HOME » NEWS » National-international » HIMANTA BISWA SARMA SET TO BE NEXT ASSAM CM MAK

Himanta Biswa: ಸರ್ಬಾನಂದ ಸೋನೊವಾಲ್ ರಾಜೀನಾಮೆ; ಅಸ್ಸಾಂಗೆ ಹೊಸ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿರುವ ಹಿಮಂತ ಶರ್ಮಾ

ಹಿಮಂತ ಬಿಸ್ವಾ ಶರ್ಮಾ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸೇರಿದ್ದರು. ನಂತರ ಪ್ರಬಲವಾಗಿ ಬೆಳೆದ ಅವರನ್ನು ಪಕ್ಷದ ಟ್ರಬಲ್ ಶೂಟರ್ ಎನ್ನಲಾಗುತ್ತದೆ. ಪ್ರಚೋದನಾಕಾರಿ ಹೇಳಿಕೆಗಳಿಂದಾಗಿ ಕುಖ್ಯಾತಿಯನ್ನೂ ಅವರು ಗಳಿಸಿದ್ದಾರೆ.

news18-kannada
Updated:May 9, 2021, 2:39 PM IST
Himanta Biswa: ಸರ್ಬಾನಂದ ಸೋನೊವಾಲ್ ರಾಜೀನಾಮೆ; ಅಸ್ಸಾಂಗೆ ಹೊಸ ಸಿಎಂ ಆಗಿ ಅಧಿಕಾರ ಸ್ವೀಕರಿಸಲಿರುವ ಹಿಮಂತ ಶರ್ಮಾ
ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ.
  • Share this:
ಅಸ್ಸಾಂ (ಮೇ 09); ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಅಸ್ಸಾಂನಲ್ಲಿ ಮತ್ತೊಂದು ಅವಧಿಗೆ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ, ಈ ಹಿಂದಿನ ಅವಧಿಯಲ್ಲಿ ಎನ್​ಡಿಎ ಮೈತ್ರಿಕೂಟದ ಸಿಎಂ ಆಗಿದ್ದ ಸರ್ಬಾನಂದ ಸೋನೊವಾಲ್ ಮತ್ತೊಮ್ಮೆ ಸಿಎಂ ಆಗುವ ಕುರಿತು ಸಾಕಷ್ಟು ಪ್ರಶ್ನೆಗಳು ಉದ್ಭವಿಸಿದ್ದವು. ಹೀಗಾಗಿ ಅಸ್ಸಾಂ ರಾಜ್ಯದ ನೂತನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿತ್ತು. ಆದರೆ, ಸರ್ಬಾನಂದ ಸೋನೊವಾಲ್ ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅದರ ಬೆನ್ನಿಗೆ ಅಸ್ಸಾಂನ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ತೆರೆಬಿದ್ದಿದೆ. ಕಳೆದ ಅವಧಿಯಲ್ಲಿ ಆರೋಗ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಹಿಮಂತ ಬಿಸ್ವಾ ಶರ್ಮಾ ಅವರನ್ನು ಅಸ್ಸಾಂನ ಎನ್​ಡಿಎ ಮೈತ್ರಿಯ ನೂತನ ಮುಖ್ಯಮಂತ್ರಿ ಎಂದು ಬಿಜೆಪಿ ಇಂದು ಅಧಿಕೃತವಾಗಿ ಘೋಷಿಸಿದೆ.

ಅಸ್ಸಾಂನ ಸ್ಥಳೀಯ ಸೋನೊವಾಲ್-ಕಾಚಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ ಸರ್ಬಾನಂದ ಸೋನೊವಾಲ್ ಮತ್ತು ಈಶಾನ್ಯ ರಾಜ್ಯಗಳ ಎನ್‌ಡಿಎ ಕನ್ವೀನರ್ ಆಗಿರುವ ಅಸ್ಸಾಮೀ ಬ್ರಾಹ್ಮಣರಾದ ಹಿಮಂತ ಬಿಸ್ವಾ ಶರ್ಮಾರವರ ನಡುವೆ ಮೇ 02 ರಂದು ಫಲಿತಾಂಶ ಪ್ರಕಟವಾದಾಗಿನಿಂದಲೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ನಿನ್ನೆ ಇಬ್ಬರು ನಾಯಕರು ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್‌ರವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಹಿಮಂತ ಬಿಸ್ವಾ ಶರ್ಮಾ 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಸೇರಿದ್ದರು. ನಂತರ ಪ್ರಬಲವಾಗಿ ಬೆಳೆದ ಅವರನ್ನು ಪಕ್ಷದ ಟ್ರಬಲ್ ಶೂಟರ್ ಎನ್ನಲಾಗುತ್ತದೆ. ಪ್ರಚೋದನಾಕಾರಿ ಹೇಳಿಕೆಗಳಿಗೆ ಕುಖ್ಯಾತಿಯಾದ ಅವರು ಈ ಚುನವಣೆಯ ಸಂದರ್ಭದಲ್ಲಿಯೂ ಸಹ "ಹಗ್ರಾಮ ಮೊಹಿಲರಿ ಉಗ್ರವಾದ ಚಟುವಟಿಕೆಯಲ್ಲಿ ತೊಡಗಿದರೆ… ಆತ ಜೈಲಿಗೆ ಹೋಗುತ್ತಾನೆ. ಇದು ನೇರವಾದ ಮಾತು… ಈಗಾಗಲೇ ಸಾಕಷ್ಟು ಪುರಾವೆಗಳು ದೊರೆತಿವೆ. ಈ ಪ್ರಕರಣವನ್ನು ಎನ್ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಗೆ ನೀಡಲಾಗುತ್ತಿದೆ" ಎಂದು ಬೆದರಿಕೆ ಹಾಕಿದ್ದರು.

ಆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ 48 ಗಂಟೆಗಳ ಕಾಲ ಪ್ರಚಾರದಿಂದ ಚುನಾವಣಾ ಆಯೋಗ ಅವರಿಗೆ ನಿಷೇಧ ಹೇರಿತ್ತು. ಆದರೂ ಬಿಜೆಪಿ ನಾಯಕರು ಅಂತಿಮವಾಗಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಸಿಎಂ ಪಟ್ಟ ನೀಡಲೂ ಮನಸ್ಸು ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್ ನಿರ್ಧಾರ ಸಾಮಾನ್ಯವಾಗಿ ಅಚ್ಚರಿಗೂ ಕಾರಣವಾಗಿದೆ. ಪ್ರಸ್ತುತ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸರ್ಬಾನಂದ ಸೋನೊವಾಲ್‌ಗೆ ಕೇಂದ್ರ ಸಂಪುಟದಲ್ಲಿ ಸ್ಥಾನಮಾನ ನೀಡಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ: ಗುಜರಾತ್​ನ ಗೋಶಾಲೆಯಲ್ಲಿ ಕೋವಿಡ್ ಸೆಂಟರ್; ರೋಗಿಗಳಿಗೆ ಹಾಲು, ಗಂಜಲದಿಂದ ಔಷಧ

ಕೇಂದ್ರ ಬಿಜೆಪಿ ಸರ್ಕಾರ ಸಿಎಎ ಕಾಯ್ದೆಯನ್ನು ಜಾರಿಗೆ ತರಲು ಮುಂದಾದಾಗ ಮೊದಲು ಜನಾಕ್ರೋಶ ಹೊರಬಿದ್ದದ್ದೆ ಅಸ್ಸಾಂನಲ್ಲಿ. ಅಸ್ಸಾಂ ಮತ್ತು ಎಲ್ಲಾ ಈಶಾನ್ಯ ರಾಜ್ಯಗಳೂ ಒಟ್ಟಾಗಿ ಈ ಕಾಯ್ದೆಯನ್ನು ವಿರೋಧಿಸಿದ್ದವು. ದೊಡ್ಡ ಮಟ್ಟದ ವಿದ್ಯಾರ್ಥಿ ಹೋರಾಟ ಮತ್ತು ಬಂದ್​ಗಳಿಗೂ ಈ ಕಾಯ್ದೆಯ ವಿರೋಧಿ ಅಲೆ ಕಾರಣವಾಗಿತ್ತು. ತದನಂತರ ಈ ಹೋರಾಟ ಹಂತಹಂತವಾಗಿ ದೇಶದ ಇತರೆಡೆಗೂ ವ್ಯಾಪಿಸಿತ್ತು. ಆದರೆ, ಹೋರಾಟದ ಕೇಂದ್ರ ಅಸ್ಸಾಂ ರಾಜ್ಯವೇ ಆಗಿತ್ತು ಎಂಬುದು ಉಲ್ಲೇಖಾರ್ಹ.
Youtube Video
ಅಲ್ಲದೆ, ಅಸ್ಸಾಂನಲ್ಲಿ ಆಡಳಿತ ವಿರೋಧಿ ಅಲೆಯೂ ಇತ್ತು. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಜನ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದೇ ಊಹಿಸಲಾಗಿತ್ತು. ಅದರೆ, ಚುನಾವಣಾ ಫಲಿತಾಂಶ ಹೊರಬಿದ್ದಾಗ ಅಸ್ಸಾಂನ 126 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 60 ಸ್ಥಾನಗಳಲ್ಲಿ ಜಯಗಳಿಸಿತ್ತು. ಎನ್‌ಡಿಎ ಮಿತ್ರಪಕ್ಷಗಳಾದ ಎಜಿಪಿ 09 ಮತ್ತು ಯುಪಿಪಿಎಲ್ 06 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಸ್ಸಾಂ ಅಚ್ಚರಿ ಫಲಿತಾಂಶಕ್ಕೆ ವೇದಿಕೆಯಾಗಿತ್ತು.
Published by: MAshok Kumar
First published: May 9, 2021, 2:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories