ನವದೆಹಲಿ(ನ. 27): ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ವಿರೋಧಿಸಿ ಪಂಜಾಬ್ ರೈತರ ಹೋರಾಟ ಮುಂದುವರಿದಿದೆ. ಹಲವು ಅಡೆತಡೆಗಳ ಮಧ್ಯೆಯೂ ಪಂಜಾಬ್ ರೈತರು ದಿಲ್ಲಿ ಚಲೋ ರ್ಯಾಲಿ ಮುಂದುವರಿಸಿದ್ದಾರೆ. ಹರ್ಯಾಣದ ರೈತರೂ ಕೂಡ ತಮ್ಮ ನೆರೆ ರಾಜ್ಯದವರ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಎರಡೂ ರಾಜ್ಯಗಳಿಂದ ಸಾವಿರಾರು ರೈತರು ವಿವಿಧ ಗಡಿಭಾಗಗಳ ಮೂಲಕ ದೆಹಲಿಗೆ ನುಗ್ಗಲು ಯತ್ನಿಸಿದ್ದಾರೆ. ದೆಹಲಿಯ ಎಲ್ಲಾ ಗಡಿಭಾಗದಲ್ಲಿ ಪೊಲೀಸರು ಭದ್ರತೆ ನಿಯೋಜಿಸಿದ್ದು, ರೈತರ ಮುನ್ನಡೆಯನ್ನು ತಡೆಯಲು ಹರಸಾಹಸ ನಡೆಸಿದ್ದಾರೆ. ಕೆಲ ಗಡಿಭಾಗದಲ್ಲಿ ಪೊಲೀಸರು ಮತ್ತು ರೈತರ ಮಧ್ಯೆ ಸಂಘರ್ಷ ನಡೆದಿದ್ದು, ರೈತರನ್ನ ಚದುರಿಸಲು ಪೊಲೀಸರು ಲಾಠಿಚಾರ್ಜ್ ಮತ್ತು ಆಶ್ರುವಾಯು ಅಸ್ತ್ರ ಪ್ರಯೋಗಿಸಿದ್ದಾರೆ. ಜೀವ ಹೋದರೂ ಪರವಾಗಿಲ್ಲ, ದೆಹಲಿ ಪ್ರವೇಶಿಸುತ್ತೇವೆ ಎಂದು ರೈತರು ಪಣ ತೊಟ್ಟಂತಿದೆ.
ಇದೇ ವೇಳೆ, ದೆಹಲಿಯ ಗಡಿಭಾಗಗಳಲ್ಲಿ ವಾಹನ ಸಾಗಾಟಕ್ಕೆ ಪೊಲೀಸರು ನಿರ್ಬಂಧ ಹಾಕಿದ್ದಾರೆ. ಪರಿಣಾಮವಾಗಿ ಅಲ್ಲಿ ಭಾರೀ ಟ್ರಾಫಿಕ್ ಜಾಮ್ ನಿರ್ಮಾಣವಾಗಿದೆ. ಪೊಲೀಸರು ಟಿಕ್ರಿ ಗಡಿಭಾಗವನ್ನೇ ಬಂದ್ ಮಾಡಿದ್ದಾರೆ. ಟಿಕ್ರಿಯಲ್ಲಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲುತೂರಾಟ ನಡೆಸಿದ್ಧಾರೆ. ಸಿಂಘು ಬಳಿಯ ಗಡಿಯಲ್ಲಿ ಕ್ಷಿಪ್ರ ಕ್ರಿಯಾ ಪಡೆ (ಆರ್ಎಸಿ) ಸಿಬ್ಬಂದಿಯನ್ನು ಸಕಲ ರಕ್ಷಣಾ ಉಪಕರಣಗಳ ಸಮೇತ ನಿಯೋಜಿಸಲಾಗಿದೆ.
ಪಂಜಾಬ್ನ ರೈತರು ನಿನ್ನೆಯೇ ದೆಹಲಿ ಪ್ರವೇಶಿಸಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಇರುವ ಹರಿಯಾಣದಲ್ಲಿ ಗಡಿಭಾಗದಲ್ಲೇ ಪೊಲೀಸರು ತಡೆಯೊಡ್ಡಿದ್ದರು. ಗಡಿ ರಸ್ತೆಯಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ಗಳನ್ನ ಉರುಳಿಸಿ ಸಾಗಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಜಲಫಿರಂಗಿ (ವಾಟರ್ ಕ್ಯಾನಾನ್), ಟಿಯರ್ ಗ್ಯಾಸ್ ಶೆಲ್ಗಳನ್ನ ಸಿಡಿಸಿ ಚದುರಿಸಲು ಯತ್ನಿಸಲಾಗಿತ್ತು. ಆದರೂ ಪಂಜಾಬ್ ರೈತರು ಹರಿಯಾಣ ಪ್ರವೇಶಿಸಿದ್ದರು. ದೆಹಲಿಗೆ ಸಮೀಪವಿರುವ ಹರಿಯಾಣದ ಪಾನಿಪತ್ ಪಟ್ಟಣದಲ್ಲಿ ನಿನ್ನೆ ರಾತ್ರಿ ತಂಗಿದ್ದ ಪಂಜಾಬ್ ರೈತರು ಇವತ್ತು ತಮ್ಮ ಮೆರವಣಿಗೆ ಮುಂದುವರಿಸಿದರು. ಅವರ ಜೊತೆಗೆ ಹರಿಯಾಣದ ರೈತರೂ ಸೇರಿಕೊಂಡ ಹಿನ್ನೆಲೆಯಲ್ಲಿ ರೈತರ ಹೋರಾಟದ ಶಕ್ತಿ ಇಮ್ಮಡಿಗೊಂಡಿದೆ.
ಇದನ್ನೂ ಓದಿ: ಜಮ್ಮು ಕಾಶ್ಮೀರ ಮಾಜಿ ಸಿಎಂ ಮೆಹಬೂಬ ಮುಫ್ತಿ ಮತ್ತೆ ಗೃಹಬಂಧನ
ಇನ್ನೂ ಅನೇಕ ರೈತರು ಪಂಜಾಬ್-ಹರಿಯಾಣದ ಗಡಿಭಾಗದುದ್ದಕ್ಕೂ ಜಮಾಯಿಸಿ ಧರಣಿ ಕೂಡ ನಡೆಸಿದ್ದಾರೆ. ಭಾರತಿ ಕಿಸಾನ್ ಯೂನಿಯನ್ನ ವಿವಿಧ ಬಣಗಳಿಗೆ ಸೇರಿದ ರೈತರು ಹರಿಯಾಣದ ದಾರಿ ಬಿಟ್ಟು ಬೇರೆ ಮಾರ್ಗಗಳ ಮೂಲಕ ದೆಹಲಿ ಪ್ರವೇಶ ಮಾಡುತ್ತಿದ್ಧಾರೆ. ಒಂದು ಅಂದಾಜಿನ ಪ್ರಕಾರ ಪಂಜಾಬ್ ಮತ್ತು ಹರಿಯಾಣ ಎರಡೂ ರಾಜ್ಯಗಳಿಂದ ಸುಮಾರು 3 ಲಕ್ಷ ರೈತರು ದೆಹಲಿಗೆ ದಾಂಗುಡಿ ಇಡುತ್ತಿದ್ದಾರೆ. ಯುನೈಟೆಡ್ ಫಾರ್ಮರ್ಸ್ ಫ್ರಂಟ್ ಎಂಬ ಅಖಿಲ ಭಾರತ ವೇದಿಕೆ ನಿರ್ಮಿಸಿದ್ದು, ಅದರಲ್ಲಿ 470ಕ್ಕೂ ಹೆಚ್ಚು ರೈತ ಸಂಘಟನೆಗಳಿವೆ. ಕೇಂದ್ರದ ಕೃಷಿ ಮಸೂದೆ ಕೈಬಿಡುವವರೆಗೂ ರೈತರು ದೆಹಲಿಯಲ್ಲಿ ಅನಿರ್ದಿಷ್ಟಾವಧಿಯವರೆಗೆ ಧರಣಿ ನಡೆಸಲು ಯೋಜಿಸಿದ್ದಾರೆ. ಹೀಗಾಗಿ, ಇವರು ದೆಹಲಿ ಪ್ರವೇಶಿಸದಂತೆ ತಡೆಯಲು ಸಕಲ ಪ್ರಯತ್ನಗಳು ನಡೆಯುತ್ತಿವೆ.
ಯಾಕೆ ರೈತರ ಆಕ್ರೋಶ?
ಪಂಜಾಬ್ ಮತ್ತು ಹರಿಯಾಣ ಭಾಗದಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆ ಅತಿ ಹೆಚ್ಚು ಚಾಲ್ತಿಯಲ್ಲಿದೆ. ಈ ಎಂಎಸ್ಪಿಯೇ ಇಲ್ಲಿನ ರೈತರ ಜೀವನಾಧಾರ ಎಂಬಂತಾಗಿದೆ. ಕೇಂದ್ರ ರೂಪಿಸಿರುವ ನೂತನ ಕೃಷಿ ಕಾಯ್ದೆಯಲ್ಲಿ ಎಂಎಸ್ಪಿಯನ್ನು ಉಳಿಸಿಕೊಳ್ಳುವ ಪ್ರಸ್ತಾಪ ಇಲ್ಲ. ಇದು ಎಂಎಸ್ಪಿಯನ್ನು ರದ್ದುಗೊಳಿಸಿ ರೈತರನ್ನು ಕಾರ್ಪೊರೇಟ್ ಹಿಡಿತಕ್ಕೆ ಸಿಲುಕಿಸುವ ಸಂಚು ಎಂಬುದು ರೈತರ ಆತಂಕ ಮತ್ತು ಆಕ್ರೋಶ. ಈ ಹಿನ್ನೆಲೆಯಲ್ಲಿ ಉಳಿದೆಲ್ಲಾ ಭಾಗಗಳಿಗಿಂತ ಪಂಜಾಬ್ ಭಾಗದಲ್ಲಿ ರೈತರಿಂದ ಪ್ರತಿಭಟನೆಯ ತೀವ್ರತೆ ಹೆಚ್ಚೇ ಇದೆ.
ಇದನ್ನೂ ಓದಿ: Bank Holidays in December: ಡಿಸೆಂಬರ್ನಲ್ಲಿವೆ ಸಾಲು ಸಾಲು ರಜೆಗಳು; ಬ್ಯಾಂಕ್ಗೆ ಹೋಗುವ ಮುನ್ನ ಗಮನಿಸಿ
ಇದೇ ವೇಳೆ, ಹರಿಯಾಣ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು, ಎಂಎಸ್ಪಿಯನ್ನು ಕೈಬಿಡಲಾಗುವುದಿಲ್ಲ. ಅಂಥದ್ದೇನಾದರೂ ಆದರೆ ನಾನು ರಾಜಕೀಯದಿಂದಲೇ ನಿರ್ಗಮಿಸುತ್ತೇನೆ ಎಂದು ರೈತರಿಗೆ ಅಭಯ ಹಸ್ತ ನೀಡಿದ್ದಾರೆ. ಹಾಗೆಯೇ, ಪಂಜಾಬ್ನಲ್ಲಿ ರೈತರಿಗೆ ಅಲ್ಲಿನ ಸರ್ಕಾರವೇ ಪ್ರಚೋದನೆ ನೀಡುತ್ತಿದೆ ಎಂದು ಖಟ್ಟರ್ ಆರೋಪ ಮಾಡಿದ್ಧಾರೆ. ಹರಿಯಾಣ ಸಿಎಂ ಅವರ ಈ ಹೇಳಿಕೆಗೆ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ತಿರುಗೇಟು ನೀಡಿದ್ದಾರೆ. “ನಿಮ್ಮ ಪ್ರತಿಕ್ರಿಯೆ ಕೇಳಿ ಶಾಕ್ ಆಗುತ್ತಿದೆ. ಎಂಎಸ್ಪಿ ವಿಚಾರದಲ್ಲಿ ನೀವು ಒಪ್ಪಿಸಬೇಕಿರುವುದು ನನ್ನನ್ನಲ್ಲ, ರೈತರನ್ನು. ಅವರು ದಿಲ್ಲಿ ಚಲೋ ಪ್ರಾರಂಭ ಮಾಡುವುದಕ್ಕಿಂತ ಮುಂಚೆಯೇ ನೀವು ಅವರೊಂದಿಗೆ ಮಾತನಾಡಬೇಕಿತ್ತು. ನಾನು ರೈತರಿಗೆ ಪ್ರಚೋದನೆ ನೀಡುತ್ತಿರುವುದು ಹೌದಾದರೆ, ಹರಿಯಾಣದ ರೈತರೂ ಕೂಡ ಯಾಕೆ ದಿಲ್ಲಿ ಚಲೋ ಮಾಡುತ್ತಿದ್ದಾರೆ” ಎಂದು ಪ್ರಶ್ನಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ