ರಾಜಸ್ಥಾನ (ಜುಲೈ 13); ಕಾಂಗ್ರೆಸ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಬಹಿರಂಗವಾಗಿಯೇ ದಂಗೆ ಘೋಷಿಸಿದ್ದ ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್, “ತಾವು ಬಿಜೆಪಿಗೆ ಸೇರುತ್ತಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ
ಸಚಿನ್ ಪೈಲಟ್ ಹಾಗೂ ಅವರ ಬೆಂಬಲಿತ ಶಾಸಕರು ಇಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ. ಈ ವೇಳೆ ಪಕ್ಷಾಂತರ ಮಾಡುವ ಕುರಿತು ಚರ್ಚೆ ನಡೆಸಲಿದ್ದಾರೆ. ಹೀಗಾಗಿ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಲಿದೆ ಎಂದು ವರದಿಯಾಗಿತ್ತು. ಈ ವರದಿಯ ಬೆನ್ನಿಗೆ ಕಾಂಗ್ರೆಸ್ ಇಂದು ಜೈಪುರದಲ್ಲಿ ಎಲ್ಲಾ ಶಾಸಕರ ಸಭೆ ಕರೆದಿತ್ತು. ಇದರ ಬೆನ್ನಿಗೆ ಇಂದು ಸ್ಪಷ್ಟನೆ ನೀಡಿರುವ ಸಚಿನ್ ಪೈಲಟ್ ತಾವು ಯಾವುದೇ ಪಕ್ಷಕ್ಕೆ ಸೇರುತ್ತಿಲ್ಲ ಎಂಬುದನ್ನು ತಿಳಿಸಿದ್ದಾರೆ.
ಇಂದು ರಾಜಸ್ತಾನ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರ ಸಭೆಯನ್ನು ಕರೆಯಲಾಗಿದ್ದು, ಈ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸುವ ಮೂಲಕ ಎಲ್ಲಾ ಶಾಸಕರೂ ಪಕ್ಷದ ಬೆನ್ನಿಗೆ ಇದ್ದಾರೆ ಎಂದು ತೋರಿಸಲು ಕೈ ನಾಯಕರು ಮುಂದಾಗಿದ್ದಾರೆ. ಅಲ್ಲದೆ, ಪಕ್ಷದ ಎಲ್ಲಾ ಶಾಸಕರು ಈ ಸಭೆಯಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು, ಇಲ್ಲದಿದ್ದರೆ ಸೂಕ್ತ ಕ್ರಮ ಜರುಗಿಸುವುದಾಗಿಯೂ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಆಂತರಿಕ ಭಿನ್ನಮತ ಆರಂಭವಾಗುತ್ತಿದ್ದಂತೆ ಪಕ್ಷದ ಕೇಂದ್ರ ನಾಯಕರು ಈಗಾಗಲೇ ರಾಜಸ್ಥಾನಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ, ಇಂದಿನ ಸಭೆಯಲ್ಲಿ 106 ಕಾಂಗ್ರೆಸ್ ಶಾಸಕರ ಬೆಂಬಲ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ ಇದೆ ಎಂದು ಅವರ ಸಹಿ ಸಂಗ್ರಹಿಸುವುದು ಇಂದಿನ ಸಭೆಯ ಮುಖ್ಯ ಉದ್ದೇಶ.
ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರಿಗೆ 19 ರಿಂದ 30 ಶಾಸಕರ ಬೆಂಬಲ ಇದೆ ಎಂದು ಹೇಳಲಾಗುತ್ತಿದೆಯಾದರೂ ಅವರ ಬೆನ್ನಿಗೆ ಯಾರಿದ್ದಾರೆ? ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಈ ನಡುವೆ ಅವರ ಬಣದಲ್ಲಿ ಗುರುತಿಸಿಕೊಂಡಿದ್ದ ಪ್ರಮುಖ ಮೂರು ಜನ ಶಾಸಕರು ಭಾನುವಾರ ಸಂಜೆ ವೇಳೆಗೆ ಯೂ-ಟರ್ನ್ ತೆಗೆದುಕೊಂಡಿದ್ದರು. ಹೀಗಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಭೇಟಿಯನ್ನೂ ಸಚಿನ್ ಪೈಲಟ್ ರದ್ದು ಮಾಡಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಸಚಿನ್ ಪೈಲಟ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗದಿದ್ದರೂ ಸಹ ಸ್ವತಂತ್ಯ್ರ ಪಕ್ಷ ಸ್ಥಾಪನೆಗೆ ಮುಂದಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಈ ನಡುವೆ ಅವರ ಮನವೋಲಿಸಲು ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ