ನಾನು ಏನೇ ಮಾಡಿದ್ದರೂ ಓಪನ್ ಆಗಿಯೇ ಮಾಡಿದ್ದೇನೆ: ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಮಾತನಾಡಿದ ಅಜಿತ್ ಪವಾರ್

ಬಿಜೆಪಿ ಸರ್ಕಾರ ಪತನವಾದ ಕೆಲ ದಿನಗಳ ನಂತರ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಅಗಾಡಿ ಮೈತ್ರಿ ಸಾಧಿಸಿಕೊಂಡು ಸರ್ಕಾರವನ್ನು ರಚಿಸಿದರು. ಆ ಸರ್ಕಾರದಲ್ಲಿಯೂ ಅಜಿತ್ ಪವಾರ ಉಪಮುಖ್ಯಮಂತ್ರಿಯಾದರು.

ಅಜಿತ್​​ ಪವಾರ್​​

ಅಜಿತ್​​ ಪವಾರ್​​

  • Share this:
ಮುಂಬೈ: ಕಳೆದ ಮಹಾರಾಷ್ಟ್ರ ಚುನಾಣೆಯ ನಂತರ ರಾತ್ರೋರಾತ್ರಿ ಬಿಜೆಪಿ ಜೊತೆಗೆ ಮೈತ್ರಿ ಸಾಧಿಸಿ ಇಡೀ ದೇಶವನ್ನು ಅಚ್ಚರಿಗೆ ದೂಡಿದ್ದ ಹಾಗೂ ಸ್ವತಃ ಎನ್​ಸಿಪಿ ಪಕ್ಷದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಎನ್​ಸಿಪಿ ಪಕ್ಷದ ಅಜಿತ್ ಪವಾರ್ ಇಂದು ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, "ನಾನು ಏನೇ ಮಾಡಿದ್ದರೂ ಓಪನ್ ಆಗಿಯೇ ಮಾಡಿದ್ದೇನೆ" ಎನ್ನುವ ಮೂಲಕ ತಮ್ಮ ಅಂದಿನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಕಳೆದ ನವೆಂಬರ್​ನಲ್ಲಿ ಎನ್​ಸಿಪಿ ಪಕ್ಷದ ಮುಖ್ಯಸ್ಥ ಶರದ್​ ಪವಾರ್ ಅವರ ಅನುಮತಿ ಇಲ್ಲದೆಯೇ ಅಜಿತ್ ಪವಾರ್​ ಬಿಜೆಪಿ ಪಕ್ಷದ ದೇವೇಂದ್ರ ಫಡ್ನವೀಸ್​ಗೆ ಬೆಂಬಲ ಸೂಚಿಸಿದ್ದರು. ಪರಿಣಾಮ ಫಡ್ನವೀಸ್​ ಎರಡನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದರೆ, ಅಜಿತ್​ ಪವಾರ್​ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಆದರೆ, ದಿಢೀರ್ ಸರ್ಕಾರ ರಚನೆಯನ್ನು ವಿರೋಧಿಸಿ ಎನ್​ಸಿಪಿ, ಶಿವಸೇನೆ ಮತ್ತು ಕಾಂಗ್ರೆಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಹುಮತ ಸಾಬೀತುಪಡಿಸಲು ದೇವೇಂದ್ರ ಫಡ್ನವೀಸ್​ಗೆ ಗಡುವು ನೀಡಿತ್ತು. ಆದರೆ, ಈ ಸಂದರ್ಭದಲ್ಲಿ ನಡೆದ ಮತ್ತೊಂದು ಸುತ್ತಿನ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರ ಕೇವಲ 80 ಗಂಟೆಗಳಲ್ಲಿ ಉರುಳಿತ್ತು. ಯುದ್ಧಕ್ಕೂ ಮೊದಲೇ ಅಜಿತ್ ಪವಾರ್ ತಮ್ಮ ಸೋಲನ್ನು ಒಪ್ಪಿಕೊಂಡು ರಾಜೀನಾಮೆ ನೀಡಿದ್ದರು.

ಆದರೆ, ಬಿಜೆಪಿ ಸರ್ಕಾರ ಪತನವಾದ ಕೆಲ ದಿನಗಳ ನಂತರ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಅಗಾಡಿ ಮೈತ್ರಿ ಸಾಧಿಸಿಕೊಂಡು ಸರ್ಕಾರವನ್ನು ರಚಿಸಿದರು. ಆ ಸರ್ಕಾರದಲ್ಲಿಯೂ ಅಜಿತ್ ಪವಾರ ಉಪಮುಖ್ಯಮಂತ್ರಿಯಾದರು.

ಈ ಬಂಡಾಯದ ಕುರಿತು ಇಂದು ಮಾಧ್ಯಮಗಳ ಎದುರು ಮಾತನಾಡಿರುವ ಅಜಿತ್ ಪವಾರ್​, "ನಾನು ಏನೇ ಮಾಡಿದ್ದರು ಸಹ ಅದನ್ನು ಓಪನ್ ಆಗಿಯೇ ಮಾಡಿದ್ದೇನೆ. ನಾನು ಹಾದಿ ತಪ್ಪಿ ಹೋಗಿದ್ದೆ ಅದರೆ ಮರಳಿ ಬಂದಿದ್ದೇನೆ. ನಾನೀಗ ಇಲ್ಲಿ ಸ್ಥಿರವಾಗಿದ್ದೇನೆ" ಎಂದು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮೈತ್ರಿ ಸರ್ಕಾರದಲ್ಲಿ ಡಿಸಿಎಂ ಹುದ್ದೆಯ ಜೊತೆಗೆ ಹಣಕಾಸು ಖಾತೆಯನ್ನೂ ಹೊಂದಿರುವ ಅಜಿತ್ ಪವಾರ್ ಬಜೆಟ್ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುವಾಗ ಈ ಹೇಳಿಕೆಯನ್ನು ನೀಡಿದ್ದಾರೆ.

(ವರದಿ: ಸಂಧ್ಯಾ)

ಇದನ್ನೂ ಓದಿ : ಕೊರೋನಾ ತಡೆಗೆ ಕೇಂದ್ರ ಸರ್ಕಾರ ತುರ್ತಾಗಿ ಪ್ರತ್ಯೇಕ ಬಜೆಟ್​ ಮಂಡಿಸಬೇಕು; ಸಿದ್ದರಾಮಯ್ಯ ಒತ್ತಾಯ
First published: