ನವದೆಹಲಿ: ಕರೆನ್ಸಿ ನೋಟುಗಳಲ್ಲಿ (Indian Currency) ಮುದ್ರಿತವಾಗಿರುವ ಮಹಾತ್ಮಾ ಗಾಂಧೀಜಿ (Mahatma Gandhi) ಅವರ ಚಿತ್ರದ ಬದಲಿಗೆ ವಿ ಡಿ ಸಾವರ್ಕರ್ (VD Savarkar) ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರ ಚಿತ್ರವನ್ನು ಮುದ್ರಿಸಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ (Hindu Mahasabha) ಒತ್ತಾಯಿಸಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವರ್ಕರ್ ಅವರ ಪಾತ್ರ ಹಿರಿದಾದುದು. ಆದರೆ ಸರಕಾರವಾಗಲಿ, ಆಡಳಿತ ವರ್ಗವಾಗಲಿ ಅವರನ್ನು ಸ್ಮರಿಸುತ್ತಿಲ್ಲ ಹಾಗೂ ಅವರಿಗೆ ಸರಿಯಾದ ಸ್ಥಾನವನ್ನು ನೀಡಿಲ್ಲ ಎಂದು ಹಿಂದೂ ಮಹಾಸಭಾ ಆರೋಪಿಸಿದೆ.
ಇದನ್ನೂ ಓದಿ: Karnataka Winter Session: ಸದನದಲ್ಲಿ ಸಾವರ್ಕರ್ ಫೋಟೋ; ಬಿಜೆಪಿ ಲೆಕ್ಕಾಚಾರ ಉಲ್ಟಾ, ಕಾಂಗ್ರೆಸ್ ಸಖತ್ ಕೌಂಟರ್!
ಸಾವರ್ಕರ್‌ಗೆ ಮೋದಿ ಸರಕಾರ ಗೌರವ ನೀಡಬೇಕು
ಸಂಸತ್ ಭವನಕ್ಕೆ ಹೋಗುವ ರಸ್ತೆಗೆ ಸಾವರ್ಕರ್ ಅವರ ಹೆಸರನ್ನು ಮರುನಾಮಕರಣ ಮಾಡಬೇಕೆಂದು ಒತ್ತಾಯಿಸಿರುವ ಹಿಂದೂ ಮಹಾಸಭಾ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿದೆ. ಅಲ್ಲದೇ, ದೇಶಭಕ್ತನಾಗಿ ದೇಶಕ್ಕೆ ಸಾವರ್ಕರ್ ನೀಡಿದ ಸೇವೆ ಅಷ್ಟಿಷ್ಟಲ್ಲ, ಹಾಗಾಗಿ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದೂ ಮಹಾಸಭಾದ ಮಾಜಿ ಅಧ್ಯಕ್ಷ ಸಾವರ್ಕರ್ ಅವರಿಗೆ ಮೋದಿ ಸರಕಾರ ಈ ಮೂಲಕವಾದರೂ ಸೂಕ್ತ ಗೌರವ ಸಲ್ಲಿಸಬೇಕು. ಈ ಅರ್ಹತೆ ಪಡೆಯುವ ಹಕ್ಕು ವೀರ ಸಾವರ್ಕರ್‌ಗೆ ಇದೆ. ಒಬ್ಬ ಸ್ವಾತಂತ್ರ್ಯ ಯೋಧನಿಗೆ ಸಲ್ಲಿಸುವ ನಿಜವಾದ ಮಾನ್ಯತೆ ಇದಾಗಿದೆ ಎಂದು ಮಹಾಸಭಾ ಮುಖಂಡರು ಹೇಳಿದ್ದಾರೆ.
ಭಾರತ ರತ್ಮ ಗೌರವ
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸಾವರ್ಕರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರತಿಪಾದಿಸುವ ಮೂಲಕ ಹಿಂದೂ ಮಹಾಸಭಾ ಸಾವರ್ಕರ್‌ಗೆ ಭಾರತರತ್ನ ಗೌರವ ನೀಡಬೇಕು ಎಂದು ಆಗ್ರಹಿಸಿದೆ. ಹಿಂದೂ ಮಹಾಸಭಾದ ಮುಖ್ಯಸ್ಥ ಸ್ವಾಮಿ ಚಕ್ರಪಾಣಿ ಅವರು ಸಾವರ್ಕರ್‌ಗೆ ಭಾರತ ರತ್ನವನ್ನು ಕೋರಿದ ನಂತರ ಇಂತಹ ಬೇಡಿಕೆಯನ್ನು ಮಹಾಸಭೆ ಮುಂದಿಟ್ಟಿದೆ. ಪತ್ರಿಕಾ ವರದಿಯ ಪ್ರಕಾರ, ಉತ್ತರ ಪ್ರದೇಶದ ಫೈಜಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾ ಕಾರ್ಯಕ್ರಮದ ಸಂದರ್ಭದಲ್ಲಿ ಈ ಬೇಡಿಕೆಯನ್ನು ಸಲ್ಲಿಸಲಾಗಿದೆ.
ಯುವಕರಿಗೆ ಪ್ರೇರಣೆ
ಅಪಾಯಕಾರಿ ಪರಿಸ್ಥಿತಿಗಳಲ್ಲಿ ಎಂದಿಗೂ ಭರವಸೆಯನ್ನು ಕಳೆದುಕೊಳ್ಳದೆ, ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಸಹಾಯ ಮಾಡುವಲ್ಲಿ ಸಾವರ್ಕರ್ ನಿರ್ಣಾಯಕ ಪಾತ್ರವನ್ನು ಹೇಗೆ ನಿರ್ವಹಿಸಿದರು ಎಂಬುದನ್ನು ವಿವರಿಸಿರುವ ಅಶೋಕ್ ಶರ್ಮ, ಸಾವರ್ಕರ್ ಅವರ ಚಿಂತನೆಗಳು ಮತ್ತು ವರ್ತನೆಗಳು ಇಂದಿನ ಯುವಕರಿಗೆ ಪ್ರಮುಖ ಪ್ರೇರಣೆಯಾಗಬಹುದು ಎಂದು ಅವರು ಪ್ರತಿಪಾದಿಸಿದ್ದಾರೆ.
ರಾಷ್ಟ್ರದ ಪಿತಾಮಹ ಎಂಬ ಗೌರವ
ಸ್ವಾತಂತ್ರ್ಯ ನಂತರದ ಸರ್ಕಾರಗಳು ತಮ್ಮ ಕಾರ್ಯಗಳು ಮತ್ತು ಆಲೋಚನೆಗಳಿಗೆ ಸರಿಯಾದ ಗೌರವವನ್ನು ನೀಡದ ಬಗ್ಗೆ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾವರ್ಕರ್ ಅವರನ್ನು "ರಾಷ್ಟ್ರದ ಪಿತಾಮಹ" ಎಂದು ಕರೆಯಬೇಕು. ಅವರಿಗೆ ಇನ್ನೂ ಭಾರತ ರತ್ನ ಪ್ರಶಸ್ತಿ ನೀಡದಿರುವುದು ಅಥವಾ ಭಾರತೀಯ ಕರೆನ್ಸಿ ನೋಟುಗಳಲ್ಲಿ ಅವರ ಮುಖವನ್ನು ಮುದ್ರಿಸದೇ ಇರುವುದು ಅತ್ಯಂತ ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.
ಒಂದು ಕಡೆ ಹಿಂದೂ ಮಹಾಸಭಾದಂತಹ ಗುಂಪುಗಳು (ಇದು ಸಾವರ್ಕರ್ ಅವರ ಸಹ-ಸ್ಥಾಪನೆ), ಹಿಂದುತ್ವದ ಹಿರಿಮೆಯನ್ನು ಗೌರವದಿಂದ ಹಿಡಿದಿಟ್ಟುಕೊಳ್ಳುತ್ತದೆ, ಮತ್ತೊಂದೆಡೆ ಎಡಪಂಥೀಯ ಸ್ಥಾಪನೆಯು ಅವರನ್ನು ತೀವ್ರ ತಿರಸ್ಕಾರ ಮತ್ತು ದ್ವೇಷದಿಂದ ಕಾಣುತ್ತಿದೆ ಎಂಬುದನ್ನೂ ಸಭೆಯಲ್ಲಿ ಉಲ್ಲೇಖಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ