HOME » NEWS » National-international » HOW A TELANGANA WOMAN IS EDUCATING MIGRANT KIDS WHO CANNOT AFFORD ONLINE CLASSES STG LG

ಬೀದಿಬದಿಯೇ ವಲಸೆ ಮಕ್ಕಳಿಗೆ ಉಚಿತ ಪಾಠ; ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾಳೆ ತೆಲಂಗಾಣದ ಈ ಯುವತಿ

ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಈ ಮಕ್ಕಳ ಶಿಕ್ಷಣವು ತುಂಬಾ ದುಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ವನಜಾ ಅವರು ಆ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ.

news18-kannada
Updated:March 2, 2021, 2:31 PM IST
ಬೀದಿಬದಿಯೇ ವಲಸೆ ಮಕ್ಕಳಿಗೆ ಉಚಿತ ಪಾಠ; ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾಳೆ ತೆಲಂಗಾಣದ ಈ ಯುವತಿ
ಸಾಂದರ್ಭಿಕ ಚಿತ್ರ
  • Share this:
ಶಿಕ್ಷಣವೆನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಅತ್ಯವಶ್ಯಕ. ಶಿಕ್ಷಣ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆದರೆ ಇಂದಿನ ದಿನಮಾನಗಳಲ್ಲಿ ಬಡಮಕ್ಕಳಿಗೆ ಶಿಕ್ಷಣ ಗಗನಕುಸುಮವಾಗಿದೆ. ಶಿಕ್ಷಣ ಕ್ಷೇತ್ರ ಉದ್ಯಮವಾಗಿ ಪರಿವರ್ತನೆಯಾದ ಮೇಲಂತೂ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕನಸಿನ ಮಾತಾಗಿದೆ. ಈ ಮಧ್ಯೆ ತೆಲಂಗಾಣದ ಹನಮಕೊಂಡ ನಿವಾಸಿ 24 ವರ್ಷದ ಎಸ್.ವನಜಾ ಅವರು ವಲಸೆ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ರೂಪಿಸುವ ಕೆಲಸ ಮಾಡುತ್ತಿದ್ದಾಳೆ ಎಂದು ನ್ಯೂ ಇಂಡಿಯನ್ ಎಕ್ಸ್​​ಪ್ರೆಸ್​ ವರದಿ ಮಾಡಿದೆ.

ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ವನಜಾ ಅವರು ಓದಿದ್ದು ಇಂಟರ್ ಮೀಡಿಯಟ್. ಮನೆಯ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಅವರಿಗೆ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಜೀವನೊಪಾಯಕ್ಕಾಗಿ ತಮ್ಮ ತಾಯಿಯೊಂದಿಗೆ ಕಿರಾಣಿ ಅಂಗಡಿ ನಡೆಸುತ್ತಿದ್ದರು. ಹೀಗಿರುವಾಗ ಹನಮಕೊಂಡ ಏಷಿಯನ್ ಮಾಲ್ ಬಳಿ ವಲಸೆ ಮಕ್ಕಳಿರುವುದನ್ನು ವನಜಾ ಗಮನಿಸಿದ್ದಳು. ಕೊರೊನಾ ಲಾಕ್ ಡೌನ್ ನಿಂದ ಆ ಮಕ್ಕಳಿಗೆ ಶಿಕ್ಷಣವೇ ಇಲ್ಲದಂತಾಗಿತ್ತು. ತಾನೇಕೆ ಆ ಮಕ್ಕಳಿಗೆ ಪಾಠ ಮಾಡಬಾರದು ಎಂದು ನಿರ್ಧರಿಸಿದ ಅವರು ಬೆಳಗ್ಗೆ ಮತ್ತು ಸಂಜೆ 20 ಮಕ್ಕಳಿಗೆ ಉಚಿತವಾಗಿ ಕಲಿಸಲು ಶುರು ಮಾಡಿದಳು.

ಕಳೆದ 2 ದಶಕಗಳಿಂದ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿರುವ ಕೊಳಗೇರಿ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು ಈ ಮಕ್ಕಳ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಮೂಲತಃ ತೆಲಂಗಾಣದ ಭೋಂಗೀರ್ ಜಿಲ್ಲೆಯವರಾದ ವನಜಾ ಕೂಡ ಅದೇ ಕೊಳೆಗೇರಿ ನಿವಾಸಿಯಾಗಿದ್ದಾರೆ. ಮಹಾರಾಷ್ಟ್ರ ಮತ್ತು ಛತ್ತೀಸ್ ಗಢದಿಂದ ವಲಸೆ ಬಂದಿರುವ ಕಾರ್ಮಿಕರ ಈ ಮಕ್ಕಳಿಗೆ ಶಿಕ್ಷಣವೆನ್ನುವುದು ಗಗನಕುಸುಮವಾಗಿತ್ತು. ಶಿಕ್ಷಣದಿಂದ ವಂಚಿತರಾಗಿ ಕೊಳಗೇರಿ ಪ್ರದೇಶದಲ್ಲಿ ಆಟವಾಡಿಕೊಂಡು ಇದ್ದ ಈ ಮಕ್ಕಳನ್ನು ಕಂಡ ವನಜಾ, ಅವರಿಗಾಗಿ ಏನಾದರೂ ಮಾಡಲೇಬೇಕೆಂದು ನಿರ್ಧರಿಸಿ ಕಲಿಸುವ ನಿರ್ಧಾರ ತೆಗೆದುಕೊಂಡರು.

ಪೈಲಟ್ ಮೇಲೆ ಏಕಾಏಕಿ ದಾಳಿ ಮಾಡಿದ ಬೆಕ್ಕು; ವಿಮಾನ ತುರ್ತು ಭೂಸ್ಪರ್ಶ..!

ವನಜಾ ಅವರು ಕಲಿಸುವ ಎಲ್ಲಾ ಮಕ್ಕಳು ಲೋವರ್ ಕೆಜಿಯಿಂದ 3ನೇ ತರಗತಿಯಲ್ಲಿ ಓದುತ್ತಿದ್ದರು. ಸ್ಮಾರ್ಟ್‌ಫೋನ್ ಕೊಳ್ಳಲು ಶಕ್ತರಾಗದ ಕಾರಣ ಆನ್‌ಲೈನ್ ತರಗತಿಗೆ ಹಾಜರಾಗಲು ಈ ವಲಸೆ ಮಕ್ಕಳಿಗೆ ಸಾಧ್ಯವಾಗಿರಲಿಲ್ಲ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಈ ಮಕ್ಕಳ ಶಿಕ್ಷಣವು ತುಂಬಾ ದುಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ವನಜಾ ಅವರು ಆ ಮಕ್ಕಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಉಚಿತವಾಗಿ ಶಿಕ್ಷಣ ನೀಡುತ್ತಿದ್ದಾರೆ.

‘ನಾನು ಮಗುವಾಗಿದ್ದಾಗ ನನ್ನ ತಂದೆ ತೀರಿಕೊಂಡರು. ನನ್ನ ತಾಯಿ ನನಗೆ ಏನೂ ಕಡಿಮೆಯಾಗದಂತೆ ಬೆಳೆಸಿದರು. ಅಂಗಡಿ ವ್ಯಾಪಾರ ನಡೆಸಲು ನಾನು ಅವರಿಗೆ ಸಹಾಯ ಮಾಡಲೇಬೇಕಾಗಿತ್ತು. ಹೀಗಾಗಿ ನಾನು ನನ್ನ ಶಿಕ್ಷಣವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ’ ಎಂದು ವನಜಾ ಹೇಳಿಕೊಂಡಿದ್ದಾರೆ.

ಸಾಂಕ್ರಾಮಿಕ ರೋಗದಿಂದಾಗಿ ಶಿಕ್ಷಣದ ಸ್ವರೂಪವೇ ಬದಲಾಗಿಬಿಟ್ಟಿದೆ. ಶಾಲೆಗಳು ಮತ್ತು ಕಾಲೇಜುಗಳು ಆನ್‌ಲೈನ್‌ನಲ್ಲಿಯೇ ಶಿಕ್ಷಣ ನೀಡುತ್ತಿವೆ. ಆದರೆ ಈ ವಲಸೆ ಮಕ್ಕಳು ಮೂಲ ಸೌಲಭ್ಯಗಳ ಕೊರತೆಯಿಂದ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅಲ್ಲದೇ ಅನೇಕರು ಶಾಲೆಗಳಿಂದ ಹೊರಗುಳಿದಿದ್ದಾರೆ. ಆ ಮಕ್ಕಳ ಪಾಲಿಗೆ ವನಜಾ ಅವರೇ ದೇವರಾಗಿದ್ದಾರೆ. ಉಚಿತವಾಗಿ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ರೂಪಿಸಲು ಶ್ರಮಿಸುತ್ತಿದ್ದಾರೆ.

ಶಾಲೆಗಳು ಮುಚ್ಚಿದ್ದರಿಂದ ಮಧ್ಯಾಹ್ನದ ಬಿಸಿಯೂಟವು ನಿಂತುಹೋಗಿದೆ. ಹೀಗಾಗಿ ವಲಸೆ ಮಕ್ಕಳು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ವನಜಾ ಅವರು ಹೊಸ ಆಶಾಕಿರಣವಾಗಿದ್ದಾರೆ. ‘ಮಕ್ಕಳಿಗೆ ಕಲಿಸಲು ಕೊಠಡಿಗಳಿಲ್ಲದಿದ್ದರೂ ನಾನು ಅವರಿಗೆ ಬೀದಿಬದಿಯೇ ಪಾಠ ಮಾಡುತ್ತೇನೆ, ಅವರಿಗೆ ಶಿಕ್ಷಣ ನೀಡುವುದು ನನ್ನ ಜವಾಬ್ದಾರಿ’ ಎಂದು ವನಜಾ ಹೇಳುತ್ತಾರೆ.
Published by: Latha CG
First published: March 2, 2021, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories