ಹಿಂದೂ ಮುಖಂಡ ಕಮಲೇಶ್ ಹತ್ಯೆ ಪ್ರಕರಣ: ಮಿಠಾಯಿ ಬಾಕ್ಸ್ ಕೊಟ್ಟಿತ್ತು ಸುಳಿವು; ಐವರ ಬಂಧನ

ಶಂಕಿತರಲ್ಲಿ ಒಬ್ಬಾತ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಮತ್ತೊಬ್ಬ ಟೈಲರ್ ಆಗಿದ್ದಾನೆ. ಮೂರನೇ ವ್ಯಕ್ತಿಯು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾನೆನ್ನಲಾಗಿದೆ. ಈ ಮೂವರಷ್ಟೇ ಅಲ್ಲದೇ ಇನ್ನೂ ಇಬ್ಬರನ್ನು ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.

Vijayasarthy SN | news18
Updated:October 19, 2019, 2:34 PM IST
ಹಿಂದೂ ಮುಖಂಡ ಕಮಲೇಶ್ ಹತ್ಯೆ ಪ್ರಕರಣ: ಮಿಠಾಯಿ ಬಾಕ್ಸ್ ಕೊಟ್ಟಿತ್ತು ಸುಳಿವು; ಐವರ ಬಂಧನ
ಸಿಸಿಟಿವಿಯಲ್ಲಿ ಕಾಣುವ ಕಮಲೇಶ್ ತಿವಾರಿ ಹಂತಕರು
  • News18
  • Last Updated: October 19, 2019, 2:34 PM IST
  • Share this:
ಲಕ್ನೋ(ಅ. 19): ಮಾಜಿ ಹಿಂದೂ ಮಹಾಸಭಾ ಮುಖಂಡ ಕಮಲೇಶ್ ತಿವಾರಿ ಅವರ ಹತ್ಯೆಯಾಗಿ 24 ಗಂಟೆಯೊಳಗೆ ಪೊಲೀಸರು ಐವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ಇಬ್ಬರನ್ನು ಹಾಗೂ ಗುಜರಾತ್​ನ ಸೂರತ್ ನಗರದಲ್ಲಿ ಅಲ್ಲಿಯ ಭಯೋತ್ಪಾದನಾ ನಿಗ್ರಹ ಪಡೆಯ ಪೊಲೀಸರು ಮೂವರನ್ನು ಬಂಧಿಸಿದ್ಧಾರೆ. ಕಮಲೇಶ್ ಹತ್ಯೆಗೆ ಇವರು ಸೂರತ್​ನಿಂದಲೇ ಸಂಚು ರೂಪಿಸಿದ್ದರೆನ್ನಲಾಗಿದೆ. 2015ರಲ್ಲಿ ಕಮಲೇಶ್ ತಿವಾರಿ ಅವರು ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಇವರು ಕಮಲೇಶ್ ಹತ್ಯೆಗೆ ನಿರ್ಧಾರ ಮಾಡಿದ್ದರೆಂಬ ಸಂಗತಿ ಬೆಳಕಿಗೆ ಬಂದಿದೆ.

ಅಷ್ಟಕ್ಕೂ ಪೊಲೀಸರು ಈ ಪ್ರಕರಣವನ್ನು ಭೇದಿಸಲು ಸಾಧ್ಯವಾಗಿದ್ದು ಘಟನಾ ಸ್ಥಳದಲ್ಲಿದ್ದ ಒಂದು ಸ್ವೀಟ್ ಬಾಕ್ಸ್. ಲಕ್ನೋದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ ಓ.ಪಿ. ಸಿಂಗ್ ಅವರು ಈ ರೀತಿ ವಿವರಿಸುತ್ತಾರೆ:

“ಶುಕ್ರವಾರ ನಾನು ಹಿರಿಯ ಅಧಿಕಾರಿಗಳೊಂದಿಗೆ ಅಪರಾಧ ನಡೆದ ಸ್ಥಳ ತಲುಪಿದೆ. ಅಲ್ಲಿ ಕೆಲ ಸುಳಿವು ಸಿಕ್ಕ ಬೆನ್ನಲ್ಲೇ ಬೇಗನೇ ಪ್ರಕರಣದ ಜಾಡು ಹಿಡಿಯುವ ವಿಶ್ವಾಸ ಬಂತು. ಸ್ಥಳದಲ್ಲಿ ಸಿಕ್ಕ ಮಿಠಾಯಿ ಬಾಕ್ಸ್ ಪ್ರಮುಖ ಸುಳಿವು ನೀಡಿತು. ಆ ಬಾಕ್ಸ್​ನಲ್ಲಿ ಸೂರತ್​ನ ಮಿಠಾಯಿ ಅಂಗಡಿಯೊಂದರ ಹೆಸರಿತ್ತು. ನಾವು ಕೂಡಲೇ ಗುಜರಾತ್ ಪೊಲೀಸ್ ಮತ್ತು ಅಲ್ಲಿಯ ಎಟಿಎಸ್ ಪಡೆ ಸಂಪರ್ಕ ಮಾಡಿದೆವು. ಮೂರು ಶಂಕಿತರನ್ನು ಬಂಧಿಸಿ ವಿಚಾರಣೆ ನಡೆಸಿದ್ದೇವೆ” ಎಂದು ಓ.ಪಿ. ಸಿಂಗ್ ತಿಳಿಸಿದ್ದಾರೆ.

ಶಂಕಿತರಲ್ಲಿ ಒಬ್ಬಾತ ಸೀರೆ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆ. ಮತ್ತೊಬ್ಬ ಟೈಲರ್ ಆಗಿದ್ದಾನೆ. ಮೂರನೇ ವ್ಯಕ್ತಿಯು ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಾನೆನ್ನಲಾಗಿದೆ. ಈ ಮೂವರಷ್ಟೇ ಅಲ್ಲದೇ ಇನ್ನೂ ಇಬ್ಬರನ್ನು ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ.

“ಪ್ರವಾದಿಯವರ ಬಗ್ಗೆ ತಿವಾರಿ ಅವಹೇಳನ ಮಾಡಿದ್ದು ಇವರಿಗೆ ಬಹಳ ಸಿಟ್ಟು ತಂದಿತ್ತು ಎಂಬುದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿದೆ. ನಾವಿನ್ನೂ ಸಾಕ್ಷ್ಯಗಳನ್ನ ಕಲೆಹಾಕುತ್ತಿದ್ಧೇವೆ. ಈ ಪ್ರಕರಣದಲ್ಲಿ ಒಂದು ರೂಪು ಕಂಡುಕೊಳ್ಳಬೇಕಾದರೆ ಇನ್ನಷ್ಟು ತನಿಖೆಯ ಅಗತ್ಯವಿದೆ. ಸದ್ಯಕ್ಕಂತೂ ಈ ಪ್ರಕರಣದ ಹಿಂದೆ ಯಾವುದೇ ಉಗ್ರ ಸಂಘಟನೆಯ ಕೈವಾಡ ಇದ್ದಂತಿಲ್ಲ” ಎಂದು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ಧಾರೆ.

ಇನ್ನು, ಕಮಲೇಶ್ ತಿವಾರಿ ಮನೆಗೆ ಹೋಗಿ ಹತ್ಯೆಗೈದಿದ್ದ ಇಬ್ಬರು ವ್ಯಕ್ತಿಗಳ ಸುಳಿವು ಸಿಕ್ಕಿಲ್ಲ. ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿ ಇವರ ಗುರುತು ಹಚ್ಚಲಾಗಿದೆ. ಆದರೆ, ಸದ್ಯಕ್ಕೆ ತಪ್ಪಿಸಿಕೊಂಡಿರುವ ಇವರಿಬ್ಬರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ.

ಇದೇ ವೇಳೆ, ಇವತ್ತು ಬೆಳಗ್ಗೆ ಕಮಲೇಶ್ ತಿವಾರಿ ತಾಯಿ ಅವರು ಬಿಜೆಪಿ ನಾಯಕ ಶಿವಕಮಾರ್ ಗುಪ್ತ ಮೇಲೆ ಆರೋಪ ಮಾಡಿದ್ದರು. ತನ್ನ ಮಗನ ಹತ್ಯೆಗೆ ಶಿವಕುಮಾರ್ ಗುಪ್ತ ಜವಾಬ್ದಾರರು ಎಂದು ಆಕೆ ಮಾಧ್ಯಮಗಳಿಗೆ ತಿಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಡಿಜಿಪಿ ಓ.ಪಿ. ಸಿಂಗ್ ತನಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.2015ರಲ್ಲಿ ಕಮಲೇಶ್ ತಿವಾರಿ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಕೆಲ ಇಸ್ಲಾಮ್ ಧರ್ಮಗುರುಗಳು ಈತನ ತಲೆದಂಡಕ್ಕೆ ಕರೆ ನೀಡಿದ್ದರು. ಹಾಗೆಯೇ, ಅಂದಿನ ಅಖಿಲೇಶ್ ಯಾದವ್ ಸರ್ಕಾರವು ಈತನನ್ನು ಬಂಧಿಸಿತು. 7 ತಿಂಗಳ ಬಳಿಕ ಜೈಲಿಂದ ಬಿಡುಗಡೆಯಾದ ಈತನ ಪ್ರಾಣಕ್ಕೆ ಅಪಾಯವಿತ್ತೆನ್ನಲಾಗಿದೆ.

(ವರದಿ: ಖಾಜಿ ಫರಾಜ್ ಅಹ್ಮದ್)
First published:October 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ