Hijab Row: ಹಿಜಾಬ್ ವಿವಾದದ ಬಗ್ಗೆ ತುರ್ತು ಅರ್ಜಿ ವಿಚಾರಣೆಗೆ ಒಪ್ಪದ ಸುಪ್ರೀಂಕೋರ್ಟ್

ಹಿಜಾಬ್ ವಿವಾದ ಆರಂಭ ಆದಾಗಲೇ ಸುಪ್ರೀಂ ಕೋರ್ಟಿನಲ್ಲಿ ಹಲವು ಅರ್ಜಿಗಳು ದಾಖಲಾಗಿದ್ದವು. ಸುಪ್ರೀಂ ಕೋರ್ಟ್ ಯಾವ ಅರ್ಜಿಯನ್ನೂ ಮಾನ್ಯ ಮಾಡಿರಲಿಲ್ಲ. ಈಗ ರಾಜ್ಯ ಹೈಕೋರ್ಟ್ ತೀರ್ಪು ಪ್ರಕಟವಾಗಿದ್ದು ಬೇರೆ ಬೇರೆ ಪಾರ್ಟಿಗಳು ಸಲ್ಲಿಸುವ ಅರ್ಜಿಗಳನ್ನು ಮುಂದಿನವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್

  • Share this:
ನವದೆಹಲಿ, ಮಾ. 16: ಶಾಲೆಗಳಲ್ಲಿ ಹಿಜಾಬ್ (Hijab) ಧರಿಸುವ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ (ಮಾರ್ಚ್ 15ರಂದು) ಕರ್ನಾಟಕ ಹೈಕೋರ್ಟ್ (Karnataka High Court) ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ (Supreme Court) ಮೇಲ್ಮನವಿ ಸಲ್ಲಿಸಲಾಗಿದೆ‌. ಈ ಬಗ್ಗೆ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಕೂಡ ಮನವಿ ಮಾಡಿಕೊಳ್ಳಲಾಗಿದೆ. ಆದರೆ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿಲ್ಲ. ಹೋಳಿ ಹಬ್ಬದ (Holi Festival)ಬಳಿಕ ವಿಚಾರಣೆಗೆ ದಿನಾಂಕ ನಿಗಧಿ ಮಾಡಲಾಗುವುದು ಎಂದು ತಿಳಿಸಿದೆ. ನಿನ್ನೆ ಹೈಕೋರ್ಟ್ ತೀರ್ಪು ಹೊರಬೀಳುತ್ತಿದ್ದಂತೆ ನಿಬಾ ನಾಜ್ ಎಂಬ ವಿದ್ಯಾರ್ಥಿನಿ ಸುಪ್ರೀಂ ಕೋರ್ಟಿನಲ್ಲಿ ವಕೀಲ ಅನಸ್ ತನ್ವೀರ್ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದರು.

ಉಡುಪಿಯಲ್ಲಿ ಪ್ರತಿಭಟನೆ ಮಾಡಿದ ಆರು ವಿದ್ಯಾರ್ಥಿನಿಯರ ಪರ ಹೈಕೋರ್ಟಿನಲ್ಲಿ ವಾದ ಮಂಡಿಸಿದ್ದ ವಕೀಲರಾದ ಸಂಜಯ್ ಹೆಗಡೆ ಮತ್ತು ದೇವದತ್ ಕಾಮತ್ ಅವರು ಇಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದರು. ಅರ್ಜಿ ಸಲ್ಲಿಕೆಯ ಬಳಿಕ ಓಪನ್ ಕೋರ್ಟಿನಲ್ಲಿ ಮೆನ್ಷನ್ ಮಾಡಿ ತುರ್ತಾಗಿ ವಿಚಾರಣೆ ನಡೆಸಬೇಕೆಂದು ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್ ಹೋಳಿ ಹಬ್ಬದ ಬಳಿಕ ವಿಚಾರಣೆಗೆ ದಿನಾಂಕ ನಿಗಧಿ ಮಾಡಲಾಗುವುದು ಎಂದು ಹೇಳಿತು. ಆಗ ವಕೀಲ ಸಂಜಯ್ ಹೆಗಡೆ ಸೋಮವಾರವಾದರೂ ವಿಚಾರಣೆ ನಡೆಸಿ ಎಂದು ಕೇಳಿಕೊಂಡರು. ಸುಪ್ರೀಂ ಕೋರ್ಟ್ ಅದಕ್ಕೂ ಮಾನ್ಯ ಮಾಡಲಿಲ್ಲ.

ಇತರರಿಂದಲೂ ಪ್ರತ್ಯೇಕ ಅರ್ಜಿಗಳ ಸಲ್ಲಿಕೆ ಸಾಧ್ಯತೆ

ಅಖಿಲ ಭಾರತ ಯುವ ಕಾಂಗ್ರೆಸ್ ಈ ಹಿಂದೆಯೇ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಈಗ ರಾಜ್ಯ ಹೈಕೋರ್ಟ್ ತೀರ್ಪು ಹೊರಬಿದ್ದಿರುವ ಹಿನ್ನಲೆಯಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದೇ ರೀತಿ ಹಿಂದೆ ಅರ್ಜಿ ಸಲ್ಲಿಸಿದ್ದ ರಾಜ್ಯದ ವಕ್ಫ್ ಬೋರ್ಡ್, ಡಾ. ಜೆ ಹಳ್ಳಿ ಫೆಡರೇಷನ್  ಆಫ್ ಮಸೀದ್, ಮದ್ರಾಸ್ ಅ್ಯಂಡ್ ವಕ್ಫ್ ಇನ್ಸ್ಟಿಟ್ಯೂಟಿಷನ್ ಗಳು ಕೂಡ ಪ್ರತ್ಯೇಕವಾದ ಅರ್ಜಿಗಳನ್ನು ಸಲ್ಲಿಸುವ ಸಾಧ್ಯತೆಗಳಿವೆ.

ಏಕರೂಪ ಸಮವಸ್ತ್ರ ಕುರಿತು ಕೇಳುವ ಸಾಧ್ಯತೆ

ಹಿಜಾಬ್ ಪ್ರಕರಣ ಶುರುವಾಗುತ್ತಿದ್ದಂತೆ ಇಡೀ ದೇಶಾದ್ಯಂತ ಏಕರೂಪದ ಸಮವಸ್ತ್ರ ಇರುವಂತಹ ಕಾನೂನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಿದ್ದ ವಕೀಲ ನಿಖೀಲ್ ಉಪಾಧ್ಯಾಯ ಮತ್ತೊಮ್ಮೆ ಕೋರ್ಟ್ ಕದ ತಟ್ಟುವ ಸಾಧ್ಯತೆ ಇದೆ. ರಾಜ್ಯ ಹೈಕೋರ್ಟಿನ ತೀರ್ಪು ಎಲ್ಲಾ ಶಾಲೆಗಳಿಗೂ ಏಕರೂಪವಾಗಿ ಅನ್ವಯ ಆಗುತ್ತದೆ ಎಂಬ ರೀತಿಯಲ್ಲಿ ಚರ್ಚೆ ನಡೆಯುತ್ತಿರುವುದರಿಂದ ಖಾಸಗಿ ಶಾಲಾ ಆಡಳಿತ ಮಂಡಳಿ ಪರ ವಕೀಲರು ಸ್ಪಷ್ಟೀಕರಣ ಕೋರಿ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.

ಹಿಂದೂ ಸೇನೆಯಿಂದ ಕೇವಿಯೆಟ್ ಸಲ್ಲಿಕೆ

ಈ ನಡುವೆ ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮನ್ನೂ ಭಾಗಿದಾರರನ್ನಾಗಿ ಮಾಡಿಕೊಳ್ಳಿ ಎಂದು ಹಿಂದೂ ಸೇನೆ ವತಿಯಿಂದ ಸುಪ್ರೀಂ ಕೋರ್ಟಿನಲ್ಲಿ ಕೇವಿಯೆಟ್ ಸಲ್ಲಿಕೆಯಾಗಿದೆ. ಹಿಂದೂ ಸೇನೆಯ ರಾಷ್ಟ್ರೀಯ ಉಪಾಧ್ಯಕ್ಷ ಸುರ್ಜಿತ್ ಸಿಂಗ್ ಯಾದವ್ ಅವರ ಪರವಾಗಿ ವಕೀಲ ಅರುಣ್ ಕುಮಾರ್ ಸಿನ್ಹಾ ಅವರು ಕೇವಿಯಟ್ ಸಲ್ಲಿಸಿದ್ದಾರೆ.

ಇದನ್ನೂ ಓದಿ:  Hijab Row: ತ್ರಿಸದಸ್ಯ ಪೀಠದಿಂದ 129 ಪುಟಗಳ ತೀರ್ಪು: ತೀರ್ಪಿನಲ್ಲಿ ನಾಲ್ಕು ಪ್ರಶ್ನೆಗಳನ್ನ ಗಂಭೀರವಾಗಿ ಪರಿಗಣನೆ

ಮುಂದಿನವಾರ ವಿಚಾರಣೆ ಸಾಧ್ಯತೆ

ಕರ್ನಾಟಕದಲ್ಲಿ ಹಿಜಾಬ್ ವಿವಾದ ಆರಂಭ ಆದಾಗಲೇ ಸುಪ್ರೀಂ ಕೋರ್ಟಿನಲ್ಲಿ ಹಲವು ಅರ್ಜಿಗಳು ದಾಖಲಾಗಿದ್ದವು. ಆಗ ಪ್ರಕರಣದ ವಿಚಾರಣೆ ರಾಜ್ಯ ಹೈಕೋರ್ಟಿನಲ್ಲಿ ನಡೆಯುತ್ತಿದ್ದುದರಿಂದ ಸುಪ್ರೀಂ ಕೋರ್ಟ್ ಯಾವುದೇ ಅರ್ಜಿಯನ್ನು ಮಾನ್ಯ ಮಾಡಿರಲಿಲ್ಲ. ಈಗ ರಾಜ್ಯ ಹೈಕೋರ್ಟ್ ತೀರ್ಪು ಪ್ರಕಟವಾಗಿದ್ದು ಬೇರೆ ಬೇರೆ ಪಾರ್ಟಿಗಳು ಸಲ್ಲಿಸುವ ಅಥವಾ ಮೆನ್ಷನ್ ಮಾಡಲಿರುವ ಎಲ್ಲಾ ಅರ್ಜಿಗಳನ್ನು ಬೆಸೆದು ಮುಂದಿನವಾರ ವಿಚಾರಣೆ ನಡೆಸುವ ಸಾಧ್ಯತೆ ಇದೆ.
Published by:Mahmadrafik K
First published: