ಸರೋವರಗಳು ಗುಲಾಬಿ ಬಣ್ಣಕ್ಕೆ ತಿರುಗುವುದರ ಹಿಂದಿನ ಅಸಲಿ ಕಾರಣ ಇಲ್ಲಿದೆ..

ಬಣ್ಣ ಬದಲಾಯಿಸಿದ್ದ ಲೋನಾರ್​ ಸರೋವರ

ಬಣ್ಣ ಬದಲಾಯಿಸಿದ್ದ ಲೋನಾರ್​ ಸರೋವರ

ನೀರಿನಲ್ಲಿ ಹೆಚ್ಚಿದ ಲವಣಾಂಶವು , ಹ್ಯಾಲೋಫಿಲಿಕ್ ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸುತ್ತದೆ, ನೀರು ಗುಲಾಬಿ ಬಣ್ಣಕ್ಕೆ ತಿರುಗುವಂತೆ ಮಾಡಿತು. ಸೂಕ್ಷಜೀವಿಗಳ ಸಂಖ್ಯೆ ಕುಸಿತವಾಗುತ್ತಿದ್ದಂತೆ ನೀರು ಮೂಲ ರೂಪಕ್ಕೆ ಮರಳಿತು.

  • Share this:

ಸುಮಾರು ಒಂದು ವರ್ಷದ ಹಿಂದೆ ಅಂದರೆ, ಜೂನ್ 2020ರಲ್ಲಿ ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯಲ್ಲಿ ಇರುವ ಲೋನಾರ್ ಸರೋವರ ಒಂದು ಅಸಾಮಾನ್ಯ ಬದಲಾವಣೆಗೆ ಒಳಗಾಯಿತು. ಸುಮಾರು 52,000 ವರ್ಷ ಹಳೆಯದಾದ ಈ ಸರೋವರದಲ್ಲಿನ ನೀರು ಇದ್ದಕ್ಕಿದ್ದಂತೆ ಗುಲಾಬಿ ಬಣ್ಣಕ್ಕೆ ತಿರುಗಿತು. ಇದರಿಂದ ಅನೇಕರಿಗೆ ಗೊಂದಲ ಮತ್ತು ಚಿಂತೆಯುಂಟಾಯಿತು.


ತನ್ನದೇ ಆದ ಪ್ರವಾಸೋದ್ಯಮ ಪ್ರಾಮುಖ್ಯತೆ ಹೊಂದಿರುವ ಈ ಸರೋವರದಲ್ಲಿ ಉಂಟಾದ ಈ ವಿಚಿತ್ರ ಬದಲಾವಣೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಯಿತು. ಸರಕಾರ ಕೂಡ ಕಾರ್ಯೋನ್ಮುಖವಾಗಿ, ಸರೋವರದಲ್ಲಿನ ನೀರು ಗುಲಾಬಿ ಬಣ್ಣಕ್ಕೆ ತಿರುಗಲು ಕಾರಣವೇನೆಂದು ತಿಳಿಯಲು ಪರೀಕ್ಷೆಗಳನ್ನು ನಡೆಸಬೇಕೆಂದು ಆದೇಶ ನೀಡಿತು. ಕೆಲವರು ಜಾಗತಿಕ ತಾಪಮಾನದ ಪರಿಣಾಮ ಎಂದು ಊಹಿಸಿದರೆ, ಇನ್ನು ಕೆಲವು ಮೂಡನಂಬಿಕೆಯ ಸಿದ್ಧಾಂತಗಳು ಕೂಡ ಈ ವೇಳೆ ಕೇಳಿ ಬಂದವು.


ಹಾಗಂತ ಈ ರೀತಿ ನಡೆಯುತ್ತಿರುವುದು ಇದೇ ಮೊದಲಲ್ಲ, ಅಸಲಿಗೆ ವಿಶ್ವಾದ್ಯಂತ ನೈಸರ್ಗಿಕವಾಗಿ ಗುಲಾಬಿ ಬಣ್ಣ ಹೊಂದಿರುವ, ಆಗಾಗ್ಗೆ ಬದಲಾಗುವ ಹಲವಾರು ಸರೋವರಗಳು ಇವೆ.


ಹಾಗಾದರೆ ಈ ಬಣ್ಣ ಬದಲಾವಣೆಗೆ ಕಾರಣವೇನು..? ಗುಲಾಬಿ ಬಣ್ಣವಾಗಿ ಬದಲಾಗುವ ಸರೋವರಗಳ ನಡುವೆ ಇರುವ ಒಂದೇ ರೀತಿಯ ಸಾಮ್ಯತೆ ಎಂದರೆ ಅವೆಲ್ಲವೂ ಉಪ್ಪು ನೀರನ್ನು ಹೊಂದಿವೆ. ನೀರಿನಲ್ಲಿನ ಲವಣಾಂಶವು ವಿವಿಧ ರೀತಿಯ ಸೂಕ್ಷ್ಮಾಣುಗಳನ್ನು ಉತ್ಪಾದಿಸುತ್ತದೆ, ಆ ಸೂಕ್ಷ್ಮಾಣುಗಳು ನೀರಿನ ಬಣ್ಣ ಬದಲಾವಣೆಗೆ ಕಾರಣವಾಗುತ್ತವೆ ಎಂದು ಅಧ್ಯಯನ ವರದಿಗಳು ಹೇಳಿವೆ.


ಇನ್ನು ಲೋನಾರ್ ಸರೋವರದ ವಿಷಯಕ್ಕೆ ಬಂದರೆ, ಅಧ್ಯಯನಗಳ ಪ್ರಕಾರ, ಉಪ್ಪಿನೊಂದಿಗೆ ಸ್ಯಾಚುರೇಟೆಡ್ ಆಗಿ ಕಂಡು ಬಂದಿರುವ ಹ್ಯಾಲೋಆರ್ಕಿಯ ಅಥವಾ ಹ್ಯಾಲೋಫಿಲಿಕ್ ಆರ್ಕಿಯಾ ಬ್ಯಾಕ್ಟೀರಿಯಾವೇ ಬಣ್ಣ ಬದಲಾವಣೆಗೆ ಕಾರಣ. ಮಳೆಯ ಕೊರತೆ, ಅಧಿಕ ತಾಪಮಾನ ಮತ್ತು ಕೋವಿಡ್ -19 ಲಾಕ್‍ಡೌನ್ ಕಾರಣದಿಂದ ಮಾನವರ ಹಸ್ತಕ್ಷೇಪ ಕಡಿಮೆ ಇದ್ದ ಕಾರಣ, ನೀರು ಹೆಚ್ಚು ಆವಿಯಾಗಿ, ಉಪ್ಪು ಹಾಗೂ ಪಿಎಚ್ ಮೌಲ್ಯದ ಹೆಚ್ಚಳಕ್ಕೆ ಕಾರಣವಾಗಿದೆ.


ನೀರಿನಲ್ಲಿ ಹೆಚ್ಚಿದ ಲವಣಾಂಶವು , ಹ್ಯಾಲೋಫಿಲಿಕ್ ಸೂಕ್ಷ್ಮ ಜೀವಿಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಸೃಷ್ಟಿಸುತ್ತದೆ, ನೀರು ಗುಲಾಬಿ ಬಣ್ಣಕ್ಕೆ ತಿರುಗುವಂತೆ ಮಾಡಿತು. ಸೂಕ್ಷಜೀವಿಗಳ ಸಂಖ್ಯೆ ಕುಸಿತವಾಗುತ್ತಿದ್ದಂತೆ ನೀರು ಮೂಲ ರೂಪಕ್ಕೆ ಮರಳಿತು.


ಆನಂತರ ಮಳೆ ನೀರು ಸೇರಿಕೊಂಡ ಮೇಲೆ ಲೋನಾರ್ ಸರೋವರ ತನ್ನ ಮೂಲ ಬಣ್ಣಕ್ಕೆ ತಿರುಗಿತು. ಹ್ಯಾಲೋ ಆರ್ಕಿಯ ಸೂಕ್ಷ್ಮಜೀವಿಗಳನ್ನು ಫೆಮಿಂಗೋಗಳು ಸೇವಿಸಿದವು ಎಂದು ಕೂಡ ತಿಳಿದು ಬಂದಿದೆ. ಈ ಸೂಕ್ಷ್ಮ ಜೀವಿಗಳು ಪಕ್ಷಿಗಳಿಗೆ ವರ್ಣಭರಿತ ಆಹಾರ ಎನಿಸಿಕೊಳ್ಳುತ್ತವೆ. ಫ್ಲೆಮಿಂಗೋಗಳು ತಿನ್ನುವ ಪಾಚಿ ಮತ್ತು ಅಕಶೇರುಕಗಳಲ್ಲಿ ಇರುವ ವಿಶೇಷ ವರ್ಣ ರಾಸಾಯನಿಕಗಳಿಂದ ಫ್ಲೆಮಿಂಗೋಗಳು ತಮ್ಮ ಕೆಂಪು ಗುಲಾಬಿ ಬಣ್ಣವನ್ನು ಪಡೆಯುತ್ತವೆ.


ಈ ಸರೋವರಗಳ ನೀರು ಕುಡಿಯಲು ಯೋಗ್ಯವಲ್ಲದಿದ್ದರೂ, ಬೇರೆ ರೀತಿಯ ಉದ್ದೇಶಗಳಿಗೆ ಉಪಯೋಗಿಸಬಹುದು. ಇದರಲ್ಲಿ ಈಜುವುದರಿಂದ ಯಾವುದೇ ಹಾನಿಯಾಗುವುದಿಲ್ಲ.


ಇದನ್ನೂ ಓದಿ: Afghanistan Crisis: ಇಂದು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿಳಿದ 145 ಮಂದಿ; ಈವರೆಗೆ 537 ಜನರ ಆಗಮನ

ಆದರೆ, ಲೋನರ್ ಸರೋವರದಂತೆ, ಹಲವಾರು ಶಾಶ್ವತ ಗುಲಾಬಿ ಸರೋವರಗಳು ಜಗತ್ತಿನಲ್ಲಿ ಕಂಡು ಬರುತ್ತವೆ, ಉದಾಹರಣೆಗೆ ಆಸ್ಟ್ರೇಲಿಯಾದ ಹಟ್ ಲಂಗೂನ್ ಅಥವಾ ಲೇಕ್ ಹಿಲ್ಲರ್ ತಮ್ಮ ಬಣ್ಣ ಬದಲಾಯಿಸುವುದಿಲ್ಲ. ಏಕೆಂದರೆ ಅವುಗಳ ನೀರಿನ ಲವಣಾಂಶ ಮತ್ತು ಪಿಎಚ್ ಮಟ್ಟ ಸ್ಥಿರವಾಗಿ ಇರುತ್ತದೆ. ಈ ವರ್ಷದ ಆರಂಭದಲ್ಲಿ ಅರ್ಜಂಟೈನಾದ ಸರೋವರ ಒಂದರಲ್ಲಿ ನೀರಿನ ಬಣ್ಣ ಗುಲಾಬಿಯಾದ ಪ್ರಕರಣ ವರದಿ ಆಗಿತ್ತು. ಆದರೆ ಅದಕ್ಕೆ ಕಾರಣ ಮಾತ್ರ ಲೋನಾರ್ ಸರೋವರದ ಸಂಗತಿಗಿಂತ ಭಿನ್ನವಾಗಿತ್ತು.




ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

top videos
    First published: