ಕೊರೊನಾ ವೈರಸ್ ಮಹಾಮಾರಿಗೆ ಅಮೆರಿಕದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5 ಲಕ್ಷ ಗಡಿ ದಾಟಿದ್ದು, ಇದು ‘ಹೃದಯ ವಿದ್ರಾವಕ’ ಘಟನೆ ಎಂದು ಅಧ್ಯಕ್ಷ ಜೋ ಬಿಡೆನ್ ಭಾವನಾತ್ಮಕ ಹೇಳಿಕೆ ನೀಡಿದ್ದಾರೆ. ರಾಷ್ಟ್ರೀಯ ದೂರದರ್ಶನ ಭಾಷಣದಲ್ಲಿ ಮಾತನಾಡಿರುವ ಅವರು, ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ದೇಶದ ಜನರು ಒಗ್ಗೂಡಿ ಹೋರಾಡಬೇಕಿದೆ ಎಂದು ಸಲಹೆ ನೀಡಿದ್ದಾರೆ.
‘ಅಮೆರಿಕದಲ್ಲಿ ಕೊರೊನಾ ಸಾಂಕ್ರಾಮಿಕ ಆವರಿಸಿ 1 ವರ್ಷ ಕಳೆದಿದೆ. ವೈರಸ್ ನಿಂದಾದ ಸಾವು-ನೋವುಗಳ ಬಗ್ಗೆ ನನಗೆ ತಿಳಿದಿದೆ’ ಎಂದು ಕುಟುಂಬ ದುರಂತಗಳ ಬಗ್ಗೆ ತನ್ನದೇ ಆದ ಸುದೀರ್ಘ ಇತಿಹಾಸವನ್ನು ಉಲ್ಲೇಖಿಸುತ್ತಾ ಬಿಡೆನ್ ಹೇಳಿದ್ದಾರೆ. ‘ನಾವು ಕಳೆದುಕೊಂಡವರನ್ನು ಮತ್ತು ಅವರು ಬಿಟ್ಟುಹೋದವರನ್ನು ನೆನಪಿನಲ್ಲಿಟ್ಟುಕೊಳ್ಳಬೇಕೆಂದು ನಾನು ಎಲ್ಲಾ ಅಮೆರಿಕನ್ನರ ಬಳಿ ಕೇಳುತ್ತೇನೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಸಂಯಮದಿಂದ ವರ್ತಿಸಬೇಕು. ತುಂಬಾ ಜಾಗರೂಕರಾಗಿರಬೇಕು, ಸಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಕೊರೊನಾ ಲಸಿಕೆ ಪಡೆಯುವಂತೆ ನಾನು ಮನವಿ ಮಾಡಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಮೈಸೂರು ಸ್ಯಾಂಡಲ್ ಸೋಪ್ ಆರಂಭವಾಗಿದ್ದು ಯಾವಾಗ..? ಸಾಬೂನಿನ ಇತಿಹಾಸದ ಬಗ್ಗೆ ಇಲ್ಲಿದೆ ಮಾಹಿತಿ
ಇದೇ ವೇಳೆ ಬಿಡೆನ್ ಅವರು ತಮ್ಮ ಪತ್ನಿ ಜಿಲ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಡಗ್ಲಾಸ್ ಎಮಾಫ್ ಅವರೊಂದಿಗೆ ಶ್ವೇತಭವನದ ಹೊರಗೆ ನಿಂತು ಕೊರೊನಾ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ ಅಮೆರಿಕದ ಪ್ರಜೆಗಳಿಗೆ ಶಾಂತಿ ಕೋರಲು 500 ಮೇಣದಬತ್ತಿಗಳನ್ನು ಹೆಚ್ಚಿ ಕ್ಷಣಕಾಲ ಮೌನಾಚರಣೆ ನಡೆಸಿದರು. ಮೆರೈನ್ ಕಾರ್ಪ್ಸ್ ಬ್ಯಾಂಡ್ ‘ಅಮೇಜಿಂಗ್ ಗ್ರೇಸ್’ (ವಾದ್ಯ ಸಂಗೀತ) ಅನ್ನು ನುಡಿಸಿತು.
ಈ ಮೊದಲು ಶ್ವೇತಭವನದ ಮೇಲೆ ಮತ್ತು ದೇಶಾದ್ಯಂತ ಇರುವ ಫೆಡರಲ್ ಕಟ್ಟಡಗಳಲ್ಲಿ ಮತ್ತು ವಿಶ್ವದಾದ್ಯಂತ ಇರುವ ಅಮೆರಿಕದ ರಾಯಭಾರ ಕಚೇರಿಗಳಲ್ಲಿ ಧ್ವಜಗಳನ್ನು ಇಳಿಸಲಾಯಿತು. ‘ಕೊರೊನಾ ಸಾಂಕ್ರಾಮಿಕಕ್ಕೆ ವಿಶ್ವದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕನ್ನರು ಬಲಿಯಾಗಿದ್ದಾರೆ. ಕಳೆದುಹೋದವರ ಬಗ್ಗೆ ಶೋಕಾಚರಣೆ ನಡೆಸಲು ಮತ್ತು ಅವರನ್ನು ನೆನಪಿನಲ್ಲಿಟ್ಟುಕೊಳ್ಳಲು ದೃಢನಿಶ್ಚಯವನ್ನು ತೋರಿಸಬೇಕೆಂದು’ ಬಿಡೆನ್ ಇದೇ ವೇಳೆ ಹೇಳಿದರು.
‘ಒಂದು ರಾಷ್ಟ್ರವಾಗಿ ನಾವು ಕೊರೊನಾ ವೈರಸ್ ಅನ್ನು ಮುಂದುವರಿಯಲು ಬಿಡಬಾರದು. ಸಾಧ್ಯವಾದಷ್ಟು ಮಟ್ಟಿಗೆ ಅದನ್ನು ನಿಯಂತ್ರಿಸಲು ಎಲ್ಲ ರೀತಿಯ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತದೆ. ಪ್ರಜೆಗಳು ಕೂಡ ಸರ್ಕಾರದ ಜೊತೆ ಕೈಜೋಡಿಸಬೇಕೆಂದು’ ಬಿಡೆನ್ ಮನವಿ ಮಾಡಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ