ಭಾನುವಾರ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ವೇಳೆ ವಿಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸುವಾಗ ದುರ್ವರ್ತನೆ ತೋರಿದ್ದರು. ಈ ಘಟನೆಯಿಂದ ತಮಗೆ ನೋವಾಗಿದೆ ಎಂದು ಉಪಸಭಾಪತಿ ಹೇಳಿದ್ದು, ಬುಧವಾರ ಬೆಳಗ್ಗೆಯವರೆಗೂ ಉಪವಾಸ ನಿರಶನಕ್ಕೆ ಕೂತಿದ್ದಾರೆ.
ಅಹೋರಾತ್ರಿ ಧರಣಿ ನಡೆಸಿದ ಸಂಸದರನ್ನು ಭೇಟಿಯಾದ ರಾಜ್ಯಸಭೆ ಉಪಸಭಾಪತಿ ಹರಿವಂಶ್ (ಬಲಬದಿ)
ನವದೆಹಲಿ(ಸೆ. 22): ನಿನ್ನೆ ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಮಂಡನೆ ವೇಳೆ ಗದ್ದಲವಾಗಿ ಎಂಟು ಸಂಸದರ ಅಮಾನತುಗೊಂಡ ಬಳಿಕವೂ ದಿಲ್ಲಿ ರಾಜಕೀಯ ಹೈಡ್ರಾಮ ಮುಂದುವರಿದಿದೆ. ಅಮಾನತುಗೊಂಡ ಎಂಟು ಸಂಸದರು ಅಹೋರಾತ್ರಿ ಧರಣಿ ನಡೆಸಿದರು. ನಿನ್ನೆ ಇದೇ ಸಂಸದರ ಆಕ್ರೋಶಕ್ಕೆ ಗುರಿಯಾಗಿದ್ದ ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ಅವರು ಉಪವಾಸ ನಿರಶನಕ್ಕೆ ಕೂತಿದ್ದಾರೆ. ಉಪವಾಸ ಕೂರುವ ಮುನ್ನ ಹರಿವಂಶ್ ಅವರು ಇಂದು ಮಂಗಳವಾರ ಬೆಳಗ್ಗೆ ಧರಣಿನಿರತ ಎಂಟು ಸಂಸದರನ್ನು ಭೇಟಿಯಾಗಿ ಚಹಾ ಕೊಟ್ಟು ಮನವೊಲಿಕೆಗೆ ಪ್ರಯತ್ನಿಸಿದ್ದರು. ಆದರೆ, ಸಂಸದರ ಆಕ್ರೋಶ ತಣಿದಿರಲಿಲ್ಲ ಎನ್ನಲಾಗಿದೆ. ಇದರ ಬೆನ್ನಲ್ಲೇ ಹರಿವಂಶ್ ಅವರು ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದು ತಾನು ಇಡೀ ದಿನ ಉಪವಾಸ ನಿರಶನಕ್ಕೆ ಕೂತಿರುವುದಾಗಿ ತಿಳಿಸಿದ್ದಾರೆ.
ಮೊನ್ನೆ ಸದನದಲ್ಲಿ ಆದ ಘಟನೆ ಬಗ್ಗೆ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿರುವ ಹರಿವಂಶ್, ವಿಪಕ್ಷಗಳ ಸದಸ್ಯರ ವರ್ತನೆಯಿಂದ ಬಹಳ ನೋವಾಗಿದ್ದು, ತನಗೆ ಇಡೀ ರಾತ್ರಿ ನಿದ್ರೆ ಬರಲಿಲ್ಲ. ನಾಳೆ ಬೆಳಗ್ಗೆಯವರೆಗೂ ಉಪವಾಸ ಕೂರುವುದಾಗಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಅನುಮೋದನೆ ಪಡೆದಿದ್ದ ಎರಡು ಕೃಷಿ ಮಸೂದೆಗಳನ್ನ ಮೊನ್ನೆ ಭಾನುವಾರ ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ವಿಪಕ್ಷಗಳ ಸದಸ್ಯರು ಮಸೂದೆ ವಿರುದ್ಧ ಪ್ರತಿಭಟನೆ ನಡೆಸಿದರು. ಕೆಲ ಸದಸ್ಯರು ಸದನದ ಬಾವಿಗಿಳಿದು ದುರ್ವರ್ತನೆ ತೋರಿದ್ದರೆನ್ನಲಾಗಿದೆ. ಆಗ ಸಭಾಪತಿ ವೆಂಕಯ್ಯ ನಾಯ್ಡು ಬದಲು ಉಪಸಭಾಪತಿ ಹರಿವಂಶ್ ಅವರು ಸದನದ ನಿರ್ವಹಣೆ ನಡೆಸಿದ್ದರು. ವಿಪಕ್ಷಗಳ ಸದಸ್ಯರು ಟೇಬಲ್ ಮೇಲೆ ಹತ್ತಿ ಘೋಷಣೆಗಳನ್ನ ಕೂಗಿದರು. ಉಪಸಭಾಪತಿ ಮೇಲೆ ರೂಲ್ ಬುಕ್ ಅನ್ನೂ ಎಸೆದರೆನ್ನಲಾಗಿದೆ.
ನಿನ್ನೆ ಸಭಾಪತಿ ಹಾಗೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಈ ಘಟನೆಯನ್ನು ಸದನದಲ್ಲಿ ಪ್ರಸ್ತಾಪಿಸಿ ಸದಸ್ಯರ ದುರ್ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ನಾಸಿರ್ ಹುಸೇನ್ ಸೇರಿದಂತೆ ಎಂಟು ಸಂಸದರನ್ನು ಕೆಲ ದಿನಗಳ ಕಾಲ ಅಮಾನತು ಮಾಡಿರುವುದಾಗಿ ತಿಳಿಸಿದರು.
ವೆಂಕಯ್ಯ ನಾಯ್ಡು ಅವರ ಈ ಕ್ರಮವನ್ನು ವಿಪಕ್ಷಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್, ಸಿಪಿಐಎಂ, ಶಿವಸೇನಾ, ಜೆಡಿಎಸ್, ಟಿಎಂಸಿ, ಸಿಪಿಐ ಮತ್ತು ಸಮಾಜವಾದಿ ಪಕ್ಷಗಳ ಸದಸ್ಯರು ಸಂಸತ್ನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರದಿಂದ ಪ್ರಜಾಪ್ರಭುತ್ವದ ಕೊಲೆಯಾಗಿದೆ, ಸಂಸತ್ ಸತ್ತಿದೆ, ಶೇಮ್ ಶೇಮ್ ಇತ್ಯಾದಿ ಘೋಷಣೆಗಳನ್ನ ಕೂಗಿದರು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ