ಉತ್ತರ ಪ್ರದೇಶದ ಸಾಮೂಹಿಕ ಅತ್ಯಾಚಾರ ಕೇಸ್; ಎಸ್​ಐಟಿ ತನಿಖೆಗೆ ಆದೇಶಿಸಿದ ಯೋಗಿ ಸರ್ಕಾರ

Hathras Gang Rape: ಉತ್ತರ ಪ್ರದೇಶ ಸರ್ಕಾರ ಹತ್ರಾಸ್​ ಅತ್ಯಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್​ಐಟಿ) ನಿಯೋಜನೆ ಮಾಡಿದೆ. ಮೂವರು ಅಧಿಕಾರಿಗಳಿರುವ ಎಸ್​ಐಟಿ ಈ ಪ್ರಕರಣದ ತನಿಖೆ ನಡೆಸಿ, ಇನ್ನೊಂದು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

Sushma Chakre | news18-kannada
Updated:October 1, 2020, 2:31 PM IST
ಉತ್ತರ ಪ್ರದೇಶದ ಸಾಮೂಹಿಕ ಅತ್ಯಾಚಾರ ಕೇಸ್; ಎಸ್​ಐಟಿ ತನಿಖೆಗೆ ಆದೇಶಿಸಿದ ಯೋಗಿ ಸರ್ಕಾರ
ಯೋಗಿ ಆದಿತ್ಯನಾಥ್
  • Share this:
ನವದೆಹಲಿ (ಸೆ. 30): ದೆಹಲಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಹತ್ರಾಸ್ ಎಂಬ ಊರಿನ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿತ್ತು. 2 ವಾರದ ಹಿಂದೆ ಹೊಲದಲ್ಲಿ ಅತ್ಯಾಚಾರ ನಡೆಸಿ, ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಆಕೆ ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಆಕೆಯ ಮರಣೋತ್ತರ ಪರೀಕ್ಷೆಯ ಬಳಿಕ ಮನೆಯವರನ್ನು ದೂರವಿಟ್ಟು ನಿನ್ನೆ ಮಧ್ಯರಾತ್ರಿ ಉತ್ತರ ಪ್ರದೇಶದ ಪೊಲೀಸರೇ ಆಕೆಯ ಅಂತ್ಯಕ್ರಿಯೆ ನೆರವೇರಿಸಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಉತ್ತರ ಪ್ರದೇಶ ಸರ್ಕಾರ ಹತ್ರಾಸ್​ ಅತ್ಯಾಚಾರ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್​ಐಟಿ) ನಿಯೋಜನೆ ಮಾಡಿದೆ. ಮೂವರು ಅಧಿಕಾರಿಗಳಿರುವ ಎಸ್​ಐಟಿ ಈ ಪ್ರಕರಣದ ತನಿಖೆ ನಡೆಸಿ, ಇನ್ನೊಂದು ವಾರದೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ಉತ್ತರ ಪ್ರದೇಶದ ಗೃಹ ಇಲಾಖೆ ಕಾರ್ಯದರ್ಶಿ ಭಗವಾನ್ ಸ್ವರೂಪ್, ಡಿಐಜಿ ಚಂದ್ರ ಪ್ರಕಾಶ್, ಐಪಿಎಸ್ ಅಧಿಕಾರಿ ಪೂನಂ ಅವರನ್ನೊಳಗೊಂಡ ಎಸ್​ಐಟಿ ತಂಡ ಮುಂದಿನ 7 ದಿನಗಳಲ್ಲಿ ಹತ್ರಾಸ್ ಅತ್ಯಾಚಾರ ಪ್ರಕರಣದ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಿದೆ. ಈ ಘಟನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ ಸಾಮೂಹಿಕ ಅತ್ಯಾಚಾರ ಪ್ರಕರಣ; ಮಧ್ಯರಾತ್ರಿ ಪೊಲೀಸರಿಂದಲೇ ಮೃತ ಯುವತಿಯ ಅಂತ್ಯಸಂಸ್ಕಾರ

ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಹತ್ರಾಸ್‌ನ 19 ವರ್ಷದ ಯುವತಿ ಮಂಗಳವಾರ ಬೆಳಿಗ್ಗೆ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಸಾಮೂಹಿಕ ಅತ್ಯಾಚಾರದ ನಂತರ ಆಕೆಯ ಸ್ಥಿತಿ ಗಂಭೀರವಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಯುವತಿಯ ಮೇಲೆ ಮೇಲ್ಜಾತಿಯ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಆಕೆಯ ಮೃತದೇಹವನ್ನು ಕುಟುಂಬಸ್ಥರಿಗೆ ನೀಡದೆ ಉತ್ತರ ಪ್ರದೇಶದ ಪೊಲೀಸರು ನಿನ್ನೆ ಮಧ್ಯರಾತ್ರಿ 2.30ರ ವೇಳೆಗೆ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದರು. ಈ ವಿಡಿಯೋ ಟ್ವಿಟ್ಟರ್​ನಲ್ಲಿ ವೈರಲ್ ಆಗಿತ್ತು.


ಯುವತಿಯ ಸಾವನ್ನು ಖಂಡಿಸಿ ಅನೇಕ ಸಂಘಟನೆಯವರು ಮತ್ತು ಆಕೆಯ ಕುಟುಂಬಸ್ಥರು ಆಸ್ಪತ್ರೆಯ ಎದುರೇ ಪ್ರತಿಭಟನೆ ನಡೆಸಿದ್ದರು. ತೀವ್ರ ಪ್ರತಿಭಟನೆಯ ನಡುವೆಯೂ ಯುವತಿಯ ಶವವನ್ನು ನೀಡದೆ ತಾವೇ ಸಂಸ್ಕಾರ ಮಾಡಿರುವುದಕ್ಕೆ ಯುವತಿಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಉತ್ತರ ಪ್ರದೇಶದ ಪೊಲೀಸ್ ಇಲಾಖೆ, ಯುವತಿಯ ಕುಟುಂಬಸ್ಥರ ಅನುಮತಿ ಪಡೆದು ಆಕೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದಿದ್ದರು.

ಘಟನೆಯ ಹಿನ್ನೆಲೆಯೇನು?:
ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 19 ವರ್ಷದ ಯುವತಿಯನ್ನು ಆಕೆಯ ದುಪಟ್ಟಾದಿಂದ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಕುತ್ತಿಗೆ ಹಿಸುಕಿದ್ದರಿಂದ ಆಕೆಯ ನಾಲಿಗೆ ಕಚ್ಚಿ, ಮಾತನಾಡಲು ಆಗದಂತಾಗಿತ್ತು. ಅರ್ಧ ಕತ್ತರಿಸಿದಂತಾಗಿದ್ದ ನಾಲಿಗೆಯ ನೋವು ಮತ್ತು ದೇಹದಲ್ಲಾದ ನೋವಿನಿಂದ ಯುವತಿಯ ಸ್ಥಿತಿ ಗಂಭೀರವಾಗಿತ್ತು. ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿರಿಸಲಾಗಿತ್ತು. ಆದರೂ ಆಕೆ ಚೇತರಿಸಿಕೊಳ್ಳದ ಕಾರಣ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ನಿನ್ನೆ ಸಾವನ್ನಪ್ಪಿದ್ದಳು.
Published by: Sushma Chakre
First published: September 30, 2020, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading