ನವದೆಹಲಿ: ನೂತನ ಸಂಸತ್ ಭವನ ಉದ್ಘಾಟನೆಯ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೆಚ್ಚಿನ ಕಾರ್ಯಕ್ರಮಗಳಲ್ಲಿ ಒಂದಾದ ಮನ್ ಕಿ ಬಾತ್‌ನ (Mann Ki Baat) 101ನೇ ಸಂಚಿಕೆಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. ಬೆಳಗ್ಗೆ 11 ಗಂಟೆಗೆ ಪ್ರಸಾರಗೊಂಡ ಮನ್ ಕಿ ಬಾತ್ ಭಾಷಣದಲ್ಲಿ ಅನೇಕ ಪ್ರಮುಖ ವಿಚಾರಗಳಲ್ಲಿ ಮೋದಿ ಪ್ರಸ್ತಾಪ ಮಾಡಿದರು.
2014ರಿಂದ ಪ್ರಾರಂಭವಾಗಿ ಇಲ್ಲಿಯತನಕ ಯಶಸ್ವಿಯಾಗಿ ಮುಂದುವರೆದುಕೊಂಡು ಬಂದ ಮನ್ ಕಿ ಬಾತ್‌ನ ಯಶಸ್ಸಿನ ಬಗ್ಗೆಯೂ ಮಾತನಾಡಿದ ಪ್ರಧಾನಿ ಮೋದಿ, ಈ ಕಾರ್ಯಕ್ರಮವು ನಾಗರಿಕರನ್ನು ತಲುಪಲು ಪ್ರಮುಖ ಸಾಧನವಾಗಿದೆ. ಕಳೆದ ತಿಂಗಳು 100ನೇ ಸಂಚಿಕೆ ಪ್ರಸಾರದ ಮೂಲಕ ಇಡೀ ದೇಶವನ್ನು ಒಂದು ದಾರದಲ್ಲಿ ಕಟ್ಟಲಾಗಿದೆ. ಹೊರ ದೇಶದಲ್ಲಿ ಇರಲಿ ಎಲ್ಲೇ ಇರಲಿ, ವಿವಿಧ ಕ್ಷೇತ್ರಗಳ ಜನರನ್ನು 'ಮನ್ ಕಿ ಬಾತ್' ಒಟ್ಟಿಗೆ ಸೇರಿಸುವ ಕೆಲಸ ಮಾಡಿದೆ ಎಂದರು.
ಇದನ್ನೂ ಓದಿ: New Parliament Building: ನೂತನ ಸಂಸತ್ ಭವನ ಲೋಕಾರ್ಪಣೆಗೊಳಿಸಿದ ಪ್ರಧಾನಿ ನರೇಂದ್ರ ಮೋದಿ
ಎರಡನೇ ಶತಮಾನದ ಆರಂಭ
ಮನ್ ಕಿ ಬಾತ್ ಪ್ರಸಾರವಾದಾಗ, ಒಂದೊಂದು ದೇಶಗಳಲ್ಲಿ ಒಂದೊಂದು ಸಮಯ ಇರುತ್ತೆ. ಕೆಲವೆಡೆ ಸಂಜೆ ಆಗಿರುತ್ತೆ. ಇನ್ನು ಕೆಲವು ಕಡೆ ತಡರಾತ್ರಿ ಆಗಿರುತ್ತೆ. ಅದಾಗ್ಯೂ ಇಲ್ಲಿಯತನಕ 100 ನೇ ಸಂಚಿಕೆಗಳನ್ನು ಕೇಳಲು ಜನರು ತಮ್ಮ ಸಮಯವನ್ನು ಮೀಸಲಿಟ್ಟರು. ಸಾವಿರಾರು ಮೈಲುಗಳ ದೂರದಲ್ಲಿರುವ ನ್ಯೂಜಿಲೆಂಡ್‌ನಲ್ಲಿನ ವೀಡಿಯೊವನ್ನು ನಾನು ನೋಡಿದೆ. ಇದರಲ್ಲಿ 100 ವರ್ಷದ ತಾಯಿ ಆಶೀರ್ವಾದ ನೀಡುತ್ತಿದ್ದಾರೆ ಎಂದು ಮೋದಿ ಹೇಳಿದರು.
ಇನ್ನು 'ಮನ್ ಕಿ ಬಾತ್' ನ ಈ ಸಂಚಿಕೆ ಎರಡನೇ ಶತಮಾನದ ಆರಂಭ ಎಂದು ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ತಿಂಗಳು ನಾವೆಲ್ಲರೂ ಅದರ ವಿಶೇಷ ನೂರನೇ ಸಂಚಿಕೆಯನ್ನು ಸಂಭ್ರಮಿಸಿದ್ದೇವೆ. ನಿಮ್ಮ ಕೇಳುವಿಕೆ ಈ ಕಾರ್ಯಕ್ರಮದ ದೊಡ್ಡ ಶಕ್ತಿಯಾಗಿದೆ. ಮನ್ ಕಿ ಬಾತ್‌ಗಾಗಿ ನೀವೆಲ್ಲರೂ ತೋರಿದ ಆತ್ಮೀಯತೆ ಮತ್ತು ಪ್ರೀತಿ ಅಭೂತಪೂರ್ವವಾಗಿದೆ, ಇದು ತುಂಬಾನೆ ಭಾವನಾತ್ಮಕವಾಗಿದೆ ಎಂದು ಹೇಳಿದರು.
ನಮ್ಮ ದೇಶದಲ್ಲಿ ನೋಡಲು ಬಹಳಷ್ಟು ಸಂಗತಿಗಳು ಇದೆ ಎಂದ ಮೋದಿ, ಭಾರತದ ಶಕ್ತಿ ಅದರ ವೈವಿಧ್ಯತೆಯಲ್ಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಣ ಸಚಿವಾಲಯವು ಯುವಸಂಗಮ್ ಎಂಬ ಅತ್ಯುತ್ತಮ ಕಾರ್ಯಕ್ರಮವನ್ನು ಕೈಗೊಂಡಿದೆ. ಈ ಹಿಂದೆ ನಾವು ಮನ್ ಕಿ ಬಾತ್ ನಲ್ಲಿ ಕಾಶಿ ತಮಿಳು ಸಂಗಮಂ ಬಗ್ಗೆ ಮಾತನಾಡಿದ್ದೆವು. ಕಾಶಿ ತೆಲುಗು ಸಂಗಮಂ ಕೂಡ ಸ್ವಲ್ಪ ಸಮಯದ ಹಿಂದೆ ವಾರಣಾಸಿಯಲ್ಲಿ ನಡೆಯಿತು. ಏಕ್ ಭಾರತ್ ಎಂಬ ಮಹಾನ್ ಚೇತನಕ್ಕೆ ಶಕ್ತಿ ನೀಡಲು ದೇಶದಲ್ಲಿ ಅಂತಹ ಒಂದು ವಿಶಿಷ್ಟ ಪ್ರಯತ್ನವನ್ನು ಮಾಡಲಾಗಿದೆ. ಇದು ಯುವ ಸಂಗಮದ ಪ್ರಯತ್ನ. ಯುವ ಸಂಗಮದ ಮೊದಲ ಸುತ್ತಿನಲ್ಲಿ ಸುಮಾರು 1200 ಯುವಕರು ದೇಶದ 22 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.
ಇದನ್ನೂ ಓದಿ: New Parliament Building: ದೀರ್ಘದಂಡ ನಮಸ್ಕಾರ ಹಾಕಿ ರಾಜದಂಡ ಸೆಂಗೋಲ್ ಪ್ರತಿಷ್ಠಾಪಿಸಿದ ಪ್ರಧಾನಿ ಮೋದಿ
ಮೋದಿ ವಿಶೇಷ ಮನವಿ
ಇದೇ ವೇಳೆ ಅರುಣಾಚಲ ಪ್ರದೇಶದ ಗ್ಯಾಮರ್ ನ್ಯೋಕುಮ್ ಜಿ ಅವರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಯುವ ಸಂಗಮದಲ್ಲಿ ನಿಮ್ಮ ಅನುಭವ ಹೇಗಿತ್ತು, ಅದರ ಬಗ್ಗೆ ಬ್ಲಾಗ್ ಬರೆಯಿರಿ. ಇದರಿಂದ ದೇಶದ ಇತರ ಯುವ ಸ್ನೇಹಿತರಿಗೆ ಏಕ್ ಭಾರತ್ ಶ್ರೇಷ್ಠ ಭಾರತ್ ಯೋಜನೆ ಏನೆಂದು ತಿಳಿಯುತ್ತದೆ ಎಂದು ನ್ಯೋಕುಮ್‌ಗೆ ಪ್ರಧಾನಿ ಮೋದಿ ಹೇಳಿದರು. ಇದಲ್ಲದೇ ಯುವ ಸಂಗಮಕ್ಕೆ ಸಂಬಂಧಿಸಿದಂತೆ ಬಿಹಾರದ ಪುತ್ರಿ ವಿಶಾಖಾ ಸಿಂಗ್ ಅವರೊಂದಿಗೆ ಪ್ರಧಾನಿ ಸಂವಾದ ನಡೆಸಿದರು. ತನ್ನ ಅನುಭವದ ಬಗ್ಗೆ ಬ್ಲಾಗ್ ಬರೆಯಲು ವಿಶಾಖಾಗೆ ಕೇಳಿದರು.
ಏಪ್ರಿಲ್ 30 ರಂದು ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮ 100 ಸಂಚಿಕೆಗಳನ್ನು ಪೂರೈಸಿತ್ತು. ಇದು ವಿಶ್ವಸಂಸ್ಥೆಯ ಪ್ರಧಾನ ಕಛೇರಿ ಸೇರಿದಂತೆ ದೇಶದಾದ್ಯಂತ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ನೇರ ಪ್ರಸಾರವಾಗಿತ್ತು. ಇಂದು ಆಲ್ ಇಂಡಿಯಾ ರೇಡಿಯೊದಲ್ಲಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶ ಮತ್ತು ವಿದೇಶದ ಜನರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ