ಲಕ್ನೋ : ಉತ್ತರ ಪ್ರದೇಶದ (Uttar Prdesh) ಬಾರಬಂಕಿ ಜಿಲ್ಲೆಯಲ್ಲಿ ವಿಚಿತ್ರವಾದ ಐದು ಪ್ರತ್ಯೇಕ ಪ್ರಕರಣಗಳು ದಾಖಲಾಗಿದೆ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ(PM Awas Yojana) ಸಿಕ್ಕಿದ ಮೊದಲ ಕಂತಿನ 50 ಸಾವಿರ ರೂಪಾಯಿಗಳೊಂದಿಗೆ ಐವರು ಮಹಿಳೆಯರು (Women) ಪರಾರಿಯಾಗಿದ್ದಾರೆ. ಅವರ ಗಂಡಂದಿರು ಪತ್ನಿಯರು ಅವರವರ ಪ್ರಿಯತಮರ ಜೊತೆಗೆ ಪರಾರಿಯಾಗಿದ್ದಾರೆಂದು ಆರೋಪಿಸಿದ್ದಾರೆ. ಪರಾರಿಯಾಗಿರುವ ಐವರು ಮಹಿಳೆಯರು ಮನೆ ಕಟ್ಟಲು ಬಿಡುಗಡೆಯಾಗಿದ್ದ ಮೊದಲ ಕಂತಿನ 50 ಸಾವಿರ ದುಡ್ಡನ್ನು ತೆಗೆದುಕೊಂಡು ಗಂಡಂದಿರಿಗೆ ಕೈಕೊಟ್ಟು ಹೋಗಿದ್ದಾರೆ. ಆದರೆ ಮನೆಕಟ್ಟಲು ಸರ್ಕಾರದಿಂದ (Government) ಹಣ ಬಿಡುಗಡೆಯಾದರೂ ಕಾಮಗಾರಿ (Work) ಇನ್ನೂ ಶುರು ಮಾಡದಿರುವ ಕಾರಣ ಸಂಬಂಧಪಟ್ಟ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಕಾನೂನು ಕ್ರಮಕ್ಕೆ ಒಳಗಾಗುವ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಹೆಂಡತಿಯೂ ಇಲ್ಲ, ಹಣವೂ ಇಲ್ಲ
ಪ್ರಧಾನಮಂತ್ರಿ ಅವಾಸ್ ಯೋಜನೆಯಿಂದ ಬಿಡುಗಡೆಯಾಗಿರುವ ಹಣದೊಂದಿಗೆ ಹೆಂಡತಿಯರು ಪರಾರಿಯಾಗಿರುವ ನೋವಿನಲ್ಲಿರುವ ಗಂಡಂದಿರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಗಣ ಬಿಡುಗಡೆಯಾದರೂ ನಿರ್ಮಾಣ ಕಾಮಗಾರಿ ಆರಂಭವಾಗದ ಕಾರಣ ಜಿಲ್ಲಾ ನಗರಾಭಿವೃದ್ಧಿ ಸಂಸ್ಥೆ ಮಹಿಳೆಯರ ಗಂಡಂದಿರಿಗೆ ನೋಟಿಸ್ ಕಳುಹಿಸಿದೆ. ಮನೆ ಕೆಲಸ ಶುರುಮಾಡಿದ್ದರೆ ಹಣ ವಾಪಸ್ ಕಟ್ಟುವ ಆತಂಕ ಎದುರಾಗಿದೆ. ಎರಡೂ ಕಡೆಯಿಂದ ನೋವನುಭವಿಸುತ್ತಿರುವ ಗಂಡಂದಿರಿಗೆ ದಿಕ್ಕೇ ತೋಚದಂತಾಗಿದೆ. ಅಲ್ಲದೆ ಮನೆ ಕಾರ್ಯ ಆರಂಭವಾಗದಿರುವ ಕಾರಣ ಎರಡನೇ ಕಂತಿನ ಹಣವನ್ನು ತಡೆ ಹಿಡಿಯಲು ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Railway Track Stolen: ಬಿಹಾರದಲ್ಲಿ ಬರೋಬ್ಬರಿ 2 ಕಿಮೀನಷ್ಟು ರೈಲ್ವೆ ಹಳಿಯನ್ನೇ ಕದ್ದ ಖದೀಮರು!
2.5 ಲಕ್ಷ ರೂಪಾಯಿಗಳ ಯೋಜನೆ
ಜಿಲ್ಲಾಡಳಿತ ಮಾಹಿತಿಯ ಪ್ರಕಾರ ಪ್ರಧಾನ ಮಂತ್ರಿ ಅವಾಸ್ ಯೋಜನೆಯಲ್ಲಿ ಮನೆ ನಿರ್ಮಿಸಿಕೊಳ್ಳಲು 2.5 ಲಕ್ಷ ರೂಪಾಯಿಗಳನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಕಾಮಗಾರಿ ಆರಂಭಿಸಲು 50 ಸಾವಿರ ರೂಪಾಯಿ ನೀಡಲಾಗುತ್ತದೆ. ನಂತರ ಪರಿಶೀಲನೆ ನಡೆಸಿ 1.5 ಲಕ್ಷ ರೂ ಹಾಗೂ ಕೊನೆಯ ಕಂತಿನಲ್ಲಿ 50 ಸಾವಿರ ರೂ ಬಿಡುಗಡೆ ಮಾಡಲಾಗುತ್ತದೆ. ಎಲ್ಲಾ ಕಾಮಗಾರಿ ಮುಗಿದ ನಂತರ ಜಿಲ್ಲಾಢಳಿತ ಪ್ರಮಾಣ ಪತ್ರವನ್ನು ನೀಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಣ ವಾಪಸ್ ಪಡೆಯುವ ಎಚ್ಚರಿಕೆ
ಕೆಲವು ದಿನಗಳ ಹಿಂದೆ ಸತ್ರಿಖ್, ಜೈದ್ ಪುರ್, ಬಂಕಿ, ಫತೇಪುರ್ ಹಾಗೂ ಬೆಲ್ಹಾರಾ ನಗರ್ ಪಂಚಾಯತ್ಗಳಲ್ಲಿ ಮೊದಲ ಹಂತದ ಹಣ ಪಡೆದುಕೊಂಡರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ ಎಂಬ ದೂರು ಕೇಳಿ ಬಂದಿದೆ. ಹೀಗಾಗಿ ಮೊದಲ ಕಂತು ಪಡೆದವರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಫಲಾನುಭವಿಗಳು ನಿಗದಿತ ಸಮಯದಲ್ಲಿ ಕಾಮಗಾರಿ ಆರಂಭಿಸದಿದ್ದರೆ ಹಣ ವಸೂಲಾತಿ ಮಾಡಲಾಗುವುದು ಎಂದು ನೋಟಿಸ್ ಜಾರಿ ಮಾಡಿದ್ದೆವು ಎದು ಪಿಒ ದೂಡಾ ಸೌರಭ್ ತ್ರಿಪಾಠಿ ಎಚ್ಚರಿಕೆ ನೀಡಿದ್ದಾರೆ.
ಹಣದೊಂದಿಗೆ ಪತ್ನಿಯರು ಪರಾರಿ ಆರೋಪ
ನೋಟಿಸ್ ಜಾರಿ ಮಾಡಿದ ನಂತರ ಅರ್ಜಿದಾರರು ನಮ್ಮ ಬಳಿ ಬಂದು, ಮೊದಲ ಕಂತಿನ ಹಣವನ್ನು ಪಡೆದುಕೊಂಡಿರುವ ನಮ್ಮ ಪತ್ನಿಯರು ತಮ್ಮ ಲವರ್ಗಳ ಜೊತೆಗೆ ಪರಾರಿಯಾಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ ಅವರು ಮುಂದಿನ ಎರಡು ಕಂತುಗಳ ಹಣವನ್ನು ಬಿಡುಗಡೆ ಮಾಡದಿರುವಂತೆ ಮನವಿ ಮಾಡಿದ್ದಾರೆ. ಏಕೆಂದರೆ ಅವರ ಪತ್ನಿಯರು ಉಳಿದ ಎರಡು ಕಂತುಗಳ ಹಣವನ್ನು ತೆಗೆದುಕೊಂಡು ಹೋಗಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ತ್ರಿಪಾಠಿ ಹೇಳಿದ್ದಾರೆ.
ಉಳಿದ ಕಂತಿನ ಗಣ ತಡೆ ಹಿಡಿಯಲು ಮನವಿ
ಈಗಾಗಲೆ 50 ಸಾವಿರ ತೆಗೆದುಕೊಂಡು ಎಸ್ಕೇಪ್ ಆಗಿರುವ ತಮ್ಮ ಹೆಂಡತಿಯರು ಯಾರನ್ನಾದರೂ ಕರೆತಂದು ಇವರೇ ನಮ್ಮ ಪತಿ ಎಂದು ಹೇಳಿ 2 ಮತ್ತು 3ನೇ ಕಂತುಗಳ ಹಣ ಪಡೆಯಬಹುದಾಗಿದೆ ಎಂದು ಸಂತ್ರಸ್ತ ಗಂಡಂದಿರು ಅನುಮಾನ ವ್ಯಕ್ತಪಡಿಸಿದ್ದಾರೆ. ವಸತಿ ಯೋಜನೆ ಮಹಿಳೆಯರ ಹೆಸರಿನಲ್ಲೇ ಆರಂಭಿಸಲಾಗುತ್ತದೆ. ಒಂದು ವೇಳೆ ಹಣ ಪಡೆದುಕೊಂಡು ಮನೆ ನಿರ್ಮಿಸಿಕೊಳ್ಳದಿದ್ದರೆ ಗಂಡನಿಂದ ವಸೂಲಿ ಮಾಡಲಾಗುವುದು. ಇದೀಗ ಹಣದೊಂದಿಗೆ ಪತ್ನಿಯರು ಓಡಿ ಹೋಗಿದ್ದಾರೆಂದು ಗಂಡಂದಿರು ಆರೋಪಿಸುತ್ತಿದ್ದಾರೆ. ನಾವು ಅವರ ಆರೋಪ ನಿಜವೋ ಅಥವಾ ಸುಳ್ಳೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಬಗ್ಗೆ ಪೊಲೀಸರಿಗೆ ದೂರು ನೀಡಲು ಸೂಚನೆ ನೀಡಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ