ಜೀವ ಉಳಿಸಿಕೊಳ್ಳಲು ಗುಜರಾತ್​ನಿಂದ ಕಾಲ್ಕಿತ್ತ 50,000ಕ್ಕೂ ಹೆಚ್ಚು ಉತ್ತರ ಭಾರತೀಯರು

ಸೆ. 28ರಂದು ಗುಜರಾತ್​ನ ಸಬರಕಾಂತ ಜಿಲ್ಲೆಯ ಹಿಮ್ಮತ್ನಗರ್ ಸಮೀಪದ ಹಳ್ಳಿಯೊಂದರಲ್ಲಿ 14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಬಿಹಾರೀ ಮೂಲದ ರವೀಂದ್ರ ಸಾಹು ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.


Updated:October 8, 2018, 11:28 AM IST
ಜೀವ ಉಳಿಸಿಕೊಳ್ಳಲು ಗುಜರಾತ್​ನಿಂದ ಕಾಲ್ಕಿತ್ತ 50,000ಕ್ಕೂ ಹೆಚ್ಚು ಉತ್ತರ ಭಾರತೀಯರು
ಗುಜರಾತಿನಿಂದ ತೆರಳುತ್ತಿರುವ ಉತ್ತರ ಭಾರತೀಯರು
  • Share this:
- ನ್ಯೂಸ್18 ಕನ್ನಡ

ಗುಜರಾತ್(ಅ. 07): ವಾಟ್ಸಾಪ್​ನಲ್ಲಿ ಹಬ್ಬಿದ್ದ ಮಕ್ಕಳ ಕಳ್ಳರ ವದಂತಿಯಿಂದ ಅದೆಷ್ಟೋ ಅಮಾಯಕರು ಜನಸಮೂಹದಿಂದ ಹತ್ಯೆಯಾಗಿದ್ದು ಕಣ್ಮುಂದೆ ಇನ್ನೂ ಹಸಿರಾಗಿದೆ. ಈಗ ಗುಜರಾತ್​ನಲ್ಲಿ ಸಂಭವಿಸಿದ ಒಂದು ಅತ್ಯಾಚಾರ ಘಟನೆಯು ಗುಜರಾತ್​ನಲ್ಲಿರುವ ಉತ್ತರ ಭಾರತೀಯರ ಪ್ರಾಣಕ್ಕೆ ಕುತ್ತು ತಂದಿದೆ. ಪ್ರಾಣ ಭಯದಿಂದ ಗುಜರಾತಿನಿಂದ 50,000ಕ್ಕೂ ಹೆಚ್ಚು ಮಂದಿ ಹೊರ ನಡೆದಿದ್ದಾರೆ.

ವಲಸಿಗರ ವಿರುದ್ಧ ವಾಟ್ಸಾಪ್​ನಲ್ಲಿ ಸೇಡಿನ ಸಂದೇಶಗಳು ಹರಿದಾಡುತ್ತಿದ್ದು, ಗುಜರಾತ್​ನ ಅನೇಕ ಕಡೆ ವಲಸಿಗರ ಮೇಲೆ ದಾಳಿಗಳಾಗುತ್ತಿವೆ. ಅದರಲ್ಲೂ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ವ್ಯಕ್ತಿಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಯುತ್ತಿದೆ ಎನ್ನಲಾಗಿದೆ. ಇದರಿಂದ ಬೆಚ್ಚಿಬಿದ್ದಿರುವ ನೂರಾರು ವಲಸಿಗರು ಸಿಕ್ಕಸಿಕ್ಕ ಬಸ್ಸು, ಟ್ರೈನುಗಳನ್ನ ಹಿಡಿದುಕೊಂಡು ತಮ್ಮ ತಮ್ಮ ರಾಜ್ಯಗಳಿಗೆ ವಾಪಸ್ಸಾಗುತ್ತಿದ್ಧಾರೆ.

ಸೋಮವಾರ ಮುಂಜಾನೆಯೂ ಆರು ಮಂದಿ ಉತ್ತರ ಭಾರತೀಯರ ಮೇಲೆ ಗಂಭೀರ ಸ್ವರೂಪದ ಹಲ್ಲೆ ಮಾಡಲಾಗಿದೆ. ಕೆಲಸ ಹುಡುಕಿಕೊಂಡು ಗುಜರಾತಿಗೆ ಬಂದಿದ್ದ ಸಾವಿರಾರು ವಲಸಿಗರೀಗ ಪ್ರಾಣ ಕೈಯಲ್ಲಿ ಹಿಡಿದು ಬದುಕು ಸವೆಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ದೊಡ್ಡ ಸಂಖ್ಯೆಯಲ್ಲಿ ಉತ್ತರ ಭಾರತೀಯ ಕೂಲಿ ಕಾರ್ಮಿಕರು ಗುಜರಾತನ್ನು ತೊರೆಯುತ್ತಿದ್ದಾರೆ.

ಕಳೆದ ವಾರ, ಸೆ. 28ರಂದು ಗುಜರಾತ್​ನ ಸಬರ್​ಕಾಂತ ಜಿಲ್ಲೆಯ ಹಿಮ್ಮತ್​ನಗರ್ ಸಮೀಪದ ಹಳ್ಳಿಯೊಂದರಲ್ಲಿ 14 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣದಲ್ಲಿ ಬಿಹಾರೀ ಮೂಲದ ರವೀಂದ್ರ ಸಾಹು ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಅತ್ಯಾಚಾರದಲ್ಲಿ ಬಿಹಾರಿ ವ್ಯಕ್ತಿಯ ಕೈ ಇರುವುದು ಬೆಳಕಿಗೆ ಬಂದ ನಂತರ ಗುಜರಾತ್​ನಲ್ಲಿ ವಾಟ್ಸಾಪ್​ನಲ್ಲಿ ವಲಸಿಗರ ವಿರುದ್ಧ ಆಕ್ರೋಶ ಸಂದೇಶಗಳು ವೈರಲ್ ಆಗುತ್ತಿವೆ. ಬಿಹಾರ ಹಾಗೂ ಉತ್ತರ ಪ್ರದೇಶ ಮೂಲದ ವ್ಯಕ್ತಿಗಳಿಂದ ಅಪರಾಧ ಕೃತ್ಯಗಳು ನಡೆಯುತ್ತಿದೆ ಎಂದು ಈ ಸಂದೇಶಗಳಲ್ಲಿ ಆರೋಪಿಸಲಾಗುತ್ತಿದೆ. ಇದರಿಂದ ಸ್ಥಳೀಯ ಗುಜರಾತಿ ಜನರು ತಮ್ಮ ಪ್ರದೇಶದ ವಲಸಿಗರನ್ನು ಅನುಮಾನದಿಂದ ನೋಡುತ್ತಿದ್ದಾರೆ. ಹಲವು ಕಡೆ ಹಿಂಸಾಚಾರಗಳು ನಡೆದಿವೆ. ಅತ್ಯಾಚಾರಕ್ಕೊಳಗಾದ ಮಗು ಪ್ರಬಲ ಠಾಕೂರ್ ಸಮುದಾಯಕ್ಕೆ ಸೇರಿದ್ದಾದ್ದರಿಂದ ಠಾಕೂರ್ ಸೇನಾ ಸಂಘಟನೆಯ ಕಾರ್ಯಕರ್ತರು ದೊಡ್ಡ ದೊಂಬಿ ನಡೆಸಿದ್ದಾರೆ. ಅಕ್ಟೋಬರ್ 2ರಂದು ಮೆಹ್ಸಾನ ಜಿಲ್ಲೆಯ ಫ್ಯಾಕ್ಟರಿಯೊಂದಕ್ಕೆ ನುಗ್ಗಿದ 200 ಜನರು ಅಲ್ಲಿಯ ಇಬ್ಬರು ನೌಕರರ ಮೇಲೆ ಹಲ್ಲೆ ಮಾಡಿದ್ದಾರೆ. ಗುಜರಾತ್​ನ ವಿವಿಧೆಡೆ ಇಂತಹ ಹಲವು ದಾಳಿಗಳಾಗಿವೆ. ವಲಸಿಗರ ಮನೆಗಳಿಗೆ ನುಗ್ಗಿ ನಾಳೆಯೇ ಮನೆ ಬಿಟ್ಟು ಹೋಗುವಂತೆ ಬೆದರಿಕೆ ಹಾಕಲಾಗುತ್ತಿರುವುದು ತಿಳಿದುಬಂದಿದೆ.

ದೊಂಬಿ ಗಲಾಟೆ ಸಂಬಂಧ ಪೊಲೀಸರು ಈವರೆಗೆ 170 ಜನರನ್ನು ಬಂಧಿಸಿದ್ದಾರೆ. ಗುಜರಾತ್​ನ ವಿವಿಧ ಜಿಲ್ಲೆಗಳಲ್ಲಿ 18 ಎಫ್​ಐಆರ್​ಗಳನ್ನ ದಾಖಲಿಸಲಾಗಿದೆ. 

First published:October 7, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ