ರಾಯ್ಪುರ (ಛತ್ತಿಸ್ಗಢ): ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ( Rahul Gandhi) ತಮ್ಮ ಬಳಿ ಸ್ವಂತ ಮನೆಯಿಲ್ಲ ಎಂದು ಆಶ್ಚರ್ಯಕರ ಹೇಳಿ ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆ (Bharat Jodo Yatra) ತಮ್ಮನ್ನು ಸಾಮಾನ್ಯ ಜನರು ಸಂಪರ್ಕಿಸಲು ಸಾಕಷ್ಟು ನೆರವು ನೀಡಿತು ಎಂದು ಹೇಳಿದ್ದಾರೆ. ರಾಯ್ಪುರದಲ್ಲಿ (Raipur) ನಡೆದ ಕಾಂಗ್ರೆಸ್‌ನ 85ನೇ ಸಂಪುಟ ಸಭೆಯಲ್ಲಿ ಮಾತನಾಡುವ ವೇಳೆ 1977ರಲ್ಲಿ ಸರ್ಕಾರ (Government) ನೀಡಿದ್ದ ಮನೆಯನ್ನು ಬಿಟ್ಟು ಹೋಗುವ ಮುನ್ನ ನಡೆದಿದ್ದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.
" ನಮ್ಮ ಮನೆಯಲ್ಲಿ ವಿಚಿತ್ರ ವಾತಾವರಣ ನಿರ್ಮಾಣವಾಗಿತ್ತು. ನಾನು ಅಮ್ಮನ ಬಳಿಗೆ ಹೋಗಿ ಏನಾಯಿತು ಎಂದು ಕೇಳಿದೆ. ಅದಕ್ಕೆ ಅವರು, ನಾವು ಈ ಮನೆಯನ್ನು ಬಿಟ್ಟು ಹೊರಡುತ್ತಿದ್ದೇವೆ ಎಂದರು. ಆ ಸಮಯದಲ್ಲಿ 'ಇದು ನಮ್ಮ ಮನೆ ಅಲ್ಲವೇ' ಎಂದು ನಾನು ಕೇಳಿದೆ. ಆಗ ಅಮ್ಮ ' ಇದು ನಮ್ಮ ಮನೆ ಅಲ್ಲ, ಸರ್ಕಾರದ್ದು' ಎಂದು ಮೊದಲ ಬಾರಿಗೆ ತಿಳಿಸಿದ್ದರು " ಎಂದು ನೆನಪಿಸಿಕೊಂಡರು,
ಈಗಲೂ ಸ್ವಂತ ಮನೆಯಿಲ್ಲ
ನಾನು ಅಂದು ಮನೆ ಕಾಲಿ ಮಾಡುವಾಗ ಮುಂದೆ ಎಲ್ಲಿಗೆ ಹೋಗುತ್ತೀವಿ ಎಂದು ತಾಯಿ ಸೋನಿಯಾ ಗಾಂಧಿ ಅವರನ್ನು ಕೇಳಿದ್ದೆ, ಅದಕ್ಕೆ ಅವರು 'ನಹೀ ಮಾಲೂಮ್' (ಗೊತ್ತಿಲ್ಲ) ಎಂದು ಹೇಳಿದರು, ನಾನು ಗಾಬರಿಗೊಂಡೆ, ಅಲ್ಲಿಯವರೆಗೆ ಅದನ್ನ ನಮ್ಮ ಮನೆ ಎಂದು ನಾನು ಭಾವಿಸುತ್ತಿದ್ದೆ. ನನಗೆ 52 ವರ್ಷ ಮತ್ತು ಇನ್ನೂ ಸ್ವಂತ ಮನೆ ಇಲ್ಲ. ನಮ್ಮ ಕುಟುಂಬದ ಮನೆ ಅಲಹಾಬಾದ್‌ನಲ್ಲಿದೆ ಮತ್ತು ಅದು ನಮ್ಮದಲ್ಲ. ನಾನು 12ರ ವಯಸ್ಸಿನಲ್ಲಿದ್ದಾಗ ತುಘಕ್ ಲೇನ್‌ನಲ್ಲಿ ವಾಸಿಸುತ್ತಿದ್ದೆವು, ಆದರೆ ಅದು ನಮ್ಮ ಮನೆ ಅಲ್ಲ" ಎಂದು ಹೇಳಿದರು. ಈ ವೇಳೆ ಸೋನಿಯಾಗಾಂಧಿ ಭಾವುಕರಾದರು.
ನನ್ನ ಸುತ್ತ-ಮುತ್ತಲಿನ 25 ಅಡಿ ನನ್ನ ಮನೆಯಾಗಿತ್ತು
ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆ 12 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಸಂಚರಿಸಿ ಜನವರಿ 30ರಂದು ಮುಕ್ತಾಯಗೊಂಡ ಭಾರತ್ ಜೋಡೋ ಯಾತ್ರೆಯ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ " ನಾನು ಕನ್ಯಾಕುಮಾರಿಯಿಂದ ಯಾತ್ರೆ ಆರಂಭಿಸಿದಾಗ ನನ್ನ ಜವಾಬ್ದಾರಿ ಏನು ಎಂದು ನನ್ನನ್ನು ನಾನು ಕೇಳಿಕೊಂಡೆ, ಮುಂದಿನ 4 ತಿಂಗಳು ನನ್ನ ಸುತ್ತಲಿನ ಈ 20-25 ಅಡಿ ಪ್ರದೇಶವು ನನ್ನ ಮನೆಯಾಗಲಿದೆ. ಈ ಮನೆ ನನ್ನೊಂದಿಗೆ ಚಲಿಸುತ್ತದೆ" ಎಂದು ನನ್ನ ಜನರಿಗೆ ತಿಳಿಸಿದ್ದೆ. ಕಾಶ್ಮೀರ ತಲುಪಿದಾಗ ನನ್ನ ಮನೆಗೆ ಕಾಲಿಟ್ಟ ಹಾಗೆ ಅನ್ನಿಸಿತು " ಎಂದರು.
ನನ್ನನ್ನು ಯಾತ್ರೆ ಬದಲಾಯಿಸಿದೆ
" ಭಾರತ್ ಜೋಡೋ ಯಾತ್ರೆಗೆ ಬರುವವರು ಶ್ರೀಮಂತರಾಗಿರಲಿ, ಬಡವರಿರಲಿ, ಹಿರಿಯರಾಗಿರಲಿ, ಕಿರಿಯರಿರಲಿ, ಯಾವುದೇ ಧರ್ಮದವರಿರಲಿ, ರಾಜ್ಯದವರಾಗಲಿ,, ವಿದೇಶದವರಾಗಿರಲಿ ಅಥವಾ ಪ್ರಾಣಿಗಳೇ ಆಗಿರಲಿ ಅವರು ಮನೆಗೆ ಬಂದಂತೆ ಭಾಸವಾಗಬೇಕು. ಅವರು ಹೋಗುವಾಗ ಮನೆಯಿಂದ ಹೊರಗೆ ಹೋಗವಂತೆ ಭಾವಿಸಬೇಕು. ಅದನ್ನು ಯಾತ್ರೆ ಮಾಡಿದೆ, ನನ್ನನ್ನು ಸಾಕಷ್ಟು ಬದಲಾಯಿಸಿದೆ. ನನ್ನ ಜವಾಬ್ದಾರಿ ಏನೆಂಬುದನ್ನು ತೋರಿಸಿಕೊಟ್ಟಿದೆ " ಎಂದು ಗಾಂಧಿ ಹೇಳಿದರು.
ಬಿಜೆಪಿ ವ್ಯಂಗ್ಯ
ನನಗೆ 52 ವರ್ಷವಾಗಿದೆ, ಈಗಲೂ ಸ್ವಂತ ಮನೆಯಿಲ್ಲ, ಆದರೆ ಕಾಶ್ಮೀರಕ್ಕೆ ಹೋದಾಗ ನನಗೆ ಸ್ವಂತ ಮನೆಗೆ ಹೋದಂತೆ ಭಾವನೆ ಉಂಟಾಯಿತು ಎಂಬ ರಾಹುಲ್ ಹೇಳಿಕೆಗೆ ಬಿಜೆಪಿ ನಾಯಕ ಸಂಬಿತ್ ಪಾತ್ರಾ ತಿರುಗೇಟು ನೀಡಿದ್ದು, ಕಾಂಗ್ರೆಸ್ನವರಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಆದರೆ ಅಧಿಕಾರವನ್ನು ಬಯಸುತ್ತಾರೆ ಎಂದುವ ಲೇವಡಿ ಮಾಡಿದರು.
" 52 ವರ್ಷಗಳ ನಂತರ ರಾಹುಲ್ ಗಾಂಧಿ ಅವರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡಿದ್ದಾರೆ. ಖರ್ಗೆ ಪಕ್ಷದ ಅಧ್ಯಕ್ಷರಾಗಿದ್ದರೂ ಇಡೀ ಸರ್ವಸದಸ್ಯರ ಅಧಿವೇಶನವು ಗಾಂಧಿ ಕುಟುಂಬದ ನೇತೃತ್ವದಲ್ಲಿ ನಡೆಯುತ್ತಿದೆ. ಭಾರತವು ಪ್ರಕಾಶಮಾನವಾದ ತಾಣವಾಗಿದೆ ಮತ್ತು ರಾಹುಲ್ ಗಾಂಧಿ ದೇಶದ ಬಗ್ಗೆ ಚಿಂತಿಸಬಾರದು. ಅವರು ಮೊದಲು ದೇಶದ ಬಗ್ಗೆ ಕಲಿಯಬೇಕು " ಎಂದು ಸಂಬಿತ್ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ