• Home
 • »
 • News
 • »
 • national-international
 • »
 • Explainer: ಜೋಶಿಮಠದ ದುರಂತ ಪತ್ತೆ ಹಚ್ಚಲು ಸ್ಯಾಟಲೈಟ್ ತಂತ್ರಜ್ಞಾನ ಹೇಗೆ ಸಹಾಯಕ? ಮುಂದಿನ ಅನಾಹುತ ತಪ್ಪುತ್ತಾ ಟೆಕ್ನಾಲಜಿ?

Explainer: ಜೋಶಿಮಠದ ದುರಂತ ಪತ್ತೆ ಹಚ್ಚಲು ಸ್ಯಾಟಲೈಟ್ ತಂತ್ರಜ್ಞಾನ ಹೇಗೆ ಸಹಾಯಕ? ಮುಂದಿನ ಅನಾಹುತ ತಪ್ಪುತ್ತಾ ಟೆಕ್ನಾಲಜಿ?

ಜೋಶಿಮಠ

ಜೋಶಿಮಠ

PSInSAR ಉಪಗ್ರಹವು ಶಕ್ತಿಯುತ ಪರಿಕರ ಎಂದೆನಿಸಿದ್ದು, ಇದು ಭೂಮಿಯ ಮೇಲಿನ ವಸ್ತುಗಳ ಚಲನೆ/ಸ್ಥಳಾಂತರವನ್ನು ಅಳೆಯುತ್ತದೆ ಹಾಗೂ ಎಷ್ಟು ಆಳದವರೆಗೆ ಸವೆತ ಉಂಟಾಗಿದೆ ಎಂಬುದನ್ನು ಮಾಪನ ಮಾಡುವ ಸಾಮರ್ಥ್ಯ ಹೊಂದಿದೆ.

 • News18 Kannada
 • 5-MIN READ
 • Last Updated :
 • New Delhi, India
 • Share this:

ಜಾರ್ಖಂಡ್: ಉತ್ತರಾಖಂಡ್‌ನ (Uttarakhand) ಜೋಶಿಮಠದಲ್ಲಿ (Joshimath) ನಡೆಯುತ್ತಿರುವ ಘಟನೆಗಳು ಇದೀಗ ಜಗಜ್ಜಾಹೀರಾಗಿದೆ. ಭೂಮಿಯೊಳಗಿನಿಂದ ಕೇಳಿ ಬರುತ್ತಿರುವ ಶಬ್ಧಗಳು, ಮನೆ ಕಟ್ಟಡಗಳಲ್ಲಿ ಕಂಡು ಬಂದಿರುವ ಬಿರುಕುಗಳು ಜೋಶಿಮಠ ಮುಳುಗುತ್ತಿದೆ ಎಂಬ ಅಂಶಗಳಿಗೆ ಉದಾಹರಣೆಗಳಾಗಿವೆ. ಭೂಮಿಯ (Earth) ಮುಳುಗುವಿಕೆ/ಭೂಕುಸಿತಗಳಿಗೆ ಹಲವಾರು ಅಂಶಗಳು ಕಾರಣ ಎಂಬುದು ತಜ್ಞರ ಅನಿಸಿಕೆಯಾಗಿದೆ. ಭೂಗತ ಗಣಿಗಾರಿಕೆ, ಒಳಚರಂಡಿ ವ್ಯವಸ್ಥೆ, ನೈಸರ್ಗಿಕ ಸಂಕೋಚನಗಳಿಂದಾಗಿ ಭೂಕುಸಿತಗಳು ಉಂಟಾಗುತ್ತಿರುತ್ತವೆ. PSInSAR ಉಪಗ್ರಹ ತಂತ್ರವನ್ನು ಇದೀಗ ತಂತ್ರಜ್ಞರು ಭೂಕುಸಿತ ಪರಿಣಾಮವನ್ನು ಅಳೆಯಲು ಬಳಸಿಕೊಂಡಿದ್ದು, ಇದು ಭೂಕುಸಿತದ ಮಟ್ಟವನ್ನು ಮೇಲ್ವಿಚಾರಣೆ ಮಾಡುತ್ತದೆ ಹಾಗೂ ಎಷ್ಟು ಪ್ರಮಾಣದಲ್ಲಿ ಕುಸಿತ ಉಂಟಾಗಿದೆ ಎಂಬುದನ್ನು ಮಾಪನ ಮಾಡುತ್ತದೆ.


PSInSAR ಉಪಗ್ರಹವು ಶಕ್ತಿಯುತ ಪರಿಕರ ಎಂದೆನಿಸಿದ್ದು, ಇದು ಭೂಮಿಯ ಮೇಲಿನ ವಸ್ತುಗಳ ಚಲನೆ/ಸ್ಥಳಾಂತರವನ್ನು ಅಳೆಯುತ್ತದೆ ಹಾಗೂ ಎಷ್ಟು ಆಳದವರೆಗೆ ಸವೆತ ಉಂಟಾಗಿದೆ ಎಂಬುದನ್ನು ಮಾಪನ ಮಾಡುವ ಸಾಮರ್ಥ್ಯ ಹೊಂದಿದೆ.


ಪ್ರವಾಹದಿಂದ ಬಂಡೆಗಳ ಸ್ಥಳಾಂತರ


ಜೋಶಿಮಠದಲ್ಲಿ ಉಂಟಾಗುತ್ತಿರುವ ಹಠಾತ್ ಪ್ರವಾಹದಿಂದಾಗಿ ಬಂಡೆಗಳ ಸ್ಥಳಾಂತರ ಕೂಡ ಉಂಟಾಗಿದೆ. ಇದರಿಂದ ಕಟ್ಟಡಗಳಲ್ಲಿ ಸ್ಥಳಾಂತರ ತಲೆದೋರಿದೆ. PSINSAR ಉಪಗ್ರಹವು ಜನವರಿ 2020 ರಿಂದ ಏಪ್ರಿಲ್ 2021 ರವರೆಗೆ ಭೂಕುಸಿತದ 16 ಚಿತ್ರಗಳನ್ನು ಕಳುಹಿಸಿದೆ. ಈ ಚಿತ್ರಗಳನ್ನು ಆಳವಾಗಿ ವಿಶ್ಲೇಷಿಸಿರುವ ವಿಜ್ಞಾನಿಗಳ ತಂಡವು ಮುಂದಿನ ದಿನಗಳಲ್ಲಿ ಕುಸಿತದ ಪ್ರಮಾಣವು 8.5-10 ಸೆಂಟಿಮೀಟರ್‌ಗಳಿಗೆ ಏರುತ್ತದೆ ಎಂಬುದಾಗಿ ತಿಳಿಸಿದೆ.


ಈ ಪ್ರದೇಶದಲ್ಲಿರುವ ಕಟ್ಟಡಗಳು 7.5 ಮತ್ತು 10 ಸೆಂಟಿಮೀಟರ್‌ನಷ್ಟು ಕುಸಿತಕ್ಕೊಳಗಾಗಿವೆ ಎಂಬುದು ತಿಳಿದು ಬಂದಿದ್ದು, ಕುಸಿತದ ಆಳವನ್ನು ಪರಿಶೀಲಿಸಲು PSInSAR ಪರಿಕರ ಸಹಾಯಕವಾಗಿದೆ.


ಜೋಶೀ ಮಠ


ವರದಿಯ ಪ್ರಕಾರ ಏಪ್ರಿಲ್ ಹಾಗೂ ನವೆಂಬರ್ 2022 ರ ನಡುವೆ ಭೂಮಿಯ ಕುಸಿತವು ನಿಧಾನವಾಗಿತ್ತು. ಈ ಸಮಯದಲ್ಲಿ ಜೋಶಿಮಠ 8.9 ಸೆಂ.ಮೀನಷ್ಟು ಕುಸಿತಕ್ಕೆ ಒಳಗಾಗಿದೆ. ಡಿಸೆಂಬರ್ 27, 2022 ಹಾಗೂ ಜನವರಿ 8, 2023 ರ ನಡುವೆ ಭೂಮಿಯ ಕುಸಿತದ ತೀವ್ರತೆ ಹೆಚ್ಚಾಗಿದೆ ಎಂಬುದಾಗಿ ವರದಿಯಾಗಿದೆ.


ಅಕ್ಟೋಬರ್ 2021 ರಲ್ಲಿ, ಉತ್ತರಾಖಂಡದ ಜೋಶಿಮಠ ಪಟ್ಟಣದ ಕೆಲವು ಮನೆಗಳಲ್ಲಿ ಮೊದಲು ಬಿರುಕುಗಳು ಕಾಣಿಸಿಕೊಂಡವು. ಒಂದು ವರ್ಷದ ನಂತರ, ಜನವರಿ 11 ರ ಹೊತ್ತಿಗೆ, ಪಟ್ಟಣದ ಒಂಬತ್ತು ವಾರ್ಡ್‌ಗಳಲ್ಲಿ 723 ಮನೆಗಳ ಮಹಡಿ, ಛಾವಣಿ ಮತ್ತು ಗೋಡೆಗಳ ಮೇಲೆ ದೊಡ್ಡ ಅಥವಾ ಸಣ್ಣ ಬಿರುಕುಗಳು ಉಂಟಾಗಿವೆ. ಸಮುದ್ರ ಮಟ್ಟದಿಂದ 6,107 ಅಡಿ ಎತ್ತರದಲ್ಲಿರುವ ಜೋಶಿಮಠವು ಚಮೋಲಿ ಜಿಲ್ಲೆಯ ಜನನಿಬಿಡ ಪಟ್ಟಣವಾಗಿದೆ.


ಅಂಕಿಅಂಶಗಳು ತಿಳಿಸಿರುವ ಮಾಹಿತಿಗಳೇನು?


2022ರಲ್ಲಿ ಪಟ್ಟಣದಲ್ಲಿ ಭೂ ಕುಸಿತದ ಕುರಿತು ಸಂಶೋಧನೆ ನಡೆಸಿದ ಭೂವಿಜ್ಞಾನಿ ನವೀನ್ ಜುಯಲ್ ತಿಳಿಸಿರುವಂತೆ ಜೋಶಿಮಠದ ಸುತ್ತಮುತ್ತಲಿನ ಪ್ರದೇಶವು ಇಳಿಜಾರಿನಿಂದ ಕೂಡಿದೆ. ಪ್ರತಿ 12 ದಿನಗಳಿಗೊಮ್ಮೆ, ಸತತ ಉಪಗ್ರಹ ವಿವರಗಳೊಂದಿಗೆ ಹೆಚ್ಚಿನ ಡೇಟಾವನ್ನು ಸೇರಿಸಲಾಗುತ್ತಿದೆ ಮತ್ತು ಸ್ಥಿರವಾಗಿ ನಡೆಯುತ್ತಿರುವ ನೆಲದ ಸ್ಥಳಾಂತರದ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಇನ್ನೊಬ್ಬ ಅಧಿಕಾರಿ ತಿವಾರಿ ತಿಳಿಸಿದ್ದಾರೆ.
ಜೋಶಿಮಠವು ಹವಾಮಾನ ವೈಪರೀತ್ಯಗಳಿಗೆ ಒಳಗಾಗಿದ್ದು, ಈ ಪ್ರದೇಶವು ಹೆಚ್ಚು ಮಳೆಗೆ ತುತ್ತಾಗುವ ಪ್ರದೇಶದಲ್ಲಿದೆ ಎಂದು ತಿಳಿಸಿದ್ದಾರೆ. ಮಳೆಯ ಕಾರಣದಿಂದಾಗಿಯೂ ಕುಸಿತಗಳು ಉಂಟಾಗುವ ನಿರೀಕ್ಷೆ ಇದೆ ಎಂದು ಪರಿಣಿತರು ತಿಳಿಸಿದ್ದಾರೆ.


ಪ್ರವಾಹಗಳಿಂದ ಹೆಚ್ಚುತ್ತಿರುವ ಸವೆತ


ಸೆಪ್ಟೆಂಬರ್ 2022 ರಲ್ಲಿ ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಯುಎಸ್‌ಡಿಎಂಎ) ಪ್ರಕಟಿಸಿದ ಜೋಶಿಮಠದ ವರದಿಯು, ಜೂನ್ 2013 ಮತ್ತು ಫೆಬ್ರವರಿ 2021 ರಲ್ಲಿ ಸಂಭವಿಸಿದ ಪ್ರವಾಹಗಳು ಈ ಪ್ರದೇಶದಲ್ಲಿ ಸವೆತವನ್ನು ಹೆಚ್ಚಿಸಿದೆ ಎಂದು ತಿಳಿಸಿದೆ. ದಶಕಗಳ ಹಿಂದೆ, ತಜ್ಞರು ಈ ಪ್ರದೇಶದಲ್ಲಿ ಭೂಕುಸಿತವನ್ನು ವರದಿ ಮಾಡಿದ್ದರು. ತದನಂತರ ಉತ್ತರ ಪ್ರದೇಶ ಸರ್ಕಾರ ಎಂ.ಸಿ ಮಿಶ್ರಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಸಮಗ್ರ ಅಧ್ಯಯನ ಕೈಗೊಂಡ ಆ ಸಮಿತಿಯು ತನ್ನ ವರದಿಯಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ನಿರ್ಮಾಣದ ವಿರುದ್ಧ ಎಚ್ಚರಿಕೆ ನೀಡಿತ್ತು.


ಭೌಗೋಳಿಕವಾಗಿ ಜೋಶಿಮಠವು ಮರಳು ಹಾಗೂ ಕಲ್ಲಿನ ನಿಕ್ಷೇಪದಿಂದ ಕೂಡಿದೆ. ಹಾಗಾಗಿ ಇಲ್ಲಿ ಹೆಚ್ಚಿನ ಕಟ್ಟಡಗಳ, ನಿವೇಶನಗಳ ನಿರ್ಮಾಣ ಯೋಜಿತವಲ್ಲ ಎಂದು ತಿಳಿಸಿತ್ತು. ಬ್ಲಾಸ್ಟಿಂಗ್ ಮತ್ತು ಭಾರೀ ದಟ್ಟಣೆಯಿಂದ ಉತ್ಪತ್ತಿಯಾಗುವ ಕಂಪನಗಳು ಸಹ ನೈಸರ್ಗಿಕ ಅಂಶಗಳಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತವೆ ಎಂಬುದಾಗಿ ಮಿಶ್ರಾ ವರದಿ ತಿಳಿಸಿತ್ತು.


ಇಸ್ರೋ ವರದಿ ತಿಳಿಸಿರುವ ಮಾಹಿತಿ ಏನು?


ISRO ದ ರಾಷ್ಟ್ರೀಯ ದೂರಸಂವೇದಿ ಕೇಂದ್ರದ (NRSC) ಅಧ್ಯಯನವು ಜೋಶಿಮಠದ ಪಟ್ಟಣವು ಏಪ್ರಿಲ್ ಮತ್ತು ನವೆಂಬರ್ 2022 ರ ನಡುವೆ 8.9 ಸೆಂಟಿಮೀಟರ್‌ಗಳವರೆಗೆ ಮುಳುಗಿದೆ ಎಂದು ತೋರಿಸುತ್ತದೆ. ಮಧ್ಯ ಜೋಶಿಮಠದಲ್ಲಿ, ಸೇನಾ ಹೆಲಿಪ್ಯಾಡ್ ಮತ್ತು ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಮಣ್ಣಿನ ತ್ವರಿತ ಸ್ಥಳಾಂತರ ಸಂಭವಿಸಿದೆ ಎಂದು ವರದಿ ತಿಳಿಸಿದ್ದು, ಜೋಶಿಮಠ-ಔಲಿ ರಸ್ತೆಯ ಬಳಿ 2,180 ಮೀಟರ್ ಎತ್ತರದಲ್ಲಿ ಮುಳುಗುವಿಕೆ ಸಂಭವಿಸಿದೆ ಎಂದು ಇಸ್ರೋ ತಿಳಿಸಿದೆ.
ಹಿಂದಿನ ತಿಂಗಳುಗಳಲ್ಲಿ ಮುಳುಗುವಿಕೆ ಪ್ರಮಾಣ ಕಡಿಮೆಯಾಗಿತ್ತು ಎಂದು ಇಸ್ರೋ ಕಂಡುಕೊಂಡಿದ್ದು ಕಳೆದ ವರ್ಷ ಏಪ್ರಿಲ್ ಮತ್ತು ನವೆಂಬರ್ ನಡುವೆ ಜೋಶಿಮಠದ ಮುಳುಗುವಿಕೆ 9 ಸೆಂ.ಮೀ ಎಂದು ವರದಿ ಮಾಡಿದೆ.


ಜೋಶಿಮಠ ಪಟ್ಟಣದಲ್ಲಿ 9 ಸೆಂ.ಮೀ ವರೆಗೆ ನಿಧಾನ ಕುಸಿತವು 7 ತಿಂಗಳ ಅವಧಿಯಲ್ಲಿ, ಏಪ್ರಿಲ್ ಮತ್ತು ನವೆಂಬರ್ 2022 ರ ನಡುವೆ ದಾಖಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಕಾರ್ಟೊಸ್ಯಾಟ್-2ಎಸ್ ಉಪಗ್ರಹದಿಂದ ಚಿತ್ರಗಳನ್ನು ತೆಗೆಯಲಾಗಿದೆ.


ಸುರಕ್ಷಿತ ಸ್ಥಳಕ್ಕೆ ಜನರ ವರ್ಗಾವಣೆ


ಬದರಿನಾಥದಂತಹ ಜನಪ್ರಿಯ ಯಾತ್ರಾಸ್ಥಳಗಳ ಪ್ರಮುಖ ಮಾರ್ಗವಾಗಿರುವ ಮುಳುಗುತ್ತಿರುವ ದೇವಾಲಯಗಳ ನಗರದಲ್ಲಿನ ಕಟ್ಟಡಗಳು ಮತ್ತು ರಸ್ತೆಗಳಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡು ದುರಂತದ ಅಂಚಿನಲ್ಲಿದೆ. ಉಪಗ್ರಹ ಸಮೀಕ್ಷೆಯ ನಂತರ ಸುಮಾರು 4,000 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. ಹೋಟೆಲ್‌ಗಳು ಮತ್ತು ವ್ಯಾಪಾರ ಸಂಸ್ಥೆಗಳಲ್ಲದೆ, 678 ಮನೆಗಳು ಅಪಾಯದಲ್ಲಿವೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.


ಜೋಶಿಮಠ


ಎನ್‌ಟಿಪಿಸಿಯ 520-ಮೆಗಾವ್ಯಾಟ್ ತಪೋವನ ವಿಷ್ಣುಘಡ ಜಲವಿದ್ಯುತ್ ಯೋಜನೆಯು ಈ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದ್ದು, ಜೋಶಿಮಠ ಭೂಮಿ ಕುಸಿತವನ್ನು ಉಲ್ಬಣಗೊಳಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.


ಜೋಶಿಮಠದ ಬಿಕ್ಕಟ್ಟಿಗೆ ಕಾರಣವೇನು?


ಜೋಶಿಮಠದ ಬಿಕ್ಕಟ್ಟಿಗೆ ಕಾರಣ ಯೋಜಿತವಲ್ಲದ ಹಾಗೂ ಅಸ್ತವ್ಯಸ್ತವಾಗಿರುವ ಮೂಲಸೌಕರ್ಯ ಯೋಜನೆಗಳಾಗಿವೆ ಎಂದು ಸ್ಥಳೀಯರು ದೂರುತ್ತಿದ್ದಾರೆ. ಪರ್ವತಗಳ ಸ್ಫೋಟ ಹಾಗೂ ಕೊರೆಯುವಿಕೆ ಒಳಗೊಂಡಂತೆ ಕೈಗೊಂಡಿರುವ ಪವರ್ ಪ್ಲಾಂಟ್ ಯೋಜನೆಗಳೇ ಕಾರಣ ಎಂದು ಆಪಾದಿಸಿದ್ದಾರೆ.


ಜೋಶಿಮಠಕ್ಕೆ ಭೇಟಿ ನೀಡಿ ಸ್ಥಳೀಯರು ಮತ್ತು ತಜ್ಞರೊಂದಿಗೆ ಸಭೆ ನಡೆಸಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನೊದಗಿಸಲಾಗುತ್ತದೆ ಹಾಗೂ ಹೆಚ್ಚಿನ ಅಪಾಯವಿರುವ ಸ್ಥಳಗಳಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.


ಹೆಚ್ಚಾಗುತ್ತಿರುವ ಬಿರುಕುಗಳು


ಸ್ಥಳೀಯ ದೇವಸ್ಥಾನ ಮತ್ತು ರೋಪ್‌ವೇ ಸೇರಿದಂತೆ ಸುಮಾರು 4,500 ಕಟ್ಟಡಗಳಲ್ಲಿ 670 ಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬಿರುಕುಗಳು ಕಂಡುಬಂದಿವೆ. ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳಲ್ಲಿ ಬಿರುಕುಗಳಿವೆ. ಎರಡು ಹೋಟೆಲ್‌ಗಳು ಈಗ ಒಂದರ ಮೇಲೊಂದು ವಾಲುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 80 ಕುಟುಂಬಗಳು ತಮ್ಮ ಮನೆಗಳಿಂದ ಶಾಲೆಗಳು, ಹೋಟೆಲ್‌ಗಳು ಮತ್ತು ಪಟ್ಟಣದ ಹೋಂಸ್ಟೇಗಳಿಗೆ ಸ್ಥಳಾಂತರಗೊಂಡಿವೆ.
ವಿಪತ್ತು ಪ್ರತಿಕ್ರಿಯೆ ತಂಡಗಳು ಆಗಮಿಸಿವೆ ಮತ್ತು ಅಗತ್ಯವಿರುವೆಡೆಯಲ್ಲಿ ಜನರನ್ನು ಏರ್‌ಲಿಫ್ಟಿಂಗ್ ಮಾಡಲು ಹೆಲಿಕಾಪ್ಟರ್‌ಗಳ ಸಹಾಯವನ್ನು ಪಡೆದುಕೊಳ್ಳಲಾಗಿದೆ. ಜೀವ ಉಳಿಸುವುದು ನಮ್ಮ ಮೊದಲ ಆದ್ಯತೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.


ಜೋಶಿಮಠ ಹೇಗೆ ನಿರ್ಮಾಣಗೊಂಡಿದೆ?


ಜೋಶಿಮಠದ ನಿರ್ಮಾಣ ಅನಿಶ್ಚಿತ ಭೌಗೋಳಿಕ ಸಂದರ್ಭಗಳಲ್ಲಿ ಉಂಟಾಗಿದೆ ಎಂಬುದು ತಜ್ಞರು ನೀಡಿರುವ ಮಾಹಿತಿಯಾಗಿದೆ. ಬೆಟ್ಟದ ಮಧ್ಯದ ಇಳಿಜಾರಿನಲ್ಲಿರುವ ಪಟ್ಟಣವು ಒಂದು ಶತಮಾನಕ್ಕೂ ಹೆಚ್ಚು ಹಿಂದೆ ಭೂಕಂಪದಿಂದ ಉಂಟಾದ ಭೂಕುಸಿತದ ಅವಶೇಷಗಳ ಮೇಲೆ ನಿರ್ಮಾಣಗೊಂಡಿದೆ ಮತ್ತು ಇದು ಕಂಪನ-ಪೀಡಿತ ವಲಯದಲ್ಲಿದೆ ಎಂಬುದಾಗಿ ಪರಿಣಿತರು ಮಾಹಿತಿ ನೀಡಿದ್ದಾರೆ.


ಮುಳುಗುವಿಕೆಗೆ ಮುಖ್ಯ ಕಾರಣಗಳೇನು?


ಪ್ರಾಕೃತಿಕ ಕಾರಣಗಳಿಂದ ಭೂಮಿ ಮುಳುಗುವಿಕೆ ಸಂಭವಿಸುವುದು ಒಂದು ಕಾರಣವಾದರೆ, ಅಂತರ್ಜಲದ ಅತಿಯಾದ ಹೊರಹಾಕುವಿಕೆ ಹಾಗೂ ಒಳಚರಂಡಿಯಂತಹ ಮಾನವ ಚಟುವಟಿಕೆಯಿಂದಾಗಿ ಕೂಡ ಭೂಮಿ ಮುಳುಗುತ್ತದೆ ಎಂಬುದು ತಜ್ಞರ ವಾದವಾಗಿದೆ.
ಇದನ್ನೂ ಓದಿ: Joshimath: ಉತ್ತರಾಖಂಡದಲ್ಲಿ ಜೋಶಿಮಠ ಮಾತ್ರವಲ್ಲ, ಈ ಪಟ್ಟಣಗಳೂ ಅಪಾಯದಲ್ಲಿವೆ!


ಇಂಡೋನೇಷಿಯಾದ ರಾಜಧಾನಿ ಜಕಾರ್ತದ ಉದಾಹರಣೆಯನ್ನು ನೀಡಿರುವ ತಜ್ಞರು ವಿಶ್ವದಲ್ಲಿರುವ ಯಾವುದೇ ಇತರ ನಗರಗಳಿಗಿಂತ ಅತಿವೇಗವಾಗಿ ಮುಳುಗುತ್ತಿದೆ. US ಭೂವೈಜ್ಞಾನಿಕ ಸಮೀಕ್ಷೆಯ ಪ್ರಕಾರ, ಪ್ರಪಂಚದಾದ್ಯಂತ 80% ಕ್ಕಿಂತ ಹೆಚ್ಚು ಭೂ ಕುಸಿತವು ಅಂತರ್ಜಲದ ಅತಿಯಾದ ಹೊರತೆಗೆಯುವಿಕೆಯಿಂದ ಉಂಟಾಗುತ್ತದೆ ಎಂದಾಗಿದೆ.

Published by:Monika N
First published: