ನವದೆಹಲಿ(ಆ. 29): ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೋವಿಡ್-19 ಸೋಂಕಿನಿಂದ ಮತ್ತೆ ಗುಣಮುಖರಾಗಿದ್ದಾರೆ. ಈ ಹಿಂದೆಯೇ ಕೋವಿಡ್ನಿಂದ ಚೇತರಿಸಿಕೊಂಡಿದ್ದರೂ ತಲೆ ಸುತ್ತು, ಮೈಕೈ ನೋವು ಕಾಣಿಸಿಕೊಂಡಿದ್ದರಿಂದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಮಿತ್ ಶಾ ಈಗ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
“ಕೋವಿಡ್ ರೋಗೋತ್ತರ ಶುಶ್ರೂಷೆಗೆ ಎಐಐಎಂಎಸ್ ಆಸ್ಪತ್ರೆಗೆ ಗೃಹ ಸಚಿವರು ದಾಖಲಾಗಿದ್ದರು. ಈಗ ಅವರು ಚೇತರಿಸಿಕೊಂಡಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್ ಆಗಲಿದ್ದಾರೆ” ಎಂದು ದೆಹಲಿಯ ಏಮ್ಸ್ ಆಸ್ಪತ್ರೆಯ ಮಾಧ್ಯಮ ವಿಭಾಗದ ಮುಖ್ಯಸ್ಥೆ ಡಾ. ಆರತಿ ವಿಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ವೀಡನ್ನಲ್ಲಿ ಕುರಾನ್ ಸುಟ್ಟ ದುಷ್ಕರ್ಮಿಗಳು; ನೂರಾರು ಜನರಿಂದ ಪ್ರತಿಭಟನೆ, ಗಲಭೆ
ಅಮಿತ್ ಶಾ ಅವರಿಗೆ ಕೊರೋನಾ ಸೋಂಕು ಇರುವುದು ಮೊದಲು ಪತ್ತೆಯಾಗಿದ್ದು ಆಗಸ್ಟ್ 2ರಂದು. ಗುರುಗ್ರಾಮ್ನ ಮೇದಾಂತ ಆಸ್ಪತ್ರೆಗೆ ಅವರು ದಾಖಲಾಗಿದ್ದರು. ಆಗಸ್ಟ್ 14ರಂದು ನಡೆದ ಕೊರೋನಾ ಪರೀಕ್ಷೆಯಲ್ಲಿ ನೆಗಟಿವ್ ಬಂದು ಡಿಸ್ಚಾರ್ಜ್ ಆಗಿದ್ದರು. ಆದರೆ, ಮತ್ತೆ ಅನಾರೋಗ್ಯ ಕಾಡಿದ್ದರಿಂದ ಆಗಸ್ಟ್ 18ರಂದು ಏಮ್ಸ್ ಆಸ್ಪತ್ರೆಗೆ ಬಂದು ಕೋವಿಡ್ ನಂತರದ ಶುಶ್ರೂಷೆ ಸೇವೆ ಪಡೆದಿದ್ದಾರೆ.
“ಕಳೆದ 3-4 ದಿನದಿಂದ ಗೃಹ ಸಚಿವರಿಗೆ ಸುಸ್ತು, ಮೈಕೈ ನೋವು ಇತ್ತು. ಆದರೆ ಕೋವಿಡ್-19 ಪರೀಕ್ಷೆಯಲ್ಲಿ ನೆಗಟಿವ್ ಬಂದಿತ್ತು. ಪೋಸ್ಟ್ ಕೋವಿಡ್ ಕೇರ್ಗಾಗಿ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆಸ್ಪತ್ರೆಯಿಂದಲೇ ಆರಾಮವಾಗಿ ತಮ್ಮ ಕೆಲಸ ಮುಂದುವರಿಸಿದ್ದಾರೆ” ಎಂದು ಆಗಸ್ಟ್ 18ರಂದೇ ಏಮ್ಸ್ ಅಧಿಕಾರಿಗಳು ತಿಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ