ಚೆನ್ನೈ (ನವೆಂಬರ್ 28); ವಾಯುಭಾರ ಕುಸಿತದಿಂದಾಗಿ ಕಳೆದ ಬುಧವಾರ ತಮಿಳುನಾಡು ಕರಾವಳಿ ತೀರವನ್ನು ಪ್ರವೇಶಿಸಿದ್ದ ನಿವಾರ್ ಚಂಡಮಾರುತ ನಿರೀಕ್ಷೆಗಿಂತ ಹೆಚ್ಚು ಹಾನಿ ಉಂಟುಮಾಡಿದೆ. ಚಂಡಮಾರುತದ ತೀವ್ರತೆಗೆ ನಾಲ್ವರು ಸಾವಿಗೀಡಾಗಿದ್ದು ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ನಿವಾರ್ ಚಂಡಮಾರುತ ಪೀಡಿತ ತಮಿಳುನಾಡಿಗೆ ಕೇಂದ್ರವು ಬೆಂಬಲ ನೀಡುವುದಾಗಿ ತಿಳಿಸಿದ್ದು, ಮೃತರ ಕುಟುಂಬದವರಿಗೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ನಿವಾರ್ ಚಂಡಮಾರುತದಿಂದಾಗಿರುವ ನಷ್ಟದ ಬಗ್ಗೆ ಮಾತನಾಡಿರುವ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, "ನಿವಾರ್ ಚಂಡಮಾರುತಕ್ಕೆ ರಾಜ್ಯದ 18 ಜಿಲ್ಲೆಗಳಲ್ಲಿ, 2 ಸಾವಿರಕ್ಕೂ ಹೆಚ್ಚು ಮರಗಳು ಉರುಳಿವೆ. ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ ಜೊತೆಗೆ ನೂರಾರು ಜಾನುವಾರುಗಳನ್ನು ಚಂಡಮಾರುತ ಬಲಿ ಪಡೆದಿದೆ" ಎಂದು ಮಾಹಿತಿ ನೀಡಿದ್ದಾರೆ.
ತಮಿಳುನಾಡು ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ಸಹಾಯಕ್ಕಾಗಿ ಕೇಂದ್ರದ ತಂಡಗಳನ್ನು ನಿಯೋಜಿಸಲಾಗುವುದು ಎಂದು ಪ್ರಧಾನಿ ಮಾಹಿತಿ ಭರವಸೆ ನೀಡಿದ್ದಾರೆ ಎನ್ನಲಾಗುತ್ತಿದೆ.
PM @narendramodi expressed condolence on the loss of lives and prayed for a quick recovery of the injured. An ex-gratia of Rs. 2 lakh each would be given to the next of kin of the persons deceased and Rs. 50,000 each to the injured, from the PMNRF. @CMOTamilNadu
— PMO India (@PMOIndia) November 27, 2020
ಮುಖ್ಯಮಂತ್ರಿ ಪಳನಿಸ್ವಾಮಿ ಮೃತ ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ನಾಲ್ಕು ಲಕ್ಷ ರೂಪಾಯಿ ಮತ್ತು ಮುಖ್ಯಮಂತ್ರಿಯ ಸಾರ್ವಜನಿಕ ಪರಿಹಾರ ನಿಧಿಯಿಂದ ಆರು ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದಿದ್ದಾರೆ.
ಅಲ್ಲದೆ, ಚಂಡಮಾರುತದಲ್ಲಿ 61 ಹಸುಗಳು, 5 ಎತ್ತುಗಳು, 65 ಕರುಗಳು ಮತ್ತು 114 ಆಡುಗಳನ್ನು ಕಳೆದುಕೊಂಡಿರುವ ಜಾನುವಾರು ಮಾಲೀಕರಿಗೆ 3,000 ರಿಂದ 30,000 ರೂಪಾಯಿ ಪರಿಹಾರವನ್ನು ಘೋಷಿಸಿದ್ದಾರೆ.
ಚೆನ್ನೈ, ಕಡಲೂರು, ಚೆಂಗಲ್ಪಟ್ಟು, ವೆಲ್ಲೂರು ಮತ್ತು ನಾಗಪಟ್ಟಣಂ ಸೇರಿದಂತೆ ಹಲವು ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ 2,064 ಮರಗಳು ಧರೆಗುರುಳಿದ್ದು, ಇದರಿಂದ ಇದು ಸುಮಾರು 108 ವಿದ್ಯುತ್ ಪರಿವರ್ತಕಗಳಿಗೆ ಮತ್ತು 2,927 ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದು ಸಿಎಂ ಪಳನಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಜಮ್ಮು ಕಾಶ್ಮೀರದಲ್ಲಿ ಡಿಸಿಸಿ ಚುನಾವಣೆ; ಬಿಗಿ ಭದ್ರತೆಯಲ್ಲಿ ನಡೆಯುತ್ತಿದೆ ಮೊದಲ ಹಂತದ ಮತದಾನ
ಅಲ್ಲದೆ, ಸುಮಾರು 302 ಗುಡಿಸಲುಗಳು ಮತ್ತು 38 ಹೆಂಚುಗಳ ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. 1,439 ಗುಡಿಸಲುಗಳು ಮತ್ತು 161 ಹೆಂಚುಗಳ ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಚಂಡಮಾರುತದಿಂದಾಗಿ ಮನೆಗಳನ್ನು ಕಳೆದುಕೊಂಡವರಿಗೆ ಸೂಕ್ತ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ