪನಾಮದ ಕುರಿತು ನೀಡಿರುವ ಹೇಳಿಕೆ ಕುರಿತು ಕ್ಷಮೆ ಯಾಚಿಸುತ್ತೀರಾ" ಎಂದು ಮಾರ್ಚ್ 25ರಂದು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, " ನಾನು ಕ್ಷಮೆ ಕೇಳುವುದಿಲ್ಲ, ಕ್ಷಮೆ ಕೇಳುವುದಕ್ಕೆ ನಾನು ಸಾವರ್ಕರ್ ಅಲ್ಲ, ಗಾಂಧಿ " ಎಂದು ಹೇಳಿಕೆ ನೀಡಿದ್ದರು.
ಪುರಾವೆ ತೋರಿಸಲಿ
ಮಾಜಿ ಸಂಸದರ ವರ್ತನೆಯು ಬಾಲಿಶವಾಗಿದೆ ಎಂದು ಟೀಕಿಸಿರುವ ರಂಜಿತ್ ಸಾವರ್ಕರ್, ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆ ಯಾಚಿಸಿದ್ದರು ಎಂಬುದಕ್ಕೆ ರಾಹುಲ್ ಗಾಂಧಿ ಪುರಾವೆ ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ. ರಾಜಕೀಯ ಪ್ರಚಾರಕ್ಕಾಗಿ ದೇಶಭಕ್ತರ ಹೆಸರನ್ನು ಬಳಸುವುದು ತಪ್ಪು, ಇವರ ವಿರುದ್ಧ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷಮೆ ಕೇಳದಿದ್ದರೆ ಎಫ್ಐಆರ್ ದಾಖಲು
ಸಾವರ್ಕರ್ ಕುರಿತ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಗಾಂಧಿ ಕುಟುಂಬಕ್ಕೆ ರಂಜಿತ್ ಸಾವರ್ಕರ್ ಎಚ್ಚರಿಕೆ ನೀಡಿದ್ದಾರೆ. ಸಿಎನ್‌ಎನ್-ನ್ಯೂಸ್ 18 ಜೊತೆ ಮಾತನಾಡಿದ ಅವರು ರಾಹುಲ್ ಗಾಂಧಿ ಸಾವರ್ಕರ್ ಬ್ರಿಟಿಷರ ಬಳಿ ಕ್ಷಮೆಯಾಚಿಸಿದ ದಾಖಲೆಗಳನ್ನು ತೋರಿಸಲು ಸವಾಲ್ ಹಾಕಿದರು.
ಮುಸ್ಲಿಂ ಮತಗಳಿಗಾಗಿ ಈ ರೀತಿ ಹೇಳಿಕೆ
ಕಾಂಗ್ರೆಸ್ ಪಕ್ಷ ಮುಸ್ಲಿಮರ ಮತಗಳನ್ನು ಪಡೆಯಲು ಈ ರೀತಿ ಹೇಳಿಕೆ ನೀಡುತ್ತಿದೆ. ನಾನು ಈಗಾಗಲೇ ಮಹಾರಾಷ್ಟ್ರದ ಸ್ಥಳೀಯ ನ್ಯಾಯಾಲಯದಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇಬ್ಬರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದೇನೆ ಎಂದು ರಂಜಿತ್ ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯ ವೇಳೆ ಸಾವರ್ಕರ್ ಬಗ್ಗೆ ಟೀಕೆ
ರಾಹುಲ್ ಗಾಂಧಿ ಸಾವರ್ಕರ್ ವಿರುದ್ಧ ಹೇಳಿಕೆ ನೀಡುತ್ತಿರುವುದು ಇದೇ ಮೊದಲೇನಲ್ಲ. ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ, " ಸಾವರ್ಕರ್ ಅಂಡಮಾನ್ ಜೈಲಿನಲ್ಲಿದ್ದಾಗ ಬ್ರಿಟಿಷರಿಗೆ ಕ್ಷಮಾಪಣಾ ಪತ್ರಗಳನ್ನು ಬರೆದು, ಬ್ರಿಟಿಷ್ ಸರ್ಕಾರದಿಂದ ಪಿಂಚಣಿ ಪಡೆದಿದ್ದರು. ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ಸಾವರ್ಕರ್ ಬ್ರಿಟಿಷರಿಗೆ ನೆರವು ನೀಡಿದ್ದರು " ಎಂದು ಹೇಳಿದ್ದರು. ಈ ಹೇಳಿಕೆಗಳನ್ನು ನೆನೆದ ರಂಜಿತ್ ಕಾಂಗ್ರೆಸ್ ನಾಯಕನ ವಿರುದ್ಧ ಹರಿಯಾಯ್ದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ