ಮಹಿಳೆಯರೇ ಹುಷಾರ್! ಚೆನ್ನೈ ಪಿಜಿ ಬೆಡ್​ರೂಂ, ಬಾತ್​ರೂಂನಲ್ಲಿ ರಹಸ್ಯ ಕ್ಯಾಮೆರಾ ಪತ್ತೆ

ಎಲ್ಲಿಂದಲೋ ಬಂದವರು ಒಳ್ಳೆ ಊಟ ಸಿಗಬಹುದೆಂದೋ, ಹಾಸ್ಟೆಲ್​ಗಿಂತ ಉತ್ತಮ ವಾತಾವರಣ ಇರುತ್ತದೆ ಎಂದೋ ಅಥವಾ ಸ್ವತಂತ್ರವಾಗಿರಲು ಅವಕಾಶ ಇರುತ್ತದೆ ಎಂದೋ ಪಿಜಿಗಳಲ್ಲಿ ನೆಲೆಸುತ್ತಾರೆ. ಆದರೆ, ಚೆನ್ನೈನಲ್ಲಿ ನಿನ್ನೆ ಬಯಲಾದ ಘಟನೆಯೊಂದು ಪಿಜಿಯಲ್ಲಿ ವಾಸವಾಗಿರುವವರ ಮತ್ತು ತಮ್ಮ ಮಕ್ಕಳನ್ನು ಪಿಜಿಗಳಲ್ಲಿ ಬಿಟ್ಟವರ ಎದೆಯಲ್ಲಿ ನಡುಕ ಹುಟ್ಟಿಸಿರುವುದಂತೂ ಸುಳ್ಳಲ್ಲ.

sushma chakre | news18india
Updated:December 6, 2018, 3:58 PM IST
ಮಹಿಳೆಯರೇ ಹುಷಾರ್! ಚೆನ್ನೈ ಪಿಜಿ ಬೆಡ್​ರೂಂ, ಬಾತ್​ರೂಂನಲ್ಲಿ ರಹಸ್ಯ ಕ್ಯಾಮೆರಾ ಪತ್ತೆ
ಬಂಧಿತ ಮಾಲೀಕ ಸಂಪತ್​ ರಾಜ್
sushma chakre | news18india
Updated: December 6, 2018, 3:58 PM IST
ವೀರಮಣಿ ಪನ್ನೀರ್​ ಸೆಲ್ವಂ

ಚೆನ್ನೈ (ಡಿ. 6): ಅಪ್ಪ-ಅಮ್ಮನನ್ನು ಬಿಟ್ಟು ಕೆಲಸ ಹುಡುಕಿಕೊಂಡೋ, ಉನ್ನತ ಶಿಕ್ಷಣಕ್ಕೆಂದೋ ನಗರಗಳಿಗೆ ಬರುವವರಿಗೆ ಭದ್ರತೆಯ ಸ್ಥಳವೊಂದು ಬೇಕಾಗಿರುತ್ತದೆ. ಒಂಟಿಯಾಗಿ ಮನೆ ಮಾಡಿಕೊಂಡು ಇರಲಾರದವರಿಗೆ, ಅಡುಗೆ ಮಾಡಿಕೊಳ್ಳುವ ಗೋಜಲು ಯಾರಿಗೆ ಬೇಕು ಎನ್ನುವವರಿಗೆ ಪಿಜಿಗಳು (ಪೇಯಿಂಗ್​ ಗೆಸ್ಟ್​) ಉತ್ತಮ ಆಯ್ಕೆಯೇನೋ ಹೌದು. ಆದರೆ, ಇಲ್ಲಿ ಎಷ್ಟರ ಮಟ್ಟಿಗೆ ಸುರಕ್ಷತೆ ಸಿಗುತ್ತದೆ ಎಂದು ಆಲೋಚಿಸಿದರೆ ಉತ್ತರಕ್ಕಾಗಿ ತಡಕಾಡಬೇಕಾಗುತ್ತದೆ. ಎಲ್ಲ ಪಿಜಿಗಳೂ ಒಂದೇ ರೀತಿಯಲ್ಲಿ ಇಲ್ಲದಿದ್ದರೂ ಕೆಲವೊಂದರಲ್ಲಿ ನಾವು ಕಲ್ಪನೆ ಮಾಡಿಕೊಳ್ಳುವುದಕ್ಕಿಂತ ಭಯಾನಕವಾದ ಅನುಭವಗಳಾಗುತ್ತವೆ.

ತಮಿಳುನಾಡಿನ ಚೆನ್ನೈನ ಪಿಜಿಯೊಂದರ ಮಹಿಳೆಯರು ತಮಗೆ ಸುರಕ್ಷತೆ ಇಲ್ಲ, ಪಿಜಿ  ಮಾಲೀಕ ಎಲ್ಲೆಂದರಲ್ಲಿ ಸಿಸಿ ಕ್ಯಾಮರಾ ಅಳವಡಿಸಿರುವುದರಿಂದ ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತಿಲ್ಲ. ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ: ನಗ್ನ ವಿಡಿಯೋ ಅಪ್​ಲೋಡ್​ ಮಾಡಿದ್ದಕ್ಕೆ 707 ಕೋಟಿ ಪರಿಹಾರ ಕೇಳಿದ ಮಹಿಳೆ!

ಬಾತ್​ರೂಂನಲ್ಲೂ ಇತ್ತು ಕ್ಯಾಮೆರಾ:

ಪಿಜಿಯ ಮಾಲೀಕ ಸಂಪತ್​ ರಾಜ್ ತನ್ನ ಪಿಜಿಯಲ್ಲಿರುವ ಹೆಣ್ಣುಮಕ್ಕಳ ಬೆಡ್​ರೂಂ, ಬಾತ್​ರೂಂಗಳಲ್ಲಿ ಸ್ವಿಚ್ ಬೋರ್ಡ್, ಪ್ಲಗ್ ಪಾಯಿಂಟ್​ಗಳ ಹಿಂದೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಮಹಿಳೆಯರ ಚಲನವಲನವನ್ನು ಗಮನಿಸುತ್ತಿದ್ದ ಎಂದು ಪಿಜಿಯ ಮಹಿಳೆಯರು ಚೆನ್ನೈ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರ ದೂರಿನ ಅನ್ವಯ ಪೊಲೀಸರು ಪಿಜಿ ಪರಿಶೀಲಿಸಿದಾಗ 16ಕ್ಕೂ ಹೆಚ್ಚು ಸಿಸಿ ಕ್ಯಾಮರಾಗಳು ಪತ್ತೆಯಾಗಿತ್ತು. ಕೂಡಲೆ ಕೇರಳ ಮೂಲದ ಪಿಜಿ ಮಾಲೀಕ ಸಂಪತ್ ರಾಜ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಿನ್ನೆ ನಡೆದ ಈ ಘಟನೆಯಿಂದ ಚೆನ್ನೈ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳ ನಗರಗಳ ಪಿಜಿಯಲ್ಲಿರುವವರು, ತಂದೆ-ತಾಯಂದಿರು ಬೆಚ್ಚಿ ಬಿದ್ದಿದ್ದರು.
Loading...

ಈ ಘಟನೆಯ ನಂತರ ಎಚ್ಚೆತ್ತುಕೊಂಡಿರುವ ಚೆನ್ನೈ ಜಿಲ್ಲಾಧಿಕಾರಿಗಳು ಖಾಸಗಿ ಪಿಜಿಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದಿದ್ದಾರೆ. ಚೆನ್ನೈನಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಇರುವ ಪಿಜಿಗಳಲ್ಲಿ ವಾಸವಾಗಿರುವವರು ತಮ್ಮ ಸುರಕ್ಷತೆಯ ದೃಷ್ಟಿಯಿಂದ 'ಹಿಡನ್ ಕ್ಯಾಮೆರಾಸ್ ಡಿಟೆಕ್ಟರ್ ಆ್ಯಪ್'ನಂತರ ಆಧುನಿಕ ಆ್ಯಪ್​ಗಳನ್ನು ಬಳಸುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಸಾಧನೆ: 32 ಕಿ.ಮೀ ದೂರದಿಂದಲೇ ಶಸ್ತ್ರಚಿಕಿತ್ಸೆ ನಡೆಸಿದ ಭಾರತೀಯ ವೈದ್ಯರು

ಆ್ಯಪ್ ಬಳಸಲು ಸಲಹೆ:

ಚೆನ್ನೈನಲ್ಲಿರುವ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಈ ಆ್ಯಪ್​ಗಳನ್ನು ಬಳಸಿ ತಮ್ಮ ರೂಮಿನಲ್ಲಿ ಎಲ್ಲಾದರೂ ಹಿಡನ್​ ಕ್ಯಾಮೆರಾ ಇಟ್ಟಿದ್ದರೆ ಅದನ್ನು ಪತ್ತೆಹಚ್ಚಬಹುದಾಗಿದೆ. ಹಾಗಾಗಿ, ತಮ್ಮ ಸುರಕ್ಷತೆಯ ದೃಷ್ಟಿಯಿಂದ ಇಂತಹ ಆ್ಯಪ್​ಗಳನ್ನು ಡೌನ್​ಲೋಡ್​ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಈ ಕುರಿತು ಈಗಾಗಲೇ ಚೆನ್ನೈನಲ್ಲಿರುವ ಖಾಸಗಿ ಹಾಸ್ಟೆಲ್​ ಮತ್ತು ಪಿಜಿಗಳಿಗೆ ಸುತ್ತೋಲೆ ಕಳುಹಿಸಿರುವ ಜಿಲ್ಲಾಧಿಕಾರಿಗಳು ಅದರಲ್ಲಿ 15 ಸೂಚನೆಗಳನ್ನು ಪಾಲಿಸುವಂತೆ ಕೋರಿದ್ದಾರೆ. ಪಿಜಿ ಮತ್ತು ಹಾಸ್ಟೆಲ್​ ಮಾಲೀಕರು ಕೂಡ ಕೆಲವು ನಿಯಮಗಳನ್ನು ಪಾಲಿಸಲೇಬೇಕು ಎಂದು ಜಿಲ್ಲಾಧಿಕಾರಿಗಳು ಸುತ್ತೋಲೆಯಲ್ಲಿ ನಮೂದಿಸಿದ್ದಾರೆ. ಅದರಂತೆ, ಮಾಲೀಕರು ತಮ್ಮ ಪಿಜಿ ಅಥವಾ ಹಾಸ್ಟೆಲ್​ ಆರಂಭಿಸುವ ಮೊದಲು ಪೊಲೀಸ್​ ಠಾಣೆ, ಕಾರ್ಪೋರೇಷನ್, ಅಗ್ನಿಶಾಮಕ ಇಲಾಖೆ, ನೈರ್ಮಲ್ಯ ಮತ್ತು ಆದಾಯ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಪಿಜಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಡಿಸೆಂಬರ್​ 31ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಿ ಅನುಮತಿ ಪಡೆಯಬೇಕು. ಒಂದುವೇಳೆ, ಈ ಯಾವ ನಿಯಮವನ್ನೂ ಅನುಕರಿಸಿದೆ ಪಿಜಿ ನಡೆಸುತ್ತಿದ್ದರೆ 2 ವರ್ಷಗಳವರೆಗೆ ಜೈಲುಶಿಕ್ಷೆ ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮಾಲೀಕರಿಗೆ ಎಚ್ಚರಿಕೆ:

ಹೊಸ ಮಾರ್ಗಸೂಚಿಯ ಪ್ರಕಾರ ಹಾಸ್ಟೆಲ್​ ಮತ್ತು ಪಿಜಿಗಳಲ್ಲಿ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು ಒದಗಿಸುವುದು ಕಡ್ಡಾಯ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾದ ವಸತಿ ವ್ಯವಸ್ಥೆ ಇರಬೇಕು. ಮಹಿಳೆಯರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಮಹಿಳಾ ಪಿಜಿಗಳಿಗೆ ಮಹಿಳಾ ಗಾರ್ಡ್​ಗಳ ನೇಮಕ ಮಾಡಬೇಕು. ಒಂದುವೇಳೆ 50ಕ್ಕಿಂತ ಹೆಚ್ಚು ಮಹಿಳೆಯರು ವಾಸವಾಗಿದ್ದರೆ ಸಿಸಿಟಿವಿ ಅಳವಡಿಕೆ ಕಡ್ಡಾಯ. ಹಾಗೇ, ಪಿಜಿ ಅಥವಾ ಹಾಸ್ಟೆಲ್​ಗಳಿಗೆ ಭೇಟಿ ನೀಡುವ ಹೊರಗಿನವರ ದಾಖಲಾತಿ ಮಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ನಿಯಮ ಜಾರಿಗೊಳಿಸಲಾಗಿದೆ.

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...