ನವದೆಹಲಿ(ಮಾ.27): ಬಾಹ್ಯಾಕಾಶದ ಸಾಧನೆಗಾಗಿ ವಿಜ್ಞಾನಿಗಳನ್ನು ಅಭಿನಂದಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಬಾಹ್ಯಾಕಾಶದಲ್ಲಿ 300 ಕಿ.ಮೀ ದೂರದಲ್ಲಿರುವ ಉಪಗ್ರಹವನ್ನು ಕೇವಲ ಮೂರು ನಿಮಿಷಗಳಲ್ಲಿ ಹೊಡೆದುರುಳಿಸುವ ಮೂಲಕ ಭಾರತ ಸೂಪರ್ ಪವರ್ ದೇಶವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ತಿಳಿಸಿದ್ದರು. ಈ ಬೆನ್ನಲ್ಲೇ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಒಂದೆಡೆ ವಿಜ್ಞಾನಿಗಳನ್ನು ಅಭಿನಂದಿಸುತ್ತಾ ಇನ್ನೊಂದೆಡೆ ಪ್ರಧಾನಿ ಮೋದಿ ಅವರಿಗೆ ವಿಶ್ವ ರಂಗಭೂಮಿ ದಿನದ ಶುಭಾಶಯಗಳು ಎಂದು ಲೇವಡಿ ಮಾಡಿದ್ದಾರೆ.
ಇನ್ನು ವಿಶ್ವದಲ್ಲೇ ಬಾಹ್ಯಾಕಾಶದಲ್ಲಿರುವ ಉಪಗ್ರಹವನ್ನು ಕ್ಷಿಪಣಿ ಪ್ರಯೋಗಿಸಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ದೇಶಗಳ ಸಾಲಿಗೆ ಭಾರತವೂ ಇಂದು ಸೇರ್ಪಡೆಯಾಗಿದೆ. ಈ ವಿಚಾರದ ಬಗ್ಗೆ ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ತಿಳಿಸಿದ್ದು, 'ಭಾರತವು ಈಗ ವಿಶ್ವದ ಸ್ಪೇಸ್ ಸೂಪರ್‌ಪವರ್' (ಬಾಹ್ಯಾಕಾಶ ಶಕ್ತ) ರಾಷ್ಟ್ರವಾಗಿದೆ' ಎಂದು ಘೋಷಿಸಿದ್ದಾರೆ.
ಪ್ರಪಂಚದಲ್ಲೀಗ ಅಮೆರಿಕಾ, ರಷ್ಯಾ ಮತ್ತು ಚೀನಾಗಳಿಗೆ ಮಾತ್ರ ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಇದೆ. ಈ ಸಾಲಿಗೆ ಇಂದು ಭಾರತವೂ ಸೇರ್ಪಡೆಯಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ: 'ಮಿಷನ್ ಶಕ್ತಿ' ಯೋಜನೆ ಯಶಸ್ವಿ; ಬಾಹ್ಯಾಕಾಶದಲ್ಲಿ ಭಾರತ ನಾಲ್ಕನೇ ಶಕ್ತಿಶಾಲಿ ರಾಷ್ಟ್ರ; ಪ್ರಧಾನಿ ಮೋದಿ
'ಈಚೆಗಷ್ಟೇ ಭಾರತವು ಉಪಗ್ರಹ ನಿಗ್ರಹ ಕ್ಷಿಪಣಿ ಪ್ರಯೋಗಿಸಿ ಕೆಳ ಕಕ್ಷೆಯಲ್ಲಿದ್ದ (ಭೂಮಿಯ ಸನಿಹ) ಉಪಗ್ರಹವನ್ನು ಹೊಡೆದುರುಳಿಸಿತು. ಮಿಷನ್ ಶಕ್ತಿ ಯೋಜನೆಯಡಿ ನಮ್ಮ ವಿಜ್ಞಾನಿಗಳು ಈ ಸಾಧನೆ ಮಾಡಿದ್ದಾರೆ. ಕೇವಲ ಮೂರು ನಿಮಿಷಗಳಲ್ಲಿ ಕಾರ್ಯಾಚರಣೆ ಪೂರ್ಣಗೊಂಡಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ತಮ್ಮ ತುರ್ತು ಭಾಷಣದಲ್ಲಿ ಘೋಷಿಸಿದರು.
ಇದನ್ನೂ ಓದಿ:
ಏನಿದು 'ಮಿಷನ್ ಶಕ್ತಿ'?; ಇಲ್ಲಿದೆ ಬಾಹ್ಯಾಕಾಶ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಉತ್ತರ
ಹಾಗೆಯೇ ಭಾರತವನ್ನು ಬಾಹ್ಯಾಕಾಶ ಸೂಪರ್ ಪವರ್ ಮಾಡಿದ 'ಎ-ಸ್ಯಾಟ್' ಪ್ರಯೋಗವನ್ನು ಕಾಂಗ್ರೆಸ್ ಸ್ವಾಗತಿಸಿದೆ. 'ಈ ಸಾಧನೆಗಾಗಿ ನಾವು ಇಸ್ರೊ ಮತ್ತು ಭಾರತ ಸರ್ಕಾರವನ್ನು ಅಭಿನಂದಿಸುತ್ತೇವೆ. 1961ರಲ್ಲಿ ಜವಾಹರಲಾಲ್ ನೆಹರು ಬಾಹ್ಯಾಕಾಶ ಯೋಜನೆ ಆರಂಭಿಸಿದ್ದರು. ಇಂದಿರಾ ಗಾಂಧಿ ಆರಂಭಿಸಿದ ಇಸ್ರೊ ಹಲವು ಸಾಧನೆಗಳ ಮೂಲಕ ಭಾರತಕ್ಕೆ ಹೆಮ್ಮೆ ತಂದುಕೊಂಡಿದೆ' ಎಂದು ಹೇಳಿದೆ.
---------------