ಪೆಟ್ರೋಲ್ ಬೆಲೆ ನಿರ್ಧಾರ ಆಗೋದು ಹೇಗೆ? ಬೆಲೆ ಹೆಚ್ಚಾದಷ್ಟೂ ಸರಕಾರಕ್ಕೆ ಲಾಭ ಹೇಗೆ?

ಕಚ್ಛಾ ತೈಲ ಆಮದಿನಿಂದ ಹಿಡಿದು ಡೀಲರ್ವರೆಗೂ ಪೆಟ್ರೋಲ್ ಬೆಲೆ ಹೇಗೆ ನಿಗದಿಯಾಗುತ್ತದೆ? ಕಚ್ಛಾ ತೈಲ ಬೆಲೆ ಹೆಚ್ಚಾದಷ್ಟೂ ಸರಕಾರಕ್ಕೆ ಹಾಗೂ ತೈಲ ಕಂಪನಿಗಳಿಗೆ ಲಾಭ ಹೇಗೆ ಹೆಚ್ಚಾಗುತ್ತದೆ? ಇಲ್ಲಿದೆ ಒಂದು ಸಂಕ್ಷಿಪ್ತ ನೋಟ…

Vijayasarthy SN | news18
Updated:November 26, 2018, 7:41 PM IST
ಪೆಟ್ರೋಲ್ ಬೆಲೆ ನಿರ್ಧಾರ ಆಗೋದು ಹೇಗೆ? ಬೆಲೆ ಹೆಚ್ಚಾದಷ್ಟೂ ಸರಕಾರಕ್ಕೆ ಲಾಭ ಹೇಗೆ?
ಪೆಟ್ರೋಲ್​ ಬಂಕ್
  • Advertorial
  • Last Updated: November 26, 2018, 7:41 PM IST
  • Share this:
ಬೆಂಗಳೂರು(ನ. 26): ಕಳೆದ 50 ದಿನಗಳಲ್ಲಿ ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆ ಶೇ. 30ಕ್ಕೂ ಹೆಚ್ಚು ಪ್ರಮಾಣದಲ್ಲಿ ಇಳಿಕೆಯಾದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶೇ. 7-11ರಷ್ಟು ಮಾತ್ರ ತಗ್ಗಿವೆ. ಇದೆಂತಹ ಲಾಜಿಕ್ ಎಂದು ಯಾರು ಬೇಕಾದರೂ ಪ್ರಶ್ನಿಸಬಹುದು. ಪೆಟ್ರೋಲ್ ಬಂಕ್​ಗಳಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೇಗೆ ನಿರ್ಧಾರವಾಗುತ್ತವೆ? ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿಧಿಸುವ ಅಬಕಾರಿ ಸುಂಕ ಮತ್ತು ವ್ಯಾಟ್ ತೆರಿಗೆಗಳು ಮಾತ್ರ ಈ ವ್ಯತ್ಯಾಸಕ್ಕೆ ಕಾರಣವಾ?

ವಿವರಣೆ:
ಕಚ್ಛಾ ತೈಲ ಬೆಲೆ + ಆಮದು ಸುಂಕ + ಡಾಲರ್ ಎದುರು ರೂಪಾಯಿ ಮೌಲ್ಯ + ತೈಲ ಸಾಗಣೆ ವೆಚ್ಚ + ಸಂಸ್ಕರಣೆ ವೆಚ್ಚ + ಕೇಂದ್ರ ಸರಕಾರದ ಅಬಕಾರಿ ಸುಂಕ + ರಾಜ್ಯ ಸರಕಾರದ ವ್ಯಾಟ್ ತೆರಿಗೆ + ಪೆಟ್ರೋಲ್ ಡೀಲರ್ ಕಮಿಷನ್.

ಇವಿಷ್ಟು ಸೇರಿಸಿದರೆ ಅಂತಿಮ ಪೆಟ್ರೋಲ್ ಬೆಲೆ ಬರುತ್ತದೆ ಎಂಬುದು ಒಂದು ಸರಳ ವಿವರಣೆ. ಆದರೆ, ಇದರಲ್ಲೂ ಕೆಲ ಪ್ರಮುಖ ಒಳಸುಳಿಗಳಿವೆ ಎಂಬುದು ಅನೇಕರಿಗೆ ತಿಳಿಯದ ಸಂಗತಿ.

ಆಮದಿಗಿಂತ ರಫ್ತೇ ಹೆಚ್ಚು:
ಭಾರತ ಪೆಟ್ರೋಲ್ ಆಮದು ಮಾಡಿಕೊಳ್ಳುವುದರಿಂದ ಹೆಚ್ಚು ಬೆಲೆ ಇದೆ. ದೇಶದ ಬೊಕ್ಕಸಕ್ಕೆ ಪೆಟ್ರೋಲ್ ಹೊರೆಯಾಗಿದೆ ಎಂಬ ವಾದವನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ, ಅಚ್ಚರಿಯ ವಿಚಾರವೆಂದರೆ ಭಾರತದ ತೈಲ ಆಮದಿಗಿಂತ ಅದರ ಪೆಟ್ರೋಲಿಯಮ್ ಉತ್ಪನ್ನಗಳ ರಫ್ತು ಪ್ರಮಾಣ ತೀರಾ ಹೆಚ್ಚಿದೆ. ಕಳೆದ ವರ್ಷದ ಅಂಕಿ ಅಂಶದ ಪ್ರಕಾರ, ಭಾರತವು ತೈಲ ಆಮದು ಮಾಡಿಕೊಳ್ಳಲು ಮಾಡಿದ ವೆಚ್ಚಕ್ಕಿಂತ 30 ಪಟ್ಟು ಹೆಚ್ಚು ಹಣದ ಆದಾಯವನ್ನು ಪೆಟ್ರೋಲಿಯಂ ಉತ್ಪನ್ನಗಳ ರಫ್ತಿನಿಂದ ಮಾಡಿಕೊಳ್ಳುತ್ತದೆ. ಅಮೆರಿಕ, ಸೌದಿ, ಯುಎಇ, ಸಿಂಗಾಪುರ, ಹಾಂಕಾಗ್, ಮಲೇಷ್ಯಾ ಮೊದಲಾದ ದೇಶಗಳಿಗೆ ಭಾರತವು ಸಂಸ್ಕರಿತ ಪೆಟ್ರೋಲಿಯಂ ಉತ್ಪನ್ನಗಳನ್ನ ಮಾರಾಟ ಮಾಡುತ್ತದೆ. ಈ ವ್ಯವಹಾರದಲ್ಲಿ ಭಾರತ ಜಗತ್ತಿನ ಟಾಪ್-10 ಪಟ್ಟಿಯಲ್ಲಿದೆ. ವಿಶ್ವ ತೈಲ ಸಂಸ್ಕರಣೆ ಮಾರುಕಟ್ಟೆಯಲ್ಲಿ ಭಾರತದ ಪಾಲು ಶೇ. 4ರಷ್ಟಿದೆ.

ಅರ್ಧಕ್ಕಿಂತ ಕಡಿಮೆ ಬೆಲೆಗೆ ರಫ್ತು:ಕೆಲ ತಿಂಗಳ ಹಿಂದೆ ಆರ್​ಟಿಐ ಅರ್ಜಿಯ ಮೇರೆಗೆ ಸರಕಾರದಿಂದಲೇ ಬಂದ ಮಾಹಿತಿ ಪ್ರಕಾರ ಭಾರತವು ಪೆಟ್ರೋಲ್ ಅನ್ನು ಲೀಟರ್​ಗೆ 32-34 ರೂ ದರದಂತೆ ಬೇರೆ ರಾಷ್ಟ್ರಗಳಿಗೆ ರಫ್ತು ಮಾಡುತ್ತಿತ್ತು. ಆ ಸಂದರ್ಭದಲ್ಲಿ ಭಾರತದೊಳಗೆ ಪೆಟ್ರೋಲ್ ಬೆಲೆ ಹೆಚ್ಚೂಕಡಿಮೆ 70 ರೂಪಾಯಿ ಇತ್ತು. ಇದಕ್ಕೆ ಕಾರಣ ದೇಶೀಯವಾಗಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಸರಕಾರಗಳು ವಿಧಿಸುವ ವಿವಿಧ ತೆರಿಗೆಗಳಾಗಿವೆ. ಇದು ಸಹಜವೇ. ಇದರಲ್ಲಿ ಯಾವುದೇ ಅಚ್ಚರಿ ಇಲ್ಲ.

ಬೆಲೆ ನಿರ್ಧಾರ ಹೇಗೆ?

ಈ ಲೇಖನದ ಆರಂಭದಲ್ಲಿ ತಿಳಿಸಿದಂತೆ ಅಕ್ಟೋಬರ್ 18ರಿಂದೀಚೆ ಅಂತಾರಾಷ್ಟ್ರೀಯ ಕಚ್ಛಾ ತೈಲ ಬೆಲೆಗಳು ಶೇ. 30-32ರಷ್ಟು ಇಳಿದಿವೆ. ಆದರೆ ಪೆಟ್ರೋಲ್ ಬೆಲೆ ಶೇ. 7-11 ಮಾತ್ರ ಇಳಿಕೆ ಕಂಡಿದೆ. ಅದಕ್ಕೆ ಒಂದು ಪ್ರಮುಖ ಕಾರಣವೆಂದರೆ, ತೈಲ ಕಂಪನಿಗಳು ಕಳೆದ 15 ದಿನಗಳ ಕಚ್ಛಾ ತೈಲ ಬೆಲೆಯ ಸರಾಸರಿ ಪಡೆದು ಬೆಲೆ ನಿಗದಿ ಮಾಡುತ್ತದೆ. ಹೀಗಾಗಿ, ಅಂತಾಷ್ಟ್ರೀಯ ತೈಲ ಮಾರುಕಟ್ಟೆಯ ಹಾಲಿ ದರವು ತತ್​ಕ್ಷಣಕ್ಕೆ ಇಲ್ಲಿ ಪ್ರತಿಫಲಿತವಾಗುವುದಿಲ್ಲ.

ತೈಲ ಸಂಸ್ಕರಣೆ ಸಂಸ್ಥೆಗಳು ಮಾಡುವ ಬೆಲೆ ನಿರ್ಧಾರಕ್ಕೆ ಒಂದು ಕ್ರಮವಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಪೋರ್ಟ್ ಪ್ಯಾರಿಟಿ ಪ್ರೈಸ್(ಐಪಿಪಿ) ಮತ್ತು ಎಕ್ಸ್​ಪೋರ್ಟ್ ಪ್ಯಾರಿಟಿ ಪ್ರೈಸ್(ಇಪಿಪಿ) ಲೆಕ್ಕಾಚಾರಗಳಿರುತ್ತವೆ. ಇಂಪೋರ್ಟ್ ಪ್ಯಾರಿಟಿ ಪ್ರೈಸ್ ಎಂದರೆ ಒಂದು ಉತ್ಪನ್ನವನ್ನು ಆಮದು ಮಾಡಿಕೊಳ್ಳುವಾಗ ಕೊಡುವ ದರವಾಗಿರುತ್ತದೆ. ಇದರಲ್ಲಿ ಸಾಗಣೆ ವೆಚ್ಚ, ಬಂದರು ತೆರಿಗೆ, ಕಸ್ಟಮ್ ಡ್ಯೂಟಿ ಇತ್ಯಾದಿಗಳೂ ಒಳಗೊಂಡಿರುತ್ತವೆ. ಹಾಗೆಯೇ ಎಕ್ಸ್​ಪೋರ್ಟ್ ಪ್ಯಾರಿಟಿ ಪ್ರೈಸ್ ಎಂದರೆ ಒಂದು ಉತ್ಪನ್ನವನ್ನು ರಫ್ತು ಮಾಡಿದಾಗ ಸಿಗುವ ದರವಾಗಿರುತ್ತದೆ. ಕಚ್ಛಾ ತೈಲವನ್ನು ವಿವಿಧ ಉತ್ಪನ್ನಗಳಾಗಿ ಸಂಸ್ಕರಿಸಲು ಕೇಂದ್ರ ಸರಕಾರವು ಐಪಿಪಿ ಮತ್ತು ಇಪಿಪಿಯ ಆಧಾರವಾಗಿಟ್ಟುಕೊಂಡು ಒಂದು ಬೆಲೆ ನಿಗದಿ ಮಾಡುತ್ತದೆ. ಇದರಲ್ಲಿ ಐಪಿಪಿಯ ತೂಕವೇ ಮುಕ್ಕಾಲು ಪಾಲು ಇರುತ್ತದೆ. ಕಚ್ಛಾ ತೈಲ ಆಮದು ಮಾಡಿಕೊಂಡು ಅದನ್ನು ಸಂಸ್ಕರಣೆ ಮಾಡುವ ವೆಚ್ಚವನ್ನು ತೈಲ ಕಂಪನಿಗಳ ತಗ್ಗಿಸಿ ಲಾಭ ಮಾಡಿಕೊಳ್ಳಬಹುದಾಗಿದೆ.

ಇನ್ನು, ಕೇಂದ್ರ ಮತ್ತು ರಾಜ್ಯಗಳು ಪ್ರತಿಶತದ ಆಧಾರದ ಮೇಲೆ ತೆರಿಗೆಗಳನ್ನು ವಿಧಿಸುತ್ತವೆ. ಅಂದರೆ, ಪೆಟ್ರೋಲ್ ಬೆಲೆ ಹೆಚ್ಚಾದಷ್ಟು ತೆರಿಗೆಗಳ ಪ್ರಮಾಣ ಹೆಚ್ಚಾಗುತ್ತದೆ. ಸರಕಾರಗಳು ಭಾರೀ ಲಾಭ ಮಾಡಿಕೊಳ್ಳುತ್ತವೆ. ಒಂದು ವೇಳೆ ನಿರ್ದಿಷ್ಟ ಮೊತ್ತದ ರೂಪದಲ್ಲಿ ತೆರಿಗೆ ವಿಧಿಸಿದರೆ ಸಿಗುವ ಲಾಭ ಒಂದು ಸೀಮಿತ ಪ್ರಮಾಣವಾಗಿರುತ್ತದೆ. ಶೇಕಡಾವಾರು ಲೆಕ್ಕದಲ್ಲಿ ಹಾಕುವ ಈ ತೆರಿಗೆಯು ಸರಕಾರದ ಬೊಕ್ಕಸ ತುಂಬುವ ಪ್ರಮುಖ ಆದಾಯ ಮೂಲವಾಗಿದೆ.
First published:November 26, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ