ಪಾಕಿಸ್ತಾನ ಆಡಳಿತಾತ್ಮಕ ಸೇವೆಗೆ (Pakistan Administrative Service- PAS) ಮೊಟ್ಟ ಮೊದಲ ಬಾರಿಗೆ ಹಿಂದೂ ಸಮುದಾಯದ(Hindu Religion) ಯುವತಿಯೊಬ್ಬರು ನೇಮಕಗೊಂಡಿದ್ದಾರೆ. ಹೌದು, ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಯುವತಿ ಸನಾ ರಾಮಚಂದ್ ಗುಲ್ವಾನಿ(Sana Ramachand Gulwani) ಪಾಕ್ಆಡಳಿತಾತ್ಮಕ ಹುದ್ದೆಗೆ ನೇಮಕಗೊಂಡ ಮೊದಲ ಹಿಂದೂ ಮಹಿಳೆಯಾಗಿದ್ದಾರೆ. ಇವರನ್ನು ಪಂಜಾಬ್ ಪ್ರಾಂತ್ಯದ(Punjab) ಹಸನಾಬ್ದಲ್ನ ಸಹಾಯಕ ಆಯುಕ್ತರು ಹಾಗೂ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಆ ಮೂಲಕ ಪಾಕಿಸ್ತಾನ ಆಡಳಿತಾತ್ಮಕ ಸೇವೆಗೆ ಸೇರಿದ ಮೊದಲ ಹಿಂದೂ ಮಹಿಳೆ ಎಂಬ ಖ್ಯಾತಿಗೆ ಸನಾ ರಾಮಚಂದ್ ಪಾತ್ರರಾಗಿದ್ದಾರೆ.
ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ತೇರ್ಗಡೆ
ಸನಾ ರಾಮಚಂದ್ ಗುಲ್ವಾನಿ ಮೂಲತಃ ಸಿಂಧ್ ಪ್ರಾಂತ್ಯದ ಶಿಕಾರ್ಪುರದವರು. ಇವರು 2020ರಲ್ಲಿ ಕೇಂದ್ರ ಉನ್ನತ ಸೇವೆ (CAS) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು. ಕಳೆದ ವಾರ ಹಸನಾಬ್ದಲ್ನ ಸಹಾಯಕ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ದಿ ಡಾನ್ ಪತ್ರಿಕೆ ವರದಿ ಮಾಡಿದೆ. ಮತ್ತೊಂದು ಅಚ್ಚರಿ ಏನೆಂದರೆ, ಸನಾ ತಮ್ಮ ಮೊದಲ ಪ್ರಯತ್ನದಲ್ಲೇ ಸಿಎಎಸ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: Bullet Train: ಸಮುದ್ರದೊಳಗೆ ರೈಲ್ವೆ ಸ್ಟೇಷನ್ ನಿರ್ಮಾಣ, ಇದು ಭಾರತದ ಮೊದಲ ಸಮುದ್ರ ಸುರಂಗ ಮಾರ್ಗ
ಈ ಹಿಂದೆಯೂ ಇತಿಹಾಸ ಸೃಷ್ಟಿಸಿದ್ದ ಸನಾ
ಡಾ. ಸನಾ ರಾಮಚಂದ್ ಗುಲ್ವಾನಿ ಈ ಹಿಂದೆಯೂ ಸಹ ಇಡೀ ದೇಶವೇ ತಿರುಗಿ ನೋಡುವಂತಹ ಸಾಧನೆ ಮಾಡಿದ್ದರು. ಪಾಕಿಸ್ತಾನದ ಅತ್ಯಂತ ಕಠಿಣ ಪರೀಕ್ಷೆ ಎಂದು ಕರೆಸಿಕೊಳ್ಳುವ 'ಸೆಂಟ್ರಲ್ ಸುಪೀರಿಯರ್ ಸರ್ವೀಸಸ್(CSS)' ಅನ್ನು ಮೊದಲ ಪ್ರಯತ್ನದಲ್ಲೇ ಪಾಸು ಮಾಡಿದ್ದರು. ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಹಿಂದೂ ಮಹಿಳೆ ಇಂತಹ ಯಶಸ್ಸನ್ನು ಸಾಧಿಸಿದ್ದರು.
ಕಠಿಣ ಪರೀಕ್ಷೆ ಪಾಸು ಮಾಡಿದ್ದ ಸನಾ
'ಎಕ್ಸ್‌ಪ್ರೆಸ್ ಟ್ರಿಬ್ಯೂನ್' ವರದಿಯ ಪ್ರಕಾರ, ಪಾಕಿಸ್ತಾನದ ಈ ಪರೀಕ್ಷೆಯು ಎಷ್ಟು ಕಷ್ಟಕರವಾಗಿದೆ ಎಂದರೆ, 2% ಕ್ಕಿಂತ ಕಡಿಮೆ ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಿದ್ದಾರೆ ಎಂದು ಹೇಳಲಾಗುತ್ತದೆ. ಈ ಪರೀಕ್ಷೆಯ ಕಠಿಣತೆಯನ್ನು ಇದರಲ್ಲೇ ಅಳೆಯಬಹುದಾಗಿದೆ. ಸೆಂಟ್ರಲ್ ಸುಪೀರಿಯರ್ ಸರ್ವೀಸಸ್ (ಸಿಎಸ್ಎಸ್) ಮೂಲಕ ಪಾಕಿಸ್ತಾನದಲ್ಲಿ ಆಡಳಿತಾತ್ಮಕ ಸೇವೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಇದನ್ನೂ ಓದಿ: Nepal Tour: ನೇಪಾಳಕ್ಕೆ ಪ್ರವಾಸ ಹೋಗಬೇಕೆಂಬ ಆಸೆ ಇದೆಯೇ? ಇದೋ IRCTCಯಿಂದ ಬಂಪರ್ ಆಫರ್!
ಪೋಷಕರ ಕನಸನ್ನೂ ನೆರವೇರಿಸಿದ್ದ ಸನಾ
ಸನಾ ಅವರ ಪೋಷಕರಿಗೆ ತಮ್ಮ ಮಗಳು ಇಂತಹ ಆಡಳಿತಾತ್ಮಕ ಸೇವೆ ಸೇರುವುದು ಇಷ್ಟವಿಲ್ಲವಂತೆ. ಅವರಿಗೆ ಸನಾ ವೈದ್ಯೆಯಾಗಬೇಕೆಂಬ ಕನಸಿದೆಯಂತೆ. ಅದಕ್ಕೆ ಸನಾ ತಮ್ಮ ಗುರಿ ಹಾಗೂ ಹೆತ್ತವರ ಬಯಕೆ ಎರಡನ್ನೂ ನೆರವೇರಿಸಿದ್ದಾರೆ. ಸನಾ ವರು ಶಹೀದ್ ಮೊಹತರ್ಮ ಬೆನಜೀರ್ ಭುಟ್ಟೋ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಮೆಡಿಸಿನ್‌ನಲ್ಲಿ ಪದವಿ ಪಡೆದಿದ್ದಾರೆ. ನಂತರ ಅವರು ಸರ್ಜನ್ ಆಗಿಯೂ ಕೆಲಸ ನಿರ್ವಹಿಸಿದ್ದರು. ಮೂತ್ರಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ, ಅವರು ಕೇಂದ್ರೀಯ ಉನ್ನತ ಸೇವೆಗಳಿಗೆ ತಯಾರಿ ಆರಂಭಿಸಿದ್ದರು.
ಆ ಪಯತ್ನದ ಫಲವಾಗಿ ಇಂದು ಸನಾ ಅವರು ಪಾಕಿಸ್ತಾನ ಆಡಳಿತಾತ್ಮಕ ಸೇವೆಗೆ ಸೇರಿದ್ದಾರೆ. ಆ ಮೂಲಕ ಮತ್ತೊಂದು ಸಾಧನೆ ಮಾಡಿ ಹೆತ್ತವರ ಹೆಮ್ಮೆ ಮತ್ತು ಸಂಭ್ರಮವನ್ನು ದುಪ್ಪಟ್ಟು ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ