ನಾವು ಕೆಲವೊಮ್ಮೆ ಮನೆ ಊಟ ಬೋರ್ ಆಗಿ ಹೊರಗೆ ಹೋಗಿ ರಸ್ತೆ ಬದಿಯಲ್ಲಿ ತಯಾರಿಸುವ ತಿಂಡಿಗಳನ್ನು (Food) ತಿನ್ನುತ್ತೇವೆ ಅದರ ಜೊತೆಗೆ ಅಲ್ಲಿಯೇ ಇರುವ ಖಡಕ್ ಚಾಯ್ ಅನ್ನು ಸಹ ಕುಡಿದು ಬರುತ್ತೇವೆ. ಸಾಮಾನ್ಯವಾಗಿ ನಮಗೆ ಹೊರಗಿನ ತಿಂಡಿ ಮನೆಯಲ್ಲಿ (Home) ಮಾಡಿದ ತಿಂಡಿಗಿಂತಲೂ ಹೆಚ್ಚು ರುಚಿಸುತ್ತವೆ. ಹೊರಗೆ ರಸ್ತೆ ಬದಿಯಲ್ಲಿ ತಯಾರಿಸಿದ ಗರಿಗರಿಯಾದ ಈರುಳ್ಳಿ ಪಕೋಡಾ, ಮೆಣಸಿನಕಾಯಿ ಭಜ್ಜಿ, ಗರಿ ಗರಿಯಾದ ವಡೆ, ಸಮೋಸಾ ಹೀಗೆ ಒಂದೇ ಎರಡೇ ಎಲ್ಲವನ್ನೂ ನೋಡಿದ ತಕ್ಷಣ ಎಲ್ಲವೂ ಒಂದೊಂದು ಪ್ಲೇಟ್ ಹಾಕಿಸಿಕೊಂಡು ತಿನ್ನಬೇಕು (Eat) ಅನ್ನೋ ಬಯಕೆ ನಮಗೆ.
ಆದರೆ ಇಂತಹ ಆಹಾರ ಪದಾರ್ಥಗಳನ್ನು ತಿಂದ ನಂತರ ನಾವು ಅನುಭವಿಸುವ ಯಾತನೆ ಇದೆಯಲ್ಲಾ ಅದರ ಬಗ್ಗೆ ತಿನ್ನಬೇಕಾದರೆ ಮರೆತು ಹೋಗಿರುತ್ತದೆ. ಹೀಗೆ ರಸ್ತೆ ಬದಿಯಲ್ಲಿ ತಯಾರಿಸುವ ರುಚಿಕರವಾದ ಮತ್ತು ಕರಿದಂತಹ ಉಪಾಹಾರ, ಕೆಂಪು ಬಣ್ಣದ ಕಡಕ್ ಚಾಯ್ ದೀರ್ಘಕಾಲದಲ್ಲಿ ನಿಮ್ಮ ಕರುಳಿನ ಆರೋಗ್ಯಕ್ಕೆ ಅನೇಕ ಸಮಸ್ಯೆಗಳನ್ನು ತಂದೊಡ್ಡಬಹುದು. ಅದರಲ್ಲೂ ಹೈದರಾಬಾದ್ ನಲ್ಲಂತೂ ಹೆಜ್ಜೆ ಹೆಜ್ಜೆಗೆ ತಳ್ಳುಗಾಡಿಯಲ್ಲಿ ಅನೇಕ ರೀತಿಯ ಉಪಾಹಾರಗಳನ್ನು ತಯಾರಿಸುತ್ತಿರುವುದು ಮತ್ತು ಅವುಗಳ ಮುಂದೆ ಜನರ ದೊಡ್ಡ ಗುಂಪೆ ಇರುವುದನ್ನು ನಾವು ನೋಡಬಹುದು.
ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಲೋಟಸ್ ಪಾಂಡ್ ಬಳಿಯ ರಸ್ತೆಬದಿಯ ವ್ಯಾಪಾರಿಗಳು!
ಆದರೆ ಈ ರೀತಿಯ ರಸ್ತೆ ಬದಿಯಲ್ಲಿ ತಯಾರಿಸುವ ತಿಂಡಿಗಳು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಂತ ಅನೇಕರಿಗೆ ಗೊಂದಲಗಳು ಇರುತ್ತವೆ. ಇಲ್ನೋಡಿ ಹೈದರಾಬಾದಿನ ಜುಬ್ಲೀ ಹಿಲ್ಸ್ ಪ್ರದೇಶದ ಲೋಟಸ್ ಪಾಂಡ್ ಬಳಿ ರಸ್ತೆ ಬದಿಯಲ್ಲಿ ಆಹಾರ ತಯಾರಿಸುವವರು ಹೇಗೆಲ್ಲಾ ಆಹಾರ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ನೋಡಿ. ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳವಾರ ನಡೆಸಿದ ಕೆಲವು ದಿಢೀರ್ ತಪಾಸಣೆಗಳಲ್ಲಿ ಹಲವಾರು ನಿಯಮಗಳ ಉಲ್ಲಂಘನೆಗಳು ಕಂಡುಬಂದಿವೆ, ಅವುಗಳಲ್ಲಿ ಕೆಲವು ಗಂಭೀರ ಮತ್ತು ಜೀವಕ್ಕೆ ಅಪಾಯವನ್ನುಂಟು ಮಾಡುವಂತದ್ದು ಅಂತ ಹೇಳಲಾಗಿದೆ.
ಹೈದರಾಬಾದ್ ಮಹಾನಗರ ಪಾಲಿಕೆಯ ಮೇಯರ್ ಆಗಿರುವ ಗದ್ವಾಲ್ ವಿಜಯಲಕ್ಷ್ಮಿ ಅವರ ಆದೇಶದ ಮೇರೆಗೆ ಈ ತಪಾಸಣೆ ನಡೆಸಲಾಗಿತ್ತು. ನಗರದಾದ್ಯಂತ ಬೀದಿ ಬದಿಯಲ್ಲಿ ತಯಾರಿಸುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ತಪಾಸಣೆ ನಡೆಸಿ ಅಂತ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ಸೂಚಿಸಿದ್ದರು.
ಬಹುತೇಕರು ಕಲಬೆರಕೆ ಚಹಾ ಪುಡಿಯನ್ನು ಬಳಸ್ತಿದ್ದಾರಂತೆ..
ರಸ್ತೆಯ ಬದಿಯಲ್ಲಿರುವ ಬಹುತೇಕ ಎಲ್ಲಾ ಆಹಾರ ಮಳಿಗೆ ಮತ್ತು ತಳ್ಳು ಗಾಡಿಯ ಮಾರಾಟಗಾರರು ಕಲಬೆರಕೆ ಚಹಾ ಪುಡಿಯನ್ನು ಬಳಸುತ್ತಿರುವುದನ್ನು ಕಂಡು ಅಧಿಕಾರಿಗಳು ಒಂದು ಕ್ಷಣ ಆಶ್ಚರ್ಯಚಕಿತರಾದರು.
ಇದನ್ನೂ ಓದಿ: Tragedy: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು, ಮಕ್ಕಳ ಅನಾರೋಗ್ಯದಿಂದ ದೊಡ್ಡವರ ದುಡುಕಿನ ನಿರ್ಧಾರ!
"ನಾವು ಫಿಲ್ಟರ್ ಪೇಪರ್ ಬಳಸಿ ಚಹಾ ಎಲೆಗಳನ್ನು ಪರೀಕ್ಷಿಸಿದ್ದೇವೆ ಮತ್ತು ಪುಡಿಯನ್ನು ಕೃತಕ ಬಣ್ಣದೊಂದಿಗೆ ಬೆರೆಸಲಾಗಿದೆ ಎಂದು ಕಂಡು ಕೊಂಡಿದ್ದೇವೆ. ಹೀಗೆ ತಯಾರಿಸಿದ ಚಹಾವು ಕೆಂಪು ಬಣ್ಣವನ್ನು ಪಡೆಯುತ್ತದೆ, ಇದನ್ನು ಎಲ್ಲಾ ಗ್ರಾಹಕರು ತುಂಬಾನೇ ಇಷ್ಟಪಟ್ಟು ಕುಡಿಯುತ್ತಾರೆ" ಎಂದು ತಪಾಸಣೆ ನಡೆಸಿದ ಆಹಾರ ಸುರಕ್ಷತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಮಾರಾಟಗಾರರಿಗೆ ಈ ತಪಾಸಣೆಯ ಫಲಿತಾಂಶಗಳನ್ನು ತೋರಿಸಲಾಯಿತು, ಇದರ ಪರಿಣಾಮಗಳ ಬಗ್ಗೆಯು ಸಹ ಅರಿವು ಮತ್ತು ಶಿಕ್ಷಣ ನೀಡಲಾಯಿತು ಮತ್ತು ಗುಣಮಟ್ಟದ ಚಹಾ ಪುಡಿಯನ್ನು ಬಳಸುವಂತೆ ಆದೇಶಿಸಲಾಗಿದೆ.
ದಿನವಿಡೀ ಎಲ್ಲಾ ಆಹಾರ ಪದಾರ್ಥಗಳಿಗೆ ಒಂದೇ ಎಣ್ಣೆಯನ್ನು ಬಳಸುತ್ತಾರಂತೆ..
ಇನ್ನೂ ಹೆಚ್ಚಿನ ಆಹಾರ ಮಳಿಗೆಗಳು ಮರು-ಬಿಸಿ ಮಾಡಿದ ಎಣ್ಣೆಯನ್ನು ಬಳಸುತ್ತಿರುವುದು ಕಂಡು ಬಂದಿದೆ, ಇದು ಕ್ಯಾನ್ಸರ್ ಕಾರಕವಾಗಿದೆ. "ಮಾರಾಟಗಾರರು ಬೆಳಿಗ್ಗೆ ನಾಲ್ಕರಿಂದ ಆರು ಲೀಟರ್ ಎಣ್ಣೆ ತಂದು ಎಲ್ಲವನ್ನೂ ಒಮ್ಮೆಗೇ ಬಿಸಿ ಮಾಡುತ್ತಾರೆ. ಅವರು ಸಂಜೆಯವರೆಗೆ ಅದೇ ಎಣ್ಣೆಯನ್ನು ಬಳಸುವುದನ್ನು ಮುಂದುವರಿಸುತ್ತಾರೆ, ಅನೇಕ ಉಪಾಹಾರ, ತಿಂಡಿ ಪದಾರ್ಥಗಳನ್ನು ಅದರಲ್ಲಿಯೇ ಡೀಪ್ ಫ್ರೈ ಮಾಡುತ್ತಾರೆ. ಆಗಾಗ್ಗೆ ಆ ತೈಲವನ್ನು ಬದಲಾಯಿಸುವಂತೆ ನಾವು ಅವರಿಗೆ ಹೇಳಿದ್ದೇವೆ" ಎಂದು ಅಧಿಕಾರಿ ಮಾಹಿತಿ ನೀಡಿದರು.
ಬಿಸಿ ಆಹಾರ ಪದಾರ್ಥಗಳಿಂದ ಎಣ್ಣೆಯನ್ನು ಹೀರಿಕೊಳ್ಳಲು, ನ್ಯೂಸ್ ಪೇಪರ್ ಗಳನ್ನು ಬಳಸದಂತೆ ಸಹ ಅವರಿಗೆ ಹೇಳಲಾಗಿದೆ. ವೈಯಕ್ತಿಕ ನೈರ್ಮಲ್ಯ ಮತ್ತು ಸುತ್ತಮುತ್ತಲಿನ ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಬಗ್ಗೆಯೂ ಅವರಿಗೆ ಹೇಳಿಕೊಡಲಾಯಿತು.
'ಫುಡ್ ಸೇಫ್ಟಿ ಆನ್ ವೀಲ್ಸ್' ನಿಂದ ಈ ಎಲ್ಲಾ ತಪಾಸಣೆಗಳನ್ನು ನಡೆಸಲಾಗಿದ್ದು, ಇದು ಗುಣಮಟ್ಟದ ಸುಮಾರು 80 ನಿಯತಾಂಕಗಳನ್ನು ಪರೀಕ್ಷಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದರು. ಗಂಭೀರ ಉಲ್ಲಂಘನೆಗಳ ವಿರುದ್ಧ ಸಾರಾಂಶ ವಿಚಾರಣಾ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ