ಗುರುಗ್ರಾಮ ಆಕಾಶ ಆವರಿಸಿಕೊಂಡ ಬಳಿಕ ದೆಹಲಿಗೆ ಲಗ್ಗೆ ಇಟ್ಟ ಮಿಡತೆಗಳ ಹಿಂಡು; ತುರ್ತು ಸಭೆ ಕರೆದ ಪರಿಸರ ಸಚಿವ

ಒಂದು ದಿನದಲ್ಲಿ 150 ಕಿ.ಮೀ. ದೂರದವರೆಗೂ ಹಾರುವ ಸಾಮರ್ಥ್ಯವನ್ನು ಈ ಮಿಡತೆಗಳು ಹೊಂದಿರುತ್ತವೆ. ಈ ವಿಧದ ಮಿಡತೆಗಳು ತಮ್ಮ ದೇಹದ ತೂಕಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತವೆ. ಒಂದು ಚದರ ಕಿ.ಮೀ.ನಲ್ಲಿ 40 ಮಿಲಿಯನ್​ಗಿಂತಲೂ ಅಧಿಕ ಮಿಡತೆಗಳು ಇದ್ದು, ಇವು ಒಂದು ದಿನದಲ್ಲಿ 35 ಸಾವಿರ ಜನರು ಸೇವಿಸಬಹುದಾದ ಆಹಾರವನ್ನು ತಿಂದು ಮುಗಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.

ಮಿಡತೆಗಳ ಗುಂಪು

ಮಿಡತೆಗಳ ಗುಂಪು

 • Share this:
  ನವದೆಹಲಿ; ರಾಷ್ಟ್ರ ರಾಜಧಾನಿ ದೆಹಲಿಯ ಗುರುಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ಬೆಳೆ ನಾಶ ಮಾಡುವ ಮಿಡತೆಗಳು ಅಪಾರ ಪ್ರಮಾಣದಲ್ಲಿ ಕಾಣಿಸಿಕೊಂಡಿವೆ. ದಕ್ಷಿಣ ದೆಹಲಿಯ ಛತರ್​ಪುರ್​ನಲ್ಲಿ ಆಕ್ರಮಣಕಾರಿ ಕೀಟಗಳು ಕೃಷಿ ಭೂಮಿ ಮತ್ತು ಮನೆಗಳ ಮೇಲೆ ದಾಳಿ ಇಟ್ಟಿವೆ.

  ಮರುಭೂಮಿಯ ಮಿಡತೆಗಳ ಹಿಂಡು ಶನಿವಾರ ಬೆಳಗ್ಗೆ ಗುರುಗ್ರಾಮ ತಲುಪಿದ್ದವು. ಕೀಟಗಳ ಹಾರಾಟ ಮತ್ತು ಆಕಾಶವನ್ನು ಸುತ್ತುವರೆಯುವಂತೆ ಮುತ್ತಿದ್ದ ಮಿಡತೆಗಳ ಫೋಟೋಗಳನ್ನು ಅಲ್ಲಿನ ನಿವಾಸಿಗಳು ಬೆಳಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  ಗುರುಗ್ರಾಮದಲ್ಲಿ ಮಿಡತೆಗಳ ದಾಳಿಯ ಪರಿಸ್ಥಿತಿ ಬಗ್ಗೆ ಚರ್ಚೆ ಮಾಡಲು ಪರಿಸರ ಸಚಿವ ಗೋಪಾಲ ರೈ ಅವರು ತುರ್ತು ಸಭೆ ಕರೆದಿದ್ದಾರೆ. ಜಿಲ್ಲಾಡಳಿತ ಅಲರ್ಟ್ ಆಗಿರುವಂತೆ ಸಚಿವರು ನಿರ್ದೇಶನ ನೀಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.  ವಲಸೆ ಕೀಟಗಳು ಸದ್ಯಕ್ಕೆ ರಾಷ್ಟ್ರ ರಾಜಧಾನಿಯಲ್ಲಿ ಉಳಿದುಕೊಳ್ಳುವ ಸಾಧ್ಯತೆಯಿದೆ ಮತ್ತು ಹರಿಯಾಣದ ಫರಿದಾಬಾದ್ ಮತ್ತು ಪಾಲ್ವಾಲ್ ಕಡೆಗೆ ಹೋಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

  ಅಪಾರ ಪ್ರಮಾಣದ ಮಿಡತೆಗಳು ಎರಡು ಕಿ.ಮೀ.ವರೆಗೂ ಹರಡಿಕೊಂಡಿದ್ದು, ಪಶ್ಚಿಮದಿಂದ ಪೂರ್ವದ ಕಡೆಗೆ ಚಲಿಸಿವೆ. ಬೆಳಗ್ಗೆ 11.30ರ ಸುಮಾರಿಗೆ ಗುರುಗ್ರಾಮ ಪ್ರವೇಶಿಸಿವೆ ಎಂದು ಕೃಷಿ ಸಚಿವಾಲಯದ ಮಿಡತೆ ಎಚ್ಚರಿಕೆ ಸಂಸ್ಥೆಯ ಕೆ.ಎಲ್. ಗುರ್ಜಾರ್ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

  ಲಕ್ಷಾಂತರ ಸಂಖ್ಯೆಯಲ್ಲಿರುವ ಮಿಡತೆಗಳ ಹಿಂಡು ಮರ, ಮನೆಯ ಛಾವಣಿ ಮತ್ತು ಗಿಡಗಳ ಮೇಲೆ ಕುಳಿತಿರುವ ವಿಡಿಯೋ ಮತ್ತು ಪೋಟೋಗಳನ್ನು ಗುರುಗ್ರಾಮದ ನಿವಾಸಿಗಳು ಹಂಚಿಕೊಂಡಿದ್ದಾರೆ. ಗುರುಗ್ರಾಮದ ಹಲವು ನಿವಾಸಿಗಳು ಕೀಟಗಳು ಮನೆಯ ಒಳಗೆ ಪ್ರವೇಶಿಸದಂತೆ ಮುನ್ನೆಚ್ಚರಿಕೆಯಿಂದ ಮನೆಯ ಕಿಟಿಕಿಗಳನ್ನು ಭದ್ರವಾಗಿ ಮುಚ್ಚಿಕೊಂಡಿದ್ದಾರೆ.

  ಮೇ ತಿಂಗಳಲ್ಲಿ ಮರುಭೂಮಿ ಕೀಟಗಳು ಭಾರತದ ಮೇಲೆ ದಾಳಿ ಮಾಡಲು ಆರಂಭಿಸಿದವು. ಮೊದಲಿಗೆ ರಾಜಸ್ಥಾನ ಪ್ರವೇಶಿಸಿದ ಮಿಡತೆಗಳು ಆನಂತರ ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳ ಮೇಲೆ ದಾಳಿ ನಡೆಸಿ, ಬೆಳೆ ನಾಶ ಮಾಡಿವೆ.

  ಇದನ್ನು ಓದಿ: Petrol Price: ಪೆಟ್ರೋಲ್, ಡಿಸೇಲ್ ನಿರಂತರ ದರ ಏರಿಕೆ; ಕಾಂಗ್ರೆಸ್‌ ಕಾರ್ಯಕರ್ತರಿಂದ ಬೈಕ್‌ ಶವಯಾತ್ರೆ ನಡೆಸಿ ಪ್ರತಿಭಟನೆ

   
  ತಜ್ಞರ ಪ್ರಕಾರ, ಭಾರತದಲ್ಲಿ ನಾಲ್ಕು ವಿಧವಾದ ಮಿಡತೆಗಳನ್ನು ಗುರುತಿಸಲಾಗಿದೆ. ಮರುಭೂಮಿ ಮಿಡತೆಗಳು, ವಲಸೆ ಮಿಡತೆಗಳು, ಬಾಂಬೆ ಮಿಡತೆಗಳು ಹಾಗೂ ಮರದ ಮಿಡತೆಗಳು. ಇವುಗಳಲ್ಲಿ ಮರುಭೂಮಿ ಮಿಡತೆಗಳು ವಿನಾಶಕಾರಿ ಮಿಡತೆಗಳು ಎಂದು ಪರಿಗಣಿಸಲಾಗಿದೆ.ಒಂದು ದಿನದಲ್ಲಿ 150 ಕಿ.ಮೀ. ದೂರದವರೆಗೂ ಹಾರುವ ಸಾಮರ್ಥ್ಯವನ್ನು ಈ ಮಿಡತೆಗಳು ಹೊಂದಿರುತ್ತವೆ. ಈ ವಿಧದ ಮಿಡತೆಗಳು ತಮ್ಮ ದೇಹದ ತೂಕಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತವೆ. ಒಂದು ಚದರ ಕಿ.ಮೀ.ನಲ್ಲಿ 40 ಮಿಲಿಯನ್​ಗಿಂತಲೂ ಅಧಿಕ ಮಿಡತೆಗಳು ಇದ್ದು, ಇವು ಒಂದು ದಿನದಲ್ಲಿ 35 ಸಾವಿರ ಜನರು ಸೇವಿಸಬಹುದಾದ ಆಹಾರವನ್ನು ತಿಂದು ಮುಗಿಸುತ್ತವೆ ಎಂದು ತಜ್ಞರು ಹೇಳುತ್ತಾರೆ.


  First published: