ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗಲಿದೆ; ನರೇಂದ್ರ ಮೋದಿ

Howdy, Modi!: ಭಾರತ ಹಾಗೂ ಅಮೆರಿಕ ವಿಶ್ವದ ಎರಡು ಬೃಹತ್​ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಈ ಎರಡೂ ದೇಶಗಳ ಸಂಬಂಧ ಇಂದಿನ ಈ ಕಾರ್ಯಕ್ರಮದ ಮೂಲಕ ಮತ್ತಷ್ಟು ಗಟ್ಟಿಯಾಗಿದೆ. ಅಮೆರಿಕ ಭಾರತಕ್ಕೆ ಭಾವನಾತ್ಮಕವಾಗಿ ಮತ್ತಷ್ಟು ಹತ್ತಿರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ

MAshok Kumar | news18-kannada
Updated:September 22, 2019, 11:40 PM IST
ಭಾರತ-ಅಮೆರಿಕ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಜನರ ಶ್ರೇಯೋಭಿವೃದ್ಧಿಗೆ ಪೂರಕವಾಗಲಿದೆ; ನರೇಂದ್ರ ಮೋದಿ
ನರೇಂದ್ರ ಮೋದಿ ಹಾಗೂ ಡೊನಾಲ್ಡ್​ ಟ್ರಂಪ್
  • Share this:
ಹೂಸ್ಟನ್​ (ಸೆಪ್ಟೆಂಬರ್​. 22): ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ಹಾಗೂ ಅಣು ಶಕ್ತಿಯ ದೇಶ ಒಂದಾಗಿರುವುದು ಎರಡೂ ದೇಶದ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಎರಡೂ ದೇಶದ ಜನರ ಶ್ರೇಯೋಭಿವೃದ್ಧಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಪ್ರಧಾನಿ ನರೇಂದ್ರ ಮೋದಿ, "ಅಬ್​ ಕಿ ಬಾರ್​ ಟ್ರಂಪ್​ ಸರ್ಕಾರ್​" ಎಂದು ಘೋಷಣೆ ಕೂಗುವ ಮೂಲಕ ಈ ಬಾರಿಯೂ ಅಮೆರಿಕದಲ್ಲಿ ಟ್ರಂಪ್ ಅವರೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ನರೇಂದ್ರ ಮೋದಿ 7 ದಿನಗಳ ಪ್ರವಾಸಕ್ಕಾಗಿ ಶನಿವಾರ ಅಮೆರಿಕಕ್ಕೆ ತೆರಳಿದ್ದು, ಇಂದು ಹೂಸ್ಟನ್ ನಗರದ ಎನ್​ಆರ್​ಜಿ ಸ್ಟೇಡಿಯಂ ನಲ್ಲಿ ನಡೆದ ಬಹು ನಿರೀಕ್ಷಿತ “ಹೌಡಿ ಮೋದಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸುಮಾರು 50 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಮೋದಿಯವರನ್ನು ಹರ್ಷೋದ್ಘಾರದೊಂದಿಗೆ ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಅಮೆರಿಕ ಹಾಗೂ ಭಾರತದ ನಡುವಿನ ಸಂಬಂಧದ ಕುರಿತು ಮಾತನಾಡಿದ ಮೋದಿ,

“ಭಾರತ ಹಾಗೂ ಅಮೆರಿಕ ವಿಶ್ವದ ಎರಡು ಬೃಹತ್​ ಪ್ರಜಾಪ್ರಭುತ್ವ ರಾಷ್ಟ್ರಗಳಾಗಿದ್ದು, ಈ ಎರಡೂ ದೇಶಗಳ ಸಂಬಂಧ ಇಂದಿನ ಈ ಕಾರ್ಯಕ್ರಮದ ಮೂಲಕ ಮತ್ತಷ್ಟು ಗಟ್ಟಿಯಾಗಿದೆ. ಅಮೆರಿಕ ಭಾರತಕ್ಕೆ ಭಾವನಾತ್ಮಕವಾಗಿ ಮತ್ತಷ್ಟು ಹತ್ತಿರವಾಗಿದೆ.

ಹೂಸ್ಟನ್​ ಟು ಹೈದ್ರಾಬಾದ್​, ಬೋಸ್ಟನ್​ ಟು ಬೆಂಗಳೂರು, ಚಿಕಾಗೋ ಟು ಶಿಮ್ಲಾ, ಲಾಸ್​ ಏಂಜಲ್ಸ್​ ಟು ಲುದಿಯಾನ, ನ್ಯೂ ಜೆರ್ಸಿ ಟು ನ್ಯೂ ಡೆಲ್ಲಿ ಎಂಬಷ್ಟರ ಮಟ್ಟಿಗೆ ಈ ಸಂಬಂಧ ಹತ್ತಿರವಾಗಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ವಿಶ್ವ ರಾಜಕೀಯ ಇತಿಹಾಸದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲಿದೆ. ಹೊಸ ಇತಿಹಾಸಕ್ಕೆ ಕಾರಣವಾಗಲಿದೆ. ಇಂದಿನ ಐತಿಹಾಸಿಕ ಕಾರ್ಯಕ್ರಮಕ್ಕೆ ಇಡೀ ವಿಶ್ವವೇ ಸಾಕ್ಷಿಯಾಗಿದೆ" ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಗುನಗಾಣ ಮಾಡಿದೆ ಮೋದಿ, “ಟ್ರಂಪ್ ಜಾಗತಿಕ ನಾಯಕ, ಅವರಿಗೆ ವಿಶ್ವಮಟ್ಟದಲ್ಲೇ ಪರಿಚಯ ನೀಡುವ ಅಗತ್ಯವಿಲ್ಲ. 2017ರಲ್ಲಿ ಅವರು ನನಗೆ ಅವರ ಕುಟುಂಬವನ್ನು ಪರಿಚಯಿಸಿದ್ದರು. ಆದರೆ, 2019ರ ಈ ದಿನ ನಾನು ಅವರಿಗೆ ಅಮೇರಿಕದಲ್ಲಿರುವ ನನ್ನ ಲಕ್ಷಾಂತರ ಜನರ ಕುಟುಂಬವನ್ನು ಪರಿಚಯಿಸುತ್ತಿದ್ದೇನೆ. ಅವರು ಭಾರತದ ನಂಬಿಕಸ್ಥ ಗೆಳೆಯ. ಹೀಗಾಗಿ ಮುಂದಿನ ಬಾರಿಯೂ ಅಮೆರಿಕದಲ್ಲಿ ಅವರದ್ದೇ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.ನಂತರ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, “ಭಾರತ ಅಮೆರಿಕ ಸಂಬಂಧ ಬಲಿಷ್ಠವಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ನನಗೆ ರೋಮಾಂಚನವಾಗುತ್ತಿದೆ. ಮೋದಿ ಜೊತೆ ಇರುವುದು ನನ್ನ ಸೌಭಾಗ್ಯ. ಮೋದಿಯ ನೇತೃತ್ವದಲ್ಲಿ ಭಾರತ ಮತ್ತಷ್ಟು ಬಲಿಷ್ಠವಾಗಿದೆ” ಎಂದು ಪ್ರಶಂಶೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಭಾರತ ಅಮೆರಿಕ ನಡುವಿನ ವಾಣಿಜ್ಯ ಸಂಬಂಧಗಳ ಬಗ್ಗೆ ಮಾತನಾಡಿದ ಅವರು, “ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗಾಗಿ ಇಲ್ಲಿ 70 ಸಾವಿರ ಉದ್ಯೋಗ ಸೃಷ್ಟಿ ಮಾಡಲಾಗುವುದು. ಎರಡೂ ರಾಷ್ಟ್ರಗಳು ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಪ್ರಮುಖ ಹೆಜ್ಜೆಯನ್ನಿಡಲಿವೆ. ಈ ನಿಟ್ಟಿನಲ್ಲಿ ಅಮೆರಿಕದ ಎಕ್ಸ್​ಪ್ರೆಸ್​ ಕಂಪೆನಿ ಮೂಲಕ ಭಾರತದಲ್ಲೂ ಉದ್ಯೋಗ ಸೃಷ್ಟಿ ಮಾಡಲಾಗುವುದು. ಅಲ್ಲದೆ, ಭಾರತದಲ್ಲಿ ಎನ್​ಬಿಎ ಅತಿ ಶೀಘ್ರದಲ್ಲಿ ಉದ್ದಿಮೆ ತೆರೆಯಲಿದೆ.

ಅಲ್ಲದೆ, ವಾಣೀಜ್ಯಿಕವಾಗಿ ಭಾರತ ಸಾಕಷ್ಟು ಎತ್ತರಕ್ಕೆ ಬೆಳೆಯುತ್ತಿದ್ದು, ಭಾರತೀಯ ವಸ್ತುಗಳಿಗೆ ಅಮೆರಿಕದಲ್ಲಿ ಆಮದು ಸುಂಕ ಕಡಿತ ಮಾಡುವ ನಿರ್ಧಾರವನ್ನು ಈ ವೇದಿಕೆಯಲ್ಲಿ ಘೋಷಿಸುವುದು ನನಗೆ ಸಂತಸದ ವಿಚಾರವಾಗಿದೆ. ಈ ನಿರ್ಧಾರದ ಮೂಲಕ ಎರಡೂ ದೇಶಗಳು ಸಾಕಷ್ಟು ಲಾಭ ಪಡೆಯಲಿವೆ. ಇದಲ್ಲದೆ ಬಾಹ್ಯಾಕಾಶ ವಿಜ್ಞಾನದಲ್ಲೂ ಅಮೆರಿಕ ಭಾರತದ ಜೊತೆ ಕೈಜೋಡಿಸಲಿದೆ” ಎಂದು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಗಡಿ ರಕ್ಷಣೆ ಹಾಗೂ ಭಯೋತ್ಪಾದನೆ ನಿರ್ಮೂಲನೆಯ ಕುರಿತು ಗಮನ ಸೆಳೆದ ಅವರು, “ನನ್ನ ಆಡಳಿತ ಭಯೋತ್ಪಾದನೆ ನಿರ್ಮೂಲನೆ ಹಾಗೂ ಶಾಂತಿಯುಕ್ತ ಬದುಕಿಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತದೆ. ಅಮೆರಿಕದ ಗಡಿಯ ಮೇಲೆ ಈ ದೇಶಕ್ಕೆ ಎಷ್ಟು ಹಕ್ಕು ಇದೆಯೋ? ಅದೇ ರೀತಿ ಭಾರತಕ್ಕೂ ಗಡಿಯ ಮೇಲೆ ಹಕ್ಕಿದ್ದು, ಭಾರತದ ಗಡಿ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಮೆರಿಕ ಭಾರತಕ್ಕೆ ಸಂಪೂರ್ಣ ಸಹಕಾರ ನೀಡಲಿದೆ” ಎಂದು ಅಭಯಹಸ್ತ ನೀಡಿದ್ದಾರೆ.

ಇದನ್ನೂ ಓದಿ : Howdy Modi: ಅಮೆರಿಕದಲ್ಲೀಗ ನರೇಂದ್ರ ಜಪ: ಅಷ್ಟಕ್ಕೂ ಹೌಡಿ ಮೋದಿ ಎಂದರೇನು?

First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ