ಉತ್ತರ ಪ್ರದೇಶ ಸಾಮೂಹಿಕ ಅತ್ಯಾಚಾರ ಪ್ರಕರಣ; ಮಧ್ಯರಾತ್ರಿ ಪೊಲೀಸರಿಂದಲೇ ಮೃತ ಯುವತಿಯ ಅಂತ್ಯಸಂಸ್ಕಾರ

Hathras Rape Case: ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಹತ್ರಾಸ್‌ನ 19 ವರ್ಷದ ಯುವತಿ ಮಂಗಳವಾರ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಆಕೆಯ ಮೃತದೇಹವನ್ನು ಕುಟುಂಬಸ್ಥರಿಗೆ ನೀಡದೆ ಪೊಲೀಸರು ನಿನ್ನೆ ಮಧ್ಯರಾತ್ರಿ 2.30ರ ವೇಳೆಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ, ಸಾವನ್ನಪ್ಪಿದ ಯುವತಿಯ ದೇಹದ ಅಂತ್ಯಸಂಸ್ಕಾರ ಮಾಡಿದ ಪೊಲೀಸರು

ಉತ್ತರ ಪ್ರದೇಶದಲ್ಲಿ ಅತ್ಯಾಚಾರಕ್ಕೊಳಗಾಗಿ, ಸಾವನ್ನಪ್ಪಿದ ಯುವತಿಯ ದೇಹದ ಅಂತ್ಯಸಂಸ್ಕಾರ ಮಾಡಿದ ಪೊಲೀಸರು

  • Share this:
ನವದೆಹಲಿ (ಸೆ. 30): ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಅದಾದ ಬಳಿಕ ದೇಶದಲ್ಲಿ ಅತ್ಯಾಚಾರ ಪ್ರಕರಣಗಳೂ ಹೆಚ್ಚಾಗಿದ್ದವು. ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಆಗಿದ್ದರಿಂದ ಇನ್ನಾದರೂ ಕಾಮುಕರು ಇಂತಹ ಹೀನಕೃತ್ಯ ಮಾಡಲು ಹಿಂಜರಿಯಬಹುದು ಎಂದು ಊಹಿಸಲಾಗಿತ್ತು. ಆದರೆ, ದೆಹಲಿಯಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಹತ್ರಾಸ್ ಎಂಬ ಊರಿನ 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿತ್ತು. 2 ವಾರದ ಹಿಂದೆ ಹೊಲದಲ್ಲಿ ಅತ್ಯಾಚಾರ ನಡೆಸಿ, ಗಂಭೀರವಾಗಿ ಗಾಯಗೊಳಿಸಲಾಗಿತ್ತು. ಆಕೆ ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಆಕೆಯ ಮರಣೋತ್ತರ ಪರೀಕ್ಷೆಯ ಬಳಿಕ ಮನೆಯವರನ್ನು ದೂರವಿಟ್ಟು ರಾತ್ರೋರಾತ್ರಿ ಉತ್ತರ ಪ್ರದೇಶದ ಪೊಲೀಸರೇ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಉತ್ತರ ಪ್ರದೇಶದ ಹತ್ರಾಸ್‌ನ 19 ವರ್ಷದ ಯುವತಿ ಮಂಗಳವಾರ ಬೆಳಿಗ್ಗೆ ದೆಹಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಸಾಮೂಹಿಕ ಅತ್ಯಾಚಾರದ ನಂತರ ಆಕೆಯ ಸ್ಥಿತಿ ಗಂಭೀರವಾಗಿತ್ತು. ಈ ಪ್ರಕರಣದಲ್ಲಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಯುವತಿಯ ಮೇಲೆ ಮೇಲ್ಜಾತಿಯ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಆಕೆಯ ಮೃತದೇಹವನ್ನು ಕುಟುಂಬಸ್ಥರಿಗೆ ನೀಡದೆ ಉತ್ತರ ಪ್ರದೇಶದ ಪೊಲೀಸರು ನಿನ್ನೆ ಮಧ್ಯರಾತ್ರಿ 2.30ರ ವೇಳೆಗೆ ಆಕೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ವಿಡಿಯೋ ಈಗ ಟ್ವಿಟ್ಟರ್​ನಲ್ಲಿ ವೈರಲ್ ಆಗಿದ್ದು, ಪೊಲೀಸರ ನಡೆಯ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಯುವತಿಯ ಸಾವನ್ನು ಖಂಡಿಸಿ ಅನೇಕ ಸಂಘಟನೆಯವರು ಮತ್ತು ಆಕೆಯ ಕುಟುಂಬಸ್ಥರು ಆಸ್ಪತ್ರೆಯ ಎದುರೇ ಪ್ರತಿಭಟನೆ ನಡೆಸಿದ್ದರು. ತೀವ್ರ ಪ್ರತಿಭಟನೆಯ ನಡುವೆಯೂ ಯುವತಿಯ ಶವವನ್ನು ನೀಡದೆ ತಾವೇ ಸಂಸ್ಕಾರ ಮಾಡಿರುವುದಕ್ಕೆ ಯುವತಿಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಉತ್ತರ ಪ್ರದೇಶದ ಪೊಲೀಸ್ ಇಲಾಖೆ, ಯುವತಿಯ ಕುಟುಂಬಸ್ಥರ ಅನುಮತಿ ಪಡೆದು ಆಕೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದಿದ್ದಾರೆ ಎಂದು ಹಿಂದುಸ್ತಾನ್ ಟೈಮ್ಸ್​ ವರದಿ ಮಾಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ದಲಿತ ಯುವತಿ ಇಂದು ಸಾವು

ನಾವು ನಮ್ಮ ಮನೆಯ ಮಗಳ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗುತ್ತೇವೆಂದರೂ ಅಧಿಕಾರಿಗಳು ಬಿಡಲಿಲ್ಲ. ನಾವು ಆಸ್ಪತ್ರೆಯಿಂದ ಹತ್ರಾಸ್​ಗೆ ವಾಪಾಸ್ ಬರುತ್ತಿದ್ದಂತೆ ನಮ್ಮ ತಂದೆಯನ್ನು ಕರೆದುಕೊಂಡು ಹೋದ ಪೊಲೀಸರು ಯಾರಿಗೂ ಮಾಹಿತಿ ನೀಡದೆ ಆಕೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎಂದು ಮೃತ ಯುವತಿಯ ಅಣ್ಣ ಆರೋಪಿಸಿದ್ದಾರೆ.

Hathras Gang Rape Victim Body Cremated by Uttar Pradesh Police Despite of Family Protest.
ಪೊಲೀಸ್ ವಾಹನವನ್ನು ತಡೆಯುತ್ತಿರುವ ಮೃತ ಯುವತಿಯ ಕುಟುಂಬಸ್ಥರು


ಘಟನೆಯ ಹಿನ್ನೆಲೆಯೇನು?:
ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 19 ವರ್ಷದ ಯುವತಿಯನ್ನು ಆಕೆಯ ದುಪಟ್ಟಾದಿಂದ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಕುತ್ತಿಗೆ ಹಿಸುಕಿದ್ದರಿಂದ ಆಕೆಯ ನಾಲಿಗೆ ಕಚ್ಚಿ, ಮಾತನಾಡಲು ಆಗದಂತಾಗಿತ್ತು. ಅರ್ಧ ಕತ್ತರಿಸಿದಂತಾಗಿದ್ದ ನಾಲಿಗೆಯ ನೋವು ಮತ್ತು ದೇಹದಲ್ಲಾದ ನೋವಿನಿಂದ ಯುವತಿಯ ಸ್ಥಿತಿ ಗಂಭೀರವಾಗಿತ್ತು. ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿರಿಸಲಾಗಿತ್ತು. ಆದರೂ ಆಕೆ ಚೇತರಿಸಿಕೊಳ್ಳದ ಕಾರಣ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ನಿನ್ನೆ ಸಾವನ್ನಪ್ಪಿದ್ದಳು.
Published by:Sushma Chakre
First published: