ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆಯು (Bharat Jodo Yatre) ಡಿಸೆಂಬರ್ 24ರಂದು ರಾಷ್ಟ್ರ ರಾಜಧಾನಿ ದೆಹಲಿಯನ್ನು (New Delhi) ಪ್ರವೇಶಿಸಿತು. ಈ ವೇಳೆ ತೀವ್ರ ಚಳಿಯ ನಡುವೆಯೂ ಕೂಡ ರಾಹುಲ್ ಗಾಂಧಿ ಕೇವಲ ಬಿಳಿ ಟೀ-ಶರ್ಟ್ (T-Shirt) ಮತ್ತು ಪ್ಯಾಂಟ್ (Pant) ಧರಿಸಿ ಭಾರತ್ ಜೋಡೆ ಯಾತ್ರೆಯನ್ನು ಮುನ್ನಡೆಸಿದ್ದರು. ಈ ಬಗ್ಗೆ ಭಾರೀ ಚರ್ಚೆಯಾಗಿತ್ತು. ವಿಪರೀತ ಚಳಿ ಇದ್ದರೂ ರಾಹುಲ್ ಅರ್ಧ ತೋಳಿನ ಟೀ ಶರ್ಟ್ ಧರಿಸಿಕೊಂಡು ಓಡಾಡುತ್ತಿದ್ದಾರೆ, ಇದಕ್ಕೆ ಕಾರಣವೇನಿರಬಹುದು ಎಂದೆಲ್ಲಾ ಪ್ರಶ್ನೆಗಳು ಎದ್ದಿದ್ದವು. ಏಕೆಂದರೆ ಕಳೆದ ವಾರ ದೆಹಲಿಯಲ್ಲಿ 7 ರಿಂದ 4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಹೀಗಾಗಿ ಮಾಧ್ಯಮದವರು ಇಂದು ನೀವು ಚಳಿ ನಡುವೆ ಸ್ಟೆಟರ್ ಯಾಕೆ ಧರಿಸಿರಲಿಲ್ಲ ಎಂದು ಕೇಳಿದ ಪ್ರಶ್ನೆಗೆ ರಾಹುಲ್ ಹಾಸ್ಯಮಯವಾಗಿ ಉತ್ತರ ನೀಡಿದ್ದಾರೆ.
#WATCH | Why is there so much disturbance because of the T-shirt? I do not wear a sweater because I am not scared of winter. I am thinking to wear a sweater once I start feeling cold: Congress MP Rahul Gandhi pic.twitter.com/Jky5DKPpKG
— ANI (@ANI) December 31, 2022
ನನಗೆ ಚಳಿ ಎಂದರೆ ಭಯವಿಲ್ಲ, ಹೀಗಾಗಿ ಸ್ವೆಟರ್ ಧರಿಸಲ್ಲ
ನನ್ನ ಟೀ ಶರ್ಟ್ ಬಗ್ಗೆ ಯಾಕೆ ಇಷ್ಟೊಂದು ಚರ್ಚೆ? ನನಗೆ ಚಳಿ ಎಂದರೆ ಭಯವಿಲ್ಲ, ಹೀಗಾಗಿ ಸ್ವೆಟರ್ ಧರಿಸುವುದಿಲ್ಲ. ನನಗೆ ಚಳಿ ಅನಿಸಿದಾಗ ಸ್ವೆಟರ್ ಧರಿಸುತ್ತೇನೆ. ಭಾರತ್ ಜೋಡೋ ಯಾತ್ರೆ ಮುಗಿದ ನಂತರ ವಿಡಿಯೋ ಮಾಡಿ ಅದರಲ್ಲಿ ಸ್ವೆಟರ್ ಧರಿಸದಿದ್ದರ ಬಗ್ಗೆ ಗುಟ್ಟು ಹೇಳುತ್ತೇನೆ ಎಂದು ವ್ಯಂಗ್ಯವಾಗಿ ರಾಹುಲ್ ಹೇಳಿಕೆ ನೀಡಿದ್ದಾರೆ.
ಟೀ ಶರ್ಟ್ ವಿಚಾರವಾಗಿ ಕೇವಲ ಸೋಶಿಯಲ್ ಮೀಡಿಯಾ ಚರ್ಚೆಯಾಗುತ್ತಿಲ್ಲ. ಸ್ವತಃ ರಾಹುಲ್ ಗಾಂಧಿ ತಾಯಿ ಮತ್ತು ಮಾಜಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರೇ ಚಳಿಗಾಲದಲ್ಲಿ ವಾರ್ಡ್ರೋಬ್ನಲ್ಲಿರುವ ಸ್ವೆಟರ್ನನ್ನು ಯಾಕೆ ಬಳಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದರ ಕೆಲವು ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು.
ಬಿಜೆಪಿ ಅವರು ನನ್ನ ಗುರು, ನನಗೆ ತರಬೇತಿ ನೀಡ್ತಿದ್ದಾರೆ
ಇದೇ ವೇಳೆ, ರಾಹುಲ್ ಗಾಂಧಿ ಅವರು ಬಿಜೆಪಿಯನ್ನು ತಮ್ಮ ಗುರು ಎಂದು ಕರೆದಿದ್ದಾರೆ. ಅವರು (ಬಿಜೆಪಿ) ನಮ್ಮ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಬೇಕೆಂದೇ ನಾನು ಹೇಳುತ್ತೇನೆ. ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಾನು ಬಿಜೆಪಿಯವರನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ, ಅವರು ನನಗೆ ಏನು ಮಾಡಬೇಕು, ಏನು ಮಾಡಬಾರದು ಎಂದು ದಾರಿ ತೋರಿಸುತ್ತಿದ್ದಾರೆ. ನನಗೆ ತರಬೇತಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆಯು ಧ್ವನಿ ಮತ್ತು ಭಾವನೆಯನ್ನು ಹೊಂದಿದೆ
ಇದೇ ವೇಳೆ ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅವರು, ನಾನು ಈ ಯಾತ್ರೆಯನ್ನು ಪ್ರಾರಂಭಿಸಿದಾಗ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಮಾನ್ಯ ಯಾತ್ರೆಯಾಗಿ ತೆಗೆದುಕೊಂಡೆ. ಈ ಯಾತ್ರೆಯು ಧ್ವನಿ ಮತ್ತು ಭಾವನೆಗಳನ್ನು ಹೊಂದಿದೆ ಎಂದು ಹೋಗುತ್ತಾ ನಿಧಾನವಾಗಿ ಅರ್ಥಮಾಡಿಕೊಂಡಿದ್ದೇವೆ. ಬಿಜೆಪಿ ಮತ್ತು ಆರ್ಎಸ್ಎಸ್ನವರಿಗೆ ಈ ಸಂದರ್ಭದಲ್ಲಿ ಧನ್ಯವಾದ ಹೇಳಬೇಕು, ಏಕೆಂದರೆ ಅವರು ನಮ್ಮನ್ನು ಹೆಚ್ಚು ಗುರಿಯಾಗಿಸಿಕೊಂಡರೆ ಪರೋಕ್ಷವಾಗಿ ನಮಗೆ ಲಾಭವಾಗುತ್ತದೆ ಎಂದು ಟಾಂಗ್ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಬಾಗಿಲು ಎಲ್ಲರಿಗೂ ತೆರೆದಿದೆ, ನಮ್ಮೊಂದಿಗೆ ಸೇರಿಕೊಳ್ಳುವವರನ್ನು ನಾವು ತಡೆಯುವುದಿಲ್ಲ. ಅಖಿಲೇಶ್ ಯಾದವ್, ಮಾಯಾವತಿ ಮತ್ತು ಇತರರಿಗೆ ಹಿಂದೂಸ್ತಾನದ ಮೇಲೆ ಪ್ರೀತಿಯಿದ್ದು (ಮೊಹಬ್ಬತ್ ಕಾ ಹಿಂದೂಸ್ತಾನ್) ನಮ್ಮ ಮಧ್ಯೆ ತತ್ವ-ಸಿದ್ಧಾಂತಗಳಲ್ಲಿ ಸಂಬಂಧವಿದೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 7ರರಂದು ಕನ್ಯಾಕುಮಾರಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದ ರಾಹುಲ್ ಗಾಂಧಿ ಅವರು, ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣದ ಭಾಗಗಳಲ್ಲಿ ಪೂರ್ಣಗೊಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ