• Home
  • »
  • News
  • »
  • national-international
  • »
  • Hindu Temple Vandalised: ಒಂದೇ ವಾರದ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಮತ್ತೊಂದು ದೇವಾಲಯ ಧ್ವಂಸ!

Hindu Temple Vandalised: ಒಂದೇ ವಾರದ ಅವಧಿಯಲ್ಲಿ ಆಸ್ಟ್ರೇಲಿಯಾದಲ್ಲಿ ಮತ್ತೊಂದು ದೇವಾಲಯ ಧ್ವಂಸ!

ಶಿವ ವಿಷ್ಣು ದೇವಾಲಯ

ಶಿವ ವಿಷ್ಣು ದೇವಾಲಯ

ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿನ ಕ್ಯಾರಂ ಡೌನ್ಸ್‌ ಸಿಟಿಯಲ್ಲಿರುವ ಐತಿಹಾಸಿಕ ಶಿವ ವಿಷ್ಣು ದೇವಾಲಯದ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿ ಧ್ವಂಸಗೊಳಿಸಿದ ಘಟನೆ ನಡೆದಿದೆ.

  • Share this:

ಮೆಲ್ಬೋರ್ನ್‌: ಒಂದೇ ವಾರದ ಅವಧಿಯಲ್ಲಿ ಎರಡು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿದ (Hindu Temple Vandalised ) ಘಟನೆ ಆಸ್ಟ್ರೇಲಿಯಾದಲ್ಲಿ (Australia ) ನಡೆದಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದಲ್ಲಿ ಇರುವ ಹಿಂದೂ ದೇವಾಲಯದ ಮೇಲೆ ನಡೆದ ಎರಡನೆಯ ದಾಳಿ ಇದಾಗಿದ್ದು, ಭಾರತ ವಿರೋಧಿ ಕೈ ಬರಹಗಳನ್ನು ಬರೆದು ಖಲಿಸ್ತಾನಿ ಬೆಂಬಲಿಗರು (Khalistan Supporters) ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.


ತಮಿಳು ಹಿಂದೂ ಸಮುದಾಯದ ಜನರು ಇಲ್ಲಿನ ವಿಕ್ಟೋರಿಯಾದ ಕ್ಯಾರಂ ಡೌನ್ಸ್‌ ಸಿಟಿಯಲ್ಲಿರುವ ಐತಿಹಾಸಿಕ ಶಿವ ವಿಷ್ಣು ದೇವಾಲಯದಲ್ಲಿ ಮೂರು ದಿನಗಳ ಕಾಲ ತೈ ಪೊಂಗಲ್ ಹಬ್ಬವನ್ನು ಆಚರಿಸುತ್ತಾರೆ. ಹೀಗಾಗಿ ತೈ ಪೊಂಗಲ್ ಹಬ್ಬವನ್ನು ಆಚರಿಸಲು ದೇವರ ದರ್ಶನಕ್ಕೆ ಬಂದಾಗ ಕಿಡಿಗೇಡಿಗಳು ದೇಗುಲವನ್ನು ಧ್ವಂಸಗೊಳಿಸಿದ ಕೃತ್ಯ ಬೆಳಕಿಗೆ ಬಂದಿದೆ.


'ಧಾರ್ಮಿಕ ಕಿರುಕುಳದಿಂದ ಪಾರಾಗಲು ಕಷ್ಟ'


ಈ ಬಗ್ಗೆ ಅಲ್ಲಿನ ಆಸ್ಟ್ರೇಲಿಯಾ ಟುಡೇ ವೈಬ್‌ಸೈಟ್ ಸುದ್ದಿ ಪ್ರಕಟಿಸಿದ್ದು, ದೇಗುಲದ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವ ವಿಷ್ಣು ದೇಗುಲದ ದೀರ್ಘಕಾಲದ ಭಕ್ತರು ಆಗಿರುವ ಉಷಾ ಸೆಂಥಿಲ್‌ನಾಥನ್ ಅವರು ಹೇಳುವ ಪ್ರಕಾರ, ‘ನಾವು ಆಸ್ಟ್ರೇಲಿಯಾದಲ್ಲಿ ತಮಿಳು ಅಲ್ಪಸಂಖ್ಯಾತ ಗುಂಪುಗಳಾಗಿದ್ದೇವೆ. ನಮಗೆ ಇಲ್ಲಿ ಧಾರ್ಮಿಕ ಕಿರುಕುಳದಿಂದ ಪಾರಾಗಲು ಬಹಳ ಕಷ್ಟವಾಗುತ್ತಿದೆ. ನಾವು ಈ ಶಿವ ವಿಷ್ಣು ದೇಗುಲಕ್ಕೆ ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲು ಬರುತ್ತೇವೆ. ಆದರೆ ಖಲಿಸ್ತಾನಿ ಬೆಂಬಲಿಗರು ಯಾವುದೇ ಆತಂಕವಿಲ್ಲದೆ ಅವರ ದ್ವೇಷದ ಸಂದೇಶಗಳ ಮೂಲಕ ದೇಗುಲವನ್ನು ಧ್ವಂಸಗೊಳಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Hindu Temple: ದುಬೈನಲ್ಲಿ ಹಿಂದೂ ದೇವಾಲಯದ, ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಮಂತ್ರಘೋಷದಲ್ಲಿ ಭಾಗವಹಿಸಲು ಅವಕಾಶ!


ಮುಂದುವರಿದು ಮಾತನಾಡಿರುವ ಶಿವ ವಿಷ್ಣು ದೇಗುಲದ ಭಕ್ತೆ ಸೆಂಥಿಲ್‌ನಾಥನ್‌, ಬೆದರಿಸಲು ಪ್ರಯತ್ನ ಪಡುತ್ತಿರುವ ಈ ಗೂಂಡಾಗಳ ವಿರುದ್ಧ ಕಠಿಣ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪ್ರೀಮಿಯರ್ ಡಾನ್ ಆಂಡ್ರ್ಯೂಸ್ ಮತ್ತು ವಿಕ್ಟೋರಿಯಾದ ಪೊಲೀಸರನ್ನು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: Shiva Temples: ವಿದೇಶದಲ್ಲೂ ಇದೆ ಅದ್ಭುತ ಶಿವ ಮಂದಿರಗಳು! ದರ್ಶನ ಪಡೆಯಿರಿ


'ಖಲಿಸ್ತಾನ್ ಪ್ರಚಾರಕ್ಕಾಗಿ ಧ್ವಂಸ'


ಇನ್ನು, ‘ಖಲೀಸ್ತಾನ್ ಪ್ರಚಾರಕ್ಕಾಗಿ ನಮ್ಮ ಎರಡನೆಯ ಹಿಂದೂ ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ಇದರಿಂದ ನನಗೆ ತುಂಬಾ ಆಘಾತವಾಗಿದೆ ಎಂದು ನಾನು ಹೇಳೋದಿಲ್ಲ. ಆದರೆ ಹಿಂದೂ ದೇಗುಲಗಳ ಇಂತಹ ಶೋಚನೀಯ ಸ್ಥಿತಿಯನ್ನು ಹಿಂದೂ ಸಮಾಜ ಸಹಿಸಿಕೊಳ್ಳಬಾರದು ಎಂದು ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾದ ವಿಕ್ಟೋರಿಯಾ ಅಧ್ಯಾಯದ ಮುಖ್ಯಸ್ಥ ಮಕರಂದ್ ಭಾಗವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇನ್ನು ಮೆಲ್ಬೋರ್ನ್‌ ಹಿಂದೂ ಸಮುದಾಯದ ಸದಸ್ಯ ಸಚಿನ್ ಮಾತೆ ಪ್ರತಿಕ್ರಿಯೆ ನೀಡಿ, ಖಲಿಸ್ತಾನಿ ಬೆಂಬಲಿಗರಿಗೆ ತಾಕತ್ತಿದ್ದರೆ ಶಾಂತಿಯುತ ಹಿಂದೂ ಸಮುದಾಯದ ದೇವಸ್ಥಾನಗಳನ್ನು ಗುರಿಯಾಗಿಸಿ ದಾಳಿ ಮಾಡುವ ಬದಲು ವಿಕ್ಟೋರಿಯನ್ ಸಂಸತ್‌ನ ಕಟ್ಟಡದ ಮೇಲೆ ಬರಹ ಗೀಚಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.




'ಈ ಕೃತ್ಯದಿಂದ ತೀವ್ರ ದುಃಖಿತರಾಗಿದ್ದೇವೆ'


ಸ್ವಾಮಿ ನಾರಾಯಣ ಆಸ್ಟ್ರೇಲಿಯಾ( BAPS) ಘಟನೆಯ ಕುರಿತು ಪ್ರತಿಕ್ರಿಯಿಸಿ ತೀವ್ರ ವಿಷಾದ ವ್ಯಕ್ತಪಡಿಸಿದ್ದು, ‘ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಮಿಲ್‌ ಪಾರ್ಕ್‌ನಲ್ಲಿರುವ BAPS ಶ್ರೀ ಸ್ವಾಮಿ ನಾರಾಯಣ ಮಂದಿರದ ಗೇಟ್‌ಗಳಲ್ಲಿ ಸಮಾಜ ವಿರೋಧಿ ಶಕ್ತಿಗಳು ಬರೆದ ಭಾರತ ವಿರೋಧಿ ಗೀಚು ಬರಹಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ. BAPS ದೇವಾಲಯವು ವಿಶ್ವದಾದ್ಯಂತ ಇರುವ BAPSನ ಎಲ್ಲಾ ದೇಗುಲಗಳಂತೆ ಶಾಂತಿ, ಸಾಮರಸ್ಯ, ಸಮಾನತೆ , ನಿಸ್ವಾರ್ಥ ಸೇವೆ ಮತ್ತು ಸಾರ್ವತ್ರಿಕ ಹಿಂದೂ ಮೌಲ್ಯಗಳ ವಾಸಸ್ಥಾನವಾಗಿದೆ ಎಂದು ಅವರು ಹೇಳಿದ್ದಾರೆ.


ಕಳೆದ ಜನವರಿ 12ರಂದು ಮೆಲ್ಬೋರ್ನ್‌ನ ಮಿಲ್‌ ಪಾರ್ಕ್‌ನಲ್ಲಿರುವ BAPS ಶ್ರೀ ಸ್ವಾಮಿ ನಾರಾಯಣ ಮಂದಿರದ ಮೇಲೂ ಕೂಡ ಭಾರತ ವಿರೋಧಿ ಗೀಚುಬರಹಗಳನ್ನು ಬರೆದು ಕಿಡಿಗೇಡಿಗಳು ದಾಳಿ ನಡೆಸಿದ್ದರು.

Published by:Avinash K
First published: