ಕುಡುಕರೇ ಎಚ್ಚರ..! ಹೈದರಾಬಾದ್‌ನಲ್ಲಿ ಕುಡಿದು ವಾಹನ ಚಲಾಯಿಸಿದ 32 ಮಂದಿಗೆ ಜೈಲು ಶಿಕ್ಷೆ..!

“ನಿಮ್ಮ ಚಾಲಕ ವಾಹನವನ್ನು ಚಾಲನೆ ಮಾಡುವಾಗ ಮದ್ಯದ ಪ್ರಭಾವಕ್ಕೆ ಒಳಗಾಗಿದ್ದಾನೆಯೇ? ಅಂತಹ ಸಂದರ್ಭದಲ್ಲಿ, ನೀವು ಸಹ ಚಾಲಕನೊಂದಿಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ” ಎಂದು ಸೈಬರಾಬಾದ್ ಟ್ರಾಫಿಕ್ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹೈದರಾಬಾದ್​(ಮಾ.12): ರಸ್ತೆಯಲ್ಲಿ ವಾಹನಗಳು ಹೆಚ್ಚಾದಂತೆ ಸಾರಿಗೆ ನಿಯಮ ಉಲ್ಲಂಘಿಸುವವರೂ ಹೆಚ್ಚುತ್ತಲೇ ಇದ್ದಾರೆ. ಕುಡಿದು ವಾಹನ ಚಲಾಯಿಸಬೇಡಿ ಎಂದು ಸಂಚಾರಿ ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದ್ರೂ, ದಂಡದ ಮೊತ್ತ ಹೆಚ್ಚಿಸಿದ್ರೂ ಹಲವು ಜನರು ಕೇಳೋದೇ ಇಲ್ಲ. ನಾವು ಕುಡಿದೇ ವಾಹನ ಚಲಾಯಿಸ್ತೀವಿ ಅಂತಾರೆ. ಈ ಹಿನ್ನೆಲೆ ಇಂತಹವರಿಗೆ ತೆಲಂಗಾಣದಲ್ಲಿ ಕಂಬಿ ಹಿಂದೆ ಹಾಕಿದ್ದಾರೆ ಅಂದರೆ ಜೈಲು ಶಿಕ್ಷೆ..! ಹೌದು, ಇಂತಹವರಿಗೆ ಬರೀ ದಂಡ ಹಾಕಿದ್ರೆ ಬುದ್ಧಿ ಕಲಿಯಲ್ಲ ಅಂತ ಜೈಲಿಗೆ ಹಾಕಿದ್ದಾರೆ. ಹೈದರಾಬಾದ್‌ನಲ್ಲಿ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಒಟ್ಟು 152 ಜನರನ್ನು ಸೈಬರಾಬಾದ್ ಟ್ರಾಫಿಕ್ ಪೊಲೀಸರು ಸೆರೆ ಹಿಡಿದಿದ್ದಾರೆ. ಈ ಪೈಕಿ ಆರು ಜನರಿಗೆ ಸ್ಥಳೀಯ ನ್ಯಾಯಾಲಯ ಬುಧವಾರ ಜೈಲು ಶಿಕ್ಷೆ ವಿಧಿಸಿದೆ.

  2 ರಿಂದ 4 ದಿನಗಳ ಅವಧಿಯವರೆಗೆ ಈ 6 ಮಂದಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಟೈಮ್ಸ್ ಆಫ್‌ ಇಂಡಿಯಾ ವರದಿ ಮಾಡಿದೆ. ಇನ್ನು, ಕುಡಿದು ವಾಹನ ಚಲಾಯಿಸಿ ಸಿಕ್ಕಿಬಿದ್ದ ಒಟ್ಟು 152 ಜನರನ್ನು ಕೋರ್ಟ್‌ ಎದುರು ಹಾಜರುಪಡಿಸಲಾಗಿದ್ದು, ಒಟ್ಟಾರೆ 6,97,500 ರೂ. ದಂಡವನ್ನೂ ಪಡೆಯಲಾಗಿದೆ ಎಂದು ತಿಳಿದುಬಂದಿದೆ.

  ಇಲ್ಲಿಯವರೆಗೆ, ಸಂಚಾರ ಪೊಲೀಸರು ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವವರ ವಿರುದ್ಧ ಮಾತ್ರ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಆದರೆ, ಈ ಸಂಬಂಧ ಹೊಸ ನಿಯಮ ಜಾರಿಗೆ ತರುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

  Health Tips: ವೆಜಾನ್ ಆಹಾರ ಪದ್ಧತಿ ಫಾಲೋ ಮಾಡುವವರಿಗೆ ಶಾಕಿಂಗ್ ನ್ಯೂಸ್...!

  ವಾಹನ ಚಲಾಯಿಸುವಾಗ ಸ್ವಯಂ ಶಿಸ್ತು ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸಬೇಕೆಂದು ನಾಗರಿಕರನ್ನು ಕೋರಿದ ಸಂಚಾರಿ ಪೊಲೀಸರು ಜತೆಗೆ ಇನ್ನೊಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಅದೇನೆಂದರೆ, ಕುಡಿದು ವಾಹನ ಚಲಾಯಿಸುವ ಅದೇ ವಾಹನದಲ್ಲಿ ಪ್ರಯಾಣಿಸುವ ಇತರೆ ಪ್ರಯಾಣಿಕರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದು ಎಂದು ಹೊಸ ನಿಯಮವನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

  “ನಿಮ್ಮ ಚಾಲಕ ವಾಹನವನ್ನು ಚಾಲನೆ ಮಾಡುವಾಗ ಮದ್ಯದ ಪ್ರಭಾವಕ್ಕೆ ಒಳಗಾಗಿದ್ದಾನೆಯೇ? ಅಂತಹ ಸಂದರ್ಭದಲ್ಲಿ, ನೀವು ಸಹ ಚಾಲಕನೊಂದಿಗೆ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ” ಎಂದು ಸೈಬರಾಬಾದ್ ಟ್ರಾಫಿಕ್ ಪೊಲೀಸರು ಟ್ವೀಟ್‌ ಮಾಡಿದ್ದಾರೆ.

  ಈ ನಿಟ್ಟಿನಲ್ಲಿ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 188 ಜಾರಿಗೆ ತರಲಾಗುವುದು. ಈ ಹೊಸ ಕಾನೂನು ಜಾರಿಗೆ ಬಂದರೆ, ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸುವ ಚಾಲಕ ಮತ್ತು ಆ ವಾಹನದಲ್ಲಿ ಪ್ರಯಾಣಿಸುವವರನ್ನು ಸಹ ಜೈಲಿಗೆ ಹಾಕಬೇಕು ಎಂದು ಸೈಬರಾಬಾದ್ ಟ್ರಾಫಿಕ್ ಡಿಸಿಪಿ ವಿಜಯ್ ಕುಮಾರ್ ಸ್ಪಷ್ಟಪಡಿಸಿದರು.

  ಇನ್ನೊಂದೆಡೆ, ಪರವಾನಗಿ ಇಲ್ಲದೆ ವಾಹನ ಚಲಾಯಿಸಿದ 73 ಮಂದಿಗೆ ಸಹ ಸೈಬರಾಬಾದ್‌ ಸಂಚಾರ ಪೊಲೀಸರು ದಂಡ ವಿಧಿಸಿದ್ದು, ಒಟ್ಟಾರೆ 2,18,800 ರೂ. ದಂಡ ಸಂಗ್ರಹಿಸಲಾಗಿದೆ ಎಂದೂ ತಿಳಿದುಬಂದಿದೆ.

  32 ಮಂದಿಗೆ ಜೈಲು..!

  ಇದೇ ರೀತಿ ಇತ್ತೀಚೆಗೆ ಕುಡಿದು ವಾಹನ ಚಲಾಯಿಸಿದ 130 ಜನರನ್ನು ಸೆರೆ ಹಿಡಿಯಲಾಗಿದ್ದು, ಈ ಪೈಕಿ 32 ಮಂದಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ ಎಂದು ಇತ್ತೀಚೆಗೆ ತೆಲಂಗಾಣ ಟುಡೇ ವರದಿ ಮಾಡಿತ್ತು. ಅಲ್ಲದೆ, ಸ್ಥಳೀಯ ಕೋರ್ಟ್‌ ಎಲ್ಲರಿಗೂ ಒಟ್ಟಾರೆ 5 ಸಾವಿರ ರೂ. ದಂಡ ವಿಧಿಸಿದೆ.
  Published by:Latha CG
  First published: