ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ನಲ್ಲಿ ಸ್ವಜನ ಪಕ್ಷಪಾತ ಹಾಗೂ ಡ್ರಗ್ಸ್ ಪ್ರಕರಣ ಕುರಿತು ಸಾಕಷ್ಟು ವಾದ- ವಿವಾದಗಳು ಕೇಳಿ ಬರುತ್ತಿವೆ. ಅದರಲ್ಲಿಯೂ ನಟಿ ಕಂಗನಾ ರನೌತ್ ಬಾಲಿವುಡ್ ನಟ- ನಟಿಯರ ಮೇಲೆ ನೇರ ಆರೋಪ ಮಾಡುತ್ತಿರುವುದು ಹಿರಿಯ ನಟರಲ್ಲಿ ಸಾಕಷ್ಟು ಅಸಮಾಧಾನ ಮೂಡಿಸಿದೆ. ಈ ಕುರಿತು ರಾಜ್ಯ ಸಭೆಯಲ್ಲಿ ಮಾತನಾಡಿದ ಸಂಸದೆ ಜಯಾ ಬಚ್ಚನ್ ಕಂಗನಾ ಹೆಸರು ಹೇಳದೆ ಅವರ ಹೇಳಿಕೆ ಖಂಡಿಸಿದ್ದರು. ಯಾರೋ ಮಾಡುವ ತಪ್ಪಿಗೆ ಚಿತ್ರರಂಗ ದೂಷಿಸುವುದು ಸರಿಯಲ್ಲ ಎಂದಿದ್ದರು. ಈಗ ಅವರ ಬೆನ್ನಲ್ಲೇ ಮತ್ತೊಬ್ಬ ಹಿರಿಯ ನಟಿ ಹೇಮಾ ಮಾಲಿನಿ ಕೂಡ ಈ ಬಗ್ಗೆ ಧ್ವನಿ ಎತ್ತಿದ್ದಾರೆ. ಹೆಸರು, ಕೀರ್ತಿ, ಗೌರವ ಎಲ್ಲವನ್ನು ನೀಡಿರುವ ಬಾಲಿವುಡ್ ಬಗ್ಗೆ ಈ ರೀತಿ ಮಾತನಾಡಿದರೆ ನೋವಾಗುವುದು ಎಂದು ಭಾವನಾತ್ಮಕವಾಗಿ ಸುದ್ದಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಬಾಲಿವುಡ್ಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಡ್ರೀಮ್ ಗರ್ಲ್ , ಬಾಲಿವುಡ್ ಎಂಬುದು ಸುಂದರವಾದ ಕುಟುಂಬ. ಇದೊಂದು ಸೃಜನಾತ್ಮಕ ಪ್ರಪಂಚ, ಕಲೆ ಮತ್ತು ಸಂಸ್ಕೃತಿಯ ಉದ್ಯಮ ಎಂದಿದ್ದಾರೆ.
ಇಂತಹ ಉದ್ಯಮದ ಕುರಿತು ಡ್ರಗ್ಸ್ ಆರೋಪ ಕೇಳಿದರೆ ಬೇಸರವಾಗುತ್ತದೆ. ಚಿತ್ರೋದ್ಯಮದಲ್ಲಿ ಮಾತ್ರ ಡ್ರಗ್ಸ್ ಪ್ರಕರಣಗಳಿವೆಯೇ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ, ಎಲ್ಲೆ ಕೊಳಕು ಕಂಡು ಬಂದರೂ ಅದನ್ನು ತೊಳೆದು ಹಾಕಿ ಮುನ್ನಡೆಯ ಬೇಕು. ಬಾಲಿವುಡ್ಗೆ ಅಂಟಿರುವ ಮಸಿ ಕೂಡ ಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಉದ್ಯಮದಲ್ಲಿ ಸಾಕಷ್ಟು ಮಹಾನ್ ಕಲಾವಿದರು ಕೆಲಸ ನಿರ್ವಹಿಸಿದ್ದಾರೆ. ಅವರನ್ನು ಜನರು ದೇವರಂತೆ ಆರಾಧನೆ ಮಾಡುತ್ತಾರೆ. ರಾಜ್ ಕಪೂರ್, ದೇವ್ ಆನಂದ್, ಧರ್ಮೇಂದ್ರ , ಅಮಿತಾಬ್ ಬಚ್ಚನ್ ನಂತಹ ಅನೇಕ ಕಲಾವಿದರು ಬಾಲಿವುಡ್ ಹೆಸರು ಪ್ರಕಾಶಿಸುವಂತೆ ಮಾಡಿದ್ದಾರೆ. ಬಾಲಿವುಡ್ ಎಂದರೆ ಭಾರತ ಎಂಬ ಭಾವನೆ ವಿದೇಶಿಗರಲ್ಲಿದೆ. ಅಂತಹ ಉದ್ಯಮದ ಬಗ್ಗೆ ಆರೋಪ ಮಾಡಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದಿದ್ದಾರೆ.
ಇದೇ ವೇಳೆ, ಬಾಲಿವುಡ್ನಲ್ಲಿ ಒಂದೆರಡು ತಪ್ಪು ಕಂಡು ಬಂದಾಕ್ಷಣ ಇಡೀ ಉದ್ಯಮವೇ ಸರಿಯಲ್ಲ ಎನ್ನುವುದು ತಪ್ಪು ಎಂದಿದ್ದಾರೆ.
ಇನ್ನು ಸ್ವಜನ ಪಕ್ಷಪಾತ ಕುರಿತು ಉತ್ತರಿಸಿರುವ ಅವರು, ಯಾರೋ ಸ್ಟಾರ್ ನಟ- ನಟಿಯರ ಮಕ್ಕಳು ಉದ್ಯಮಕ್ಕೆ ಕಾಲಿಟ್ಟಾಕ್ಷಣ ಅವರು ಸೂಪರ್ ಸ್ಟಾರ್ ಆಗುವುದಿಲ್ಲ. ಇಲ್ಲಿ ಪ್ರತಿಭೆ ಹಾಗೂ ಅದೃಷ್ಟ ಕೂಡ ಮುಖ್ಯ .
ಈ ಉದ್ಯಮ ಬೆಳೆಯಲು ಸಾಕಷ್ಟು ಜನರ ಕೊಡುಗೆ ಇದೆ ಹೃಷಿಕೇಶ್ ಮುಖರ್ಜಿ, ಬಿಮಲ್ ರಾಯ್, ಗುಲ್ಜಾರ್, ರಮೇಶ್, ಸುಭಾಶ್ ಗಾಯ್ ಅಂತಹೆ ಎಷ್ಟೋ ಜನರ ಪರಿಶ್ರಮ ಇದೆ. ಇವರ ಕಾರ್ಯಗಳನ್ನು ಒಂದೇ ನಿಮಿಷದಲ್ಲಿ ಅಲ್ಲಗಳೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಜಯಾಗೆ ತಿರುಗೇಟು ನೀಡಿದ ಕಂಗನಾ
ಬಾಲಿವುಡ್ ನಲ್ಲಿ ಶೇ 90 ರಷ್ಟು ಡ್ರಗ್ಸ್ ಪ್ರಕರಣಗಳಿವೆ ಎಂದು ಆರೋಪ ಮಾಡಿದ್ದ ಕಂಗನಾ ಹೇಳಿಕೆಗೆ ಹಿರಿಯ ನಟಿ, ಸಂಸದೆ ಜಯಾ ಬಚ್ಚನ್ ಸಂಸತ್ನಲ್ಲಿ ಪರೋಕ್ಷವಾಗಿ ಟೀಕಿಸಿದ್ದರು.
ಅವರ ಹೇಳಿಕೆಗೆ ಟ್ವೀಟ್ ಮೂಲಕ ಜಯಾ ಬಚ್ಚನ್ಗೆ ಉತ್ತರಿಸಿದ ನಟಿ ಕಂಗನಾ, ನಿಮ್ಮ ಮಗಳಿಗೆ ಯಾರಾದರೂ ಡ್ರಗ್ಸ್ ನೀಡಿದ್ದರೆ, ದೌರ್ಜನ್ಯ ನಡೆಸಿದ್ದರೆ ಹೀಗೆಯೇ ಮಾತನಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನಿಮ್ಮ ಮಗ ಅಭಿಷೇಕ್, ದೂರು ನೀಡಿದ ಬಳಿಕ ಒಂದು ದಿನ ಆತ್ಮಹತ್ಯೆ ಮಾಡಿಕೊಂಡರೆ ಆಗ ನೀವು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.