ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ; ಏನಿದು ಮೈತ್ರಿ ನಾಯಕರ ಹೊಸ ತಂತ್ರ?

ಅತೃಪ್ತ ಶಾಸಕ ಡಾ| ಕೆ. ಸುಧಾಕರ್ ಅವರ ಜೊತೆ ಮಾತನಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಎಂಟಿಬಿ ಹೇಳಿದ್ದರು. ಹಾಗಾಗಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮೈತ್ರಿ ಪಡೆ ಹೊಸ ತಂತ್ರ ರೂಪಿಸಿದೆ.

Rajesh Duggumane | news18
Updated:July 14, 2019, 8:34 AM IST
ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ; ಏನಿದು ಮೈತ್ರಿ ನಾಯಕರ ಹೊಸ ತಂತ್ರ?
ಕುಮಾರಸ್ವಾಮಿ-ಸಿದ್ದಾರಮಯ್ಯ
  • News18
  • Last Updated: July 14, 2019, 8:34 AM IST
  • Share this:
ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಕೆಗೆ ಮೈತ್ರಿ ನಾಯಕರು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಡಿಕೆ ಶಿವಕುಮಾರ್​ ಸೇರಿ ಎಲ್ಲ ನಾಯಕರು ರೆಬೆಲ್​ ಶಾಸಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಒಂದಾದಮೇಲೆ ಒಂದರಂತೆ ಸಂಧಾನ ಸಭೆಗಳು ನಡೆಯುತ್ತಿವೆ. ಮೊದಲು ರಾಜೀನಾಮೆ ಹಿಂಪಡೆಯಲು ಒಪ್ಪಿದ್ದ ಎಂಟಿಬಿ ನಾಗರಾಜ್ ನಂತರ ಮನಸ್ಸು ಬದಲಿಸಿದ್ದರು. ಮತ್ತೋರ್ವ ಅತೃಪ್ತ ಶಾಸಕ ಡಾ| ಕೆ. ಸುಧಾಕರ್ ಅವರ ಜೊತೆ ಮಾತನಾಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಹಾಗಾಗಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಮೈತ್ರಿ ಪಡೆ ಹೊಸ ತಂತ್ರ ರೂಪಿಸಿದೆ.

ಸಿದ್ದರಾಮಯ್ಯ ನಿವಾಸದಲ್ಲಿ ನಡೆದಿದ್ದ ಸಂಧಾನ ಸಭೆಯಲ್ಲಿ ರಾಜೀನಾಮೆ ವಾಪಾಸು ಪಡೆಯುತ್ತೇನೆ ಎಂದು ಎಂಟಿಬಿ ಹೇಳಿದ್ದರು. ಆದರೆ, ಮನೆಯಿಂದ ಹೊರಡುವಾಗ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದ ಎಂಟಿಬಿ, ಶಾಸಕ ಸುಧಾಕರ್ ಒಪ್ಪಿದರೆ ಮಾತ್ರ ರಾಜೀನಾಮೆ ವಾಪಾಸು ಪಡೆಯುತ್ತೇನೆ. ಇಲ್ಲದಿದ್ದರೆ ಇಲ್ಲ ಎಂದು ಹೇಳಿದ್ದರು. ಈ ಹೇಳಿಕೆಯಿಂದ ದೋಸ್ತಿಗಳಲ್ಲಿ ಮತ್ತೆ ಆತಂಕ ಮನೆ ಮಾಡಿದೆ.

ಎಂಟಿಬಿ ಮೇಲೆ ಗುಪ್ತಚರ ಇಲಾಖೆ ಕಣ್ಣು:

ಎಂಟಿಬಿ ನಾಗರಾಜ್ ಮೇಲೆ ನಿಗಾ ಇಡುವಂತೆ ಗುಪ್ತಚರ ಇಲಾಖೆಯ ಅಧಿಕಾರಿಗಳಿಗೆ ಮೈತ್ರಿ ಸರ್ಕಾರ ಸೂಚನೆ ನೀಡಿದೆ ಎನ್ನಲಾಗಿದೆ. ಹೀಗಾಗಿ, ರಾತ್ರಿಯಿಡೀ ಎಂಟಿಬಿ ನಾಗರಾಜ್ ಮೇಲೆ ಗುಪ್ತಚರ ಇಲಾಖೆ ಹದ್ದಿನ ಕಣ್ಣಿಟ್ಟಿತ್ತು. ಅವರು ಯಾವಾಗ ಬರುತ್ತಾರೆ, ಏನು ಮಾಡುತ್ತಾರೆ ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ಮೈತ್ರಿ ಸರ್ಕಾರಕ್ಕೆ ರವಾನೆ ಮಾಡುವ ಕೆಲಸವನ್ನು ಗುಪ್ತಚರ ಇಲಾಖೆ ಮಾಡುತ್ತಿದೆ ಎನ್ನಲಾಗಿದೆ.

 ಸುಧಾಕರ್​ ಪತ್ತೆಗೆ ಮುಂದಾದ ನಾಯಕರು:

ಅತೃಪ್ತ ಶಾಸಕ ಸುಧಾಕರ್ ಪತ್ತೆ ಇನ್ನೂ ಸಾಧ್ಯವಾಗಿಲ್ಲ. ಒಂದೊಮ್ಮೆ ಸುಧಾಕರ್​ ಮನವೊಲಿಸಿದರೆ ಎಂಟಿಬಿ ನಾಗರಾಜ್​ ಕೂಡ ರಾಜೀನಾಮೆ ಹಿಂಪಡೆಯುತ್ತಾರೆ. ಹಾಗಾಗಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತಾಗುತ್ತದೆ ಎಂಬುದು ಮೈತ್ರಿ ನಾಯಕರ ಲೆಕ್ಕಾಚಾರ. ಹೀಗಾಗಿ, ಸುಧಾಕರ್ ಪತ್ತೆ ಹಚ್ಚಲು ದೋಸ್ತಿ ನಾಯಕರು ಶತ ಪ್ರಯತ್ನ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸ್ಪೀಕರ್ ವಿರುದ್ಧ ಇನ್ನೂ 5 ಶಾಸಕರು ಸುಪ್ರೀಂಗೆ ದೂರು; ‘ಅತೃಪ್ತರು’ ಪದ ಬಳಕೆಗೆ ಶಾಸಕರ ಪತ್ನಿಯರಿಂದ ಆಕ್ಷೇಪ
First published:July 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ