ರೈಲ್ವೆ ಪ್ಲಾಟ್‌ ಫಾರಂ ಟಿಕೆಟ್‌ ದರದಲ್ಲಿ ಭಾರೀ ಏರಿಕೆ; 10 ರಿಂದ 50 ರೂಗೆ ಏರಿಸಿದ ಕೇಂದ್ರ ಸರ್ಕಾರ!

ಈ ಹಿಂದೆ, 2015ರ ಮಾರ್ಚ್‌ನಲ್ಲಿ 5 ರೂ ಇದ್ದ ಪ್ಲಾಟ್‌ಫಾಂ ಟಿಕೆಟ್‌ ದರವನ್ನು 10ರೂ ಏರಿಸಲಾಗಿತ್ತು. ಆದರೆ, ಇದೀಗ ಏಕಾಏಕಿ 50 ರೂ ಗೆ ಏರಿಸಲಾಗಿದೆ. ಈ ಟಿಕೆಟ್‌ ದರ ಏರಿಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಈಗ ಬಾಲ್ಕಾನಿಯಲ್ಲಿ ನಿಂತು ತಟ್ಟೆ ಬಾರಿಸಿ ಸರ್ಕಾರಕ್ಕೆ ಧನ್ಯವಾದ ಹೇಳೋಣ ಬನ್ನಿ ಎಂದು ಹಲವಾರು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ.

MAshok Kumar | news18-kannada
Updated:September 11, 2020, 3:31 PM IST
ರೈಲ್ವೆ ಪ್ಲಾಟ್‌ ಫಾರಂ ಟಿಕೆಟ್‌ ದರದಲ್ಲಿ ಭಾರೀ ಏರಿಕೆ; 10 ರಿಂದ 50 ರೂಗೆ ಏರಿಸಿದ ಕೇಂದ್ರ ಸರ್ಕಾರ!
ಭಾರತೀಯ ರೈಲ್ವೆ.
  • Share this:
ನವ ದೆಹಲಿ (ಸೆಪ್ಟೆಂಬರ್‌ 11); ಮಾರಣಾಂತಿಕ ಕೊರೋನಾ ವೈರಸ್ ದೇಶದಲ್ಲಿ ಮತ್ತಷ್ಟು ಹರಡುವುದನ್ನು ತಡೆಯುವ ಸಲುವಾಗಿ ಮಹತ್ವದ ನಿರ್ಧಾರಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ರೈಲ್ವೇ ನಿಲ್ದಾಣದಲ್ಲಿ ಜನ ಸಂದಣಿಯನ್ನು ನಿಯಂತ್ರಿಸಿ, ಜನರು ಗುಂಪುಗಳಾಗಿ ಒಟ್ಟುಗೂಡುವುದನ್ನು ಕಡಿಮೆಗೊಳಿಸುವ ಸಲುವಾಗಿ ದೇಶದ ಆಯ್ದ ಕೆಲವು ರೈಲ್ವೇ ನಿಲ್ದಾಣಗಳಲ್ಲಿ 10 ರೂ ಇದ್ದ ಪ್ಲಾಟ್‌ಫಾರ್ಮ್‌ ಟಿಕೆಟ್ ಶುಲ್ಕವನ್ನು 50 ರೂ.ಗೆ ಹೆಚ್ಚಿಸಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಇಂದು ಮಾಹಿತಿ ನೀಡಿದ್ದಾರೆ. ಪಶ್ಚಿಮ ರೈಲ್ವೆ ವಲಯದ ಆರು ವಿಭಾಗಗಳಾದ ಮುಂಬೈ, ವಡೋದರಾ, ಅಹಮದಾಬಾದ್, ರತ್ನಂ, ರಾಜ್ಕೋಟ್, ಭಾವನಗರ ಸೇರಿದಂತೆ ದೇಶದ ಸುಮಾರು 250 ರೈಲ್ವೆ ನಿಲ್ದಾಣಗಳಲ್ಲಿ ಈ ಶುಲ್ಕ ನಾಳೆಯಿಂದ ಅನ್ವಯವಾಗಲಿ ಎಂದು ಹೇಳಲಾಗುತ್ತಿದೆ.

ಕೇಂದ್ರ ವಲಯದಲ್ಲಿ ಮುಂಬೈ (ಸಿಎಸ್‌ಟಿ), ಭೂಸಾವಲ್, ನಾಗ್ಪುರ, ಸೋಲಾಪುರ, ಪುಣೆ – ಐದು ವಿಭಾಗಗಳನ್ನು ಒಳಗೊಂಡ – ಎಲ್ಲಾ ನಿಲ್ದಾಣಗಳಲ್ಲಿ ಬೆಲೆಗಳನ್ನು ಹೆಚ್ಚಿಸಲಾಗಿದೆ. ದಕ್ಷಿಣ ರೈಲ್ವೆ ವಲಯದಲ್ಲಿ, ಚೆನ್ನೈನಲ್ಲಿ ಮಾತ್ರ ಪ್ಲಾಟ್‌ಫಾರ್ಮ್ ಟಿಕೆಟ್‌ನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಮುಖ ರೈಲ್ವೆ ನಿಲ್ದಾಣಗಳಾದ, “ಸಂಗೊಳ್ಳಿ ರಾಯಣ್ಣ ಮೆಜೆಸ್ಟಿಕ್‌, ಯಶವಂತಪುರ ಮತ್ತು ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ ಫಾರಂ ಟಿಕೆಟ್‌ ದರವನ್ನು 10 ರಿಂದ 50 ರೂ ಗೆ ಏರಿಸಲಾಗಿದೆ. ಟಿಕೆಟ್‌ ಇಲ್ಲದೆ ನಿಲ್ದಾಣ ಪ್ರವೇಶಿಸಿದರೆ ವಿಧಿಸಲಾಗುವ ದಂಡವನ್ನೂ ಹಲವು ಪಟ್ಟು ಏರಿಸಲಾಗಿದೆ. ಹೀಗಾಗಿ ಈ ನಿಲ್ದಾಣಗಳಿಗೆ ತಮ್ಮವರನ್ನು ಕರೆತರಲು ತೆರಳುವವರು ಜಾಗ್ರತೆ ವಹಿಸುವುದು ಸೂಕ್ತ ಎನ್ನಲಾಗುತ್ತಿದೆ.

ಇದನ್ನೂ ಓದಿ : ಟ್ವಿಟರ್‌ನಲ್ಲಿ ಟ್ರೆಂಡ್‌ ಆಗುತ್ತಿದೆ ServeInMyLanguage; ಹಿಂದಿ ದಿವಸ್‌ಗೆ ವಿರೋಧ, ಸರ್ಕಾರದ ಸೇವೆ ಕನ್ನಡದಲ್ಲೇ ಬೇಕೆಂದು ಆಗ್ರಹ

"ಕೊರೋನಾ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಜನಸಂದಣಿಯನ್ನು ನಿಯಂತ್ರಿಸಲು ಪ್ಲಾಟ್‌ಫಾರ್ಮ್ ಟಿಕೆಟ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಇದರಿಂದ ರೈಲ್ವೆ ನಿಲ್ದಾಣಗಳಿಗೆ ಅನಾವಶ್ಯಕವಾಗಿ ಆಗಮಿಸುವವರ ಸಂಖ್ಯೆ ಕಡಿಮೆಯಾಗಲಿದೆ. ದೇಶದಲ್ಲಿ ಪ್ರತಿದಿನ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು, ರೈಲ್ವೇ ನಿಲ್ದಾಣಗಳಲ್ಲಿ ಜನಸಾಂದ್ರತೆ ಕಡಿಮೆಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಹಿಂದೆ, 2015ರ ಮಾರ್ಚ್‌ನಲ್ಲಿ 5 ರೂ ಇದ್ದ ಪ್ಲಾಟ್‌ಫಾಂ ಟಿಕೆಟ್‌ ದರವನ್ನು 10ರೂ ಏರಿಸಲಾಗಿತ್ತು. ಆದರೆ, ಇದೀಗ ಏಕಾಏಕಿ 50 ರೂ ಗೆ ಏರಿಸಲಾಗಿದೆ. ಈ ಟಿಕೆಟ್‌ ದರ ಏರಿಕೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಈಗ ಬಾಲ್ಕಾನಿಯಲ್ಲಿ ನಿಂತು ತಟ್ಟೆ ಬಾರಿಸಿ ಸರ್ಕಾರಕ್ಕೆ ಧನ್ಯವಾದ ಹೇಳೋಣ ಬನ್ನಿ ಎಂದು ಹಲವಾರು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ.
Published by: MAshok Kumar
First published: September 11, 2020, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading