ಹೈದರಾಬಾದ್: ಸೀನಿಯರ್ ವಿದ್ಯಾರ್ಥಿಯ ( Senior Student) ರ್ಯಾಗಿಂಗ್ಗೆ (Ragging) ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ವೈದ್ಯಕೀಯ ವಿದ್ಯಾರ್ಥಿನಿ (Medical Student) 4 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಭಾನುವಾರ ಆಸ್ಪತ್ರೆಯಲ್ಲಿ (Hospital) ಕೊನೆಯುಸಿರೆಳೆದಿದ್ದಾರೆ. 26 ವರ್ಷದ ಡಿ. ಪ್ರೀತಿ ಕಾಕತೀಯ ಮೆಡಿಕಲ್ ಕಾಲೇಜಿನಲ್ಲಿ (Kakatiya Medical College) ಮೊದಲ ವರ್ಷದ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದರು. ಅವರು ಹಿರಿಯ ವಿದ್ಯಾರ್ಥಿಯ ಕಿರುಕುಳದಿಂದ ಬೇಸತ್ತು ಕಳೆದ ಬುಧವಾರ ವಿಷಪೂರಿತ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಂಜಿಎಂ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೀತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಹೈದರಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ನಾಲ್ಕು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೂರು ತಿಂಗಳ ಹಿಂದೆ ಕಾಲೇಜಿಗೆ ಸೇರಿದ್ದ ಪ್ರೀತಿ
ಬೋಡುಪ್ಪಲ್ ಪ್ರದೇಶದ ನಿವಾಸಿಯಾಗಿದ್ದ ಪ್ರೀತಿ ಎಂಬಿಬಿಎಸ್ ಮುಗಿಸಿ ವಾರಂಗಲ್ ಕೆಎಂಸಿಯಲ್ಲಿ ಅನಸ್ತೇಶಿಯಾ ವಿಭಾಗದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದರು. ಮೂರು ತಿಂಗಳ ಹಿಂದೆಯಷ್ಟೇ ಕಾಲೇಜಿಗೆ ಸೇರಿದ್ದು, ಅಂದಿನಿಂದಲೂ ದ್ವಿತೀಯ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಅಲಿ ಸೈಫ್ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಕಿರುಕುಳದಿಂದ ಬೇಸತ್ತ ವಿದ್ಯಾರ್ಥಿನಿ ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದರು, ಅವರ ಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಹೈದರಾಬಾದ್‌ನ ನಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಪ್ರೀತಿ ಮೃತಪಟ್ಟಿದ್ದಾರೆ.
ತಲೆ ನೋವು ಎಂದು ಹೊರ ಬಂದಿದ್ದ ಪ್ರೀತಿ
ಎಂಜಿಎಂ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೀತಿ ಕೊನೆಯ ಬಾರಿಗೆ ತುರ್ತು ಒಪಿಯಲ್ಲಿ (Outpatient) ಕಾಣಿಸಿಕೊಂಡಿದ್ದರು. ಈ ವೇಳೆ ತನಗೆ ತಲೆನೋವು ಮತ್ತು ಹೊಟ್ಟೆ ನೋವು ಎಂದು ಕರ್ತವ್ಯದಲ್ಲಿದ್ದ ಇತರ ವೈದ್ಯರಿಗೆ ತಿಳಿಸಿ ಅಲ್ಲಿಂದ ಹೊರಬಂದಿದ್ದರು. ನಂತರ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ್ದಿದ್ದರು ಎಂದು ವಾರಂಗಲ್ ಪೊಲೀಸ್ ಕಮಿಷನರ್ ಎವಿ ರಂಗನಾಥ್ ಮಾಹಿತಿ ನೀಡಿದ್ದಾರೆ.
ಸೀನಿಯರ್ ವಿದ್ಯಾರ್ಥಿ ಬಂಧನ
ಪ್ರೀತಿ ತಂದೆಯ ದೂರಿನ ಮೇರೆಗೆ, ಎರಡನೇ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಮೊಹಮ್ಮದ್ ಅಲಿ ಸೈಫ್ನನು ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ರ‍್ಯಾಗಿಂಗ್, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಕಿರುಕುಳದ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರೀತಿ ಮತ್ತು ಸೈಫ್ ನಡುವಿನ ವಾಟ್ಸಪ್ ಚಾಟ್ನಲ್ಲಿ ರ‍್ಯಾಗಿಂಗ್ ನಡೆದಿರುವುದು ಖಚಿತವಾಗಿದೆ.
ಆದರೆ ವಿದ್ಯಾರ್ಥಿಯ ವಿರುದ್ಧ ಕಾಲೇಜು ಮತ್ತು ಆಸ್ಪತ್ರೆ ಅಧಿಕಾರಿಗಳಿಗೆ ದೂರು ನೀಡಿದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರೀತಿಯ ತಂದೆ ಆರೋಪಿಸಿದ್ದಾರೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೋಟಿಸ್
ಘಟನೆ ಬಗ್ಗೆ ವರದಿ ನೀಡುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಎಸ್‌ಸಿ/ಎಸ್‌ಟಿ ರಾಷ್ಟ್ರೀಯ ಆಯೋಗ ತೆಲಂಗಾಣ ಸರ್ಕಾರ, ಎಂಜಿಎಂ ಆಸ್ಪತ್ರೆಯ ಸೂಪರಿಂಟೆಂಡೆಂಟ್, ಪ್ರಾಂಶುಪಾಲರು ಮತ್ತು ಪ್ರೀತಿ ವಿದ್ಯಾರ್ಥಿನಿಯಾಗಿದ್ದ ಅರವಳಿಕೆ ವಿಭಾಗದ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದೆ.
30 ಲಕ್ಷ ಪರಿಹಾರ
ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಆಸ್ಪತ್ರೆಗೆ ಭೇಟಿ ನೀಡಿ ಪ್ರೀತಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸರ್ಕಾರದಿಂದ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಜೊತೆಗೆ ರಾಜ್ಯ ಪಂಚಾಯತ್ ರಾಜ್ ಸಚಿವ ಇ. ದಯಾಕರ್ ರಾವ್ 20 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ