ರಾಜಕೀಯ ಶಕ್ತಿ ಪ್ರದರ್ಶನದ ಮಧ್ಯೆ ಜಾರ್ಖಂಡ್ ಸಿಎಂ ಆಗಿ ಹೇಮಂತ್ ಸೋರೆನ್ ಪದಗ್ರಹಣ

ಈ ಕಾರ್ಯಕ್ರಮವು ಕುಮಾರಸ್ವಾಮಿ ಪದಗ್ರಹಣ ಸಮಾರಂಭವನ್ನು ನೆನಪಿಸುತ್ತದೆ. ಕಾಂಗ್ರೆಸ್ ಬೆಂಬಲದೊಂದಿಗೆ ಹೆಚ್​ಡಿಕೆ ಸಿಎಂ ಆಗಿ ಪ್ರಮಾಣ ಸ್ವೀಕರಿಸುವಾಗ ರಾಷ್ಟ್ರ ರಾಜಕಾರಣದ ಘಟಾನುಘಟಿಗಳು ಮೇಳೈಸಿದ್ದರು.

ಹೇಮಂತ್ ಸೋರೆನ್ ಪದಗ್ರಹಣ ಸಮಾರಂಭದಲ್ಲಿ ಉಪಸ್ಥಿತರಿರುವ ರಾಜಕೀಯ ಗಣ್ಯರು

ಹೇಮಂತ್ ಸೋರೆನ್ ಪದಗ್ರಹಣ ಸಮಾರಂಭದಲ್ಲಿ ಉಪಸ್ಥಿತರಿರುವ ರಾಜಕೀಯ ಗಣ್ಯರು

  • News18
  • Last Updated :
  • Share this:
ರಾಂಚಿ(ಡಿ. 29): ಜಾರ್ಖಂಡ್ ರಾಜ್ಯದ 11ನೇ ಮುಖ್ಯಮಂತ್ರಿಯಾಗಿ ಹೇಮಂತ್ ಸೋರೆನ್ ಪದಗ್ರಹಣ ಮಾಡಿದರು. ಬಿಜೆಪಿಯೇತರ ಪಕ್ಷಗಳ ಪ್ರಬಲ ಮುಖಂಡರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ದ್ರೌಪದಿ ಮುರ್ಮು ಅವರಿಂದ ನೂತನ ಸಿಎಂ ಪ್ರಮಾಣವಚನ ಸ್ವೀಕರಿಸಿದರು. ಜೆಎಂಎಂ ಪಕ್ಷದ ಕಾರ್ಯಕಾರಿ ಅಧ್ಯಕ್ಷರೂ ಆಗಿರುವ 44 ವರ್ಷದ ಹೇಮಂತ್ ಸೋರೆನ್ ಅವರು ಸಿಎಂ ಆಗುತ್ತಿರುವುದು ಇದು ಎರಡನೇ ಬಾರಿ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಾರ್ಕ್ಸ್​ವಾದಿ ಕಮ್ಯೂನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ಆರ್​ಜೆಡಿಯ ತೇಜಸ್ವಿ ಯಾದವ್, ಎನ್​ಸಿಪಿಯ ಅಜಿತ್ ಪವಾರ್ ಮೊದಲಾದ ಗಣ್ಯ ರಾಜಕಾರಣಿಗಳ ದಂಡೇ ಈ ಪ್ರಮಾಣ ವಚನ ಸಮಾರಂಭದಲ್ಲಿ ಸೇರಿತ್ತು. ಬಿಜೆಪಿ ನಾಯಕ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ರಘುಬರ್ ದಾಸ್ ಅವರೂ ಉಪಸ್ಥಿತರಿದ್ದುದು ಗಮನಾರ್ಹ.

ಇದನ್ನೂ ಓದಿ: Nithyananda Case: ಅತ್ಯಾಚಾರ ಆರೋಪಿ ನಿತ್ಯಾನಂದ ಸ್ವಾಮಿ ಆಶ್ರಮ ನೆಲಸಮ

ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಕಾರ್ಯಕ್ರಮಕ್ಕೆ ಆಹ್ವಾನ ಹೋಗಿತ್ತು. ಆದರೆ, ವಿವಿಧ ಪೂರ್ವನಿಗದಿ ಕಾರ್ಯಕ್ರಮಗಳಿದ್ದ ಹಿನ್ನೆಲೆಯಲ್ಲಿ ತಾನು ಬರಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಜಾರ್ಖಂಡ್​ಗೆ ಭೇಟಿ ನೀಡುವುದಾಗಿ ಸಿಎಂಗೆ ತಿಳಿಸಿದ್ದಾರೆಂದು ಜೆಎಂಎಂ ಪ್ರಧಾನ ಕಾರ್ಯದರ್ಶಿ ಸುಪ್ರಿಯೋ ಭಟ್ಟಾಚಾರ್ಯ ಹೇಳಿದ್ದಾರೆ.

ಈ ಕಾರ್ಯಕ್ರಮವು ಕುಮಾರಸ್ವಾಮಿ ಪದಗ್ರಹಣ ಸಮಾರಂಭವನ್ನು ನೆನಪಿಸುತ್ತದೆ. ಕಾಂಗ್ರೆಸ್ ಬೆಂಬಲದೊಂದಿಗೆ ಹೆಚ್​ಡಿಕೆ ಸಿಎಂ ಆಗಿ ಪ್ರಮಾಣ ಸ್ವೀಕರಿಸುವಾಗ ರಾಷ್ಟ್ರ ರಾಜಕಾರಣದ ಘಟಾನುಘಟಿಗಳು ಮೇಳೈಸಿದ್ದರು. ಮಾಯಾವತಿ, ಸೋನಿಯಾ ಗಾಂಧಿ, ಅಖಿಲೇಶ್ ಯಾದವ್, ಸ್ಟಾಲಿನ್ ಹೀಗೆ ವಿವಿಧ ವಿಪಕ್ಷಗಳ ನಾಯಕರ ಸಮಾಗಮವಾಗಿ ಮುಂದಿನ ಲೋಕಸಭಾ ಚುನಾವಣೆಗೆ ತೋಳ್ಬಲ ಎದ್ದುಕಂಡಿತ್ತು.

ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ 81 ಸ್ಥಾನಗಳ ಪೈಕಿ ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮೈತ್ರಿಕೂಟವು 47 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ. ಮೂವರು ಶಾಸಕರಿರುವ ಜಾರ್ಖಂಡ್ ವಿಕಾಸ್ ಮೋರ್ಚಾ(ಪ್ರಜಾತಾಂತ್ರಿಕ್) ಪಕ್ಷ ಹಾಗೂ ಒಬ್ಬ ಶಾಸಕರನ್ನ ಹೊಂದಿರುವ ಸಿಪಿಐ(ಎಂಎಲ್) ಪಕ್ಷಗಳೂ ಕೂಡ ಆಡಳಿತಾರೂಢ ಮೈತ್ರಿಕೂಟಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಈ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ವಿಪಕ್ಷ ಸ್ಥಾನದಲ್ಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

Published by:Vijayasarthy SN
First published: