ಅಲಹಾಬಾದ್: ಉತ್ತರ ಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ವಿರುದ್ಧ ಪದೇ ಪದೇ ನ್ಯಾಯಾಲಯಕ್ಕೆ (Court) ಅರ್ಜಿ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಲಹಾಬಾದ್ ಹೈಕೋರ್ಟ್ (Allahabad High court) ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. 2007ರಲ್ಲಿ ಎರಡು ಗುಂಪುಗಳ ನಡುವೆ ನಡೆದ ಗೋರಖ್‌ಪುರ ಗಲಭೆ (Gorakhpur Riots) ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುತ್ತಿದ್ದ ವ್ಯಕ್ತಿಗೆ ನ್ಯಾಯಾಲಯ ದಂಡ ವಿಧಿಸಿದೆ.
2007 ರ ಜನವರಿ 27 ರಂದು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಮುಸ್ಲಿಮರ ಹಬ್ಬವಾದ ಮೊಹರಂ ಮೆರವಣಿಗೆ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿತ್ತು. ವಿಪರೀತ ಮಟ್ಟಕ್ಕೆ ಏರಿದ್ದ ಈ ಗಲಭೆಯಲ್ಲಿ ಓರ್ವ ವ್ಯಕ್ತಿಯ ಹತ್ಯೆಯೂ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಪರ್ವೇಜ್ ಪರ್ವಾಜ್ ಅವರು 2008 ರ ಸೆಪ್ಟೆಂಬರ್ 26 ರಂದು ದೂರು ಸಲ್ಲಿಸಿ ಯೋಗಿ ಆದಿತ್ಯನಾಥ್ ಅವರು ಯುವಕನ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳುವ ದ್ವೇಷದ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪ ಮಾಡಿದ್ದರು.
ಇದನ್ನೂ ಓದಿ: Madrasa: ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲಿಯೂ ರಚನೆಯಾಗುತ್ತಾ ಮದರಸಾ ಶಿಕ್ಷಣ ಮಂಡಳಿ?; ಇಂದು ಮಹತ್ವದ ಸಭೆ
ಪ್ರಕರಣ ಸಂಬಂಧ ಪರ್ವೇಜ್ ಪರ್ವಾಜ್ ಸಲ್ಲಿಸಿದ್ದ ಅರ್ಜಿ ಆಧರಿಸಿ ಕಾನೂನು ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಪರ್ವೇಜ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಅಲಹಾಬಾದ್ ಹೈಕೊರ್ಟ್‍ಗೆ ಅರ್ಜಿ ಸಲ್ಲಿಸಿದರು. ಆದರೆ ಆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತು. ಹೀಗಾಗಿ ಪರ್ವೇಜ್ ಅವರು ಹೈಕೋರ್ಟ್‍ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್ ಕೂಡ ಈ ಪ್ರಕರಣದ ಅರ್ಜಿಯನ್ನು ವಜಾಗೊಳಿಸಿತ್ತು.
ಅರ್ಜಿದಾರರಿಗೆ ಒಂದು ಲಕ್ಷ ದಂಡ
ಬಳಿಕ ಪರ್ವೇಜ್ ಪರ್ವಾಜ್ ಅವರು 2022ರ ಅಕ್ಟೋಬರ್ 11 ರಂದು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಆಗ ನ್ಯಾಯಾಲಯವು ಗಲಭೆ ಪ್ರಕರಣದಲ್ಲಿ ಪೊಲೀಸರ ಅಂತಿಮ ವರದಿಯ ವಿರುದ್ಧದ ಪ್ರತಿಭಟನಾ ಅರ್ಜಿಯನ್ನು ತಿರಸ್ಕರಿಸಿತ್ತು. ಅಲ್ಲದೇ, ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಈಗಾಗಲೇ ಸುಪ್ರೀಂ ಕೋರ್ಟ್‍ನಲ್ಲಿ ಪ್ರಕರಣ ಇತ್ಯರ್ಥವಾಗಿದೆ. ಪುನಃ ಮೇಲ್ಮನವಿ ಸಲ್ಲಿಸುವ ಅಗತ್ಯವೇನಿದೆ ಎಂದು ಅರ್ಜಿದಾರರಿಗೆ ಪ್ರಶ್ನಿಸಿದಲ್ಲದೇ, ಅರ್ಜಿಯನ್ನು ತಿರಸ್ಕರಿಸಿ 1 ಲಕ್ಷ ರೂ. ದಂಡವನ್ನು ವಿಧಿಸಿದೆ.
‘ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಭಯವಿಲ್ಲ’
ಲಕ್ನೋ: ಭಾರತದಲ್ಲಿ ಮುಸ್ಲಿಮರಿಗೆ ಯಾವುದೇ ಭಯವಿಲ್ಲ, ಅವರು ಸುರಕ್ಷಿತವಾಗಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ನ್ಯೂಸ್ 18ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ್ದ ಅವರು, ಭಾರತವೇ ಆಗಿರಬಹುದು ಅಥವಾ ಉತ್ತರ ಪ್ರದೇಶವೇ ಆಗಿರಬಹುದು ಮುಸ್ಲಿಮರು ಯಾವುದೇ ತಾರತಮ್ಯವಿಲ್ಲದೆ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಉತ್ತರ ಪ್ರದೇಶ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿರುವುದರಿಂದ ಹಿಂದೂಗಳ ಹಬ್ಬಗಳನ್ನು ಶಾಂತಿಯುತವಾಗಿ ಮತ್ತು ಪರಿಣಾಮಕಾರಿಯಾಗಿ ಆಚರಿಸಲಾಗುತ್ತಿದ್ದು, ಅದೇ ರೀತಿ ಮುಸ್ಲಿಮರ ಹಬ್ಬಗಳನ್ನೂ ಉತ್ತಮ ರೀತಿಯಲ್ಲಿ ಆಚರಿಸಲಾಗುತ್ತಿದೆ ಅಂತ ಅವರು ಹೇಳಿದ್ದರು.
ಅಲ್ಲದೇ, ಭಾರತೀಯ ಮುಸ್ಲಿಮರ ಕುರಿತಂತೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದರು. ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ. ಈ ದೇಶದಲ್ಲಿ ಮುಸ್ಲಿಮರಿಗೆ ಸಮಾನತೆಯ ಹಕ್ಕಿದೆ. ಆದರೆ ತಾವು ದೊಡ್ಡವರು, ರಾಜರಾಗಿದ್ದವರು ಮತ್ತೆ ರಾಜರಾಗುತ್ತಾರೆ ಎಂಬ ಭಾವನೆಯನ್ನೂ ಬಿಡಬೇಕು. ಮುಸ್ಲಿಮರು ಈ ಭಾವನೆಯನ್ನು ಬಿಡಬೇಕು ಅಂತ ಭಾಗವತ್ ಹೇಳಿದ್ದರು. ಅವರ ಮಾತನ್ನು ಪ್ರಸ್ತಾಪಿಸಿದ ಯೋಗಿ ಆದಿತ್ಯನಾಥ್, ನಾನು ಮೋಹನ್ ಭಾಗವತ್ ಮಾತನ್ನು ಒಪ್ಪುತ್ತೇನೆ. ಭಾರತದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ ಅಂತ ಅಭಿಪ್ರಾಯಪಟ್ಟಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ