ನಿಗೂಢ ಬೆಳವಣಿಗೆಗಳು: ಅಜಿತ್ ಪವಾರ್​ಗೆ ಎನ್​ಸಿಪಿ ಶಾಸಕರ ಬೆಂಬಲ ಪತ್ರ ಸಿಕ್ಕಿದ್ದು ಹೇಗೆ? ಶರದ್ ಪವಾರ್ ನಂಬಿಕಸ್ಥ ಶಿವಾಜಿರಾವ್ ಪಾತ್ರ ಏನು?

ಅಜಿತ್ ಪವಾರ್ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಲಿಲ್ಲ. ಅಂದು ಅಜಿತ್ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಲು ಕರೆದಿದ್ದ ಸಭೆಗೆ ಬಂದಿದ್ದ ಶಾಸಕರ ಹಾಜರಾತಿ ಪಟ್ಟಿ ಅದಾಗಿತ್ತು ಎನ್ನುತ್ತವೆ ಮೂಲಗಳು.

Vijayasarthy SN | news18
Updated:November 24, 2019, 5:36 PM IST
ನಿಗೂಢ ಬೆಳವಣಿಗೆಗಳು: ಅಜಿತ್ ಪವಾರ್​ಗೆ ಎನ್​ಸಿಪಿ ಶಾಸಕರ ಬೆಂಬಲ ಪತ್ರ ಸಿಕ್ಕಿದ್ದು ಹೇಗೆ? ಶರದ್ ಪವಾರ್ ನಂಬಿಕಸ್ಥ ಶಿವಾಜಿರಾವ್ ಪಾತ್ರ ಏನು?
ಅಜಿತ್ ಪವಾರ್ ಮತ್ತು ದೇವೇಂದ್ರ ಫಡ್ನವಿಸ್
  • News18
  • Last Updated: November 24, 2019, 5:36 PM IST
  • Share this:
ಮುಂಬೈ(ನ. 24): ನಿನ್ನೆಯ ದಿಢೀರ್ ಬೆಳವಣಿಗೆಯಲ್ಲಿ ಎನ್​ಸಿಪಿ ಬಂಡಾಯಗಾರ ಅಜಿತ್ ಪವಾರ್ ಅವರು ಬಿಜೆಪಿ ಜೊತೆ ಕೈಜೋಡಿಸಿ ಸರ್ಕಾರ ರಚನೆಗೆ ಕಾರಣವಾಗಿದ್ದರು. ತಮ್ಮ ಪಕ್ಷದ ಎಲ್ಲಾ ಶಾಸಕರ ಸಹಿ ಇರುವ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದರು. ಹೀಗಾಗಿಯೇ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು ಬಿಜೆಪಿಯನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ದೇವೇಂದ್ರ ಫಡ್ನವಿಸ್ ಮತ್ತೊಮ್ಮೆ ಸಿಎಂ ಆದರೆ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೊನ್ನೆ ರಾತ್ರಿಯವರೆಗೂ ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆಗೆ ರೂಪುರೇಖೆ ಹಾಕುತ್ತಲೇ ಇದ್ದ ಶಿವಸೇನಾ, ಎನ್​ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಬೆಳ್ಳಂಬೆಳಗ್ಗೆಯೇ ಮರ್ಮಾಘಾತವಾಯಿತು.

ಅಜಿತ್ ಪವಾರ್ ಅವರಿಗೆ ಎನ್​ಸಿಪಿ ಶಾಸಕರ ಬೆಂಬಲ ಪತ್ರ ಹೇಗೆ ಸಿಕ್ಕಿತು ಎಂಬುದೇ ಸಸ್ಪೆನ್ಸ್ ಆಗಿ ಉಳಿದಿದೆ. ಎನ್​ಸಿಪಿ ಮುಖ್ಯಸ್ಥ ಹಾಗೂ ಅಜಿತ್ ಪವಾರ್ ಚಿಕ್ಕಪ್ಪ ಶರದ್ ಪವಾರ್ ಅವರ ಮೇಲೆಯೇ ಸಂಶಯದ ನೋಟಗಳು ನೆಟ್ಟವು. ಆದರೆ, ಅಣ್ಣನ ಮಗನ ಕೈಂಕರ್ಯದಲ್ಲಿ ಶರದ್ ಪವಾರ್ ಪಾತ್ರವೇನೂ ಇಲ್ಲ ಎನ್ನುತ್ತವೆ ಎನ್​ಸಿಪಿ ಮೂಲಗಳು.

ಇದನ್ನೂ ಓದಿ: ಮಹಾರಾಷ್ಟ್ರ ಅಂತಿಮ ತೀರ್ಪು ಸೋಮವಾರಕ್ಕೆ ಮುಂದೂಡಿದ ಸುಪ್ರೀಂ: ರಾಷ್ಟ್ರಪತಿ ಆದೇಶ ಹಿಂಪಡೆದ ಪ್ರತಿ ಸಲ್ಲಿಸುವಂತೆ ಸೂಚನೆ

ಬಿಜೆಪಿ ಹೇಳುವ ಪ್ರಕಾರ ಅಕ್ಟೋಬರ್ 30ರಂದೇ ಅಜಿತ್ ಪವಾರ್ ಅವರನ್ನು ಎನ್​ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಅದೇ ಸ್ಥಾನದಲ್ಲಿ ಅವರು ಶಾಸಕರ ಬೆಂಬಲವಿರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆನ್ನಲಾಗಿದೆ. ಆದರೆ, ರಾಜ್ಯಪಾಲರಿಗೆ ಅಜಿತ್ ಪವಾರ್ ಸಲ್ಲಿಸಿದ ಪತ್ರ ಯಾವುದು, ದಾಖಲೆಗಳು ಯಾವುವು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

ಶಿವಾಜಿರಾವ್ ಗಾರ್ಜೆ ಪಾತ್ರವೇನು?

ಎನ್​ಸಿಪಿ ಶಾಸಕಾಂಗ ಪಕ್ಷದ ನಾಯಕನಾಗಿ ಅಜಿತ್ ಪವಾರ್ ಅವರನ್ನು ಆಯ್ಕೆ ಮಾಡಲಾದ ಪತ್ರವು ಮುಂಬೈನಲ್ಲಿರುವ ಪಕ್ಷದ ಕಚೇರಿಯಲ್ಲೇ ಇತ್ತೆನ್ನಲಾಗಿದೆ. ಮೊನ್ನೆ ಶುಕ್ರವಾರ ರಾತ್ರಿ ಅಜಿತ್ ಪವಾರ್ ಅವರು ಈ ಪತ್ರವನ್ನ ಪಡೆಯಲು ಮುಂಬೈ ಕಚೇರಿಗೆ ಹೋಗಿದ್ದರು. ಪಕ್ಷದ ಇಂಥ ವ್ಯವಹಾರಗಳನ್ನೆಲ್ಲಾ ನೋಡಿಕೊಳ್ಳುವುದು ಶಿವಾಜಿ ರಾವ್ ಗಾರ್ಜೆ ಎಂಬುವರು. ಅಂದು ಅಜಿತ್ ಪವಾರ್ ಕೇಳಿದಾಕ್ಷಣ ಶಿವಾಜಿ ರಾವ್ ಈ ಪತ್ರವನ್ನು ಕೊಟ್ಟುಬಿಟ್ಟಿರುತ್ತಾರೆ.

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್​ಸಿಪಿ)ದ ಆಡಳಿತ ವ್ಯವಹಾರಗಳನ್ನ ನೋಡಿಕೊಳ್ಳುವುದು ಶಿವಾಜಿ ರಾವ್ ಗಾರ್ಜೆ ಎಂಬುವರು. ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ನಂಬುಗೆಯ ವ್ಯಕ್ತಿಯಾಗಿರುವ ಶಿವಾಜಿರಾವ್ ಅವರು ಸರ್ಕಾರಿ ಸೇವೆಯಲ್ಲಿದ್ದು ಸ್ವಯಂ ನಿವೃತ್ತಿ ಪಡೆದವರು. ಶರದ್ ಪವಾರ್ ಜೊತೆ ಆತ್ಮೀಯವಾಗಿರುವ ಅವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಶುಕ್ರವಾರ ಶಿವಸೇನಾ, ಎನ್​ಸಿಪಿ ಮತ್ತು ಕಾಂಗ್ರೆಸ್ ಮಧ್ಯೆ ನಿರಂತರ ಮಾತುಕತೆಗಳು ನಡೆದಿದ್ದವು. ಚುನಾವಣೋತ್ತರ ಮೈತ್ರಿಕೂಟ ರಚನೆಗೆ ಅಂತಿಮ ರೂಪ ಸಿಕ್ಕಿತ್ತು. ಶನಿವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಘೋಷಣೆ ಮಾಡಿ ಆ ಬಳಿಕ ರಾಜ್ಯಪಾಲರನ್ನು ಭೇಟಿಯಾಗಿ ಮೂರೂ ಪಕ್ಷಗಳ ಬೆಂಬಲ ಪತ್ರವನ್ನು ಕೊಡಬೇಕೆಂದು ತೀರ್ಮಾನವಾಗಿತ್ತು. ಅದರಂತೆ ಶುಕ್ರವಾರ ರಾತ್ರಿ ಅಜಿತ್ ಪವಾರ್ ಅವರು ಮುಂಬೈ ಕಚೇರಿಯಲ್ಲಿ ಬೆಂಬಲ ಪತ್ರವನ್ನು ಕೇಳಿದಾಗ ಶಿವಾಜಿರಾವ್​ಗೆ ಅನುಮಾನ ಬರಲಿಲ್ಲ. ನಾಳೆ ರಾಜ್ಯಪಾಲರಿಗೆ ಕೊಡಲು ಈ ಪತ್ರ ಕೇಳಿರಬಬಹುದೆಂದು ಭಾವಿಸಿದರು. ಶರದ್ ಪವಾರ್ ಬಳಿಯೂ ಅವರು ಕ್ರಾಸ್ ಚೆಕ್ ಮಾಡಲಿಲ್ಲ. ಹಾಗೆ ಮಾಡಿದ್ದರೆ ಅಜಿತ್ ಪವಾರ್ ಬೆಳ್ಳಂಬೆಳಗ್ಗೆ ಶಾಕ್ ಕೊಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತವೆ ಎನ್​ಸಿಪಿ ಮೂಲಗಳು.ಇದನ್ನೂ ಓದಿ: ನ.23 ಮಹಾರಾಷ್ಟ್ರ ಇತಿಹಾಸದಲ್ಲೇ ಕರಾಳ ದಿನ; ಶಿವಸೇನೆ ಮುಖ್ಯ ವಕ್ತಾರ ಸಂಜಯ್​ ರಾವತ್

ಶನಿವಾರ ಬೆಳಗ್ಗೆ ರಾಜ್ಯಪಾಲರು ಬಿಜೆಪಿಗೆ ಅಧಿಕಾರ ರಚನೆಗೆ ಆಹ್ವಾನ ಕೊಟ್ಟಾಗ ಮತ್ತು ಫಡ್ನವಿಸ್ ಹಾಗೂ ಅಜಿತ್ ಪವಾರ್ ಸಿಎಂ, ಡಿಸಿಎಂ ಆದಾಗಲೇ ಶಿವಾಜಿರಾವ್​ಗೆ ನಿನ್ನೆಯ ಘಟನೆಯ ಒಳಸುಳಿವು ಸಿಕ್ಕಿದ್ದು.

ಇನ್ನೂ ಕೆಲ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಅಜಿತ್ ಪವಾರ್ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ನೀಡಲಿಲ್ಲ. ಅಂದು ಅಜಿತ್ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಲು ಕರೆದಿದ್ದ ಸಭೆಗೆ ಬಂದಿದ್ದ ಶಾಸಕರ ಹಾಜರಾತಿ ಪಟ್ಟಿ ಅದಾಗಿತ್ತು. ಸಭೆಯಲ್ಲಿ ಪಾಲ್ಗೊಂಡ ಎಲ್ಲಾ ಶಾಸಕರ ಸಹಿ ಇದರಲ್ಲಿದ್ದವು. ಇದನ್ನೇ ಅಜಿತ್ ಪವಾರ್ ಅವರು ರಾಜ್ಯಪಾಲರಿಗೆ ಸಲ್ಲಿಸಿದ್ದು ಎನ್ನುತ್ತವೆ ಈ ಮೂಲಗಳು.

ಈ ಬೆಳವಣಿಗೆ ನಡೆದ ಬೆನ್ನಲ್ಲೇ ಎನ್​ಸಿಪಿ ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ಅಜಿತ್ ಪವಾರ್ ಅವರನ್ನು ತೆಗೆದುಹಾಕಲಾಯಿತು. ಅವರ ಜಾಗಕ್ಕೆ ಜಯಂತ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಯಿತು. ಇದೇ ವೇಳೆ, ಶಿವಸೇನಾ ಪಕ್ಷವು ರಾಜ್ಯಪಾಲರು ಬಿಜೆಪಿಗೆ ಅಧಿಕಾರ ಕೊಟ್ಟ ಕ್ರಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು. ರಾಜ್ಯಪಾಲರ ಆದೇಶದ ಪತ್ರವನ್ನು ನಾಳೆಯೊಳಗೆ ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ನಾಳೆ, ಸುಪ್ರೀಂ ಕೋರ್ಟ್ ತೀರ್ಪು ಕೊಡುವ ಸಾಧ್ಯತೆ ಇದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:November 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ