ನಿರ್ಭಯಾ ಅತ್ಯಾಚಾರಿಗಳನ್ನ ಮನ್ನಿಸಿ ಎಂದ ವಕೀಲೆ ಇಂದಿರಾ ಜೈಸಿಂಗ್ ವಿರುದ್ಧ ತಾಯಿ ಆಕ್ರೋಶ

ರಾಜೀವ್ ಗಾಂಧಿ ಹಂತಕರನ್ನು ಸೋನಿಯಾ ಗಾಂಧಿ ಕ್ಷಮಿಸಿದಂತೆ ನಿಮ್ಮ ಮಗಳ ಹತ್ಯೆ ಮಾಡಿದವರನ್ನೂ ಕ್ಷಮಿಸಿರಿ. ನಾವೆಲ್ಲಾ ನಿಮ್ಮೊಂದಿಗಿದ್ದೇವೆ. ಆದರೆ, ಮರಣದಂಡನೆ ಶಿಕ್ಷೆಗೆ ವಿರುದ್ಧವಿದ್ದೇವೆ ಎಂದು ಇಂದಿರಾ ಜೈಸಿಂಗ್ ಹೇಳಿದ್ದಾರೆ.

news18
Updated:January 18, 2020, 1:20 PM IST
ನಿರ್ಭಯಾ ಅತ್ಯಾಚಾರಿಗಳನ್ನ ಮನ್ನಿಸಿ ಎಂದ ವಕೀಲೆ ಇಂದಿರಾ ಜೈಸಿಂಗ್ ವಿರುದ್ಧ ತಾಯಿ ಆಕ್ರೋಶ
ನಿರ್ಭಯಾ ತಾಯಿ ಆಶಾ ದೇವಿ
  • News18
  • Last Updated: January 18, 2020, 1:20 PM IST
  • Share this:
ನವದೆಹಲಿ(ಜ. 18): ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗಳನ್ನು ಗಲ್ಲಿಗೇರಿಸುವುದು ವಿಳಂಬವಾಗುತ್ತಿದೆ ಎಂದು ಆಕೆಯ ತಾಯಿ ಪರಿತಪಿಸುತ್ತಿರುವ ಹೊತ್ತಲ್ಲೇ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಕ್ಷಮೆಯ ಸಲಹೆ ನೀಡಿದ್ಧಾರೆ. ರಾಜೀವ್ ಗಾಂಧಿ ಹಂತಕರನ್ನು ಸೋನಿಯಾ ಗಾಂಧಿ ಕ್ಷಮಿಸಿದ ರೀತಿಯಲ್ಲೇ ನಿರ್ಭಯಾ ಪ್ರಕರಣದಲ್ಲಿ ಅಪರಾಧಿಗಳನ್ನು ಮನ್ನಿಸಿ ಎಂದು ಆಕೆಯ ತಾಯಿ ಆಶಾ ದೇವಿ ಅವರಿಗೆ ಜೈಸಿಂಗ್ ಮನವಿ ಮಾಡಿದ್ಧಾರೆ. ಆದರೆ, ಹಿರಿಯ ವಕೀಲೆಯ ಈ ಸಲಹೆಗೆ ಆಶಾ ದೇವಿ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

“ಇಂಥ ಸಲಹೆ ಕೊಡಲು ಇಂದಿರಾ ಜೈಸಿಂಗ್ ಯಾರು? ಅಪರಾಧಿಗಳನ್ನು ಗಲ್ಲಿಗೇರಿಸಬೇಕು ಎಂದು ಇಡೀ ದೇಶವೇ ಬಯಸುತ್ತಿದೆ. ಇಂಥ ಮಾತುಗಳನ್ನಾಡುವ ಧೈರ್ಯವಾದರೂ ಎಲ್ಲಿಂದ ಬಂತು ಎಂದು ಗೊತ್ತಿಲ್ಲ. ಆಕೆಯನ್ನು ಸುಪ್ರೀಂ ಕೋರ್ಟ್​ನಲ್ಲಿ ಹಲವು ಬಾರಿ ಭೇಟಿಯಾಗಿದ್ದೇನೆ. ಒಮ್ಮೆಯೂ ಆಕೆ ನನ್ನ ಯೋಗಕ್ಷೇಮ ವಿಚಾರಿಸಿದವರಲ್ಲ ಇವತ್ತು ಆಕೆ ದೋಷಿಗಳ ಪರ ಮಾತನಾಡುತ್ತಿದ್ದಾರೆ. ಇಂಥ ವ್ಯಕ್ತಿಗಳು ಅತ್ಯಾಚಾರಿಗಳನ್ನು ಬೆಂಬಲಿಸಿಕೊಂಡು ಬದುಕು ನಡೆಸುತ್ತಾರೆ. ಹೀಗಾಗಿ, ಅತ್ಯಾಚಾರ ಘಟನೆಗಳು ನಿಲ್ಲುವುದಿಲ್ಲ” ಎಂದು ನಿರ್ಭಯಾಳ ತಾಯಿ ಆಶಾ ದೇವಿ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕೇರಳಿಗರು ರಾಹುಲ್ ಗಾಂಧಿಯನ್ನು ಮತ್ತೊಮ್ಮೆ ಗೆಲ್ಲಿಸಿದರೆ ಮೋದಿಗೇ ಲಾಭ: ರಾಮಚಂದ್ರ ಗುಹಾ

“ಇಲ್ಲಿಯವರೆಗೆ ನಾನು ರಾಜಕಾರಣದ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಆದರೆ, ಈಗ ಮಾತನಾಡಬೇಕಿದೆ. 2012ರಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಆ ಜನರೇ ಇವತ್ತು ನನ್ನ ಮಗಳ ಸಾವಿನ ವಿಚಾರದಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ಧಾರೆ” ಎಂದು ಆಶಾ ದೇವಿ ಅವರು ನಿನ್ನೆಯೂ ಹೇಳಿಕೆ ನೀಡಿದ್ದರು.

ಇವರ ಈ ಹೇಳಿಕೆಗೆ  ಪ್ರತಿಕ್ರಿಯೆಯಾಗಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ಕ್ಷಮಾದಾನದ ಸಲಹೆ ನೀಡಿದ್ದಾರೆ.

“ಆಶಾ ದೇವಿ ಅವರ ನೋವು ನನಗೆ ಸಂಪೂರ್ಣವಾಗಿ ಅರಿವಿದೆ. ನಳಿನಿ (ರಾಜೀವ್ ಗಾಂಧಿ ಹಂತಕಿ) ಅವರನ್ನು ಕ್ಷಮಿಸಿದ ಸೋನಿಯಾ ಗಾಂಧಿ ಅವರ ಉದಾಹರಣೆಯನ್ನು ಆಕೆ ಅನುಸರಿಸಬೇಕು. ನಾವೆಲ್ಲಾ ನಿಮ್ಮೊಂದಿಗೆ ಇದ್ದೇವೆ. ಆದರೆ, ಮರಣ ದಂಡನೆ ಶಿಕ್ಷೆಗೆ ವಿರುದ್ಧವಾಗಿದ್ಧೇವೆ” ಎಂದು ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದಾರೆ.

ನಿರ್ಭಯಾ ಪ್ರಕರಣದಲ್ಲಿ ಮರಣದಂಡನೆ ವಿಚಾರ ಚರ್ಚೆಗೆ ಬರುತ್ತಿರುವಂತೆಯೇ ಕೆಲ ವರ್ಗಗಳ ಜನರು ಮರಣದಂಡನೆ ಶಿಕ್ಷೆಯೇ ಅಮಾನುಷ ಎಂದು ವಾದ ಮುಂದಿಟ್ಟಿದ್ಧಾರೆ. ಪ್ರಾಣ ತೆಗೆಯುವುದು ಮಾನವತೆಗೆ ವಿರುದ್ಧವಾದುದು. ಎಂಥದ್ದೇ ಅಪರಾಧಿಗೂ ಸಾಯಿಸುವ ಶಿಕ್ಷೆ ನೀಡಬಾರದು. ಮರಣದಂಡನೆ ಶಿಕ್ಷೆಯನ್ನೇ ನ್ಯಾಯಾಲಯದ ತೀರ್ಪಿನಿಂದ ತೆಗೆದುಹಾಕಬೇಕು ಎಂಬುದು ಇವರ ಆಗ್ರಹವಾಗಿದೆ. ಇಂಥ ವಾದ ಮುಂದಿಡುತ್ತಿರುವವರಲ್ಲಿ ಇಂದಿರಾ ಜೈಸಿಂಗ್ ಅವರೂ ಒಬ್ಬರು.ಇದನ್ನೂ ಓದಿ: ರಾಮನ ಫೋಟೋಗೆ ಚಪ್ಪಲಿ ಹಾರ; ಪೆರಿಯಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ರಜನಿಕಾಂತ್​ ವಿರುದ್ಧ ದೂರು ದಾಖಲು

2012ರಲ್ಲಿ ‘ನಿರ್ಭಯಾ’ (ಹೆಸರು ಬದಲಾಯಿಸಲಾಗಿದೆ) ಮೇಲೆ 6 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ ಅಮಾನುಷವಾಗಿ ಘಾಸಿಗೊಳಿಸಿ ಚಲಿಸುವ ಬಸ್ಸಿನಿಂದ ಹೊರಗೆಸೆದು ಹೋಗಿದ್ದರು. ಈ 23 ವರ್ಷದ ಅರೆವೈದ್ಯಕೀಯ ವಿದ್ಯಾರ್ಥಿನಿ ಕೆಲವು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಇಹಲೋಕ ತ್ಯಜಿಸಿದ್ದರು. ಈ ಆರು ಮಂದಿಯಲ್ಲಿ ಒಬ್ಬ ಅಪ್ರಾಪ್ತ ವಯಸ್ಕನಾಗಿದ್ದ. ಈತನನ್ನು ಬಾಲಾಪರಾಧ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಿ 2015ರಲ್ಲಿ ಬಿಡುಗಡೆಗೊಳಿಸಲಾಯಿತು. ಇನ್ನು, ರಾಮ್ ಸಿಂಗ್ ಎಂಬ ಪ್ರಮುಖ ಆರೋಪಿ ತಿಹಾರ್ ಜೈಲಿನಲ್ಲಿ ನೇಣಿಗೆ ಶರಣಾದ. 2013ರಲ್ಲಿ ದೆಹಲಿಯ ಟ್ರಯಲ್ ಕೋರ್ಟ್​ವೊಂದು ಪ್ರಕರಣದಲ್ಲಿ ತೀರ್ಪು ನೀಡಿ ನಾಲ್ವರನ್ನು ದೋಷಿಗಳೆಂದು ಪರಿಗಣಿಸಿ ಮರಣದಂಡನೆ ಶಿಕ್ಷೆ ವಿಧಿಸಿತು. 2014ರಲ್ಲಿ ದೆಹಲಿ ಹೈಕೋರ್ಟ್ ಹಾಗೂ 2017ರಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿಹಿಡಿದವು. ನಾಲ್ವರು ದೋಷಿಗಳು ಮೇಲ್ಮನವಿಗಳು ಹಾಗೂ ಕ್ಷಮಾದಾನ ಅರ್ಜಿಗಳನ್ನು ಹಾಕುತ್ತಿದ್ದ ಹಿನ್ನೆಲೆಯಲ್ಲಿ ನೇಣಿಗೇರಿಸುವ ಕಾರ್ಯ ವಿಳಂಬವಾಗುತ್ತಾ ಬಂದಿದೆ. ಸುಪ್ರೀಂ ಕೋರ್ಟ್​​ನಲ್ಲಿ ಇವರ ಎಲ್ಲಾ ಮೇಲ್ಮನವಿಗಳು ತಿರಸ್ಕೃತಗೊಂಡಿವೆ. ರಾಷ್ಟ್ರಪತಿಗಳೂ ಕೂಡ ಇವರ ಕ್ಷಮಾದಾನ ಕೋರಿಕೆಯನ್ನು ತಿರಸ್ಕಾರ ಮಾಡಿದ್ಧಾರೆ. ಡೆಲ್ಲಿ ನ್ಯಾಯಾಲಯವೊಂದು ಈಗಾಗಲೇ ಇವರಿಗೆ ಡೆತ್ ವಾರೆಂಟ್ ಹೊರಡಿಸಿದೆ. ಫೆಬ್ರವರಿಯ ಪ್ರಾರಂಭದಲ್ಲಿ ಇವರನ್ನು ನೇಣಿಗೇರಿಸುವುದು ಬಹುತೇಕ ಖಚಿತವಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ