ದೆಹಲಿ: ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಮೇಲಿನ ನಿಷೇಧವನ್ನು (Hijab Row) ಹಿಂತೆಗೆದುಕೊಳ್ಳಲು ನಿರಾಕರಿಸಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ Supreme Court on Hijab Row) ಸೆಪ್ಟೆಂಬರ್ 5 ಕ್ಕೆ ಮುಂದೂಡಿಕೆ ಮಾಡಿದೆ. ಅಲ್ಲದೇ ಈ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ಕರ್ನಾಟಕ ಸರ್ಕಾರದಿಂದ (Karnataka Government) ಪ್ರತಿಕ್ರಿಯೆ ಸಲ್ಲಿಸುವಂತೆ ಕೇಳಿದೆ. ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ಈ ಅರ್ಜಿಗಳ ಕುರಿತು ರಾಜ್ಯಕ್ಕೆ ನೋಟಿಸ್ ಜಾರಿಗೊಳಿಸಿ ಸೆಪ್ಟೆಂಬರ್ 5 ರಂದು ವಿಚಾರಣೆಗೆ ಮುಂದೂಡಿದೆ.
ಈ ವಿಚಾರದಲ್ಲಿ ಮುಂದೂಡಿಕೆಯನ್ನು ಕೋರಿದ ಅರ್ಜಿದಾರರನ್ನು ಪೀಠವು ತರಾಟೆಗೆ ತೆಗೆದುಕೊಂಡಿತು. "ಈ ರೀತಿಯ ಮನವಿಗಳಿಗೆ ಅನುಮತಿ ನೀಡುವುದಿಲ್ಲ ಎಂದು ತಿಳಿಸಿತು. ಹೀಗಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅರ್ಜಿಗಳ ಗುಂಪಿನಲ್ಲಿ ನೋಟಿಸ್ ಸ್ವೀಕರಿಸುವುದಾಗಿ ಹೇಳಿದರಲ್ಲದೇ, ಪ್ರತಿಕ್ರಿಯೆ ಅಫಿಡವಿಟ್ ಅಗತ್ಯವಿಲ್ಲ ಎಂದು ತಿಳಿಸಿದರು.
ಅರ್ಜಿದಾರರು ತುರ್ತು ವಿಚಾರಣೆ ಕೇಳಿದ್ದಾರೆ
ಪ್ರಕರಣವು ಕಾನೂನಿನ ಪ್ರಶ್ನೆಯನ್ನು ಒಳಗೊಂಡಿರುವುದರಿಂದ, ಕರ್ನಾಟಕ ಸರ್ಕಾರದಿಂದ ಯಾವುದೇ ಉತ್ತರ ಅಫಿಡವಿಟ್ ಅಗತ್ಯವಿಲ್ಲ ಎಂದು ಸಾಲಿಟೇಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಅರ್ಜಿದಾರರು ತುರ್ತು ವಿಚಾರಣೆಯನ್ನು ಕೋರಿ 6 ಬಾರಿ ಪ್ರಸ್ತಾಪಿಸಿದ್ದಾರೆ . ಮೊಹಮ್ಮದ್ ನಿಜಾಮುದ್ದೀನ್ ಪಾಷಾ ಅವರ ಮೂಲಕ ಅರ್ಜಿದಾರರು ತುರ್ತು ವಿಚಾರಣೆಯನ್ನು ಕೈಗೊಳ್ಳುವಂತೆ ಕೇಳಿದ್ದಾರೆ ಎಂದು ಸಾಲಿಟೇಟರ್ ಜನರಲ್ ತುಚಾರ್ ಮೆಹ್ತಾ ತಿಳಿಸಿದರು.
ವಿಚಾರಣೆಗೆ ಸಿದ್ಧರಾಗಿದ್ದೀರಾ? ಸುಪ್ರೀಂ ಪ್ರಶ್ನೆ
ಹೀಗಾಗಿ ಅರ್ಜಿದಾರರಾದ ಪಾಷಾ ಮತ್ತು ಇತರ ವಕೀಲರು ಪ್ರಕರಣದೊಂದಿಗೆ ಸಿದ್ಧರಾಗಬೇಕಾಗಿದೆ ಎಂದು ಸಾಲಿಟೇಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.ಅವರ ಮಾತಿಗೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, "ನೀವು ಪ್ರಕರಣಕ್ಕೆ ಸಿದ್ಧರಾಗದೆ ತುರ್ತು ವಿಚಾರಣೆಗೆ ಪ್ರಸ್ತಾಪಿಸುತ್ತಿದ್ದೀರಾ? ಎಂದು ಪ್ರಶ್ನಿಸಿತು.
ಇದನ್ನೂ ಓದಿ: Mukesh Ambani: 3D ವರ್ಲ್ಡ್ ಆಫ್ ಮೆಟಾವರ್ಸ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಭೆ! ನೀವೂ ಹೀಗೆ ಭಾಗವಹಿಸಿ
ಕರ್ನಾಟಕ ಹೈಕೋರ್ಟ್‌ನ ಪೂರ್ಣ ಪೀಠವು ಮಾರ್ಚ್ 15 ರಂದು ತನ್ನ ತೀರ್ಪಿನಲ್ಲಿ ಇಸ್ಲಾಂನಲ್ಲಿ ಹಿಜಾಬ್ ಧರಿಸುವುದು ಕಡ್ಡಾಯವಲ್ಲ ಎಂದು ಹೇಳಿತ್ತು. ಹೈಕೋರ್ಟ್‌ನ ಈ ನಿರ್ಧಾರವು ಫೆಬ್ರವರಿ 5 ರ ಕಾರ್ಯಕಾರಿ ಆದೇಶದ ಮೂಲಕ ಶಾಲಾ-ಕಾಲೇಜುಗಳಲ್ಲಿ ತಲೆಗೆ ಸ್ಕಾರ್ಫ್ ಧರಿಸಲು ರಾಜ್ಯ ಸರ್ಕಾರ ವಿಧಿಸಿದ್ದ ನಿಷೇಧವನ್ನು ಎತ್ತಿಹಿಡಿದಿದೆ, ಇದು ರಾಜ್ಯಾದ್ಯಂತ ಮತ್ತು ದೇಶದ ಇತರ ಹಲವಾರು ನಗರಗಳಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.
ಹಿಜಾಬ್ ವಿವಾದದ ಬಗ್ಗೆ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಏನು?
ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ಕರ್ನಾಟಕ ಹೈಕೋರ್ಟ್‌ನ ತ್ರಿಸದಸ್ಯ ಪೀಠವು ಖುರಾನ್‌ನಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದನ್ನು ಕಡ್ಡಾಯಗೊಳಿಸಿಲ್ಲ ಎಂಬ ಅಂಶ ಗಮನಿಸಿತ್ತು. ‘ಸಾಮಾಜಿಕ ಭದ್ರತೆ’ಯ ಕ್ರಮವಾದ ‘ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ’ ಪಡೆಯಲು ಮುಸ್ಲಿಂ ಮಹಿಳೆಯರಿಗೆ ಉಡುಗೆ ಒಂದು ಸಾಧನವಾಗಿದೆ ಎಂದು ಪೀಠ ಹೇಳಿತ್ತು. ಆದರೆ 'ಹಿಜಾಬ್ ಧರಿಸುವುದು ಇಸ್ಲಾಂನಲ್ಲಿ ಧಾರ್ಮಿಕವಾಗಿ ಕಡ್ಡಾಯವಲ್ಲ'. ರಾಜ್ಯದಲ್ಲಿ "ಸಾಮಾಜಿಕ ಅಶಾಂತಿ ಮತ್ತು ಅಶಾಂತಿ" ಹರಡಲು ಕೆಲವು ಸಂಘಟನೆಗಳು ಈ ವಿಷಯವನ್ನು ಅಸ್ತ್ರವಾಗಿ ಬಳಸುತ್ತಿವೆ ಎಂದು ಶಂಕಿಸಿದ ಹೈಕೋರ್ಟ್ ಕರ್ನಾಟಕದಲ್ಲಿ ಪ್ರಚೋದನಕಾರಿ ಹಿಜಾಬ್ ವಿವಾದದ ಕುರಿತು ತ್ವರಿತ ಮತ್ತು ಪರಿಣಾಮಕಾರಿ ತನಿಖೆಗೆ ಒಲವು ತೋರಿದೆ.
ಇದನ್ನೂ ಓದಿ: Arvind Kejriwal: ಅರವಿಂದ್ ಕೇಜ್ರಿವಾಲ್ಗೆ ಅಗ್ನಿಪರೀಕ್ಷೆ! ಆಮ್ಆದ್ಮಿ ಶಾಸಕರಿಂದ ಬಿಜೆಪಿ ಬೆಂಬಲ?
ಹಿಜಾಬ್ ಧರಿಸುವುದು ಸಂವಿಧಾನದ ಅಡಿಯಲ್ಲಿ ಸಂರಕ್ಷಿತ ಧಾರ್ಮಿಕ ಹಕ್ಕು ಎಂದು ಆರೋಪಿಸಿ ವಿದ್ಯಾರ್ಥಿನಿಯರ ಗುಂಪು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ಕರ್ನಾಟಕ ಶಿಕ್ಷಣ ಕಾಯ್ದೆಯಡಿ ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರವನ್ನು ಸೂಚಿಸುವ ರಾಜ್ಯ ಸರ್ಕಾರದ ಹಕ್ಕನ್ನು ಎತ್ತಿಹಿಡಿದಿದೆ. ಶಿಕ್ಷಣ ಸಂಸ್ಥೆಗಳು ಸೂಚಿಸಿರುವ ಡ್ರೆಸ್ ಕೋಡ್ ಅನ್ನು ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಅನುಸರಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿತ್ತು. ಈ ಆದೇಶದ ವಿರುದ್ಧ ನಿಬಾ ನಾಜ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದರು, ಕರ್ನಾಟಕ ಹೈಕೋರ್ಟ್ 'ಧರ್ಮದ ಸ್ವಾತಂತ್ರ್ಯ' ಮತ್ತು 'ಆತ್ಮಸಾಕ್ಷಿಯ ಸ್ವಾತಂತ್ರ್ಯ' ಎಂಬ ದ್ವಂದ್ವವನ್ನು ಸೃಷ್ಟಿಸುವಲ್ಲಿ ತಪ್ಪಾಗಿದೆ ಎಂದು ವಾದಿಸಿದರು, ಅಲ್ಲದೇ ಇದರಲ್ಲಿ ನ್ಯಾಯಾಲಯವು ಧರ್ಮವನ್ನು ಅನುಸರಿಸುವವರಿಗೆ 'ಆತ್ಮಸಾಕ್ಷಿಯ ಹಕ್ಕು' ಇರುವುದಿಲ್ಲ ಎಂದು ತೀರ್ಮಾನಿಸಿದೆ ಎಂದೂ ಉಲ್ಲೇಖಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ