ಕರಾಚಿ: ಪಾಕಿಸ್ತಾನದ (Pakistan) ಅತಿದೊಡ್ಡ ನಗರ ಕರಾಚಿಯಲ್ಲಿ (Karachi) ಮತ್ತೆ ಉಗ್ರರು (Militants) ಅಟ್ಟಹಾಸ ಮೆರೆದಿದ್ದಾರೆ. ಕರಾಚಿಯಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯ ಮೇಲೆ ಉಗ್ರರು ಶುಕ್ರವಾರ ರಾತ್ರಿ ಮಾರಣಾಂತಿಕ ಆತ್ಮಾಹುತಿ ದಾಳಿ (Suicide Bomber) ನಡೆಸಿದ್ದು, ಪರಿಣಾಮ 4ಕ್ಕೂ ಹೆಚ್ಚು ಜನ ಮೃತಪಟ್ಟು, ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಬಾಂಬ್ ಸ್ಫೋಟಕ್ಕೂ ಮುನ್ನವೇ ಕರಾಚಿ ಪ್ರವೇಶಿಸಿದ್ದ ಉಗ್ರರ ತಂಡ ಸ್ಫೋಟದ ನಂತರ ಗಂಟೆಗಳ ಕಾಲ ಗುಂಡಿನ ದಾಳಿ ನಡೆಸಿ ಕ್ರೂರತೆ ಮೆರೆದಿದೆ.
ಪಾಕ್ ಸರ್ಕಾರ ಮತ್ತು ದಕ್ಷಿಣ ಸಿಂಧ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಗುಲಾಂ ನಬಿ ಮೆಮನ್ ಅವರು ನೀಡಿರುವ ಮಾಹಿತಿ ಪ್ರಕಾರ ಈ ದುರ್ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ನಾಗರಿಕರು ಪ್ರಾಣ ಕಳೆದುಕೊಂಡಿದ್ದು, 18ಕ್ಕೂ ಹೆಚ್ಚು ಪೊಲೀಸ್ ಭದ್ರತಾ ಪಡೆ ಗಾಯಗೊಂಡಿದ್ದಾರೆ. ಇನ್ನು ಪೊಲೀಸರು ಮತ್ತು ಉಗ್ರರ ಮಧ್ಯೆ ನಡೆದ ಗುಂಡಿನ ಕಾಳಗದಲ್ಲಿ ಐವರು ಉಗ್ರರನ್ನು ಪೊಲೀಸರು ಹೊಡೆದುರುಳಿಸಿದ್ದಾರೆ ಎಂದು ಹೇಳಲಾಗ್ತಿದ್ದು, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬರಬೇಕಷ್ಟಿದೆ.
ಇದನ್ನೂ ಓದಿ: Pakistan: ಪಾಕಿಸ್ತಾನದ ಮಸೀದಿಯೊಳಗೆ ಉಗ್ರರ ದಾಳಿ; ಬಾಂಬ್ ಸ್ಫೋಟದಲ್ಲಿ 28 ಮಂದಿ ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ
ದಾಳಿ ಹೊಣೆ ಹೊತ್ತುಕೊಂಡ ರಕ್ಕಸರು
ಪಾಕಿಸ್ತಾನಿ ತಾಲಿಬಾನ್ ಅಥವಾ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಎಂಬ ಉಗ್ರ ಸಂಘಟನೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಪತ್ರಕರ್ತರಿಗೆ ಕಳುಹಿಸಿದ ಮೆಸೇಜ್‌ನಲ್ಲಿ ಈ ದಾಳಿಯ ಹೊಣೆಯನ್ನು ನಾವು ಹೊರುವುದಾಗಿ ಹೇಳಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸರ್ಕಾರದ ಸಲಹೆಗಾರ ಮುರ್ತಾಜಾ ವಹಾಬ್, ಪಾಕಿಸ್ತಾನಿ ತಾಲಿಬಾನ್ ಎಂದು ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆ ಪತ್ರಕರ್ತರಿಗೆ ಕಳುಹಿಸಿದ ಸಂದೇಶದಲ್ಲಿ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಶುಕ್ರವಾರ ತಡರಾತ್ರಿ ಪೊಲೀಸ್ ಮತ್ತು ಅರೆಸೇನಾ ಪಡೆಗಳು ಮೂರು ಗಂಟೆಗಳ ಕಾಲ ನಡೆಸಿದ ಜಂಟಿ ಕಾರ್ಯಾಚರಣೆಯ ನಂತರ ಪೊಲೀಸ್ ಕಟ್ಟಡವನ್ನು ತೆರವುಗೊಳಿಸಲಾಗಿದೆ. ಸದ್ಯ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಮುಗಿದಿದೆ ಎಂದು ವಹಾಬ್ ಹೇಳಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ ಸ್ಥಳಕ್ಕಾಗಮಿಸಿದ ಟಿವಿ ಮಾಧ್ಯಮಗಳಿಗೆ ಸ್ಥಳೀಯ ನಿವಾಸಿಗಳು ಬಾಂಬ್ ಸ್ಫೋಟಗೊಂಡಾಗ ಉಂಟಾದ ಭೀಕರ ಸದ್ದಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ಆಂತರಿಕ ಸಚಿವ ರಾಣಾ ಸನಾವುಲ್ಲಾ ಖಾನ್, ಕೆಲವು ಉಗ್ರರು ಪೊಲೀಸ್ ಪ್ರಧಾನ ಕಚೇರಿಯತ್ತ ಹ್ಯಾಂಡ್ ಗ್ರೆನೇಡ್‌ಗಳನ್ನು ಎಸೆದು ಬಲವಂತವಾಗಿ ನುಗ್ಗಲು ಪ್ರಯತ್ನಿಸಿದರು. ಆಗ ಪೊಲೀಸರು ಮತ್ತು ಉಗ್ರರ ನಡುವೆ ನಡೆದ ಘರ್ಷಣೆಯಾದಾಗ ಸ್ಫೋಟದ ಶಬ್ದವೂ ಕೇಳಿದೆ ಎಂದು ಹೇಳಿದ್ದಾರೆ.
2 ವಾರದ ಹಿಂದೆ ಮಸೀದಿ ಮೇಳೆ ದಾಳಿ
ಪೇಶಾವರದ ಮಸೀದಿಯೊಂದರಲ್ಲಿ ಪೊಲೀಸ್ ವೇಷದಲ್ಲಿದ್ದ ಆತ್ಮಾಹುತಿ ಬಾಂಬರ್ 101 ಜನರ ಮೇಲೆ ಅಟ್ಟಹಾಸ ಮೆರೆದ ಎರಡು ವಾರಗಳ ನಂತರ ಕರಾಚಿಯ ಪೊಲೀಸ್ ಪ್ರಧಾನ ಕಛೇರಿಯ ಮೇಲೆ ಈ ಭೀಕರ ದಾಳಿ ನಡೆದಿದೆ. ಪೇಶಾವರದ ಮಸೀದಿಯಲ್ಲಿ ನಡೆದ ಬಾಂಬ್ ಸ್ಫೋಟದ ಹೊಣೆಯನ್ನು ಕೂಡ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಟಿಟಿಪಿ ಕಮಾಂಡರ್ ಸರ್ಬಕಾಫ್ ಮೊಹ್ಮಂಡ್ ಮಸೀದಿ ಮೇಲಿನ ದಾಳಿಯನ್ನು ತಾವೇ ನಡೆಸಿರೋದಾಗಿ ಹೇಳಿಕೊಂಡಿದ್ದ.
2009ರಲ್ಲೂ ನಡೆದಿತ್ತು ದಾಳಿ
2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವನ್ನು ಹೊತ್ತೊಯ್ಯುತ್ತಿದ್ದ ಬಸ್‌ನ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಆರು ಪೊಲೀಸರು ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು. ನಂತರ ವಿದೇಶಿ ಕ್ರಿಕೆಟ್ ತಂಡಗಳು ಪಾಕಿಸ್ತಾನದಿಂದ ವರ್ಷಗಳ ಕಾಲ ದೂರವಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ