Ashwini Vaishnav - ಎರಡು ವರ್ಷ ಹಿಂದಷ್ಟೇ ರಾಜಕೀಯಕ್ಕೆ ಅಡಿ ಇಟ್ಟ ಅಶ್ವಿನಿ ವೈಭವ್ ಕೇಂದ್ರ ಸಂಪುಟ ಸೇರಿದ್ದು ಹೇಗೆ?

50 ವರ್ಷದ ಅಶ್ವಿನ್ ವೈಷ್ಣವ್ ಅವರಿಗೆ ಮೋದಿ ಸರ್ಕಾರ ಇಂಥದ್ದೊಂದು ಜವಾಬ್ದಾರಿ ನೀಡುವ ನಿರ್ಧಾರ ಮಾಡಿದ್ದು ದಿಢೀರ್ ಅಲ್ಲ. ಎರಡು ವರ್ಷದ ಹಿಂದೆಯೇ ಬಹಳ ಲೆಕ್ಕಾಚಾರ ಹಾಕಿ ಅವರನ್ನ ಪರಿಗಣಿಸಲಾಗಿತ್ತು ಎನ್ನಲಾಗಿದೆ.

ಅಶ್ವಿನಿ ವೈಷ್ಣವ್ ಜೊತೆ ಪ್ರಧಾನಿ ಮೋದಿ

ಅಶ್ವಿನಿ ವೈಷ್ಣವ್ ಜೊತೆ ಪ್ರಧಾನಿ ಮೋದಿ

  • News18
  • Last Updated :
  • Share this:
ನವದೆಹಲಿ(ಜುಲೈ 08): ನಿನ್ನೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ಪುನಾರಚನೆಯಲ್ಲಿ ಹಲವು ಅಚ್ಚರಿಗಳನ್ನ ಕಾಣಬಹುದು. ಹರ್ಷ್ ವರ್ಧನ್, ರವಿಶಂಕರ್ ಪ್ರಸಾದ್ ಅವರಂಥ ಹಿರಿಯ ಅನುಭವಿಗಳ ನಿರ್ಗಮನದ ಜೊತೆಗೆ ಹೊಸ ಮುಖಗಳು ಸಂಪುಟ ಸೇರಿದ್ದು ಬಹಳಷ್ಟು ಮಂದಿಗೆ ಅಚ್ಚರಿ ಮೂಡಿಸಿದೆ. ಎಲ್ಲಕ್ಕಿಂತ ಅಚ್ಚರಿ ಮತ್ತು ಶ್ಲಾಘನೆ ವ್ಯಕ್ತವಾಗಿದ್ದು ಅಶ್ವಿನಿ ವೈಷ್ಣವ್ ಅವರ ಆಯ್ಕೆ. ಈ ಅಚ್ಚರಿ ಆಯ್ಕೆಯ ಹಿಂದೆ ಹಲವು ನಿರೀಕ್ಷೆ, ನಂಬಿಕೆಗಳಿವೆ. ಅತ್ಯುತ್ತಮ ಶಿಕ್ಷಣ, ಐಎಎಸ್ ಅಧಿಕಾರ, ಕಾರ್ಪೊರೇಟ್ ಜಗತ್ತಿನ ಅನುಭವ, ಸ್ವಂತ ಉದ್ದಿಮೆಯ ಅನುಭವ ಇವೆಲ್ಲವೂ ಅಶ್ವಿನಿ ವೈಷ್ಣವ್ ಅವರನ್ನ ಮೋದಿ ಸಂಪುಟಕ್ಕೆ ಕೊಂಡೊಯ್ದಿವೆ. ಒಮ್ಮೆಯೂ ಸಚಿವರಾಗಿ ಅನುಭವ ಇಲ್ಲದ, ಹಾಗೂ ಎರಡು ವರ್ಷದ ಹಿಂದಷ್ಟೇ ಬಿಜೆಪಿ ಸೇರಿದ್ದ ಅಶ್ವಿನಿ ಅವರಿಗೆ ಪ್ರಧಾನಿ ಮೋದಿ ಅವರು ರೈಲ್ವೆ ಖಾತೆ, ಸಂವಹನ ಖಾತೆ ಮತ್ತು ಎಲೆಕ್ಟ್ರಾನಿಕ್ಸ್ ಮಾಹಿತಿ ತಂತ್ರಜ್ಞಾನ ಖಾತೆಗಳಂಥ ಮಹತ್ತರ ಜವಾಬ್ದಾರಿ ನೀಡಿದ್ದಾರೆ. ಒಮ್ಮೆಲೇ ಅವರಿಗೆ ಸಂಪುಟ ದರ್ಜೆಯ ಮಂತ್ರಿ ಮಾಡಿದ್ದಾರೆ.

50 ವರ್ಷದ ಅಶ್ವಿನ್ ವೈಷ್ಣವ್ ಅವರಿಗೆ ಮೋದಿ ಸರ್ಕಾರ ಇಂಥದ್ದೊಂದು ಜವಾಬ್ದಾರಿ ನೀಡುವ ನಿರ್ಧಾರ ಮಾಡಿದ್ದು ದಿಢೀರ್ ಅಲ್ಲ. ಎರಡು ವರ್ಷದ ಹಿಂದೆಯೇ ಇದರ ಲೆಕ್ಕಾಚಾರ ಹಾಕಿಯಾಗಿತ್ತು. ಈಗ ಸಮಯಾವಕಾಶ ಮತ್ತು ಸಂದರ್ಭ ಬಂದಿದೆ. ಅಂದಹಾಗೆ, ರಾಜಸ್ಥಾನ ಸಂಜಾತ ಅಶ್ವಿನಿ ವೈಷ್ಣವ್ ಅವರು ಎಂಜಿನಿಯರಿಂಗ್ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದರು. ಐಐಟಿ ಕಾನ್​ಪುರ್​ನಲ್ಲಿ ಎಂಟೆಕ್ ಮಾಡಿದರು. ನಂತರ 1994ರಲ್ಲಿ ಅವರು ಐಎಎಸ್ ಕೂಡ ಮಾಡಿದರು. ಐಎಎಸ್​ನಲ್ಲಿ ಅವರು ಪಡೆದ ರ್ಯಾಂಕ್ 27.

ಐಎಎಸ್​ಗೆ ಆಯ್ಕೆಯಾದ ನಂತರ ಅವರು ಒಡಿಶಾದ ಬಲಾಸೋರ್ ಮತ್ತು ಕಟಕ್​ನಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದರು. 1999ರಲ್ಲಿ ಒಡಿಶಾಗೆ ಸೂಪರ್ ಸೈಕ್ಲೋನ್ ಆರ್ಭಟ ಮಾಡಿದ ಸಂದರ್ಭದಲ್ಲಿ ಅಶ್ವಿನಿ ವೈಷ್ಣವ್ ಅವರು ದಿನವಿಡೀ ಕಾರ್ಯೋನ್ಮುಖರಾಗಿದ್ದುಕೊಂಡು ಅಮೆರಿಕದ ನೇವಿ ವೆಬ್​ಸೈಟ್​ನಲ್ಲಿ ಚಂಡಮಾರುತವನ್ನು ನಿರಂತರವಾಗಿ ಟ್ರ್ಯಾಕ್ ಮಾಡುತ್ತಿದ್ದರು. ಅದೆಲ್ಲಾ ಮಾಹಿತಿಯನ್ನು ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಕಚೇರಿಗೆ ಪ್ರತೀ ಗಂಟೆಯೂ ಮಾಹಿತಿ ಅಪ್​ಡೇಟ್ ಮಾಡುತ್ತಿದ್ದರು. ಇವರು ನೀಡುತ್ತಿದ್ದ ಮುನ್ನೆಚ್ಚರಿಕೆಗಳಿಂದಾಗಿ ಒಡಿಶಾ ಸರ್ಕಾರ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಲು ಸಾದ್ಯವಾಯಿತು. ಅಲ್ಲದೇ ಜಿಲ್ಲಾಧಿಕಾರಿಯಾಗಿ ಇವರ ಪ್ರಾಮಾಣಿಕತೆಯನ್ನು ಸ್ವತಃ ರಾಷ್ಟ್ರೀಯ ಮಾನವ ಹಕ್ಕು ಆಯೋಗವೇ ಅಧಿಕೃತವಾಗಿ ಪ್ರಶಂಸೆ ವ್ಯಕ್ತಪಡಿಸಿತ್ತು ಎಂದರೆ ಅಚ್ಚರಿ ಆಗಬಹುದು.

ಇದನ್ನೂ ಓದಿ: Tax Dispute - ಫ್ರಾನ್ಸ್​ನಲ್ಲಿರುವ ಭಾರತ ಸರ್ಕಾರದ ಆಸ್ತಿ ಮುಟ್ಟುಗೋಲಿಗೆ ಕೇರ್ನ್ ಎನರ್ಜಿ ಮುಂದು

2003ರಲ್ಲಿ ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಕಾರ್ಯಾಲಯಕ್ಕೆ ಡೆಪ್ಯೂಟಿ ಸೆಕ್ರೆಟರಿ ಆದರು. ಈ ಅವಧಿಯಲ್ಲಿ ಸರ್ಕಾರ ಮೂಲಸೌಕರ್ಯ ಯೋಜನೆಗಳಿಗಾಗಿ ರೂಪಿಸಿದ ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್​ಶಿಪ್ (ಪಿಪಿಪಿ) ಮಾದರಿಯ ಐಡಿಯಾ ಹಿಂದೆ ಅಶ್ವಿನಿ ವೈಷ್ಣವ್ ಅವರ ಮಿದುಳು ಇತ್ತೆನ್ನಲಾಗಿದೆ. ನಂತರ ಅವರು ವಾಜಪೇಯಿ ಅವರಿಗೆ ಪರ್ಸನಲ್ ಸೆಕ್ರಟರಿಯಾಗಿ ಎರಡು ವರ್ಷ ಮುಂದುವರಿದರು. ಬಳಿಕ 2006ರಲ್ಲಿ ಅವರು ಮೋರ್ಮುಗಾವೋ ಪೋರ್ಟ್ ಟ್ರಸ್ಟ್​ಗೆ ಡೆಪ್ಯೂಟಿ ಛೇರ್ಮನ್ ಆಗಿ ಎರಡು ವರ್ಷ ಕೆಲಸ ಮಾಡಿದರು.

2008ರಲ್ಲಿ ಅಶ್ವಿನಿ ವೈಷ್ಣವ್ ಅವರು ಅಮೆರಿಕಕ್ಕೆ ತೆರಳಿ ಪೆನ್​ಸಿಲ್ವೇನಿಯಾ ಯೂನಿವರ್ಸಿಟಿಯ ವಾರ್ಟನ್ ಸ್ಕೂಲ್​ನಿಂದ ಎಂಬಿಎ ಮಾಡಿದರು. ನಂತರ ಅವರು ಭಾರತಕ್ಕೆ ವಾಪಸ್ ಬಂದು ಜಿಇ ಟ್ರಾನ್ಸ್​ಪೋರ್ಟೇಶನ್ ಕಂಪನಿಗೆ ಎಂಡಿಯಾಗಿ ಸೇರ್ಪಡೆಯಾದರು. ಬಳಿಕ ಸೀಮನ್ಸ್​ನಲ್ಲೂ ಅವರು ಉಪಾಧ್ಯಕ್ಷರಾಗಿ ಕೆಲಸ ಮಾಡಿದರು. 2012ರಲ್ಲಿ ಕಾರ್ಪೊರೇಟ್ ಸೆಕ್ಟರ್​ನಿಂದ ಹೊರಬಂದ ಅವರು ಗುಜರಾತ್​ನಲ್ಲಿ ವಾಹನಬಿಡಿಭಾಗಗಳ ಉತ್ಪಾದನೆಗಾಗಿ ಮೂರ್ನಾಲ್ಕು ಕಂಪನಿಗಳನ್ನ ಸ್ಥಾಪಿಸಿದರು.

ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎರಡನೇ ಅವಧಿಯ ಸರ್ಕಾರ ರೂಪುಗೊಂಡಾಗ ಬಲಿಷ್ಠ ಹಾಗೂ ಸಮರ್ಥ ತಂಡ ಕಟ್ಟಲು ಸೂಕ್ತ ಮಂದಿಯ ಹುಡುಕಾಟ ನಡೆಸಿದ್ದರು. ತಮ್ಮ ತಂಡದಲ್ಲಿ ಸಮರ್ಥ ಟೆಕ್ನೋಕ್ರಾಟ್​ಗಳನ್ನ ಒಳಗೊಳ್ಳುವುದು ಮೋದಿ ಅವರ ಚಿಂತನೆ. ಆ ನಿಟ್ಟಿನಲ್ಲಿ ವಿವಿಧ ಅಧಿಕಾರಿಗಳ ಪಟ್ಟಿ ಮಾಡಲಾಯಿತು. ಅಶ್ವಿನಿ ವೈಷ್ಣವ್ ಅವರ ಪ್ರಾಮಾಣಿಕತೆ ಹಾಗೂ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಗಳಸಿದ ಅನುಭವ ಮೋದಿ ಅವರಿಗೆ ಹಿಡಿಸಿದೆ. ಅಲ್ಲದೇ, ಅಶ್ವಿನಿ ಅವರ ಅರ್ಥ ಚಿಂತನೆಗಳು ಮೋದಿ ಸರ್ಕಾರಕ್ಕೆ ಹೊಂದಿಕೆಯಾಗುವಂತಿವೆ. ಭೋಗಕ್ಕೆ ಹಣ ಹೂಡುವ ಬದಲು ವಿವಿಧ ಹೂಡಿಕೆಗಳಿಗೆ ಹಣ ಹಾಕುವುದರಿಂದ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆ ಎಂಬುದು ಅವರ ಅಭಿಪ್ರಾಯ. ಇವೆಲ್ಲಾ ಕಾರಣಗಳಿಂದ ಪ್ರಧಾನಿ ಮೋದಿ ಅವರು ಅಶ್ವಿನಿ ವೈಷ್ಣವ್ ಅವರ ಹೆಸರನ್ನ ಫೈನಲ್ ಮಾಡಿದ್ದರು. ಅಂತೆಯೇ, ಎರಡು ವರ್ಷದ ಹಿಂದೆ ಅವರನ್ನ ಬಿಜೆಪಿಗೆ ಸೇರ್ಪಡೆ ಮಾಡಿ ಒಡಿಶಾ ರಾಜ್ಯದ ಮೂಲಕ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದರು. ಈಗ ಅವರನ್ನ ಸಂಪುಟಕ್ಕೆ ಸೇರಿಸಿಕೊಂಡು ಪ್ರಮುಖ ಜವಾಬ್ದಾರಿಗಳನ್ನ ಕೊಟ್ಟಿದ್ದಾರೆ.
Published by:Vijayasarthy SN
First published: