Hit and Run Case- ದುರ್ಗಾ ಭಕ್ತರ ಮೇಲೆ ಹರಿದ ಕಾರು; ಒಬ್ಬ ಸಾವು, 26 ಮಂದಿ ಗಾಯ; CCTVಯಲ್ಲಿ ದೃಶ್ಯ ಸೆರೆ

Ganja Effect?- ಭಕ್ತರು ಮೆರವಣಿಗೆ ಹೋಗುತ್ತಿದ್ದ ಗುಂಪಿನ ಮೇಲೆ ಗಂಟೆಗೆ 100-120 ಕಿಮೀ ವೇಗದಲ್ಲಿ ಬಂದ ಕಾರು ಹಿಂಬದಿಯಿಂದ ಗುದ್ದಿಕೊಂಡು ಹೋಗಿದೆ. ಛತ್ತೀಸ್​ಗಡದ ಜಶ್​ಪುರ್​ನಲ್ಲಿ ಈ ದುರ್ಘಟನೆ ನಡೆದಿದೆ. ವಾಹನದಲ್ಲಿದ್ದವರು ಗಾಂಜಾ ನಶೆಯಲ್ಲಿದ್ದರೆನ್ನಲಾಗುತ್ತಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • News18
 • Last Updated :
 • Share this:
  ರಾಯ್ಪುರ: ಛತ್ತೀಸಗಢದ ಜಶ್ಪುರದಲ್ಲಿ (Jashpur, Chhattisgarh) ಭಯಾನಕ ಅಪಘಾತ ಸಂಭವಿಸಿದ್ದು, ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ದುರ್ಗಾ ದೇವಿಯ ಪ್ರತಿಮೆ ವಿಸರ್ಜನೆ (Durga Visarjan)ಗೆ ಹೊರಟಿದ್ದ ಭಕ್ತರ ಮೇಲೆ ಕಾರ್ ಹತ್ತಿಸಲಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, 26 ಜನ ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಜಶ್ಪುರದ ಪತ್ಥಲ್‍ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಪಘಾತದ ಬಳಿಕ ಕಾರಿಗೆ ಬೆಂಕಿ ಹಚ್ಚಿ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕಾರ್ ನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಅಧಿಕೃತವಾಗಿ ದೃಢಪಟ್ಟಿಲ್ಲ.

  ನದಿಯತ್ತ ಹೊರಟಿದ್ದ ಭಕ್ತರು:

  ಜಶ್ಪುರ ಜಿಲ್ಲೆಯ ಪತ್ಥಲ್‍ಗ್ರಾಮದಲ್ಲಿ ಮಧ್ಯಾಹ್ನ ಸುಮಾರು ಒಂದೂವರೆ ಆಸುಪಾಸಿನಲ್ಲಿ ಈ ದುರಂತ ನಡೆದಿದೆ. ಈ ವೇಳೆ ಏಳು ದುರ್ಗಾ ಮೂರ್ತಿಗಳನ್ನು ಮೆರವಣಿಗೆ ಮೂಲಕ ತೆಗೆದುಕೊಂಡು ಹೋಗಲಾಗುತ್ತಿತ್ತು. ಮೂರ್ತಿಗಳ ಜೊತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ನದಿಯತ್ತ ಹೊರಟಿದ್ದರು. ಹಿಂದಿನಿಂದ ಬಂದ ಕಾರ್ ಭಕ್ತರಿಗೆ ಡಿಕ್ಕಿ ಹೊಡೆದು, ಅವರ ಮೇಲೆ ಹತ್ತಿಸಲಾಗಿದೆ. ಕೆಲ ಜನರು ಕಾರ್ ಬಾನೆಟ್ ಮೇಲೆ ಬೀಳುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿವೆ. ಮೃತ ವ್ಯಕ್ತಿಯನ್ನು 21 ವರ್ಷದ ಗೌರವ್ ಅಗರ್ವಾಲ್ ಎಂದು ಗುರುತಿಸಲಾಗಿದೆ.

  ವೇಗವಾಗಿ ಬಂದ ಕಾರ್ ಡಿಕ್ಕಿ ಹೊಡಿತು:

  ಕಾರ್ ಗಂಟೆಗೆ ಸುಮಾರು 100 ರಿಂದ 120 ಕಿಲೋ ಮೀಟೆರ್ ವೇಗದಲ್ಲಿತ್ತು. ಹಿಂದಿನಿಂದ ಬಂದು ಭಕ್ತರಿಗೆ ಡಿಕ್ಕಿ ಹೊಡೆಯಿತು. ಕೆಲವರು ಚದರಲು ಪ್ರಯತ್ನಿಸಿದ್ದರು. ಡಿಕ್ಕಿಯ ರಭಸಕ್ಕೆ ಕೆಲವರು ಕಾರ್ ಬಾನೆಟ್ ಮೇಲೆಯೇ ಎಗರಿಬಿದ್ದರು. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯ್ತು ಎಂದು ಪ್ರತ್ಯಕ್ಷದರ್ಶಿ ಹೇಳಿಕೆ ನೀಡಿದ್ದಾರೆ. ಕಾರ್​ನಲ್ಲಿದ್ದ ವ್ಯಕ್ತಿ ಗಾಂಜಾ ಸಾಗಿಸುತ್ತಿದ್ದನು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

  ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್:

  ಅಪಘಾತದ ಬಳಿಕ ಆಕ್ರೋಶಿತರಾದ ಗ್ರಾಮಸ್ಥರು ಪೊಲೀಸ್ ಠಾಣೆಯ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಮತ್ತೊಂದು ಗ್ರಾಮಸ್ಥರ ಗುಂಪು ಶವವನ್ನು ಗುಮ್ಲಾ-ಕಟನಿ ರಾಷ್ಟ್ರೀಯ ಹೆದ್ದಾರಿಯಲ್ಲಿರಿಸಿ ಪ್ರತಿಭಟನೆ ನಡೆಸುವ ಮೂಲಕ ಮಾರ್ಗವನ್ನೇ ಬಂದ್ ಮಾಡಿದರು. ಎಎಸ್‍ಐ ಒಬ್ಬರು ಗಾಂಜಾ ವ್ಯಾಪಾರ ಮಾಡುತ್ತಾರೆ. ಕಾರ್​ನಲ್ಲಿದ್ದ ವ್ಯಕ್ತಿ ಎಎಸ್‍ಐಗಾಗಿ ಕೆಲಸ ಮಾಡುತ್ತಾನೆ. ಹಾಗಾಗಿ ಪೊಲೀಸರು ಎಎಸ್‍ಐ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  ಘಟನೆ ವಿಕೋಪಕ್ಕೆ ಬದಲಾಗುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ರಿತೇಶ್ ಅಗರ್ವಾಲ್ ಮತ್ತು ಎಸ್.ಪಿ. ವಿಜಯ್ ಅಗರ್ವಾಲ್ ಸ್ಥಳಕ್ಕೆ ತಲುಪಿ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಕಾರ್ ನಲ್ಲಿದ್ದ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ಕಾರ್ ಸಹ ಬೆಂಕಿಗಾಹುತಿ ಆಗಿದ್ದರಿಂದ ಗಾಂಜಾ ಇತ್ತಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಸ್ಪಷ್ಟತೆ ಲಭ್ಯವಾಗಿಲ್ಲ. ಅಪಘಾತದ ಬಳಿಕ ವ್ಯಕ್ತಿ ಕಾರ್ ನಿಲ್ಲಿಸದೇ ಹೋಗಿದ್ದಾನೆ. ಸುಮಾರು ಐದು ಕಿ.ಮೀ.ವರೆಗೆ ಹಿಂಬಾಲಿಸಿದ ಗ್ರಾಮಸ್ಥರು ಚಾಲಕನನ್ನು ಹಿಡಿದು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಜೊತೆಗೆ ಕಾರಿಗೆ ಬೆಂಕಿ ಹಚ್ಚಿದ್ದಾರೆ.

  ಇದನ್ನೂ ಓದಿ: Salaga Movie Review: ರೌಡಿಸಂನ ಕ’ರಾ’ಳತೆ ಬಿಚ್ಚಿಟ್ಟ ಸಲಗ, ಹೆಜ್ಜೆ ಹೆಜ್ಜೆಗೂ ಹರಿದ ನೆತ್ತರ ಕೋಡಿ

  ಶಾಂತಿ ಕಾಪಾಡುವಂತೆ ಜಿಲ್ಲಾಧಿಕಾರಿಗಳ ಮನವಿ:

  ಈ ಘಟನೆ ನಡೆದಿದ್ದಕ್ಕೆ ನಮಗೂ ದುಃಖವಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಕಾನೂನಿನ ಪ್ರಕಾರವೇ ಎಲ್ಲ ಕ್ರಮಗಳು ನಡೆಯಲಿವೆ. ಹಾಗಾಗಿ ಗ್ರಾಮಸ್ಥರು ಶಾಂತಿ ಕಾಪಾಡಬೇಕು. ಕಾನೂನು ಕೈಗೆ ತೆಗೆದುಕೊಳ್ಳಬೇಡಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಗ್ರಾಮಸ್ಥರಿಂದ ಥಳಿತಕ್ಕೊಳಗಾಗುತ್ತಿದ್ದ ಆರೋಪಿಯನ್ನುಪೊಲೀಸರು ಬಂಧಿಸಿ, ಆತನನ್ನು ರಾಯಗಢ ಜಿಲ್ಲೆಯ ಕಾಪೂ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಸದ್ಯ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

  - ಮಹಮ್ಮದ್ ರಫೀಕ್ ಕೆ.
  Published by:Vijayasarthy SN
  First published: